ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಚ ಶಾಲೆ, ಸ್ವಚ್ಚ ಗ್ರಾಮ, ಹಸಿರು ಶಾಲೆ ಪುರಸ್ಕಾರ

Last Updated 20 ಜನವರಿ 2018, 6:50 IST
ಅಕ್ಷರ ಗಾತ್ರ

ಹೊಸನಗರ: ಒಂದು ಶಾಲೆ ಮನಸು ಮಾಡಿದರೆ, ಅದಕ್ಕೆ ಸಮುದಾಯದ ಸಹಕಾರ ದೊರೆತರೆ ಏನನ್ನು ಮಾಡಬಹುದು ಎಂಬುದಕ್ಕೆ ತಾಲ್ಲೂಕಿನ ಸೊನಲೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಾವಿಕೈ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಾಕ್ಷಿಯಾಗಿದೆ.

ಗ್ರಾಮದ ಸ್ವಚ್ಛತೆ, ಬಯಲು ಶೌಚಮುಕ್ತ ಗ್ರಾಮವನ್ನಾಗಿ ಮಾಡುವ ಅಭಿಯಾನ ಹೊತ್ತ ಈ ಶಾಲೆಯ ವಿದ್ಯಾರ್ಥಿಗಳು, ಇಬ್ಬರು ಶಿಕ್ಷಕರು, ಪಿಡಿಒ ಹಾಗೂ ಗ್ರಾಮಸ್ಥರ ಸಹಕಾರದಿಂದ ಸುಮಾರು 170ಕ್ಕೂ ಹೆಚ್ಚು ಮನೆಗಳಲ್ಲಿ ಈಗ ಶೌಚಾಲಯ ನಿರ್ಮಾಣ ಸೇರಿ ಪರಿಸರ ಸ್ನೇಹಿ ಗ್ರಾಮವಾಗಿ ಪರಿವರ್ತನೆ ಆಗಿದೆ.

ಬಹುಪಾಲು ಶ್ರಮಿಕರು, ಸಣ್ಣ ಕೃಷಿಕರು ಇರುವ ಈ ಗ್ರಾಮದಲ್ಲಿ ಆರಂಭದಲ್ಲಿ ಶೌಚಾಲಯ ನಿರ್ಮಿಸಲು ಗ್ರಾಮಸ್ಥರು ನಿರಾಕರಿಸುತ್ತಿದ್ದಾಗ ಪಿಡಿಒ ಸಂತೋಷ್ ಗುದ್ದಲಿ ಹಿಡಿದು ಗುಂಡಿ ತೆಗೆಯಲು ಟೊಂಕ ಕಟ್ಟಿದರು. ಗುಂಡಿಯಿಂದ ಮಕ್ಕಳ ಪುಟ್ಟ ಕೈಗಳು ಮಣ್ಣು ತೆಗೆದು ಹಾಕಿದ ಬುಟ್ಟಿಯನ್ನು ಶಿಕ್ಷಕರು ಹೊತ್ತು ಸಾಗಿಸಿ ಮಾದರಿಯಾದರು.

ಸ್ವಚ್ಛತೆ ಎಂಬುದು ಇಲ್ಲಿ ಘೋಷಣೆಗಳಿಗೆ ಸೀಮಿತ ಆಗದೆ, ಶಾಲೆಯಿಂದ ದೊಡ್ಡ ಆಂದೋಲನ ಆದ ಪರಿಣಾಮ ಗ್ರಾಮದ ಎಲ್ಲಾ 176 ಮನೆಗಳಲ್ಲಿ ಈಗ ಶೌಚಾಲಯ ನಿರ್ಮಾಣವಾಗಿದೆ. ಸಾವಯವ, ಎರೆಹುಳು ಗೊಬ್ಬರದ ಗುಂಡಿಗಳು ನಿರ್ಮಾಣ, ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ಗ್ರಾಮ ಆಗಿದೆ.

ಎರಡು ವರ್ಷದ ಹಿಂದೆ ಇದೊಂದು ಬೋಳುಗುಡ್ಡ ಆಗಿತ್ತು. ಸಮಾನ ಮನಸ್ಕ ಶಿಕ್ಷಕರ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಪ್ರತಿಯೊಬ್ಬರು ಬಂದು ಹೋಗುವ ಶಾಲೆಯು ಗ್ರಾಮಕ್ಕೆ ಮಾದರಿ ಆಗಲಿ ಎಂಬ ಉದ್ದೇಶದಿಂದ ಜೀವಾಮೃತ ಘಟಕ, ಕಾಂಪೋಷ್ಟ್ ಗುಂಡಿ, ಶಾಲೆಗೆ ಸಂಚಾರಿ ಶೌಚಾಲಯ ತಂದು ಅದನ್ನು ಊರು ಕೇರಿಯಲ್ಲಿ ಜಾಥಾ ಮಾಡಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಮುಖ್ಯ ಶಿಕ್ಷಕ ರಾಮು ತಿಳಿಸಿದರು.

ಪರಿಸರ ಅಧ್ಯಯನ ಶಾಲೆ: ಸರಿಯಾಗಿ ರಸ್ತೆ ಇಲ್ಲದ ಕುಗ್ರಾಮದ ಬಾವಿಕೈ ಶಾಲೆಗೆ ಕಾಲಿಟ್ಟರೆ ಯಾವುದೋ ಒಂದು ಪರಿಸರ ಪಾಠ ಶಾಲೆಗೆ ಬಂದಂತೆ ಅನಿಸುತ್ತದೆ. ಇಸ್ರೇಲ್ ಮಾದರಿ ಟೆರಸ್ ಗಾರ್ಡನ್, ಕೊಡಪಾನ, ಬಾಟಲ್ ಹನಿ ನೀರಾವರಿ, ಬೈಸಿಕಲ್ ತುಳಿದರೆ ತುಂತರು ನೀರು ಚಿಮ್ಮುವ ಘಟಕ, ತೆಂಗಿನ ಸಿಪ್ಪೆಯ ನೈಸರ್ಗಿಕ ನರ್ಸರಿ, ತೆರದ ಇಂಗುಗುಂಡಿಯ ಮೂಲಕ ನೀರು ಮರುಪೂರಣ, ಕಲಿಕಾ ಕುಟೀರ, ದನ್ವಂತರಿ ವನ, ಮಕ್ಕಳ ಗುರುತಿನ ಚೀಟಿ ಮೇಲೆ ಪರಿಸರ ಘೋಷಣೆ ಮುದ್ರಣ, ಗೋಡೆಗಳ ಮೇಲೆ ಹಳೆ ವಿದ್ಯಾರ್ಥಿಗಳು ಬರೆದ ಹಸೆ ಚಿತ್ತಾರ ಒಟ್ಟಾರೆ ಗ್ರಾಮೀಣ ಸಂಸ್ಕೃತಿ ಹಾಗೂ ಪರಿಸರ ಅಧ್ಯಯನಕ್ಕೆ ಹೇಳಿ ಮಾಡಿಸಿದಂತಿದೆ ಈ ಪುಟ್ಟ ಶಾಲೆ.

ಸರ್ಕಾರಿ ಶಾಲೆ ಶಿಕ್ಷಕರ ಮಕ್ಕಳು ಖಾಸಗಿ ಶಾಲೆಗೆ ಹೊಗುತ್ತಾರೆ ಎಂಬ ಕಳಂಕ ದೂರ ಮಾಡಲು ಈ ಶಾಲೆಯ ಶಿಕ್ಷಕ ವಿ.ಡಿ.ನಾಗರಾಜ ತಮ್ಮ ಮಗುವನ್ನು ಸರ್ಕಾರಿ ಶಾಲೆಗೆ ಸೇರಿಸುವ ಮೂಲಕ ಮಾದರಿಯಾಗಿದ್ದಾರೆ.

ಈ ಹಳ್ಳಿ ಕನ್ನಡ ಶಾಲೆ ಮಕ್ಕಳು ಸರ್ಕಾರಿ ಪಠ್ಯದ ಜತೆಗೆ ಇಂಗ್ಲಿಷ್ ಒಂದು ಭಾಷೆಯಾಗಿ ಅಧ್ಯಯನ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಪೋಷಕರಿಗೆ ಬೆರಗುಗೊಳಿಸುವಷ್ಟು ನಿರರ್ಗಳವಾಗಿ ಇಂಗ್ಲಿಷ್ ಮಾತನಾಡಬಲ್ಲರು. ಬರೆಯಬಲ್ಲರು. ಇದರ ಜತೆಗೆ ಪಕ್ಕದ ಅಂಗನವಾಡಿ ಸಹ ಹಳ್ಳಿಯ ಎಲ್‌ಕೆಜಿ. ಯುಕೆಜಿ ಮಕ್ಕಳಂತೆ ಪರಿವರ್ತನೆ ಆಗಿರುವುದಕ್ಕೆ ಶಿಕ್ಷಕಿ ಪೃಥ್ವಿಯ ಪ್ರಯತ್ನ ಗಮನೀಯವಾಗಿದೆ.

ಇದೆಲ್ಲದರ ಪರಿಣಾಮ ಈ ಶಾಲೆಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಪರಿಸರ ಅಧ್ಯಯನ ಕೇಂದ್ರವು ಈ ಸಾಲಿಗೆ ಕೊಡಮಾಡುವ ಹಸಿರು ಶಾಲೆ, ಸ್ವಚ್ಛ ಶಾಲೆ ಹಾಗೂ ಸ್ವಚ್ಛ ಗ್ರಾಮ ಪ್ರಶಸ್ತಿಗೆ ಪುರಸ್ಕೃತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT