ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಪ್ರೇರಿತ ಹೇಳಿಕೆ: ಸಿದ್ದರಾಮಯ್ಯ

Last Updated 8 ಫೆಬ್ರುವರಿ 2018, 9:15 IST
ಅಕ್ಷರ ಗಾತ್ರ

ಬೆಂಗಳೂರು: ‘ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಇದು ರಾಜಕೀಯ ಪ್ರೇರಿತ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.

‘ರಾಜ್ಯದಲ್ಲಿ ಹಣ ಸಂಗ್ರಹಿಸಲು ಮುಖ್ಯಮಂತ್ರಿ ನಾಲ್ವರು ಸಚಿವರನ್ನು ನಿಯೋಜಿಸಿದ್ದಾರೆ’ ಎಂದು ಗುರುವಾರ ಕುಮಾರಸ್ವಾಮಿ ಆರೋಪಿಸಿದ್ದರು.

ಈ ಆರೋಪಕ್ಕೆ ಶುಕ್ರವಾರ ಆಕ್ರೋಶ ವ್ಯಕ್ತಪಡಿಸಿದ ಮುಖ್ಯಮಂತ್ರಿ, ‘ಅವರಿಗೆ ಹೇಳಲು, ಮಾತನಾಡಲು ಏನೂ ಇಲ್ಲ. ಆದ್ದರಿಂದ ಇಂಥ ಸುಳ್ಳನ್ನು ಒತ್ತಿ ಒತ್ತಿ, ಪದೇ ಪದೇ ಹೇಳುತ್ತಾರೆ’ ಎಂದರು.

ಹೈಕಮಾಂಡ್‌ಗೆ ಹಣ ನೀಡಿಲ್ಲ:

‘ನಾನು ವಿಶೇಷ ವಿಮಾನದಲ್ಲಿ ಹಣ ತೆಗೆದುಕೊಂಡ ಹೋಗಿ ಹೈಕಮಾಂಡ್‌ಗೆ ನೀಡಿಲ್ಲ. ಕುಮಾರಸ್ವಾಮಿ ಸುಳ್ಳು ಆರೋಪ ಮಾಡಿದ್ದಾರೆ’ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಸ್ಪಷ್ಟಪಡಿಸಿದರು.

‘ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದವರು. ಮುಖ್ಯಮಂತ್ರಿ ಆಗಿದ್ದಾಗ ಅವರೂ ಈ ಕೆಲಸ ಮಾಡಿದ್ದಾರಾ? ಇಲ್ಲಸಲ್ಲದ್ದನ್ನು ಹೇಳಿದರೆ ನಾವು ಕೂಡ ಹಾಗೇ ಹೇಳಬೇಕಾಗುತ್ತದೆ’ ಎಂದೂ ಆಕ್ರೋಶ ವ್ಯಕ್ತಪಡಿಸಿದರು.

‘ನಮ್ಮ ಪಕ್ಷದ ರಾಜ್ಯ ಉಸ್ತವಾರಿ ಕೆ.ಸಿ. ವೇಣುಗೋಪಾಲ್‌ ವಿಜಯಪುರಕ್ಕೆ ಬಂದಿದ್ದರು. ಅವರ ಜೊತೆ ನಾನು ಕೂಡ ಮುದ್ದೇಬಿಹಾಳಕ್ಕೆ ಹೋಗಿದ್ದೆ. ಅಲ್ಲಿಂದ ಹೆಲಿಕಾಪ್ಟರ್ ಮೂಲಕ ವೇಣುಗೋಪಾಲ್‌ ಬೆಂಗಳೂರಿಗೆ ಬಂದಿದ್ದಾರೆ. ಹೆಲಿಕಾಪ್ಟರ್ ವ್ಯವಸ್ಥೆಯನ್ನು‌ ಪಕ್ಷ ಮಾಡಿದೆ. ಚುನಾವಣೆಯ ಸಂದರ್ಭದಲ್ಲಾದರೆ ಲೆಕ್ಕ ಕೊಡಬೇಕು’ ಎಂದೂ ಸಮರ್ಥನೆ ನೀಡಿದರು.

ಆರೋಪ ಮಾಡುತ್ತಾ ಹೋದರೆ ಹೇಗೆ?:

‘ಉನ್ನತ ಹುದ್ದೆಯಲ್ಲಿರುವ ಕುಮಾರಸ್ವಾಮಿ ವಾರಕ್ಕೆ ಮೂರ್ನಾಲ್ಕು ಆರೋಪಗಳನ್ನು ಮಾಡುತ್ತಾ ಹೋದರೆ ಹೇಗೆ?’ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಪ್ರಶ್ನಿಸಿದರು.

‘ಗಣಿ ಅಕ್ರಮ ಕುರಿತು ಆರೋಪ ಮಾಡಿದ್ದ ಅವರು ಏನಾದರೂ ದಾಖಲೆ ಬಿಡುಗಡೆ ಮಾಡಿದ್ದಾರಾ ಅಥವಾ ದೂರು ದಾಖಲಿಸಿದ್ದಾರಾ. ಈಗ ಮತ್ತೊಂದು ಆರೋಪ ಮಾಡಿದ್ದಾರೆ. ಈ ಬಗ್ಗೆ ದಾಖಲೆ ಇದೆಯಾ’ ಎಂದೂ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT