ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಂತ ನೆಲೆ ಕೊನೆಗೂ ಅವರದೇ ಆಯಿತು!

Last Updated 21 ಜನವರಿ 2018, 8:38 IST
ಅಕ್ಷರ ಗಾತ್ರ

ಶಿವಮೊಗ್ಗ: ಶರಾವತಿ ಹಿನ್ನೀರಿನಲ್ಲಿ ನೆಲೆ ಕಳೆದುಕೊಂಡ 2 ಸಾವಿರಕ್ಕೂ ಹೆಚ್ಚು ಸಂತ್ರಸ್ತರಿಗೆ ಐದೂವರೆ ದಶಕಗಳ ನಂತರ ಭೂ ಹಕ್ಕು ದೊರಕಿದೆ. ತಾವು ನಿಂತ ನೆಲೆ ತಮ್ಮದು ಎಂಬ ಭಾವನೆ ಕೊನೆಗೂ ಮೂಡಿಸಿದೆ.

1958–64ರ ಅವಧಿಯಲ್ಲಿ ನಿರ್ಮಾಣವಾದ ಶರಾವತಿ ಜಲಾಶಯದಲ್ಲಿ ಮನೆ, ಜಮೀನು, ಬದಕು ಕಳೆದುಕೊಂಡ ಸಂತ್ರಸ್ತರು ಜಿಲ್ಲೆಯ ಹೊಸನಗರ, ತೀರ್ಥಹಳ್ಳಿ, ಸಾಗರ, ಸೊರಬ, ಶಿವಮೊಗ್ಗ, ಶಿಕಾರಿಪುರ ತಾಲ್ಲೂಕಿನ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಪುನರ್ ನೆಲೆ ಕಂಡುಕೊಂಡಿದ್ದರು. ಅವರ ಪುನರ್ವಸತಿಗಾಗಿಯೇ ಅಂದಿನ ಭಾರತ ಸರ್ಕಾರ 8 ಸಾವಿರ ಎಕರೆಗೂ ಹೆಚ್ಚು ಅರಣ್ಯಭೂಮಿ ಮೀಸಲಿಟ್ಟಿತ್ತು.

ಅರಣ್ಯ ಭೂಮಿ ಮೀಸಲಿಟ್ಟ ಸ್ಥಳದಲ್ಲಿ ಸಂತ್ರಸ್ತರು ನೆಲೆ ನಿಂತು, ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಾ ಬಂದರೂ, ಅವರ ಅನುಭವದಲ್ಲಿದ್ದ ಆ ಭೂಮಿಯ ಹಕ್ಕು ಮಾತ್ರ ಅವರಿಗೆ ಸಿಕ್ಕಿರಲಿಲ್ಲ.

ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿದ್ದ ಮದನ್‌ಗೋಪಾಲ್, ಅಂದಿನ ಜಿಲ್ಲಾಧಿಕಾರಿ ವಿ.ಪಿ. ಇಕ್ಕೇರಿ, ಈಗಿನ ಜಿಲ್ಲಾಧಿಕಾರಿ ಡಾ.ಎಂ. ಲೋಕೇಶ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ, ಉಪ ವಿಭಾಗಾಧಿಕಾರಿ ಎಚ್‌.ಕೆ. ಕೃಷ್ಣಮೂರ್ತಿ ಅವರ ವಿಶೇಷ ಕಾಳಜಿ, ಸತತ ಪ್ರಯತ್ನದ ಫಲವಾಗಿ 6,459 ಎಕರೆ ಬಿಡುಗಡೆ ಮಾಡಲಾಗಿತ್ತು. ಅದರಲ್ಲಿ ಈಗ 2 ಸಾವಿರಕ್ಕೂ ಹೆಚ್ಚು ಕುಟುಂಬಗಳ ಹೆಸರಿಗೆ 6 ಸಾವಿರ ಎಕರೆಗೂ ಹೆಚ್ಚು ಭೂಮಿ ನೀಡಲಾಗಿದೆ.

ಜಂಟಿ ಸರ್ವೆ ಸೇರಿದಂತೆ ಬಹುತೇಕ ಕಾರ್ಯ ಪೂರ್ಣಗೊಂಡಿದ್ದು, ಆಯಾ ಕುಟುಂಬಗಳ ಹೆಸರಿಗೇ ಪಹಣಿಯನ್ನು ನೀಡಲಾಗಿದೆ. ಜ.24ರಂದು ಶೆಟ್ಟಿಕೆರೆ, ಶಾಂತಿಕೆರೆಯಲ್ಲಿ ಜಿಲ್ಲಾಡಳಿತ ಭೂಹಕ್ಕು ವಿತರಣಾ ಕಾರ್ಯಕ್ರಮ ಆಯೋಜಿಸಿದೆ. ಮಧ್ಯಾಹ್ನ 12ಕ್ಕೆ ಸಚಿವ ಕಾಗೋಡು ತಿಮ್ಮಪ್ಪ ಪಹಣಿ, ಹಕ್ಕುಪತ್ರ ವಿತರಿಸಲಿದ್ದಾರೆ.

ಮುಳುಗಡೆಯ ಇತಿಹಾಸ: ಪ್ರಪಂಚದ ಯಾವುದೇ ಭಾಗದಲ್ಲಿ ಜಲಾಶಯಗಳ ನಿರ್ಮಾಣಕ್ಕಾಗಿ ಅಲ್ಲಿನ ಜನ ವಸತಿ ಪ್ರದೇಶವನ್ನು ಒಮ್ಮೆ ಮಾತ್ರ ಕಳೆದುಕೊಂಡಿದ್ದಾರೆ. ಆದರೆ, ಮಲೆನಾಡಿನ ತವರು ಶಿವಮೊಗ್ಗ ಜಿಲ್ಲೆಯ ಜನರನ್ನು ಜಲಾಶಯಗಳ ನಿರ್ಮಾಣಕ್ಕಾಗಿಯೇ ಹಲವು ಬಾರಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಒಕ್ಕಲೆಬ್ಬಿಸಲಾಗಿದೆ.

ಸಾಗರ, ಹೊಸನಗರ ಹಾಗೂ ತೀರ್ಥಹಳ್ಳಿ ತಾಲ್ಲೂಕಿನ ಮೂಲ ನಿವಾಸಿಗಳು ಜಲಾಶಯಗಳಿಗಾಗಿ ಮೂಲನೆಲೆ ಕಳೆದುಕೊಳ್ಳುತ್ತಾ ಅದೇ ದಟ್ಟ ಕಾನನದ ನಡುವೆ ಅಲೆಯುತ್ತಾ ಸಾಗಿದ್ದಾರೆ. ಒಂದೇ ಕಡೆ ಕೂಡು ಕುಟುಂಬವಾಗಿ ಬದುಕು ಸಾಗಿಸಿದ ಹಲವು ಜನರು ಪಶ್ಚಿಮಘಟ್ಟದ ಶ್ರೇಣಿಯ ಒಳಗೆ ಚದುರಿ ಹೋಗಿದ್ದಾರೆ. ನೀರು, ಮೇವಿನ ಅನುಕೂಲ ಇದ್ದ ಜಾಗದಲ್ಲಿ ಹೊಸ ಬದುಕು ಕಟ್ಟಿಕೊಂಡಿದ್ದಾರೆ.

ಅಣೆಕಟ್ಟೆ ನಿರ್ಮಾಣದ ಇತಿಹಾಸ: ಮಲೆನಾಡಿನ ಜೀವ ನದಿ ಶರಾವತಿಗೆ ಸ್ವಾತಂತ್ರ್ಯ ಪೂರ್ವದಲ್ಲೇ ಮಡೆನೂರು–ಹಿರೇಭಾಸ್ಕರ ಅಣೆಕಟ್ಟೆ ನಿರ್ಮಿಸಲಾಗಿತ್ತು. 1958–64 ಅವಧಿಯಲ್ಲಿ ಜಲ ವಿದ್ಯುತ್‌ ಯೋಜನೆಗಳಿಗಾಗಿಯೇ ಲಿಂಗನಮಕ್ಕಿ ಅಣೆಕಟ್ಟೆ ನಿರ್ಮಿಸಲಾಯಿತು. ಈ ಅಣೆಕಟ್ಟೆ ನಿರ್ಮಾಣದ ನಂತರ ಹಿರೇಭಾಸ್ಕರ ಈ ಜಲಾಶಯದ ಒಳಗೆ ಲೀನವಾಯಿತು. ನಂತರ ಚಕ್ರ–ಸಾವೇಹಕ್ಲು ಅವಳಿ ಅಣೆಕಟ್ಟೆ, ಮಾಣಿ ನಿರ್ಮಾಣವಾದವು. ಮತ್ತೊಂದು ತುದಿಯಲ್ಲಿ ನೀರಾವರಿ ಉದ್ದೇಶಕ್ಕೆ 60ರ ದಶಕದಲ್ಲಿ ಭದ್ರಾ ನದಿಗೆ ಲಕ್ಕವಳ್ಳಿ ಬಳಿ, ತುಂಗಾನದಿಗೆ ಗಾಜನೂರು ಬಳಿ ಅಣೆಕಟ್ಟೆ ನಿರ್ಮಿಸಲಾಯಿತು.

ಬೀದಿಪಾಲಾದ ಯೋಜನಾ ಸಂತ್ರಸ್ತರು: 1960ರಿಂದ 1980ರವರೆಗಿನ ಎರಡು ದಶಕಗಳ ಅವಧಿಯಲ್ಲಿ ವಿವಿಧ ಯೋಜನೆಗಳಿಗಾಗಿ ನೆಲೆ ಕಳೆದುಕೊಂಡ ಸಾವಿರಾರು ಸಂತ್ರಸ್ತ ಕುಟುಂಬಗಳನ್ನು ಸರ್ಕಾರ ಹೊಸನಗರ, ತೀರ್ಥಹಳ್ಳಿ, ಶಿವಮೊಗ್ಗ, ಸಾಗರ, ಭದ್ರಾವತಿ ತಾಲ್ಲೂಕುಗಳ ವ್ಯಾಪ್ತಿಯ ಖಾಲಿ ಜಾಗಗಳಿಗೆ ಸ್ಥಳಾಂತರಿಸಿತ್ತು.

ಲಿಂಗನಮಕ್ಕಿ ಯೋಜನೆಗಾಗಿಯೇ 152 ಹಳ್ಳಿಗಳ 12 ಸಾವಿರ ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿತ್ತು. ಹಲವು ಸಮುದಾಯಗಳ ಬದುಕು ಮತ್ತು ಭವಿಷ್ಯವೂ ಅಗಾಧ ಜಲರಾಶಿಯ ಒಳಗೆ ಮುಳುಗಿ ಹೋಯಿತು. ತೋಟ, ಗದ್ದೆ, ಜಮೀನು, ಮನೆಗಳ ದಾಖಲೆ ಇದ್ದವರಿಗೆ ಮಾತ್ರ ಪರಿಹಾರ, ಬದಲಿ ಜಮೀನು ಹಕ್ಕುಪತ್ರ ನೀಡಲಾಯಿತು. ಗೇಣಿ, ಕೂಲಿ ಮಾಡಿಕೊಂಡು, ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಿಕೊಂಡು ಜೀವನ ಸಾಗಿಸುತ್ತಿದ್ದ ಜನರು ಬೀದಿಪಾಲಾಗಿದ್ದರು.

ಭೂಮಿ ಮಂಜೂರಾದ ಪ್ರದೇಶ:ಸೂಡೂರು ಅರಣ್ಯ ವ್ಯಾಪ್ತಿಯ ಸಿಂಗರಹಳ್ಳಿ, ಕರಡಿಬೆಟ್ಟ ಅರಣ್ಯ ವ್ಯಾಪ್ತಿಯ ತಪ್ಪೂರು, ಹಿರೆಹರಕೆ, ಕೊಣೆಹೊಸೂರು, ಶೆಟ್ಟಿಕೆರೆ, ಅಂಜನಾಪುರ, ಉಡುಗಣಿ, ಕಲ್ಮನೆ, ಅರಸಿನಗೆರೆ, ಕೊಪ್ಪ, ಶಿಕಾರಿಪುರ ಕಸಬಾ, ಅಣ್ಣಾಪುರ, ಕ್ಯಾಸನೂರು ಅರಣ್ಯ ವ್ಯಾಪ್ತಿಯ ಉಳವಿ, ಹೊಳೆಕೊಪ್ಪ, ಬೆಳ್ಳಂದೂರು ಮೀಸಲು ಅರಣ್ಯ ವ್ಯಾಪ್ತಿಯ ಮುಡುಬ ಸಿದ್ದಾಪುರ, ನಾಡಹಳ್ಳಿ ಗ್ರಾಮದ ಬಳಿ 863 ಎಕರೆ, ಕೋಡೂರು ಮೀಸಲು ಅರಣ್ಯ ವ್ಯಾಪ್ತಿಯ ಕೋಡೂರು, ಹೊಸಕೇರಿ, ಜೇನಿ ಮೀಸಲು ಅರಣ್ಯ ವ್ಯಾಪ್ತಿಯ ಮಸಕಲ್ಲು, ಜೇನಿ, ಬರುವೆ ಅರಣ್ಯ ವ್ಯಾಪ್ತಿಯ ತಮ್ಮಡಿಹಳ್ಳಿ,ಬೆನವಳ್ಳಿ, ಮಸರೂರು ಅರಣ್ಯ ವ್ಯಾಪ್ತಿಯ ಶಾಂತಿಕೆರೆ, ವಡೇರಕೊಪ್ಪ ಗ್ರಾಮದ ಬಳಿ 701 ಎಕರೆ, ಕಾರ್ಗಲ್‌ ಮೀಸಲು ಅರಣ್ಯ ವ್ಯಾಪ್ತಿಯ ಬಳಗಲ್ಲೂರು, ಇಡುವಾಣಿ, ಆವಿನಹಳ್ಳಿ, ಮುಂಬಾಳು, ಕಾಸ್ಪಡಿ, ಬರೂರು, ಭೈರಾಪುರ, ಕೊರ್ಲಿಕೊಪ್ಪ, ಚನ್ನಶೆಟ್ಟಿಕೊಪ್ಪ, ಹೊಸೂರು, ನರಸೀಪುರ, ತಳಗಿನ ಮನೆ, ಚಿಕ್ಕಬಿಲಗುಂಜಿ, ಹಿರೇಹಾರಕ, ಮಲಂದೂರು ಅರಣ್ಯ ವ್ಯಾಪ್ತಿಯ ಮಲ್ಲಂದೂರು ಭಾಗದಲ್ಲಿ 555 ಎಕರೆ, ಮತ್ತಿಕೈ ಅರಣ್ಯ ವ್ಯಾಪ್ತಿಯ ಹೊಸೂರು, ಕಾರಕ್ಕಿ, ಮತ್ತಿಕೈ, ಆಲುವಳ್ಳಿ, ಪುಣಜೆ, ಮುತ್ತೂರು ಗ್ರಾಮಗಳ ಬಳಿ 267 ಎಕರೆ ಭೂಮಿ ದೊರೆತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT