ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

33 ಸಾವಿರ ಅಭ್ಯರ್ಥಿಗಳಿಂದ ನೋಂದಣಿ!

Last Updated 20 ಜನವರಿ 2018, 8:45 IST
ಅಕ್ಷರ ಗಾತ್ರ

ಬಾಗಲಕೋಟೆ: ಭಾರತೀಯ ಸೇನೆ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಕಳೆದ ಐದು ದಿನಗಳಿಂದ ಕೈಗೊಂಡಿರುವ ಮಂಗಳೂರು ವಿಭಾಗದ ಸೇನಾ ನೇಮಕಾತಿ ರ‍್ಯಾಲಿಗೆ ಆಕಾಂಕ್ಷಿಗಳಿಂದ ಉತ್ತಮ ಬೆಂಬಲ ದೊರೆತಿದೆ. ಇದೇ ಮೊದಲ ಬಾರಿಗೆ ಅತಿ ಹೆಚ್ಚು ಅಭ್ಯರ್ಥಿಗಳು (33,374) ನೋಂದಣಿ ಮಾಡಿಸಿಕೊಂಡಿದ್ದಾರೆ.

ನೇಮಕಾತಿ ಸ್ಥಳಕ್ಕೆ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳನ್ನು ಆಹ್ವಾನಿಸಿ ಅಲ್ಲಿನ ಪ್ರಕ್ರಿಯೆಗಳನ್ನು ವಿವರಿಸಿದ ಸೇನೆಯ ಕರ್ನಾಟಕ–ಗೋವಾ ನೇಮಕಾತಿ ವಿಭಾಗದ ಉಪಮಹಾನಿರ್ದೇಶಕ ಬ್ರಿಗೇಡಿಯರ್ ಪಿ.ಎಸ್.ಬಜ್ವಾ, ‘ಈ ವಿಭಾಗದ ಇತಿಹಾಸದಲ್ಲಿಯೇ ಇಷ್ಟೊಂದು ಪ್ರಮಾಣದಲ್ಲಿ ಯುವ ಸಮೂಹ ಸೇನೆಯ ಕರೆಗೆ ಸ್ಪಂದಿಸಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

‘ಕಳೆದ ವರ್ಷ ವಿಜಯಪುರದಲ್ಲಿ ನಡೆದಿದ್ದ ರ‍್ಯಾಲಿಗೆ 20 ಸಾವಿರ ಅಭ್ಯರ್ಥಿಗಳು ನೋಂದಣಿ ಮಾಡಿಸಿದ್ದರು. ಅದಕ್ಕೂ ಮುನ್ನ ದಾವಣಗೆರೆಯಲ್ಲಿ ನಡೆದ ರ‍್ಯಾಲಿಗೆ 17 ಸಾವಿರ ಆಕಾಂಕ್ಷಿಗಳು ಸ್ಪಂದಿಸಿದ್ದರು’ ಎಂದು ಮಾಹಿತಿ ನೀಡಿದರು.

‘ಎರಡು ತಿಂಗಳ ಹಿಂದೆಯಷ್ಟೇ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು. ಮಂಗಳೂರು ವಿಭಾಗದ ವ್ಯಾಪ್ತಿಯ ಬಾಗಲಕೋಟೆ, ವಿಜಯಪುರ, ಧಾರವಾಡ, ಚಿಕ್ಕಮಗಳೂರು, ದಾವಣಗೆರೆ, ದಕ್ಷಿಣ ಕನ್ನಡ, ಉಡುಪಿ, ಗದಗ, ಹಾವೇರಿ, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ’ ಎಂದರು.

‘ಸೈನಿಕರು ಜನರಲ್ ಡ್ಯೂಟಿ, ಕ್ಲರ್ಕ್, ಟ್ರೇಡ್‌ಮನ್, ಟೆಕ್ನಿಕಲ್ ಹಾಗೂ ರಿಲೀಜಿಯಸ್ ಟೀಚರ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. 10 ಹಾಗೂ 12ನೇ ತರಗತಿ ಓದಿರುವವರು ಅರ್ಜಿ ಸಲ್ಲಿಸಬಹುದಾಗಿದೆ. ಕಳೆದ ಐದು ದಿನಗಳಲ್ಲಿ 23 ಸಾವಿರ ಮಂದಿ ಹಾಜರಾಗಿದ್ದಾರೆ. ಇದರಲ್ಲಿ 1500ರಿಂದ 1600 ಮಂದಿ ತಾತ್ಕಾಲಿಕ ಪಟ್ಟಿಯಲ್ಲಿ ಸ್ಥಾನ ಪಡೆಯಲಿದ್ದಾರೆ. ಆರಂಭಿಕ ಹಂತದಲ್ಲಿ ಕಠಿಣ ದೈಹಿಕ ಪರೀಕ್ಷೆ ನಡೆಸಲಾಗುತ್ತಿದೆ. ನಸುಕಿನ 4 ಗಂಟೆಯಿಂದಲೇ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುತ್ತಿದೆ. 1.6 ಕಿ.ಮೀ ಓಟ ಸೇರಿದಂತೆ ಬೇರೆ ಬೇರೆ ಕಸರತ್ತುಗಳನ್ನು ಮಾಡಿಸಲಾಗುತ್ತಿದೆ. ಈ ಹಂತದಲ್ಲಿಯೇ ಶೇ 80ರಿಂದ 90ರಷ್ಟು ಮಂದಿ ಅನರ್ಹರಾಗುತ್ತಾರೆ’ ಎಂದು ತಿಳಿಸಿದರು.

ಜಿಲ್ಲಾಡಳಿತಕ್ಕೆ ಅಭಿನಂದನೆ: ನೇಮಕಾತಿ ರ‍್ಯಾಲಿಗೆ ಬರುವವರಿಗೆ ಯಾವುದೇ ತೊಂದರೆಯಾಗದಂತೆ ಜಿಲ್ಲಾಡಳಿತ ಉತ್ತಮ ವ್ಯವಸ್ಥೆ ಮಾಡಿದೆ. ಸೇನೆಯ ವತಿಯಿಂದ ಜಿಲ್ಲಾಧಿಕಾರಿ ಹಾಗೂ ಪೊಲೀಸ್‌ ವರಿಷ್ಠಾಧಿಕಾರಿಗೆ ಅಭಿನಂದನೆ ಸಲ್ಲಿಸುವುದಾಗಿ ಬಜ್ವಾ ತಿಳಿಸಿದರು.

ಈ ವೇಳೆ ಮಂಗಳೂರು ವಿಭಾಗದ ನೇಮಕಾತಿ ನಿರ್ದೇಶಕ ಕರ್ನಲ್ ಎಂ.ಎ.ರಾಜಮನ್ನಾರ್, ಬೆಂಗಳೂರು ವಿಭಾಗದ ನಿರ್ದೇಶಕ ಎನ್.ಎಸ್.ಸಿಬ್ಬಾ, ಗೋವಾ ವಿಭಾಗದ ನಿರ್ದೇಶಕ ಕರ್ನಲ್ ಸಂಜಯ್ ಪಟ್ನಾಯಕ್ ಹಾಜರಿದ್ದರು.

ಪಾರದರ್ಶಕ ನೇಮಕಾತಿ; ವಶೀಲಿಗೆ ಅವಕಾಶವಿಲ್ಲ..

ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಏಪ್ರಿಲ್ 29ರಂದು ಲಿಖಿತ ಪರೀಕ್ಷೆ ನಡೆಸಲಾಗುವುದು. ನೇಮಕಾತಿ ಪರೀಕ್ಷೆಯ ಎಲ್ಲಾ ಹಂತದಲ್ಲೂ ಕರ್ನಾಟಕ ಹಾಗೂ ಕೇರಳ ಹೊರತಾದ ಅಧಿಕಾರಿಗಳೇ ಕಾರ್ಯನಿರ್ವಹಿಸಲಿದ್ದಾರೆ. ಹಾಗಾಗಿ ಯಾವುದೇ ಅಕ್ರಮಕ್ಕೆ ಅವಕಾಶವಿಲ್ಲ. ಇದೊಂದು ಅತ್ಯಂತ ಪಾರದರ್ಶಕ ಪರೀಕ್ಷಾ ವಿಧಾನ. ಯಾವುದೇ ಅಕ್ರಮಕ್ಕೂ ಅವಕಾಶವಿಲ್ಲ. ವಶೀಲಿ, ಹಣ ಯಾವುದೂ ನಡೆಯುವುದಿಲ್ಲ ಎಂದು ಬ್ರಿಗೇಡಿಯರ್ ಸ್ಪಷ್ಟಪಡಿಸಿದರು.

ಉತ್ತಮ ಅವಕಾಶ: ಈಗ ಆಯ್ಕೆಯಾಗುವವರಿಗೆ ಮೂಲ ವೇತನ ₹21 ಸಾವಿರಕ್ಕೂ ಹೆಚ್ಚಿದೆ. ಜೊತೆಗೆ ಗಡಿಯಲ್ಲಿ ಕೆಲಸ ಮಾಡುವಾಗ ವಿಶೇಷ ಭತ್ಯೆಗಳನ್ನು ನೀಡಲಾಗುತ್ತದೆ. ಜೊತೆಗೆ ಕುಟುಂಬಕ್ಕೆ ಉಚಿತ ಪಡಿತರ, ವಸತಿ, ವೈದ್ಯಕೀಯ ವೆಚ್ಚ, ಉಚಿತ ಸಾರಿಗೆ ಸವಲತ್ತು ಸೇರಿದಂತೆ ಪಿಂಚಣಿ ಸೌಲಭ್ಯವೂ ಇದೆ ಎಂದು ಹೇಳಿದ ಬ್ರಿಗೇಡಿಯರ್ ಬಜ್ವಾ, ‘ಎಸ್‌ಎಸ್ಎಲ್‌ಸಿ ಇಲ್ಲವೇ ಪಿಯುಸಿಯ ನಂತರ ಬದುಕು ರೂಪಿಸಿಕೊಳ್ಳಲು ಸೇನೆಗೆ ಸೇರಬಹುದು. ದೇಶ ಸೇವೆಗೆ ಇದಕ್ಕಿಂತ ಹೆಚ್ಚಿನ ಅವಕಾಶ ಎಲ್ಲಿ ಸಿಗುತ್ತದೆ’ ಎಂದರು.

23 ವರ್ಷದವರೆಗೂ ಪ್ರಯತ್ನಿಸಿ..

‘ಸೇನೆಯಿಂದ ಪ್ರತಿ ವರ್ಷ ನೇಮಕಾತಿ ರ್‍ಯಾಲಿ ನಡೆಸಲಾಗುತ್ತದೆ. ಹಾಗಾಗಿ ಒಮ್ಮೆ ಹಾಜರಾಗಿ ಅನುತ್ತೀರ್ಣರಾದವರು ಬೇಸರಪಟ್ಟುಕೊಳ್ಳುವ ಅಗತ್ಯವಿಲ್ಲ. 17ರಿಂದ 23ವರ್ಷದವರೆಗೆ ಎಷ್ಟು ಬಾರಿಯಾದರೂ ಪ್ರಯತ್ನಿಸಬಹುದು. ಒಮ್ಮೆ ಪರೀಕ್ಷೆಯಲ್ಲಿ ವಿಫಲರಾದವರು ಕನಿಷ್ಠ 6 ತಿಂಗಳು ಮನೆಯಲ್ಲಿ ಸಿದ್ಧತೆ ಮಾಡಿಕೊಂಡು ಮತ್ತೊಮ್ಮೆ ಹಾಜರಾಗಿ. ಆಗ ಖಂಡಿತ ಉತ್ತೀರ್ಣರಾಗುತ್ತೀರಿ. ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಿ ಎರಡು ತಿಂಗಳ ನಂತರ ನೇಮಕಾತಿ ರ‍್ಯಾಲಿ ನಡೆಯುತ್ತದೆ. ಈ ಅವಧಿಯಲ್ಲಿಯೇ ಸಿದ್ಧತೆ ನಡೆಸಿದರೂ ಯಶಸ್ಸು ಸಾಧ್ಯ’ ಎಂದು ಅಭ್ಯರ್ಥಿಗಳಿಗೆ ಬ್ರಿಗೇಡಿಯರ್ ಬಜ್ವಾ ಸಲಹೆ ನೀಡುತ್ತಾರೆ.

* * 

ಸೇನೆಗೆ ಸೇರುವ ಪ್ರಮುಖ ಉದ್ದೇಶ ಉದ್ಯೋಗ ಪಡೆಯುವುದೇ ಆಗಿದ್ದರೂ ಅದರಲ್ಲಿ ರಾಷ್ಟ್ರಭಕ್ತಿಯೂ ಸಮ್ಮಿಳಿತವಾಗಿರುತ್ತದೆ. ಸೇನೆಯ ಸಮವಸ್ತ್ರ ಧರಿಸುವುದು ಪ್ರತಿಯೊಬ್ಬರ ಕನಸು
ಬ್ರಿಗೇಡಿಯರ್ ಪಿ.ಎಸ್.ಬಜ್ವಾ, ನೇಮಕಾತಿ ವಿಭಾಗದ ಉಪಮಹಾನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT