ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆಬ್ರುವರಿಯೊಳಗೆ ಕಬ್ಬು ಬಾಕಿ ಪಾವತಿ

Last Updated 21 ಜನವರಿ 2018, 8:56 IST
ಅಕ್ಷರ ಗಾತ್ರ

ಬಾಗಲಕೋಟೆ: ಜಿಲ್ಲೆಯ ಕಬ್ಬು ಬೆಳೆಗಾರರ 2016–17ನೇ ಸಾಲಿನಲ್ಲಿ ಹೆಚ್ಚುವರಿಯಾಗಿ ನೀಡಬೇಕಾದ ಬಾಕಿ ಹಣವನ್ನು ಫೆಬ್ರುವರಿ ತಿಂಗಳ ಒಳಗಾಗಿ ಪಾವತಿಸಲು ಸಕ್ಕರೆ ಕಾರ್ಖಾನೆ ಮಾಲೀಕರು ಒಪ್ಪಿಕೊಂಡಿರುವುದಾಗಿ ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್ ತಿಳಿಸಿದ್ದಾರೆ. ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಅವರು, ನಂತರ ಈ ವಿಚಾರ ತಿಳಿಸಿದರು.

ಕಬ್ಬು ಬೆಳೆಗಾರರಿಗೆ ನೀಡಬೇಕಾದ ಹೆಚ್ಚುವರಿ ದರ ಪ್ರತಿ ಟನ್‌ಗೆ ₹310 ಫೆಬ್ರವರಿ ತಿಂಗಳ ಒಳಗಾಗಿ ಕೊಡುವುದಾಗಿ ಲಿಖಿತ ಪತ್ರ ನೀಡುವಂತೆ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಜಿಲ್ಲಾಧಿಕಾರಿ ಸಭೆಯಲ್ಲಿ ತಿಳಿಸಿದರು. ‘ಲಿಖಿತ ರೂಪದಲ್ಲಿ ನೀಡದವರು ಬಾಕಿ ಹಣ ನೀಡಲು ಒಪ್ಪಿಗೆ ನೀಡಿಲ್ಲ ಎಂದು ತಿಳಿದು ಆ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯುವುದಾಗಿ’ ತಿಳಿಸಿದರು.

ಬೆಳಗಾವಿ ಜಿಲ್ಲೆಯ ಹಾಲವಿಶ್ವನಾಥ, ಘಟಪ್ರಭಾ, ಉಗಾರ ಹಾಗೂ ಕೃಷ್ಣಾ ಶುಗರ್ಸ್ ಕಂಪನಿಗಳು ಪ್ರತಿ ಟನ್‌ಗೆ ₹2900ರಿಂದ ₹3100ವರೆಗೆ ನೀಡುತ್ತಿದ್ದು, ಅದೇ ದರದಲ್ಲಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಬೆಲೆ ನೀಡಲಿ ಎಂದು ಒತ್ತಾಯಿಸಿ ರೈತರು ಪ್ರತಿಭಟನೆ ನಡೆಸಿದ್ದರು. ಈ ಬಗ್ಗೆ ಸಭೆಯಲ್ಲಿಚರ್ಚೆ ನಡೆಯಿತು. ‘ಬೇರೆ ಜಿಲ್ಲೆಯವರು ನೀಡಿದ ದರ ಇಲ್ಲಿ ಕೊಡಲು ಸಾಧ್ಯವಾಗುವುದಿಲ್ಲ’ ಎಂದು ಸಕ್ಕರೆ ಕಾರ್ಖಾನೆಗಳ ಮಾಲೀಕರು ಸ್ಪಷ್ಟಪಡಿಸಿದರು.

‘ಸರ್ಕಾರ ನಿಗದಿ ಪಡಿಸಿದ ದರ ನೀಡಲಾಗುವುದು. ಈಗಾಗಲೇ ಮಾರುಕಟ್ಟೆಯಲ್ಲಿ ಸಕ್ಕರೆ ಧಾರಣೆ ಕುಸಿದಿದೆ. ಈಗ ನೀಡುತ್ತಿರುವ ದರವು ಹೆಚ್ಚಾಗಿದೆ’ ಎಂದು ಸಕ್ಕರೆ ಕಂಪನಿ ಮಾಲೀಕರು ಸಭೆಗೆ ತಿಳಿಸಿದರು.

ಜಿಲ್ಲೆಯಲ್ಲಿ ಈಗಾಗಲೇ ಗೋದಾವರಿ ಹಾಗೂ ರನ್ನ ಶುಗರ್ಸ್ ಶೇ 90ರಷ್ಟು ಬಾಕಿ ಹಣವನ್ನು ಪಾವತಿಸಿವೆ. ಹಾಗಾಗಿ ತುರ್ತಾಗಿ ಹಣ ಪಾವತಿಸುವಂತೆ ಉಳಿದ ಕಂಪೆನಿಗಳಿಗೂ ಸಭೆಯಲ್ಲಿ ತಿಳಿಸಲಾಯಿತು. 2015-–16ನೇ ಸಾಲಿನಲ್ಲಿ ಕಬ್ಬು ಬೆಳೆಗಾರರಿಗೆ ನೀಡಬೇಕಾದ ಹೆಚ್ಚುವರಿ ಹಣ ಪಾವತಿ ಮಾಡದಿರುವ ಕುರಿತು ನಾಯನೇಗಲಿಯಲ್ಲಿ ರೈತರು ಪ್ರತಿಭಟನೆ ಮಾಡಿದ್ದರು. ಇಐಡಿ ಪ್ಯಾರಿ (ಇಂಡಿಯಾ) ಒಪ್ಪಿಗೆ ನೀಡಿರುವ ಹೆಚ್ಚವರಿ ಪ್ರತಿ ಟನ್‌ಗೆ ₹120 ರಂತೆ ಬಾಕಿ ಹಣ ಪಾವತಿಸುವಂತೆ ಜಿಲ್ಲಾಧಿಕಾರಿ ತಿಳಿಸಿದಾಗ ಕಂಪನಿಯ ಮಾಲೀಕರು ಫೆಬ್ರುವರಿಯೊಳಗಾಗಿ ಪಾವತಿಸುವುದಾಗಿ ಸಭೆಯಲ್ಲಿ ತಿಳಿಸಿದರು.

‘ತೇರದಾಳ ಹತ್ತಿರದ ಸಾವರಿನ್ ಸಕ್ಕರೆ ಕಾರ್ಖಾನೆಯು ಪ್ರತಿ ಕ್ವಿಂಟಲ್ ಕಬ್ಬಿಗೆ ₹2900 ನೀಡುತ್ತಿದೆ. ಆದರೆ ಉಳಿದ ಕಂಪನಿಯವರು ₹2500 ಕೊಡುತ್ತಿದ್ದಾರೆ. ದರದಲ್ಲಿ ವ್ಯತ್ಯಾಸವಾಗದಂತೆ ಎಲ್ಲಾ ರೈತರ ಹಿತದೃಷ್ಟಿಯಿಂದ ಜಿಲ್ಲೆಯ ಎಲ್ಲಾ ಸಕ್ಕರೆ ಕಾರ್ಖಾನೆಗಳ ಮಾಲೀಕರು ಒಂದೇ ದರ ನೀಡಬೇಕು’ ಎಂದು ಡಿಸಿ ತಿಳಿಸಿದರು.

ಪ್ರಭುಲಿಂಗೇಶ್ವರ ಶುಗರ್ಸ್ ಕಂಪನಿ ಮಾಲೀಕ ಜಗದೀಶ ಗುಡಗುಂಟಿ ಒಂದು ಟನ್ ಕಬ್ಬು ನುರಿಸುವುದರಿಂದ ಬರುವ ಖರ್ಚು ವೆಚ್ಚದ ವಿವರಣೆಯನ್ನು ಸಭೆಗೆ ನೀಡಿದರು. ಆಹಾರ ಇಲಾಖೆ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ ಸಭೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT