ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಢ್ಯ

Last Updated 20 ಜನವರಿ 2018, 19:30 IST
ಅಕ್ಷರ ಗಾತ್ರ

‘ಶಂಕ್ರಯ್ಯ ಸತ್ತ’ ಎನ್ನೂ ಸುದ್ದಿ ಬಾಯಿಂದ ಬಾಯಿಗೆ ಹರಡುತ್ತಲೆ ಜನ ಮನೆ ಮುಂದೆ ಗುಂಪುಗೂಡುತ್ತಿದ್ದರು. ಶಂಕರಯ್ಯನೆಂದರೆ ಊರಿಗೆ ಅದು ಹಳೇ ತಲೆ. ಅವನ ವಯಸ್ಸು ಭರ್ತಿ 90 ತುಂಬಿತ್ತು. ಅವನ ವಯಸ್ಸಿನವರೆಲ್ಲಾರು ಈಗಾಗಲೇ ಕಾಲವಾಗಿದ್ದು ಇವನೊಬ್ಬ ಗಟ್ಟಿಯಾಗಿ ಇಷ್ಟು ವರ್ಷಗಳ ಸವೆಸಿದ್ದ. ಸತ್ತ ಶಂಕರಯ್ಯನಿಗೆ 5 ಜನ ಮಕ್ಕಳು. ಅದರಲ್ಲಿ 3 ಹೆಣ್ಣು, 2 ಗಂಡು. ಎಲ್ಲಾರಿಗೂ ಮದುವೆ, ಮಕ್ಕಳು ಸಂಸಾರವೆಂದು ಇದ್ದವು. ಇನ್ನು ಇವನ ಮೊಮ್ಮಕ್ಕಳು, ಮರಿ ಮಕ್ಕಳ ಸಂಖ್ಯೆಯು ಎಣಿಸಿದರೆ ಹತ್ತಿರತ್ತಿರ 20ಕ್ಕೆ ಸಮೀಪವಿತ್ತು.

ಮನೆಯಲ್ಲಿ ಹಿರಿಯ ಮೇಟಿಯಂತೆ ಎಲ್ಲವನ್ನು, ಎಲ್ಲಾರನ್ನು ತಾನು ಹಾಸಿಗೆ ಹಿಡಿಯುವ ಎರಡು ವರ್ಷಗಳ ಹಿಂದಿನ ತನಕ ನಿಭಾಯಿಸುತ್ತಿದ್ದ. ಕಣ್ಣು, ಕಿವಿಗಳು ಅಷ್ಟು ಚುರುಕಾಗಿ ಕಾರ‍್ಯ ನಿರ್ವಹಿಸದೆ ಹೋದರೂ ಮಕ್ಕಳು, ಮೊಮ್ಮಕ್ಕಳ ಸಹಾಯದಿಂದ ಪ್ರತಿಯೊಂದ ತನ್ನ ಯೋಚನಾ ಕ್ರಮಕ್ಕೆ ಅಳವಡಿಸಿಕೊಂಡಿದ್ದ.

ತನಗೆ ತಾತ, ಅಪ್ಪರಿಂದ ಬಂದ ಆಸ್ತಿಯ ಜೊತೆಗೆ ತಾನಷ್ಟು ದುಡಿದು ಗಳಿಸಿದ್ದೆ ಇಡೀ ಕುಟುಂಬದ ಪಾಲಿಗೆ ಒಂದು ತಲೆಮಾರು ಕೂತು ಉಂಡು ಕರಗಿಸಬಹುದಾದಷ್ಟು ಆಸ್ತಿ ಶೇಖರಣೆಯಾಗಿತ್ತು. ಆದರೆ, ಇದನ್ನ ಶಂಕರಯ್ಯ ಯಾರೊಬ್ಬರಿಗೂ ಪಾಲು ಮಾಡಿ ಹಂಚಿರಲಿಲ್ಲ. ಎಲ್ಲರಿಗೂ ಅಗತ್ಯವಿರುವ ಸೌಕರ್ಯಗಳ ಮಾಡಿ ಬದುಕಿಗೆ ಕೆಲ ದಾರಿಗಳ ಮಾಡಿಕೊಟ್ಟಿದ್ದ. ಹಾಗೆ ತನ್ನ ಹೆಂಡತಿ ಸಾವಿನ ಬಳಿಕ ಹೆಚ್ಚು ದೇವರ ಪೂಜೆ, ಭಜನೆಗಳ ಕಡೆ ಗಮನ ಹರಿಸಿದನಾದರೂ ವ್ಯವಹಾರಗಳ ಕೈ ಬಿಡಲಿಲ್ಲ. ಕಾಲದಿಂದಲೇ ಶಂಕರಯ್ಯನ ಆಸ್ತಿ ಕರಗದ ಗುಡ್ಡದಂತಿದ್ದು ಇವನ ಚಾಕಚಕತ್ಯೆಯಿಂದ ಅದು ಮತ್ತಷ್ಟು ಹಿರಿದಾಗಿತ್ತು. ಇವನ ಕಂಡರೆ ಕುಟುಂಬ ಸದಸ್ಯರೆಲ್ಲಾರಿಗೂ ಅಪಾರ ಗೌರವದೊಂದಿಗೆ ಭಯವಿತ್ತು.

ಊರಿನಲ್ಲೂ ಅಷ್ಟೆ ಶಂಕರಯ್ಯ ತನ್ನದೇ ಆದ ಒಂದು ವರ್ಚಸ್ಸು ವೃದ್ಧಿಸಿಕೊಂಡು ಬಂದಿದ್ದ. ಬಹುತೇಕರು ಅವನ ಬಣದಲ್ಲಿ ಸೇರಿಕೊಂಡು ಅವನ ಮುಂದಾಳತ್ವದಲ್ಲಿ ಊರಿನ ಎಲ್ಲಾ ಬೇಕು, ಬೇಡಗಳ ಚರ್ಚಿಸುತ್ತ ಹಬ್ಬ, ಜಾತ್ರೆಗಳ ಮಾಡುತ್ತಿದ್ದರು. ಇವನ ವಿರುದ್ಧ ದನಿ ಎತ್ತಿದವರಿಗೆ ಸರಿಯಾದ ಪಾಠಗಳ ಕಲಿಸಿ ತನ್ನ ಬಳಿ ಶರಣಾಗಿಸಿಕೊಂಡ ಉದಾಹರಣೆಗಳು ಅನೇಕವಿದ್ದವು.

ಈ ಕಾರಣಕ್ಕಾಗಿ ಶಂಕರಯ್ಯನ ಯಾರೊಬ್ಬರೂ ಎದುರಾಕಿಕೊಳ್ಳದೆ ಅದೊಂದು ಬಿರುಗಾಳಿಯಾಗಿದ್ದು ಅದಕ್ಕೆ ತಾವು ಸಿಕ್ಕರೆ ತರಗೆಲೆ ಖಂಡಿತ ಎಂದು ಭಾವಿಸಿದ್ದರು. ಶಂಕರಯ್ಯನ ವ್ಯಕ್ತಿತ್ವವು ಇಂಥಾ ಮಾತುಗಳಿಗೆ ಹೇಳಿ ಮಾಡಿಸಿದಂತೆ ತನ್ನ ಕ್ರಿಯೆ ಮತ್ತು ವರ್ತನೆಗಳಲ್ಲಿ ಅದನ್ನ ಬಿಂಬಿಸುತ್ತಿತ್ತು.

ತೀರ ವಯಸ್ಸಾಗಿ ಮೂಲೆ ಹಿಡಿದರೂ ತನ್ನ ಯಾವ ಮನೋಧರ್ಮವನ್ನೂ ಬದಲಾಯಿಸಿದೆ ಮಲಗಿದ್ದಲ್ಲೆ ಅಬ್ಬರಿಸುತ್ತಿದ್ದ. ಕೆಲವರು ‘ದೀಪ ಉರೀತಾ, ಉರೀತಾ ಕಡೆ ಘಳಿಗೆಗೆ ಜೋರಾದ್ದಂತೆ ಅಂಗೆ ಈ ಶಂಕ್ರಯ್ಯ. ಮಲಗಿದ್ದ ತಾವ್ ಬಿಡ್ನಲ್ಲ ತನ್ನ ದರ್ಪವ’ ಎಂದು ಮಾತಾಡಿಕೊಳ್ಳುತ್ತಿದ್ದರು.

ಇಷ್ಟೆಲ್ಲಾ ದುರುಳ ವರ್ತನೆಗಳಿಂದ ಹೆಸರು ಮಾಡಿದ್ದ ಶಂಕರಯ್ಯನ ಮಕ್ಕಳು ಅವನಂತೆ ಆಗದೆ ಹೋಗಿದ್ದೇ ಸಮಾಧಾನ. ಅವರೊಳಗೆ ಈ ಬಗ್ಗೆ ಸಣ್ಣ-ಪುಟ್ಟ ಕಿಡಿಗಳಿದ್ದರೂ ಬದಲಾದ ಕಾಲಮಾನ ಅದಕ್ಕೆ ಅಸ್ಪದ ಕೊಟ್ಟಿರಲಿಲ್ಲ. ಇದರ ನಡುವೆ ಅಪ್ಪನೇ ಖುದ್ದು ತನ್ನ ಮಕ್ಕಳಿಗೆ ಬೇಕಾದ ಅನುಕೂಲ ಮಾಡಿಕೊಡಲು ಬಂದಾಗ ಕಾಯ್ದೆ, ಕಾನೂನು ಕಟ್ಟಲೆಗಳು ಅಡ್ಡವಾಗಿ ಅವನ ಕೈ ಕಟ್ಟಿ ನಿಲ್ಲಿಸಿ ಸಮಾನತೆಯ ಸಾರುತ್ತಿದ್ದವು. ಸ್ವಾತಂತ್ರ್ಯದ ನಂತರ ಈ ಪ್ರಜಾತಂತ್ರದ ಆಯಸ್ಸನ್ನ ಕ್ಷಣಿಕವೆಂದು ಭಾವಿಸಿದ್ದವನಿಗೆ ಅದು ಈ ಪರಿಯಾಗಿ ಬೆಳೆದು ತನ್ನಂಥವರಿಗೆ ಉರುಳಾಗಿದ್ದಕ್ಕೆ ಹಲ್ಲು ಮಸೆಯುತ್ತಿದ್ದ.

ಕೆಲವರು ಇವನ ಪಕ್ಷಗಳ ಬೆಂಬಲಿಸುವಂತೆ ತಮ್ಮ ಪಕ್ಷದಿಂದ ಸ್ಪರ್ಧೆಗೆ ಇಳಿಯುವಂತೆ ಕೇಳಿಕೊಂಡರಾದರೂ ಶಂಕರಯ್ಯ ಅದು ತನ್ನ ಅಸ್ತಿತ್ವಕ್ಕೆ ಧಕ್ಕೆ ಎಂದುಕೊಂಡ. ಅವನಿಗೆ ಜನಗಳ ಮುಂದೆ ನಿಂತು ಕೈ ಮುಗಿದು ಅವಕಾಶ ಕೇಳುವುದು ಮತ್ತು ಉದಾರವಾಗಿ ಅವರುಗಳ ಸೇವೆಗೆ ಮುಂದಾಗುವುದು ಎರಡು ತನಗೆ ಒಪ್ಪದಾಗಿತ್ತು. ಮೊದಲಿಗೆ ಪ್ರಜಾತಂತ್ರದ ಆಳುವ ವರ್ಗವನ್ನು ತನ್ನ ಮುಂದೆ ಬಗ್ಗಿ ನಿಲ್ಲಿಸಿಕೊಳ್ಳಲು ಪ್ರಯತ್ನಿಸಿದನಾದರೂ ಅದು ಕ್ರಮೇಣ ಎದೆ ಸೆಟೆಸಿ ನಿಂತಿದ್ದೇ ಅದರಿಂದ ದೂರವಾದ.

ಅವನೊಳಗೆ ತಾನು ಅಧಿಪತಿಯೆಂಬ ನಿಲುವು ಮಾತ್ರ ಸಡಿಲಗೊಂಡಿರಲಿಲ್ಲ. ಇಂಥ ಶಂಕರಯ್ಯನಿಗೆ ನಿಧಾನವಾಗಿ ಚರ್ಮಕ್ಕೆ ತೊನ್ನಿನ ಕಾಯಿಲೆ ಅಂಟಿಕೊಂಡಿತ್ತು. ಆರಂಭದಲ್ಲಿ ಸಣ್ಣಗೆ ಮಚ್ಚೆಯಂತೆ ಶುರುವಾದಾಗ ಅಸಡ್ಡೆ ಮಾಡಿದ್ದೆ ಬೆಳೆದು ಇಡೀ ದೇಹವನ್ನೇ ಆವರಿಸಿಕೊಂಡ ತೊನ್ನು ದೇಹ ಮುತ್ತಿತ್ತು. ಸಿಪ್ಪೆ ಎರೆದ ಪರಂಗಿ ಹಣ್ಣಿನಂತೆ ಶಂಕರಯ್ಯನ ದೇಹ ಕಾಣಲು ಕಂಡವರು ಬಾಯಿಯ ಮೇಲೆ ಕೈ ಇಟ್ಟುಕೊಳ್ಳುತ್ತ ‘ಈ ಸಾಯೋ ಕಾಲದಲ್ಲಿ ಹಿಂಗೆ..! ಮಾಡಿದ್ದ ಪಾಪ ಎಲ್ಲೋ ಹೋಗದು’ ಎಂದು ಆಶ್ಚರ‍್ಯ ಚಕಿತರಾಗುತ್ತಿದ್ದರು. ಈ ತೊನ್ನು ಒಂದು ಚರ್ಮವ್ಯಾಧಿ ಆದರೂ ಅದನ್ನು ನಿರ್ಲಕ್ಷಿಸಿದ ಪರಿಣಾಮ ಶಂಕರಯ್ಯನ ದೇಹ ತಿಂದಿತ್ತು.

ಯಾವ ಮದ್ದುಗಳಿಗೂ ಬಗ್ಗದಂತೆ ಹರಡಿ ನಿಂತಿದ್ದ ದೇಹವನ್ನ ಅವನ ಮನೆಯವರು ಭಯದಿಂದ ನೋಡುತ್ತಿದ್ದರು. ಆದರೆ, ಇದರಿಂದ ಶಂಕರಯ್ಯನ ಮನಸ್ಥಿತಿಯಲ್ಲಿ ಯಾವುದೇ ಅಂತಾ ಬದಲಾವಣೆಗಳು ಕಾಣಲಿಲ್ಲ. ಅವನು ಈ ತೊನ್ನನು ಒಂದು ಯಕಶ್ಚಿತ್ ಎಂದು ಭಾವಿಸಿಯೇ ತನ್ನ ಕೆಲಸ ಕಾರ‍್ಯಗಳಲ್ಲಿ ತೊಡಗಿದ. ಶಂಕರಯ್ಯನ ಹೆಸರು ಜನರ ಬಾಯಲ್ಲಿ ನಿಧಾನವಾಗಿ ತೊನ್ನಯ್ಯನೆಂದು ಬದಲಾಗುತ್ತ ಬಂದರು ನೇರವಾಗಿ ಅವನ ಮುಂದೆ ಕರೆಯಲಾಗಲಿಲ್ಲ. ಬೆನ್ನಿಂದೆ ಅವನ ಬಗ್ಗೆ ಮಾತಾಡಲು ಎಲ್ಲಾರು ‘ತೊನ್ನಯ್ಯ, ತೊನ್ನಯ್ಯ’ ಎಂದು ಬಳಸಿ ಅವನ ಪಾಪ ಕರ್ಮಗಳ ಫಲವೇ ಈ ತೊನ್ನೆಂದು ಹೇಳುತ್ತಿದ್ದರು.

ಶಂಕರಯ್ಯನಿಗೆ ಈ ಮುಪ್ಪಿನಲ್ಲಿ ತೊನ್ನು ಬಂದಿದ್ದಕ್ಕೆ ಹೆಚ್ಚೇನು ಚಿಂತೆಯಿರದಿದ್ದರೂ ಅದರಿಂದ ಕಿರಿಕಿರಿಯನ್ನು ಅನುಭವಿಸಿದ್ದ. ಜನರು ಬೆನ್ನಿಂದೆ ಆಡುವ ಮಾತುಗಳು ಅವನ ಕಿವಿಗೆ ಬಿದಿದ್ದವು. ಅವುಗಳಿಂದ ಗಾಸಿಯಾಗದಂತೆ ಮೈ, ಕೈಗಳ ನೋಡಿಕೊಳ್ಳಲು ಅವು ಅವನಿಗೆ ತಾನ್ಯಾರೋ ಬೇರೆಯದೇ ಜೀವ ಎಂದೆನಿಸಿತು.

ಇವನಿಗೆ ಜ್ಞಾಪಕವಿರುತ್ತಿರಲಿಲ್ಲ. ಮೊದಲಿಗೆ ತೊನ್ನು ಎಲ್ಲಿ ಆರಂಭವಾಯಿತೆಂದು ಸ್ಪಷ್ಟವಾಗಿ. ಕೈಮೇಲೆ ಎಂದುಕೊಂಡರೆ ಅದು ಸುಳ್ಳಾಗಿ ಬೆನ್ನ ಭಾಗದಲ್ಲಿ ಅಂಗೈಯಗಲವಾಗಿತ್ತು. ಅದು ಅವನ ಗಮನಕ್ಕೆ ಬರದೆ ಯಾವ ನೋವು, ಬಾದೆಗಳಂತೆ ತೊಂದರೆ ಕೊಡದೆ ತನ್ನ ಕಾರ‍್ಯ ಸಾಧಿಸಿತ್ತು. ಮಕ್ಕಳು, ಮೊಮ್ಮಕ್ಕಳು ಒಳ್ಳೆ ಚರ್ಮರೋಗ ತಜ್ಞರಲ್ಲಿ ತೋರಿಸಿ ಚಿಕಿತ್ಸೆ ಕೊಡಿಸಿದರು ಶಂಕರಯ್ಯ ತನ್ನ ಮೈ ಮೇಲಿನ ತೊನ್ನನು ಒಪ್ಪಿಕೊಂಡುಬಿಟ್ಟಿದ್ದ. ಅದೀನ್ನೂ ತನಗೆ ಕಾಯಂ ಆಗಿದ್ದು ತನ್ನ ದೇಹ ಮಣ್ಣಾಗುವ ತನಕ ಹೀಗೇ ಇರಲೆಂದುಕೊಂಡ. ಇಲ್ಲಿಂದಲೇ ಅವನ ತಲೆಯಲ್ಲಿ ಸಮಸ್ಸೆ ಶುರುವಾಗಿದ್ದು.

ಮೂಢನಂಬಿಕೆ, ಕಂದಾಚರಣೆಗಳ ಪ್ರಕಾರ ತೊನ್ನು ದೇಹದ ವ್ಯಕ್ತಿ ಹೂಳುವುದು ಮಳೆಯಾಗದ್ದಕ್ಕೆ ಕಾರಣವೆಂದು ಆ ದೇಹವನ್ನು ಸುಡುವುದು ನಡೆದು ಬಂದ ಪದ್ಧತಿಯಾಗಿತ್ತು. ಆದರೆ, ತನ್ನ ಈ ತೊನ್ನು ಬಂದ ದೇಹಕ್ಕೆ ಯಾವುದೇ ಕಾರಣಕ್ಕೂ ಬೆಂಕಿ ಸೋಕಿಸದೆ ತಂಪು ಮಣ್ಣಿನ ಸಂಗ ನೀಡಬೇಕೆಂದು ಶಂಕರಯ್ಯ ತನ್ನ ಮಕ್ಕಳಲ್ಲೆರಲ್ಲೂ ಹೇಳಿಕೊಂಡು ಬಂದಿದ್ದ. ಇದಾ ಕೇಳಿದ ಊರವರಿಗೆ ಶಂಕರಯ್ಯನ ತೊನ್ನು ದೇಹವನ್ನು ಹೂಳುವುದೋ, ಸುಡುವುದೋ ಎಂಬುದರ ಬಗ್ಗೆ ಗೊಂದಲಗಳಾದವು. ಆದರೆ, ಆಗಿನ್ನೂ ಶಂಕರಯ್ಯ ಬದುಕಿದ್ದ ಕಾರಣ ಈ ವಿವಾದಕ್ಕೆ ಅಂತಾ ಮಹತ್ವ ದೊರಕಲಿಲ್ಲ. ಶಂಕರಯ್ಯನೇನೋ ತನ್ನ ತೊನ್ನು ದೇಹವನ್ನ ಎಲ್ಲಾ ಕ್ರಿಯಾ, ಕರ್ಮಗಳೊಂದಿಗೆ ಮಣ್ಣಿಗಿರಿಸಲು ಕೇಳಿಕೊಂಡಿದ್ದರಲ್ಲಿ ಅವನ ವಂಶಜರಿಂದ ನಡೆದು ಬಂದ ಪದ್ಧತಿಯಿತ್ತು.

ತನ್ನ ಹಿರಿಯರ ಮಣ್ಣು ಮಾಡಿದಂತೆ ತನ್ನನು ಮಣ್ಣು ಮಾಡಿರೆಂದು ಮಕ್ಕಳಲ್ಲಿ ಪದೇ, ಪದೇ ಹೇಳಿದ. ಆದರೆ, ಅವನಿಗೆ ಇದರಲ್ಲಿ ನಂಬಿಕೆಯಿರಲಿಲ್ಲ. ಏಕೆಂದರೆ ತೊನ್ನು ದೇಹದವರ ಸುಟ್ಟರಷ್ಟೆ ಮಳೆಗೆ ಅವಕಾಶವೆಂದು ನಂಬಿದವರು ಈ ದೇಹವ ಹೂಳಲು ಅವಕಾಶ ಕೂಡುವುದಿಲ್ಲವೆಂದು ಅವನಿಗೂ ಗೊತ್ತಿತ್ತು. ‘ನನ್ನ ಸುಡಬೇಡ್ರೀ, ಮಣ್ಣಾಗಾಕ್ರೀ, ನನ್ನ ಸುಡಬೇಡ್ರೀ’ ಎಂದು ಹಾಸಿಗೆ ಹಿಡಿದವನು ಗೊಣಗಾಡುತ್ತಿದ್ದ. ಅವನ ಮನೆಯವರಿಗೆ ಇದೊಂದು ಸಮಸ್ಸೆಯಾಗಿ ಕಾಡತೊಡಗಿತು. ಇಡೀ ಊರಂತೂ ಈ ವಿಷಯದಲ್ಲಿ ತೊನ್ನಯ್ಯನ ಸುಡುವುದೊಂದೇ ಸೂಕ್ತವೆಂದು ತೀರ್ಮಾನ ಮಾಡಿತ್ತು. ದುಡ್ಡು ಇರುವ ದೊಡ್ಡ ಮನೆಯವರು ಇದಕ್ಕೆ ವಿರುದ್ಧವಾಗಿ ಹೂಳಿದರೆ ಏನೆಂಬ ಪ್ರಶ್ನೆಗಳು ಕಾಡಲು ಅದಕ್ಕೆ ಅವರಲ್ಲಿ ಉತ್ತರಗಳಿರಲಿಲ್ಲ.

ಶಂಕರಯ್ಯನ ಮಕ್ಕಳಂತೂ ಈ ಮೌಢ್ಯಗಳನ್ನ ಊರಿನ ಮಂದಿ ಬಿಡಬೇಕೆಂದು ಅವನ ಹಾಸಿಗೆ ಹಿಡಿದಾಗಲೇ ಹೂಳುವುದಕ್ಕೆ ಬೇಕಾದ ವ್ಯವಸ್ಥೆಗೆ ಜನರ ಅಣಿಗೊಳಿಸಲು ಸಿದ್ಧವಾಗುತ್ತಿದ್ದರು. ಜನರಿಗೆ ಇದು ಬಿಸಿ ತುಪ್ಪವಾಗಿ ಕಂಡಿತ್ತು. ಇಲ್ಲೆ ಕುಮಾರನು ತೊನ್ನಯನ ಸಾವಿನ ನಂತರ ನಡೆಯುವ ಕಾರ‍್ಯಗಳ ಮೇಲೆ ಆಸಕ್ತನಾಗಿದ್ದ. ಏಕೆಂದರೆ ಬರಿಯ ದೇಹದ ಒಂದು ಭಾಗಕ್ಕಷ್ಟೆ ತೊನ್ನು ಬಿದ್ದ ಕುಮಾರನ ಅಣ್ಣನ ಶವವನ್ನು ಇದೇ ಊರಿನ ಜನ ಸೇರಿ ಎಷ್ಟೇ ವಿರೋಧಿಸಿದರೂ ಬಿಡದೆ ಹೂಳಿದ ಹೆಣವ ನಾಲ್ಕು ತಿಂಗಳ ನಂತರ ಕಿತ್ತು ರಾತ್ರೋರಾತ್ರಿ ಸುಟ್ಟಿದ್ದರು. ಕಾಕತಾಳೀಯವೆಂಬಂತೆ ಅಲ್ಲಿಯ ತನಕ ಸುರಿಯದಿದ್ದ ಮಳೆಯು ಈ ಘಟನೆಯ ನಂತರದ ಎರಡು ದಿನದಲ್ಲಿ ಊರು, ಕೇರಿ ಕೊಚ್ಚಿ ಹೋಗುವಂತೆ ಸುರಿದಿತ್ತು. ಈ ಪ್ರಕರಣ ನೆಡೆದು ಸರಿ ಸುಮಾರು ವರ್ಷಗಳೇ ಕಳೆದರು ಕುಮಾರನೊಳಗೆ ಮಾತ್ರ ಅದು ನಿನ್ನೆ ನಡದಂತೆ ಇತ್ತು.

ಯಾರಿಗೂ ಸ್ಪಷ್ಟವಿಲ್ಲ. ಶಂಕರಯ್ಯನ ಶವವ ಹೂಳುವುದೋ, ಸುಡುವುದೋ ಎಂದು. ಜನ ಮಾತ್ರ ತಮ್ಮ ಅಭಿಪ್ರಾಯಗಳ ತಮ್ಮ, ತಮ್ಮಲ್ಲೆ ಹೇಳಿಕೊಳ್ಳುತ್ತಿದ್ದರು. ಆದರೆ, ಸದ್ದಿಲ್ಲದೆ ಜಮೀನಿನೊಂದು ಭಾಗದಲ್ಲಿ ಗುಂಡಿ ತೆಗೆವ ಕಾರ‍್ಯ ನೆಡೆಯುತ್ತಿತ್ತು. ಹಾಗೆ ಪಕ್ಕಕ್ಕೆ ಒಂದು ಗಾಡಿ ಸೌದೆ ಕೂಡ ಬಂದು ಬಿದ್ದಿದ್ದೆ ನೋಡುವವರಿಗೆ ಏನು ನಡೆಯಬಹುದೆಂಬ ಕುತೂಹಲ. ಊರಿನ ಪ್ರಮುಖರು ತೊನ್ನು ದೇಹದ ಶಂಕರಯ್ಯನ ಹೂಳುವುದು ಬೇಡವೆಂದು ಅವನ ಕುಟುಂಬಕ್ಕೆ ಹೇಳಿದ್ದರು. ಹೂಳುವುದರಿಂದ ಆಗಬಹುದಾದ ತೊಂದರೆಗಳ ಕೆಲ ಉದಾಹರಣೆಗಳ ಮೂಲಕ ಹೇಳಲು ಶಂಕರಯ್ಯನ ಹಿರಿಮಗ ‘ಅದೆಲ್ಲಾ ಗೊಡ್ಡ ನಂಬಿಕೆ ಹಂಗೇನೂ ಆಗೋದಿಲ್ಲ. ನಾವ್ ನಮ್ಮಪ್ಪ್ನ್ ಹೂಳ್ಲೇ ಬೇಕು’ ಎಂದ. ಇದಕ್ಕೆ ಅಲ್ಲಿದ್ದವರು ವಿರೋಧಿಸಿ ಮಾತನಾಡಿದರಾದರು ಆ ದನಿಯಲ್ಲಿ ಅಂಥ ಗಟ್ಟಿತನವಿರಲಿಲ್ಲ.

ಈ ಮೌಢ್ಯಗಳ ವಿರುದ್ಧ ಮತ್ತು ಪರವಾಗಿ ಇಲ್ಲಿ ಎರಡು ಬಣಗಳಿದ್ದವು. ಇದರಲ್ಲಿ ಮೌಢ್ಯದ ಪರವಾಗಿದ್ದವರ ಸಂಖ್ಯೆ ಅತಿ ಹೆಚ್ಚಿದ್ದು ಅವರೆಲ್ಲಾ ವಿರುದ್ಧದವರ ಮುಂದಿನ ನೆಡೆಗೆ ಕಾಯುತ್ತಿದ್ದರು. ಶವ ಸಂಸ್ಕಾರಕ್ಕೆ ಬೇಕಾದ ಕಾರ‍್ಯಗಳೆಲ್ಲವು ತೀವ್ರ ಗತಿಯಲ್ಲೆ ನಡೆಯುತ್ತ ಜನರೊಳಗೆ ಗೊಂದಲ ಮೂಡಿಸಿರುವಾಗಲೇ ಅಲ್ಲಿಗೆ ಕುಮಾರನು ಬಂದು ನಿಂತ. ಅವನಿಗೆ ತನ್ನ ಅಣ್ಣನ ಮಣ್ಣಿನಿಂದ ಕಿತ್ತು ಸುಟ್ಟಿದ್ದರ ಬಗ್ಗೆ ಇನ್ನೂ ಕೋಪ ಹೋಗಿರಲಿಲ್ಲ. ಊರ ಒಳಿತಿನ ಪ್ರಶ್ನೆ ಮುಂದಿಟ್ಟು ಈ ಕಾರ‍್ಯ ಮಾಡಿದವರು ಈಗ ತೊನ್ನು ಶಂಕರಯ್ಯನ ಶವವ ಏನು ಮಾಡುವರೆಂಬ ನಿರೀಕ್ಷೆಯಲ್ಲಿದ್ದ. ಅವನ ಹೂಳುವುದಕ್ಕೆ ಇವನದೂ ವಿರೋಧವಿತ್ತು.

ಬೇಕಾದ ಶವಯಾತ್ರೆಯ ಸಿದ್ಧತೆಗಳ ಮಾಡಿ ಶೃಂಗಾರವಾಗಿದ್ದೇ ಊರಿನ ಮುಖ್ಯ ಬೀದಿಗಳಲ್ಲಿ ಅದರ ಮೆರವಣಿಗೆ ಹೊರಟಿತು. ಇದರಿಂದೆ ಜನ ನಡೆಯಬಹುದಾದ ಮುಂದಿನ ಕ್ರಿಯೆಗಳ ನೋಡಲು ಮುಗಿ ಬಿದ್ದವರಂತೆ ಹಿಂಬಾಲಿಸಿದ್ದರು. ಶಂಕರಯ್ಯನ ಕುಟುಂಬ ಒಳಗೊಳಗೆ ಎಲ್ಲಾ ಬೇಕಾದ ವ್ಯವಸ್ಥೆಗಳ ಮಾಡಿದ್ದೇ ಸ್ಥಳಕ್ಕೆ ಪೊಲೀಸರ ಸರ್ಪಗಾವಲು ಹಾಕಿಸಿತ್ತು. ಜನ ಪೊಲೀಸ್ ಪಡೆ ನೋಡುತ್ತಲೆ ತೊನ್ನು ಶಂಕರಯ್ಯನ ಹೂಳುವುದು ಗ್ಯಾರಂಟಿ ಎಂದುಕೊಂಡರು. ಯಾರೋಬ್ಬರೂ ಜಮೀನಿನ ಬಳಿ ತಮ್ಮ ವಿರೋಧದ ದನಿ ಎಬ್ಬಿಸಲಿಲ್ಲ. ಪೊಲೀಸರು ಊರ ಜನರ ಚಟುವಟಿಕೆ ಗಮನಿಸುತ್ತ ಅವರಿಗೆ ಈ ರೀತಿಯ ಮೌಢ್ಯಗಳ ಬಗ್ಗೆ ಪುಟ್ಟ ಭಾಷಣ ಬಿಗಿದರು. ಯಾವಾಗ ಗುಂಡಿಯೊಳಗೆ ಶಂಕರಯ್ಯನ ಶವ ಇಳಿಸಿದರೋ ಅಲ್ಲಿಂದ ಊರಿನವರು ಅದಕ್ಕೆ ಮಣ್ಣು ಹಾಕದೆ ಒಬ್ಬೊಬ್ಬರೇ ಅಲ್ಲಿಂದ ನೆಡೆದು ತಮ್ಮ ಮನೆಗಳತ್ತ ನಡೆದರು.

ಉನ್ನತ ಶಕ್ತಿಯೊಂದು ತನ್ನ ಕಾರ‍್ಯ ಸಾಧಿಸಿಕೊಂಡಿದ್ದರ ಬಗ್ಗೆ ಅವರಲ್ಲಿ ಅಸಮಾಧಾನವಿತ್ತು. ಊರಿನವರ ಇಷ್ಟು ವಿರೋಧದ ನಡುವೆಯೂ ಈ ಹೂಳೋ ಕಾರ‍್ಯ ಮಾಡಿ ಮುಗಿಸಿದ ಕುಟುಂಬ ಇದಕ್ಕೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ತನ್ನ ಅಪ್ಪನ ಆಸೆ ಪೂರೈಸಿದವರಂತೆ ಅಲ್ಲಿಂದ ನಡೆದು ಹೊರಟಿದ್ದರು. ಈ ಘಟನೆ ಗಮನಿಸಿದ ಕುಮಾರನಿಗೆ ಈ ಹಾಳು ಹಳೇ ಮೌಢ್ಯಗಳ ಮುರಿದ ಬಗ್ಗೆ ಸಮಾಧಾನವಿದ್ದರೂ ಇದನ್ನ ಉಳ್ಳವರು ದಕ್ಕಿಸಿಕೊಂಡಿದ್ದರ ಬಗ್ಗೆ ಅಸಮಾಧಾನವಿತ್ತು. ತನ್ನ ಬಲಕ್ಕೆ ಅಂದು ಯಾರೂ ಇರದೆ ಹಠ ಬಿಡದವರಂತೆ ಮಣ್ಣಲ್ಲಿ ಅರ್ಧ ಕೊಳೆತ ದೇಹವ ತಗೆದು ಸುಟ್ಟಿದ್ದರ ನೆನಪು. ಇಂದೇ ಅದೇ ತೊನ್ನಿನ ಶಂಕರಯ್ಯನ ಊರ ಮಂದಿ ವಿರೋಧಿಸಲಾಗದವರಂತೆ ಒಪ್ಪಿಕೊಂಡಿದ್ದರು.

ಮುಂದೆ ಕೆಲ ತಿಂಗಳುಗಳ ಅಂತರದಲ್ಲಿ ಆತುರಾತುರವಾಗಿ ಅಲ್ಲೊಂದು ಸಮಾಧಿ ಎದ್ದಿದ್ದೇ ಶಂಕರಯ್ಯನ ಕುಟುಂಬ ನಿರಾಳವಾಯಿತು. ಇನ್ನು ಕಟ್ಟಿದ ಸಮಾಧಿ ಅಗೆದು ಶವ ತಗೆದು ಸುಡುವುದೆಲ್ಲಾ ಆಗದ ಕೆಲಸವೆಂದು ಖಾತ್ರಿಯಾಗಿತ್ತು. ಊರು ನಿರೀಕ್ಷಿಸಿದಂತೆ ಅಂಥ ಕೆಡುಕೇನೂ ನಡೆಯದೇ ಆ ವರ್ಷಕ್ಕೆ ಒಂದು ಸಾಧರಣ ಮಳೆ ಕೂಡ ಆಗಿತ್ತು.

ಈ ಮೂಲಕ ಕೆಲವರೊಳಗಿದ್ದ ಹಳೇ ಮೌಢ್ಯ, ಕಂದಾಚರಣೆಗಳು ಸ್ವಲ್ಪ ಸಡಿಲವಾದಂತೆ ಕುಮಾರನ ಅಣ್ಣನ ದೇಹವನ್ನು ಅಂದು ತಾವು ಮಣ್ಣಿನಿಂದ ಬಗೆದು ಸುಟ್ಟಿದ್ದರ ಬಗ್ಗೆ ಬೇಸರಿಸಿದ್ದರು. ಅಲ್ಲಿಗೆ ಬಲವಾದ ಶಕ್ತಿಗೆ ಮಾತ್ರ ಬಲವಂತವಾಗಿಯಾದರು ಬಗ್ಗಿ ಮೌಢ್ಯಗಳು ಪುಡಿ, ಪುಡಿಯಾಗುವುದೆಂದು ಸಾಬೀತು ಆಗಲೂ ಊರು ತೊನ್ನಿನ ಈ ಎರಡು ಪ್ರಕರಣಗಳ ತನ್ನ ಮುಂದೆ ಇರಿಸಿಕೊಂಡು ತುಲನೆ ಮಾಡುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT