ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಗಟು ಹಣದುಬ್ಬರ ಏರಿಕೆ

Last Updated 20 ಜನವರಿ 2018, 19:30 IST
ಅಕ್ಷರ ಗಾತ್ರ

ನವದೆಹಲಿ : ಆಹಾರ ಉತ್ಪನ್ನಗಳ ಬೆಲೆ ಇಳಿಕೆ ಆಗಿರುವುದರಿಂದ  ಸಗಟು ದರ ಹಣದುಬ್ಬರವು ಡಿಸೆಂಬರ್‌ನಲ್ಲಿ ಮೂರು ತಿಂಗಳ ಕನಿಷ್ಠ ಮಟ್ಟವಾದ ಶೇ 3.58ಕ್ಕೆ ಇಳಿಕೆ ಕಂಡಿದೆ.

ಸಗಟು ದರ ಸೂಚ್ಯಂಕದ (ಡಬ್ಲ್ಯುಪಿಐ) ಆಧಾರದ ಮೇಲೆ ಲೆಕ್ಕ ಹಾಕುವ ಹಣದುಬ್ಬರವು ನವೆಂಬರ್‌ನಲ್ಲಿ ಶೇ 3.93 ರಷ್ಟಿತ್ತು. 2016ರ ಡಿಸೆಂಬರ್‌ನಲ್ಲಿ ಶೇ 2.10ರಷ್ಟಿತ್ತು.

ಆಹಾರ ಉತ್ಪನ್ನಗಳ ಹಣದುಬ್ಬರ ಶೇ 6.06 ರಿಂದ ಶೇ 4.72ಕ್ಕೆ ಇಳಿಕೆಯಾಗಿದೆ. ಇಂಧನ ಮತ್ತು ವಿದ್ಯುತ್‌ ವಲಯದ ದರ ಶೇ 8.82 ರಿಂದ ಶೇ 9.16ಕ್ಕೆ ಏರಿಕೆ ಕಂಡಿದೆ.

ವಿತರಣಾ ವ್ಯವಸ್ಥೆ ಬಲಪಡಿಸಲು ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳಿಂದಾಗಿ ಆಹಾರ ಉತ್ಪನ್ನಗಳ ಹಣದುಬ್ಬರ ಇನ್ನಷ್ಟು ತಗ್ಗಲಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟ (ಫಿಕ್ಕಿ) ಹೇಳಿದೆ.

ಕೃಷಿ ಉತ್ಪನ್ನಗಳ ಪೂರೈಕೆ ಬಲಪಡಿಸುವ ನಿಟ್ಟಿನಲ್ಲಿ ಬಜೆಟ್‌ನಿಂದ ಉತ್ತಮ ನಿರ್ಧಾರ ಹೊರಬೀಳುವ ನಿರೀಕ್ಷೆ ಇದೆ. ಮುಂದಿನ ದಿನಗಳಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಅನ್ನೂ ಜಿಎಸ್‌ಟಿ ವ್ಯಾಪ್ತಿಗೆ ತರುವ ವಿಶ್ವಾಸವಿದ್ದು, ಅದರಿಂದ ಇಂಧನದ ಹಣದುಬ್ಬರ ತಗ್ಗಲಿದೆ ಎಂದು ‘ಫಿಕ್ಕಿ’ ಅಧ್ಯಕ್ಷ ರಾಕೇಶ್‌ ಷಾ ಹೇಳಿದ್ದಾರೆ.

ಕಚ್ಚಾ ತೈಲ ಬೆಲೆ ಏರಿಕೆ ಕಾಣುತ್ತಿದ್ದರೂ ಮಾರ್ಚ್‌ ತ್ರೈಮಾಸಿಕದಲ್ಲಿ ಸಗಟು ಹಣದುಬ್ಬರ ಶೇ 3.2 ರಿಂದ ಶೇ 3.6 ರ ಮಟ್ಟದಲ್ಲಿ ಇರಲಿದೆ ಎಂದು ಇಂಡಿಯನ್‌ ಕ್ರೆಡಿಟ್‌ ರೇಟಿಂಗ್‌ ಏಜೆನ್ಸಿಯ ಆರ್ಥಿಕ ತಜ್ಞೆ ಅದಿತಿ ನಾಯರ್‌ ತಿಳಿಸಿದ್ದಾರೆ.

ಸಗಟು ಹಣದುಬ್ಬರ ಇಳಿಕೆ ಕಂಡಿರುವುದರಿಂದ ಮುಂದಿನ ಹಣಕಾಸು ನೀತಿ ಪರಾಮರ್ಶೆಯಲ್ಲಿ ಬಡ್ಡಿದರ ಕಡಿತ ಮಾಡಬೇಕು ಎನ್ನುವುದು ಉದ್ಯಮ ವಲಯದ ಒತ್ತಾಯವಾಗಿದೆ.

ಆದರೆ, ಆರ್‌ಬಿಐ ಚಿಲ್ಲರೆ ಹಣದುಬ್ಬರವನ್ನು ಪರಿಗಣಿಸಿ ಬಡ್ಡಿದರ ಕಡಿತದ ನಿರ್ಧಾರ ತೆಗೆದುಕೊಳ್ಳುತ್ತದೆ.

ಗ್ರಾಹಕ ಬೆಲೆ ಸೂಚ್ಯಂಕದ (ಸಿಪಿಐ) ಆಧಾರದ ಮೇಲೆ ಲೆಕ್ಕ ಹಾಕುವ ಚಿಲ್ಲರೆ ಹಣದುಬ್ಬರ 2017ರ ಡಿಸೆಂಬರ್‌ನಲ್ಲಿ ಶೇ 5.21ಕ್ಕೆ ಏರಿಕೆ ಕಂಡಿದೆ. ಇದು ಆರ್‌ಬಿಐ ನಿರೀಕ್ಷೆ ಮಾಡಿರುವುದಕ್ಕಿಂತಲೂ (ಶೇ 4) ಹೆಚ್ಚಿದೆ. ಹೀಗಾಗಿ ಬಡ್ಡಿದರ ಇಳಿಕೆ ಕಾಣುವ ಸಾಧ್ಯತೆ ಇಲ್ಲ ಎಂದು ತಜ್ಞರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT