ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಿ ಬೊಗಳಿದರೆ ತಲೆ ಕೆಡಿಸಿಕೊಳ್ಳುವ ಜನ ನಾವಲ್ಲ: ಸಚಿವ ಹೆಗಡೆ

Last Updated 8 ಫೆಬ್ರುವರಿ 2018, 9:07 IST
ಅಕ್ಷರ ಗಾತ್ರ

ಬಳ್ಳಾರಿ: ‘ಯಾವುದೋ ರಸ್ತೆಯಲ್ಲಿರುವ ನಾಯಿಗಳು ಬೊಗಳಿದರೆ ಅದಕ್ಕೆ ತಲೆ ಕೆಡಿಸಿಕೊಳ್ಳುವ ಜನ ನಾವಲ್ಲ’ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿದರು.

ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ‘ನಮ್ಮ ಹಟ ಇಷ್ಟೇನೇ. ಬದುಕಿನಲ್ಲಿ ನಿಮ್ಮನ್ನು ಎಬ್ಬಿಸಿ ನಿಲ್ಲಿಸಿಯೇ ಸಿದ್ಧ. ನಾವು ಹೇಳಿಕೇಳಿ ಹಟವಾದಿಗಳು’ ಎಂದರು.

ಇದಕ್ಕೂ ಮುನ್ನ, ದಲಿತ ಸಂಘರ್ಷ ಸಮಿತಿ, ಮಾದಿಗ ದಂಡೋರ ಮತ್ತು ಅಂಬೇಡ್ಕರ್‌ ಸಂಘದ ಮುಖಂಡರು ನಗರದ ಪ್ರವಾಸಿ ಮಂದಿರದ ಬಳಿ ಹೆಗಡೆ ಅವರ ಕಾರನ್ನು ಅಡ್ಡಗಟ್ಟಿ ಕಪ್ಪು ಬಾವುಟ ತೋರಿಸಿದರು. ಈ ವೇಳೆ ಕಾರಿನಿಂದ ಕೆಳಗಿಳಿದ ಸಂಸದ ಬಿ. ಶ್ರೀರಾಮುಲು, ದಲಿತ ಮುಖಂಡರ ಮನವೊಲಿಸಲು ಮಾಡಿದ ಯತ್ನ ಫಲ ನೀಡಲಿಲ್ಲ.

ಮಧ್ಯಾಹ್ನ, ನಗರದ ನಕ್ಷತ್ರ ಹೋಟೆಲ್‌ನಲ್ಲಿ ಉದ್ಯಮಿಗಳೊಂದಿಗೆ ಸಂವಾದ ನಡೆಸಿ ಹೊರಬಂದಾಗಲೂ ಪ್ರತಿಭಟನೆ ಎದುರಾಯಿತು. ಅಲ್ಲಿ, ಹೊಸಪೇಟೆಯ ಪ್ರಗತಿ ಪರ ಸಂಘಟನೆಗಳ ಒಕ್ಕೂಟದ ಸದಸ್ಯರು ಕಪ್ಪುಬಾವುಟ ಹಿಡಿದು ನಿಂತಿದ್ದರು.

’ಬೇವರ್ಸಿ ಮಾಡಲ್ಲ’

‘ಭಾಷೆ ಸಂವಹನಕ್ಕೆ ಅಷ್ಟೇ. ಸ್ಟೈಲ್‌ ಹೊಡೀಲಿಕ್ಕೆ ಅಲ್ಲ. ಒಬ್ಬನಿಗೆ ಅರ್ಥ ಮಾಡಿಸಲು ನನ್ನ ತಾಯಿಯನ್ನು ಬೇವರ್ಸಿ ಮಾಡಲು ನನಗೆ ಆಗುವುದಿಲ್ಲ. ಕನ್ನಡ ನನ್ನ ತಾಯಿ. ನನ್ನ ಹೆಮ್ಮೆ’ ಎಂದು ಹೆಗಡೆ ಹೇಳಿದರು.

‘ಮೊದಲು ನನ್ನ ಮಣ್ಣಿನ ಭಾಷೆ. ಅದು ಬರದಿದ್ದರೆ ದೇಶದ ಭಾಷೆ ಹಿಂದಿಯಲ್ಲಿ ಮಾತಾಡಬೇಕು. ಯಾವುದೋ ದೇಶದ ಭಾಷೆಯನ್ನು ನಾವೇಕೆ ಮಾತಾಡಬೇಕು? ಆದರೆ ಇವತ್ತು ಇಂಗ್ಲಿಷ್‌ನಲ್ಲಿ ಮಾತನಾಡುವುದನ್ನು ಕೌಶಲ ಎಂದು ಪರಿಗಣಿಸಲಾಗುತ್ತದೆ. ಇದು ದೇಶದ ದೌರ್ಭಾಗ್ಯ’ ಎಂದರು.

‘ಯಕಶ್ಚಿತ ಮನುಷ್ಯ’

‘ಅನಂತಕುಮಾರ ಹೆಗಡೆ, ಹೊಲಸು ಬಾಯಿಯ ಯಕಶ್ಚಿತ ಮನುಷ್ಯ. ಅವರು ಸಚಿವರಾಗಲು ನಾಲಾಯಕ್. ಅವರ ಬಾಯಿಯೇ ಅವರ ಸಂಸ್ಕೃತಿಯನ್ನು ಬಿಂಬಿಸುತ್ತಿದೆ’ ಎಂದು ಸಾರಿಗೆ ಸಚಿವ ಎಚ್.ಎಂ. ರೇವಣ್ಣ ಶನಿವಾರ ಹಾವೇರಿ ಜಿಲ್ಲೆಯ ಕಾಗಿನೆಲೆಯಲ್ಲಿ ಟೀಕಿಸಿದರು.

‘ಗೋಮೂತ್ರ ಸ್ನಾನ ಮಾಡಿಸಿ’

‘ಹೆಗಡೆ ಅವರಿಗೆ, ಬಿಜೆಪಿಯವರು ಗೋಮೂತ್ರದಲ್ಲಿ ಸ್ನಾನ ಮಾಡಿಸಿದರೆ ಉತ್ತರ ಕನ್ನಡ ಜಿಲ್ಲೆ ಪವಿತ್ರವಾಗುತ್ತದೆ’ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಕಾರವಾರದಲ್ಲಿ ವ್ಯಂಗ್ಯವಾಡಿದರು.

‘ಶಿರಸಿಯಲ್ಲಿ ನಟ ಪ್ರಕಾಶ್ ರೈ ಮಾತನಾಡಿದ ರಾಘವೇಂದ್ರ ಮಠದ ಆವರಣವನ್ನು ಶುದ್ಧೀಕರಣ ಮಾಡಲು ಬಿಜೆಪಿಯ ಮುಖಂಡರಿಗೆ ಅಧಿಕಾರ ಕೊಟ್ಟವರು ಯಾರು? ಶುದ್ಧೀಕರಣ ಮಾಡಬೇಕಿರುವುದು ಪರಿವರ್ತನಾ ಯಾತ್ರೆ ಹೋದಾಗ ಖಾಲಿ ಕುರ್ಚಿಗಳಿಗೆ ಭಾಷಣ ಮಾಡುವ ಬಿಜೆಪಿ ನಾಯಕರನ್ನು’ ಎಂದು ಅವರು ಟೀಕಿಸಿದರು.

ಸಂವಿಧಾನ ಬದಲಾವಣೆ–ಹೆಗಡೆ ಹೇಳಿಕೆಗೆ ವಿರೋಧ: ಅಠವಳೆ

ಮಂಗಳೂರು: ಸಂವಿಧಾನ ಬದಲಾವಣೆ ಸಾಧ್ಯವಿಲ್ಲ. ಈ ಕುರಿತು ಸಚಿವ ಅನಂತಕುಮಾರ್‌ ಹೆಗಡೆ ಹೇಳಿಕೆಗೆ ವಿರೋಧವಿದೆ. ಬಿಜೆಪಿ ಕೂಡ ಇದರಿಂದ ದೂರ ಉಳಿದಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಖಾತೆ ರಾಜ್ಯ ಸಚಿವ ರಾಮದಾಸ್‌ ಅಠವಳೆ ಹೇಳಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು,  ಇತರೆ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡುವ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿದ್ದು, ಬರುವ ಬಜೆಟ್‌ ಅಧಿವೇಶನದಲ್ಲಿ ಅಂಗೀಕರಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT