ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಗಲೂ ಅವ್ಯವಸ್ಥೆಯ ಆಗರ: ವಿಜ್ಞಾನಿ ಟೀಕೆ

ಭಾರತೀಯ ವಿಜ್ಞಾನ ಸಂಸ್ಥೆಯ ಹಿರಿಯ ವಿಜ್ಞಾನಿ ಡಾ.ಟಿ.ವಿ. ರಾಮಚಂದ್ರ ಟೀಕೆ
Last Updated 20 ಜನವರಿ 2018, 20:10 IST
ಅಕ್ಷರ ಗಾತ್ರ

ಬೆಂಗಳೂರು: ಬೆಳ್ಳಂದೂರು ಕೆರೆ ಈಗಲೂ ಅವ್ಯವಸ್ಥೆಯ ಆಗರವಾಗಿದೆ ಎನ್ನುವುದಕ್ಕೆ ಈ ಘಟನೆ ಕನ್ನಡಿ ಹಿಡಿದಂತಿದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಪದೇ ಪದೇ ಕಿವಿ ಹಿಂಡಿದದೂ ನಮ್ಮ ಇಲಾಖೆಗಳು ಎಚ್ಚೆತ್ತುಕೊಂಡಿಲ್ಲ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಹಿರಿಯ ವಿಜ್ಞಾನಿ ಡಾ.ಟಿ.ವಿ. ರಾಮಚಂದ್ರ ಟೀಕಿಸಿದರು.

2015ರ ಮೇ ತಿಂಗಳಿನಲ್ಲಿ ಬೆಳ್ಳಂದೂರು ಕೆರೆಯಲ್ಲಿ ಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅದು ಕೈಗಾರಿಕೆಗಳ ಕೊಳಚೆ ನೀರಿನಲ್ಲಿದ್ದ ರಾಸಾಯನಿಕಗಳಿಂದ ಉಂಟಾದ ಬೆಂಕಿ. ಕೈಗಾರಿಕೆಗಳಿಂದ ಕೊಳಚೆ ನೀರುಸಂಸ್ಕರಣೆಯಾಗದೆ ಬರುತ್ತಿರುವುದನ್ನು ಅದು ಜಾಹೀರು ಮಾಡಿತು.

‘ಈ ಬಾರಿ ಜೊಂಡಿಗೆ ಬೆಂಕಿ ಹತ್ತಿತ್ತು. ಒಳಚರಂಡಿ ನೀರನ್ನು ಸಂಸ್ಕರಣೆಗ ಒಳಪಡಿಸದೇ ಕೆರೆಗೆ ಹರಿಸುವುದರಿಂದ ಕಳೆಗಳು ಸಮೃದ್ಧವಾಗಿ ಬೆಳೆಯುತ್ತವೆ. ಅವುಗಳ ಮೇಲೆ ಅನೇಕ ವರ್ಷಗಳ ಕಾಲ ಬಿಬಿಎಂಪಿ ಮತ್ತು ಸುತ್ತಮುತ್ತಲಿನವರು ಘನತ್ಯಾಜ್ಯ ಸುರಿದಿದ್ದಾರೆ. ಅದಕ್ಕೆ ಯಾರೋ ಬೆಂಕಿ ಹಚ್ಚಿದ್ದಾರೆ. ಕಳೆ ಇರುವ ಜಾಗದಲ್ಲಿ ಆಮ್ಲಜನಕ ಕೊರತೆ ಆಗುವುದರಿಂದ ಅಲ್ಲಿ ಇಂಗಾಲ ಮತ್ತು ಮಿಥೆನ್‌ ಉತ್ಪತ್ತಿಯಾಗುತ್ತದೆ. ಇದರಿಂದಲೇ ದಟ್ಟ ಬಿಳಿ ಹೊಗೆ ಉಂಟಾಗಿದೆ’ ಎಂದು ವಿವರಿಸಿದರು.

2015ರಲ್ಲೇ ವರದಿ ಸಲ್ಲಿಕೆ: ‘ಬೆಳ್ಳಂದೂರು ಕೆರೆ ಅಭಿವೃದ್ಧಿ ಕುರಿತು 2015ರಲ್ಲೇ ವರದಿ ಸಲ್ಲಿಸಿದ್ದೇನೆ. ಎರಡು ವರ್ಷವಾದರೂ ಅದು ಅನುಷ್ಠಾನಗೊಂಡಿಲ್ಲ. ಜೊತೆಗೆ ಹಸಿರು ನ್ಯಾಯ ಪೀಠ ಬೆಳ್ಳಂದೂರು ಕೆರೆ ಪರಿಶೀಲನೆಗೆ ತಜ್ಞರ ಸಮಿತಿ ರಚಿಸಿತ್ತು. ಅದರಲ್ಲಿ ನಾನೂ ಇದ್ದೇನೆ.
ಅಲ್ಪಾವಧಿ ಮತ್ತು ದೀರ್ಘಾವಧಿಯಲ್ಲಿ ಕೈಗೊಳ್ಳಬಹುದಾದ ಅಭಿವೃದ್ಧಿ ಕ್ರಮಗಳ ಬಗ್ಗೆ ವರದಿ ನೀಡಿದ್ದೆವು. ಬಿಡಿಎ ಅದನ್ನು ನಿರ್ಲಕ್ಷಿಸಿದೆ’ ಎಂದು ಹೇಳಿದರು.

‘ಬಿಡಿಎ ಅಧಿಕಾರಿಗಳು ದುಡ್ಡು ಮಾಡಲು ಯಾವ ಕೆಲಸ ಮಾಡಬೇಕೊ ಅದನ್ನು ಮಾತ್ರ ಮಾಡುತ್ತಿದ್ದಾರೆ. ನೊರೆ ರಸ್ತೆಗೆ ಹಾರಬಾರದು ಎಂದು ತಡೆಗೋಡೆ ನಿರ್ಮಿಸಿದರು. ಈಗ ನೊರೆ ಹರಿದು ಹೋಗುವಂತೆ ಇಳಿಜಾರು ಪ್ರದೇಶ ನಿರ್ಮಿಸಲು ಮುಂದಾಗಿದ್ದಾರೆ. ಇದು ನಿಷ್ಪ್ರಯೋಜಕ.  ರಾಜ
ಕಾಲುವೆಗಳನ್ನು ಅಗಲ ಮಾಡಿ ಎಂದು ನಾವು ಸಲಹೆ ನೀಡಿದರೂ ವ್ಯಾಪ್ತಿಯನ್ನು ಇನ್ನೂ ಕುಗ್ಗಿಸುತ್ತಿದ್ದಾರೆ’ ಎಂದು ಕಿಡಿ
ಕಾರಿದರು.

ಇದೇ 12ಕ್ಕೆ ಬೆಳ್ಳಂದೂರು ಕೆರೆ ಕುರಿತು ಬಿಡಿಎನಲ್ಲಿ ಸಭೆ ನಡೆದಿತ್ತು. ಆ ಸಭೆಯಲ್ಲಿ ಬಿಡಿಎ ಆಯುಕ್ತ ರಾಕೇಶ್‌ ಸಿಂಗ್‌ ‘ನಮ್ಮ ಕೈಯಲ್ಲಿ ಕೆರೆ ಅಭಿವೃದ್ಧಿ ಆಗುವುದಿಲ್ಲ’ ಎಂದು ಕೈಚೆಲ್ಲಿದ್ದರು. ಅಭಿವೃದ್ಧಿ ಸಾಧ್ಯವಿಲ್ಲ ಎಂದಾದರೆ, ಅದನ್ನು ಕರ್ನಾಟಕ ಸರೋವರ ಸಂರಕ್ಷಣೆ ಮತ್ತು
ಅಭಿವೃದ್ಧಿ ಪ್ರಾಧಿಕಾರಕ್ಕೆ (ಕೆಎಲ್‌ಸಿಡಿಎ) ಹಸ್ತಾಂತರಿಸಿ ಎಂದಿದ್ದೇವೆ. ಬಿಡಿಎ ಅಧಿಕಾರಿಗಳು ಎಂಟು ತಿಂಗಳಿಂದ ಕಣ್ಣೊರೆಸುವ ಕೆಲಸವನ್ನಷ್ಟೇ ಮಾಡುತ್ತಿದ್ದಾರೆ. ಕೆರೆ ಸ್ವಚ್ಛತೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ’ ಎಂದು ದೂರಿದರು.

ಡೆಂಗಿ, ಚಿಕುನ್‌ಗುನ್ಯಾ ಹಾವಳಿ
ಬೆಂಕಿ ಮತ್ತು ನೊರೆ ಹಾರುವ ಘಟನೆಗಳು ಪದೇ ಪದೇ ಆಗುತ್ತಿರುವುದರಿಂದ ಬೆಳ್ಳಂದೂರು ಕೆರೆ ಸುತ್ತಮುತ್ತಲಿನ ಜನರಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಮೂರು ವರ್ಷಗಳ ಅವಧಿಯಲ್ಲಿ ಯಮಲೂರು ಗ್ರಾಮದಲ್ಲಿ 100ಕ್ಕೂ ಹೆಚ್ಚು ಮಂದಿ ಡೆಂಗಿ ಜ್ವರ, ಚಿಕುನ್‌ಗುನ್ಯಾ ಕಾಯಿಲೆಯಿಂದ ನರಳಿದ್ದಾರೆ. ಅನೇಕರಲ್ಲಿ ಗಂಟಲು ಬೇನೆ, ಜ್ವರ, ತುರಿಕೆಯಂತಹ ಕಾಯಿಲೆಗಳಿಂದ ಬಳಲುತ್ತಿದ್ದಾರೆ.

‘ಕೆರೆ ಕಲುಷಿತಗೊಂಡಿರುವುದರಿಂದ ಅಲ್ಲಿ ಉಂಟಾಗುವ ದಟ್ಟ ಹೊಗೆಯಲ್ಲಿ ರಾಸಾಯನಿಕ ಅಂಶಗಳು ಸೇರಿರುತ್ತವೆ. ಅದರಿಂದ ಕ್ಯಾನ್ಸರ್‌ ಬರುವ ಸಾಧ್ಯತೆ ಹೆಚ್ಚಿದೆ. ಸುತ್ತಮುತ್ತಲ ಕೊಳವೆ ಬಾವಿಗಳಲ್ಲಿ ನೈಟ್ರೇಟ್ ಅಂಶ ಹಾಗೂ ಭಾರಲೋಹದ ಅಂಶ ಕಂಡುಬಂದಿವೆ. ಈ ನೀರನ್ನು ನಿಯಮಿತವಾಗಿ ಕುಡಿಯುವುದರಿಂದ ಮೂತ್ರಪಿಂಡ ವೈಫಲ್ಯ ಉಂಟಾಗುತ್ತದೆ’ ಎಂದು ರಾಮಚಂದ್ರ ವಿವರಿಸಿದರು.

‘ತರಕಾರಿಯಲ್ಲಿ, ಮೀನಿನ ದೇಹದಲ್ಲಿ ಭಾರಲೋಹದ ವಸ್ತುಗಳು ಪತ್ತೆಯಾಗಿವೆ. ಕಲ್ಮಷವಾದ ಈ ನೀರನ್ನೇ ಕೋಲಾರಕ್ಕೆ ಹರಿಸಲು ನಿರ್ಧರಿಸಿದ್ದಾರೆ. ಇಲ್ಲಿನ ಜನರನ್ನು ಸಾಯಿಸುವುದಲ್ಲದೆ, ಅಲ್ಲಿಯವರನ್ನು ಸಾಯಿಸುವ ಹುನ್ನಾರ ಇದಾಗಿದೆ’ ಎಂದು ಹೇಳಿದರು.

ಮಿತಿಗಿಂತ ಹೆಚ್ಚು ಇಲ್ಲ ಮೀಥೇನ್ ಪ್ರಮಾಣ

ಬೆಂಗಳೂರು: ಈ ಹಿಂದೆ ಬೆಂಕಿ ಕಾಣಿಸಿಕೊಂಡಾಗ ಸ್ಥಳದಿಂದ ಮಾದರಿ ಸಂಗ್ರಹಿಸಿ, ರಾಸಾಯನಿಕ ವಿಶ್ಲೇಷಣೆ ನಡೆಸಲಾಗಿತ್ತು. ಆಗ ಶೇ 0.002ರಷ್ಟು ಮಾತ್ರ ಮಿಥೆನ್ ಇರುವುದು ಕಂಡುಬಂದಿದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಮಹೇಂದ್ರ ತಿಳಿಸಿದರು.

‘ಆ ನಂತರ ಕೆರೆಗೆ ಬೆಂಕಿ ಹಾಕಿ ಪರೀಕ್ಷೆ ನಡೆಸಿದ್ದೇವೆ. ಮಿಥೆನ್‌ ಪ್ರಮಾಣ ಶೇ 5ಕ್ಕಿಂತ ಹೆಚ್ಚಿದ್ದರೆ ಮಾತ್ರ ನೀರಿನಲ್ಲಿ ಬೆಂಕಿ ಹತ್ತಿಕೊಳ್ಳುತ್ತದೆ. ಕೆರೆಯ ಸುತ್ತಲೂ ಒಣಹುಲ್ಲು ಇದೆ. ಕೆರೆಯಲ್ಲಿ ಬೆಳೆದ ಹಸಿರು ಹುಲ್ಲನ್ನು ಕತ್ತರಿಸಲು ಅನೇಕರು ಇಲ್ಲಿಗೆ ಬರುತ್ತಾರೆ. ಅವರು ಬೀಡಿ ಅಥವಾ ಸಿಗರೇಟು ಸೇದಿ ಬಿಸಾಡುವುದರಿಂದ ಬೆಂಕಿ ಹತ್ತುತ್ತದೆ’ ಎಂದರು.

ಈ ಹಿಂದೆ ಕೆರೆಯ ಮಧ್ಯದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಆಗಲೂ ಅಲ್ಲಿ ಜೊಂಡು ಕತ್ತರಿಸಲು ಹೋಗಿದ್ದಾಗ ಬೆಂಕಿ ಹಾಕಿದ್ದಾರೆ. ಈ ಭಾಗದಲ್ಲಿ ಸುಮಾರು 100 ಕುಟುಂಬಗಳು ಈ ಕಳೆಯನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿವೆ ಎಂದು ಮಾಹಿತಿ ನೀಡಿದರು.

* ಕಲುಷಿತ ನೀರನ್ನು ಶುದ್ಧಗೊಳಿಸುವ ಕಾರ್ಯಕ್ಕಿಂತ, ಕೆರೆ ಕೋಡಿ ಹಾಗೂ ಬೆಳ್ಳಂದೂರು ಅಮಾನಿ ಕೆರೆಯಲ್ಲಿ ಕೊಳಕು ನೀರು ಸಂಗ್ರಹಗೊಳ್ಳದಂತೆ ಕ್ರಮಗೊಳ್ಳಬೇಕು.

–ಎಸ್‌.ಭಾಸ್ಕರ್‌, ಯಮಲೂರು ನಿವಾಸಿ

* ರಾಜಕಾಲುವೆಯಲ್ಲಿ ಮಣ್ಣು ತುಂಬಿರುವುದರಿಂದ ಕಲುಷಿತ ನೀರು ಮಡುಗಟ್ಟಿದೆ. ನಿಂತ ನೀರಿನಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ.

 – ನಾರಾಯಣ, ಯಮಲೂರು ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT