ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಮಾಪಕರು ನನ್ನನ್ನು ಹಂಚಿಕೊಳ್ಳಲು ಬಯಸಿದ್ದರು: ನಟಿ ಶ್ರುತಿ ಹರಿಹರನ್

‘ಕ್ಯಾಸ್ಟಿಂಗ್ ಕೌಚ್’ ಬಗ್ಗೆ ಶ್ರುತಿ ಹರಿಹರನ್ ಹೇಳಿಕೆ
Last Updated 20 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸಿನಿಮಾ ಜಗತ್ತಿನಲ್ಲಿ ತಾವು ಲೈಂಗಿಕ ಕಿರುಕುಳ (ಕ್ಯಾಸ್ಟಿಂಗ್ ಕೌಚ್) ಎದುರಿಸಿದ್ದಾಗಿ ಹೇಳಿದ್ದ ನಟಿ ಶ್ರುತಿ ಹರಿಹರನ್ ಅವರು, ‘ಈ ರೀತಿಯ ಕಿರುಕುಳವನ್ನು ತಡೆಯಲು ಸಾಧ್ಯವೇ ಇಲ್ಲ ಎಂದು ಹೇಳುತ್ತಿಲ್ಲ, ಸಿನಿಮಾ ಉದ್ಯಮ ಕೆಟ್ಟದ್ದು ಎಂದು ತೋರಿಸಲೂ ಯತ್ನಿಸಿಲ್ಲ’ ಎಂದು ಹೇಳಿದ್ದಾರೆ.

‘18ನೆಯ ವಯಸ್ಸಿನಲ್ಲಿ ಇದ್ದಾಗ, ನಾನು ಒಂದು ಕನ್ನಡ ಸಿನಿಮಾವೊಂದರ ಮೀಟಿಂಗ್‌ಗೆ ಹೋಗಿದ್ದಾಗ ಲೈಂಗಿಕ ಕಿರುಕುಳ ಅನುಭವಿಸಿದೆ’ ಎಂದು ಶ್ರುತಿ ಅವರು ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು.

‘ಈ ಅನುಭವದ ಬಗ್ಗೆ ನನ್ನ ನೃತ್ಯ ನಿರ್ದೇಶಕರ ಬಳಿ ಹೇಳಿದಾಗ, ಇಂಥ ಸಂದರ್ಭಗಳನ್ನು ಹೇಗೆ ನಿಭಾಯಿಸಬೇಕು ಎಂದು ಗೊತ್ತಿಲ್ಲದಿದ್ದರೆ, ವೃತ್ತಿ ತೊರೆಯ ಬೇಕು ಎಂದು ಅವರು ಹೇಳಿದ್ದರು. ಅಲ್ಲದೆ, ನನ್ನ ಒಂದು ಕನ್ನಡ ಸಿನಿಮಾದ ಹಕ್ಕುಗಳನ್ನು ಪಡೆದ ತಮಿಳಿನ ಪ್ರಮುಖ ಸಿನಿಮಾ ನಿರ್ಮಾಪಕರೊಬ್ಬರು, ತಮಿಳು ರಿಮೇಕ್‌ನಲ್ಲೂ ನನಗೆ ಪಾತ್ರ ನೀಡುವುದಾಗಿ ಹೇಳಿದ್ದರು. ನಾವು ಐದು ಜನ ನಿರ್ಮಾಪಕರಿದ್ದೇವೆ, ನಿಮ್ಮನ್ನು ನಮಗೆ ಬೇಕಾದಹಾಗೆ ಹಂಚಿಕೊಳ್ಳುತ್ತೇವೆ ಎಂದು ದೂರವಾಣಿ ಮೂಲಕ ಹೇಳಿದ್ದರು’ ಎಂದೂ ಶ್ರುತಿ ಹೇಳಿದ್ದರು.

‘ನಾನು ನನ್ನ ಕೈಯಲ್ಲಿ ಚಪ್ಪಲಿ ಹಿಡಿದುಕೊಂಡಿರುತ್ತೇನೆ ಎಂದು ಉತ್ತರಿಸಿದ್ದೆ. ಆ ಘಟನೆಯ ನಂತರ ನನಗೆ ತಮಿಳಿನಲ್ಲಿ ಉತ್ತಮ ಅವಕಾಶಗಳು ಸಿಕ್ಕಿಲ್ಲ’ ಎಂದೂ ಶ್ರುತಿ ವಿವರಿಸಿದ್ದರು. ಈ ಬಗ್ಗೆ ಪ್ರತಿಕ್ರಿಯೆಗೆ ಶ್ರುತಿ ಅವರು ಲಭ್ಯರಾಗಲಿಲ್ಲ.

‘ಭೀತಿ ಮೂಡಿಸುವ ಕೆಲಸವಲ್ಲ’: ಹೈದರಾಬಾದ್ ಕಾರ್ಯಕ್ರಮದ ಬಗ್ಗೆ ಶ್ರುತಿ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಸ್ಪಷ್ಟನೆಯೊಂದನ್ನು ಬರೆದಿದ್ದಾರೆ. ಅದರ ಸಂಕ್ಷಿಪ್ತ ವಿವರ ಇಲ್ಲಿದೆ:

‘ನನ್ನ ಅನುಭವಕ್ಕೆ ಬಂದಿದ್ದನ್ನೇ ನಾನು ಹೇಳಿರುವ ಕಾರಣ ಆ ಮಾತುಗಳಿಗೆ ನಾನು ಬದ್ಧನಾಗಿದ್ದೇನೆ. ಆದರೆ, ಲೈಂಗಿಕ ಕಿರುಕುಳಕ್ಕೆ ಈಡಾಗುವುದನ್ನು ತಡೆಯಲು ಸಾಧ್ಯವೇ ಇಲ್ಲ ಎಂಬುದು ನನ್ನ ಮಾತಿನ ಅರ್ಥವಲ್ಲ. ಚಿತ್ರರಂಗ ಕೆಟ್ಟದ್ದಾಗಿದೆ ಎಂದು ಹೇಳಿ ಬೇರೆಯವರಲ್ಲಿ ಭೀತಿ ಮೂಡಿಸುವ ಕೆಲಸವನ್ನೂ ನಾನು ಮಾಡುತ್ತಿಲ್ಲ. ಚಿತ್ರರಂಗ ಖಂಡಿತವಾಗಿಯೂ ಕೆಟ್ಟದ್ದಲ್ಲ.’

‘ಅಧಿಕಾರ ಹೊಂದಿರುವವರಿಂದ ಲೈಂಗಿಕ ಕಿರುಕುಳಕ್ಕೆ ಗುರಿಯಾದ ಹಲವು ಮಹಿಳೆಯರು ನನಗೆ ಗೊತ್ತಿದ್ದಾರೆ. ಇಂತಹ ಕಿರುಕುಳದ ವಿರುದ್ಧವಾಗಿ ನಿಂತವರೂ ನನಗೆ ಗೊತ್ತು. ಹೀಗೆ ತಿರುಗಿ ನಿಲ್ಲುವುದು ಮುಖ್ಯ ಎಂಬುದು ನನ್ನ ನಂಬಿಕೆ. ನಾವು ಕಿರುಕುಳಗಳಿಗೆ ತಲೆಬಾಗಲಾಗದು ಎನ್ನಬೇಕು. ನಿಮ್ಮಲ್ಲಿನ ಪ್ರಾಮಾಣಿಕತೆ ಉಳಿದಿರುತ್ತದೆ ಎಂದಾದರೆ, ಒಂದು ಅವಕಾಶವನ್ನು ಕೈಚೆಲ್ಲಿದರೂ ತಪ್ಪಿಲ್ಲ.’

‘ಕಿರುಕುಳಕ್ಕೆ ಶರಣಾದರೆ ನಮಗೆ ಮೊದಲು ಒಂದು ಅವಕಾಶ ಸಿಗಬಹುದು. ಆದರೆ ಮುಂದೆಯೂ ಉಳಿದುಕೊಳ್ಳಲು ಅದು ಸಹಾಯ ಮಾಡುವುದಿಲ್ಲ. ಪ್ರತಿಭೆ, ಕಲಿತುಕೊಳ್ಳುವ ಶಕ್ತಿ ಮತ್ತು ಸುಧಾರಣೆಗಳನ್ನು ತಂದುಕೊಳ್ಳುವ ಶಕ್ತಿ ಮಾತ್ರ ನಮ್ಮನ್ನು ವೃತ್ತಿಯಲ್ಲಿ ಉಳಿಯುವಂತೆ ಮಾಡಬ‌ಲ್ಲವು. ಎಂದಿಗೂ ‘ರಾಜಿ’ ಮಾಡಿಕೊಳ್ಳದೆ ಬದ್ಧತೆಯಿಂದ ಕೆಲಸ ಮಾಡಬೇಕು. ‘ರಾಜಿ’ ಎಂಬ ಪದವನ್ನು ತಿರಸ್ಕಾರದಿಂದ ಕಾಣುತ್ತಿದ್ದೇನೆ, ಈ ಪದವನ್ನು ಮುಂದೆ ಯಾವ ಹೆಣ್ಣು ಕೂಡ ಕೇಳದಂತೆ ಆಗಲಿ ಎಂದು ಬಯಸುತ್ತೇನೆ.’

‘ಕಾಲ ಬದಲಾಗುತ್ತಿದೆ. ಸಿನಿಮಾ ಕ್ಷೇತ್ರದಲ್ಲಿ ಹಲವರ ಬಗ್ಗೆ ನನಗೆ ಅಪಾರ ಗೌರವ ಇದೆ. ಲೈಂಗಿಕ ತೃಪ್ತಿ ಕೇಳುವ ಕೆಲವು ಪುರುಷರನ್ನು ಮಾತ್ರ ದೂಷಿಸುವುದು ಬೇಡ. ಕೇಳಿದ್ದನ್ನು ಕೊಟ್ಟಂತಹ ಹೆಂಗಸರು ಇರುವ ಕಾರಣದಿಂದಾಗಿಯೇ, ಅವರು ಇಂತಹ ಬೇಡಿಕೆ ಇಡುತ್ತಾರೆ. ಚಪ್ಪಾಳೆ ತಟ್ಟಲು ಎರಡು ಕೈಗಳು ಬೇಕೇಬೇಕು.’

*

ಲೈಂಗಿಕ ಕಿರುಕುಳ ಅನುಭವಿಸದೆಯೇ ಯಶಸ್ಸು ಸಾಧಿಸಿದ ಹೆಣ್ಣುಮಕ್ಕಳು ಈಗ ಸಿನಿಮಾ ರಂಗದಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ಇದ್ದಾರೆ. ಅಂತಹ ಪ್ರತಿ ಹೆಣ್ಣಿನ ಬಗ್ಗೆಯೂ ಅಭಿಮಾನ ಇದೆ.

–ಶ್ರುತಿ ಹರಿಹರನ್, ನಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT