ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರ ಪ್ರಕರಣ: ಖುಲಾಸೆ ತೀರ್ಪು ಎತ್ತಿಹಿಡಿದ ‘ಸುಪ್ರೀಂ’

Last Updated 19 ಜನವರಿ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಅಮೆರಿಕದ ಸಂಶೋಧಕಿಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಾಲಿವುಡ್‌ ನಿರ್ದೇಶಕ ಮಹಮೂದ್‌ ಫಾರೂಕಿ ಅವರನ್ನು ದೋಷಮುಕ್ತಗೊಳಿಸಿದ್ದ ದೆಹಲಿ ಹೈಕೋರ್ಟ್‌ ತೀರ್ಪನ್ನು ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿದೆ.

ಫಾರೂಕಿ ತಪ್ಪಿತಸ್ಥರು ಎಂದು ಕೆಳಹಂತದ ನ್ಯಾಯಾಲಯ 2016ರಲ್ಲಿ ಹೇಳಿತ್ತು. ಆದರೆ, ಇದೊಂದು ಒಪ್ಪಿತ ಲೈಂಗಿಕ ಕ್ರಿಯೆ ಎಂದು ದೆಹಲಿ ಹೈಕೋರ್ಟ್‌ ಕಳೆದ ವರ್ಷ ಅಭಿಪ್ರಾಯಪಟ್ಟಿತ್ತು. ಮಹಿಳೆಯು ಲೈಂಗಿಕ ಕ್ರಿಯೆಗೆ ಒಪ್ಪಿಲ್ಲ ಎಂಬುದು ಫಾರೂಕಿ ಅವರಿಗೆ ತಿಳಿದಿರಲಿಲ್ಲವೇನೋ ಎಂದು, ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶರಲ್ಲಿ ಒಬ್ಬರು ಹೇಳಿದ್ದು ಸಾಮಾಜಿಕ ಕಾರ್ಯಕರ್ತರ ವಿರೋಧಕ್ಕೆ ಕಾರಣವಾಗಿತ್ತು. ಹೈಕೋರ್ಟ್‌ನ ತೀರ್ಪು ಪ್ರಶ್ನಿಸಿ ಸಂಶೋಧಕಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು.

ಪರಸ್ಪರ ಪರಿಚಿತ ಹುಡುಗ–ಹುಡುಗಿಯ ಮಧ್ಯೆ ನಡೆಯುವ ಲೈಂಗಿಕ ಕ್ರಿಯೆಗೆ ಹುಡುಗಿಯು ಕ್ಷೀಣ ದನಿಯಲ್ಲಿ ಬೇಡ ಎಂದರೆ ಅಥವಾ ಕಡಿಮೆ ಪ್ರತಿರೋಧ ತೋರಿದರೆ, ಆಕೆ ಒಪ್ಪಿಗೆ ಸೂಚಿಸಿದ್ದಾಳೋ ಇಲ್ಲವೋ ಎಂಬ ಬಗ್ಗೆ ತೀರ್ಮಾನಕ್ಕೆ ಬರುವುದು ಕಷ್ಟ ಎಂದು ನ್ಯಾಯಮೂರ್ತಿ ಅಶು ತೋಶ್‌ ಕುಮಾರ್‌ ಅಭಿಪ್ರಾಯಪಟ್ಟಿದ್ದಾರೆ.

‘ಇದು ಮಹಿಳೆಯರ ಹಕ್ಕುಗಳಿಗೆ ಹಾಗೂ 2013ರ ಜಾರಿಗೆ ತಂದಿರುವ ಕಠಿಣ ಅತ್ಯಾಚಾರ ತಡೆ ಕಾಯ್ದೆಗೆ ಆಗಿರುವ ವಿಶ್ವಾಸಾಘಾತ’ ಎಂದು ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘಟನೆಯ ಕಾರ್ಯದರ್ಶಿ ಕವಿತಾ ಕೃಷ್ಣನ್‌ ಹೇಳಿದ್ದಾರೆ.

‘ಪುರುಷನೊಟ್ಟಿಗೆ ಮದ್ಯ ಸೇವಿಸುವಾಗ ಮಹಿಳೆಯು ಲೈಂಗಿಕ ಕ್ರಿಯೆಗೆ ಅಸಮ್ಮತಿ ಸೂಚಿಸಿದರೆ, ಅದನ್ನು ಸಮ್ಮತಿ ಎಂದು ಸುಪ್ರೀಂ ಕೋರ್ಟ್‌ ಅರ್ಥಮಾಡಿಕೊಳ್ಳುತ್ತದೆ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ. ಸಂಶೋಧನೆಗೆ ಸಂಬಂಧಿಸಿದಂತೆ ಫಾರೂಕಿಯವರಿಂದ ನೆರವು ಪಡೆಯಲು ಸಂಶೋಧಕಿಯು 2015ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಆರೋಪಿಸಲಾಗಿತ್ತು. ನಂತರ ಅಮೆರಿಕಕ್ಕೆ ತೆರಳಿದ್ದ ಮಹಿಳೆ, ಈ ಸಂಬಂಧ ಪ್ರಕರಣ ದಾಖಲಿಸುವ ಸಲುವಾಗಿ ಭಾರತಕ್ಕೆ ಮರಳಿ ಬಂದಿದ್ದರು.

ಸಾಕಷ್ಟು ವಿವಾದ ಸೃಷ್ಟಿಸಿದ್ದ ಈ ‍ಪ್ರಕರಣವು, ಲೈಂಗಿಕ ದೌರ್ಜನ್ಯಗಳು ಸಾಕಷ್ಟು ಪ್ರಮಾಣದಲ್ಲಿ ದಾಖಲಾಗುವ ದೇಶದಲ್ಲಿ ಒಪ್ಪಿತ ಲೈಂಗಿಕಕ್ರಿಯೆಗೆ ಸಂಬಂಧಿಸಿದ ಚರ್ಚೆಯನ್ನು ಮುನ್ನೆಲೆಗೆ ತಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT