ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡನೇ ಬಾರಿಯೂ ಮುಂದುವರಿದ ಗೊಂದಲ?

Last Updated 21 ಜನವರಿ 2018, 9:11 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ ಅವರು ಶನಿವಾರ ಬೆಂಗಳೂರಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ (ಆರ್‌.ಡಿ.ಪಿ.ಆರ್‌) ಇಲಾಖೆ ನಿರ್ದೇಶಕ ಏಲಕ್ಕಿಗೌಡ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಆದರೆ, ಕೆಲ ತಾಂತ್ರಿಕ ಕಾರಣಗಳಿಂದಾಗಿ ಇದು ಕೂಡ ಅಂಗೀಕಾರವಾಗುವುದಿಲ್ಲ ಎನ್ನಲಾಗಿದೆ. ಇದರಿಂದಾಗಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ರಾಜೀನಾಮೆ ವಿಚಾರದಲ್ಲಿ ‘ಕೈ’ ಪಾಳೆಯದಲ್ಲಿ ಮತ್ತೆ ಗೊಂದಲ ಮುಂದುವರಿದಿದೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ತಿಳಿಸಿವೆ.

ಕೇಶವರೆಡ್ಡಿ ಅವರು ಗುರುವಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ಗುರುದತ್ ಹೆಗ್ಡೆ ಅವರಿಗೆ ಮೊದಲ ಬಾರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದರು. ಆದರೆ ಸಿಇಒ ಶುಕ್ರವಾರ ಕೇಶವರೆಡ್ಡಿ ಅವರಿಗೆ ಪತ್ರ ಬರೆದು, ‘ನೀವು ನೀಡಿದ ರಾಜೀನಾಮೆ ಪತ್ರ ಸ್ವೀಕರಿಸುವುದಾಗಲಿ, ಅಂಗೀಕರಿಸುವುದಾಗಲಿ ಮಾಡುವ ಅಧಿಕಾರ ನನಗಿಲ್ಲ’ ಎಂದು ತಿಳಿಸಿದ್ದರು.

ಹೀಗಾಗಿ, ಕೇಶವರೆಡ್ಡಿ ಅವರು ಶನಿವಾರ ಬೆಂಗಳೂರಿನಲ್ಲಿ ಆರ್‌ಡಿಪಿಆರ್ ಪ್ರಧಾನ ಕಾರ್ಯದರ್ಶಿ ನಾಗಾಂಬಿಕಾದೇವಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಲು ಹೋಗಿದ್ದರು. ಆದರೆ ಅವರು ದೆಹಲಿ ಪ್ರವಾಸದಲ್ಲಿದ್ದ ಕಾರಣ ಏಲಕ್ಕಿಗೌಡ ಅವರಿಗೆ ಆ ಪತ್ರ ಸಲ್ಲಿಸಿ ವಾಪಸ್‌ ಆಗಿದ್ದರು ಎಂದು ತಿಳಿದು ಬಂದಿದೆ.

ಅಂಗೀಕಾರಕ್ಕೆ ಏನು ತೊಡಕಿದೆ?: ಕೇಶವರೆಡ್ಡಿ ಅವರು ಏಲಕ್ಕಿಗೌಡ ಅವರಿಗೆ ಸಲ್ಲಿಸಿದ ರಾಜೀನಾಮೆ ಪತ್ರದಲ್ಲಿ ‘ನಾನು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ’ ಎಂದಷ್ಟೇ ಉಲ್ಲೇಖಿಸಿದ್ದಾರೆ. ಆದರೆ ಅಂಗೀಕಾರಕ್ಕೆ ಅರ್ಹವಾದ ಕಾರಣವನ್ನು ಎಲ್ಲಿಯೂ ಆ ಪತ್ರದಲ್ಲಿ ನಮೂದಿಸಿಲ್ಲ ಎನ್ನಲಾಗಿದೆ.

ಜತೆಗೆ ಆರ್‌ಡಿಪಿಆರ್‌ ಕಾಯ್ದೆಯ ನಿಯಮಾವಳಿಗಳ ಪ್ರಕಾರ ಅಧ್ಯಕ್ಷರು ರಾಜೀನಾಮೆ ನೀಡುವಾಗಲೇ ಸಂಬಂಧಪಟ್ಟ ಅಧಿಕಾರಿ ಎದುರಿನಲ್ಲಿ ರಾಜೀನಾಮೆ ಪತ್ರದಲ್ಲಿ ಪೆನ್ನಿನಿಂದ ಸಹಿ ಹಾಕಬೇಕು. ಆದರೆ ಕೇಶವರೆಡ್ಡಿ ಅವರು ಆ ರೀತಿ ಮಾಡಿಲ್ಲ. ಹೀಗಾಗಿ ಈ ರಾಜೀನಾಮೆ ಕೂಡ ಅಂಗೀಕಾರವಾಗುವುದಿಲ್ಲ ಎಂದು ಆರ್‌ಡಿಪಿಆರ್‌ನ ಹೆಸರು ಹೇಳಲು ಇಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

28 ಸದಸ್ಯ ಬಲ ಹೊಂದಿರುವ ಜಿಲ್ಲಾ ಪಂಚಾಯಿತಿಯಲ್ಲಿ 21 ಕಾಂಗ್ರೆಸ್‌ ಸದಸ್ಯರು, ಐದು ಜೆಡಿಎಸ್‌, ಬಿಜೆಪಿ ಮತ್ತು ಸಿಪಿಎಂ ತಲಾ ಒಬ್ಬ ಸದಸ್ಯರು ಇದ್ದಾರೆ. ಆದರೆ ರಾಜಕೀಯ ‘ಹಿತಾಸಕ್ತಿ’ ಸಂಘರ್ಷದಿಂದ ಜಿಲ್ಲೆಯ ಕಾಂಗ್ರೆಸ್‌ ಪಾಳೆಯದಲ್ಲಿ ಮೂರು ಬಣಗಳಾಗಿವೆ.

ಪರಿಣಾಮ, ಆಡಳಿತಾರೂಢ ಪಕ್ಷದವರಲ್ಲಿಯೇ 14 ಸದಸ್ಯರು ಶಾಸಕ ಡಾ.ಕೆ.ಸುಧಾಕರ್ ಅವರ ತಂದೆಯಾಗಿರುವ ಕೇಶವರೆಡ್ಡಿ ಅವರ ಆಡಳಿತ ವೈಖರಿ ವಿರುದ್ಧ ಸಿಡಿದೆದ್ದು ಕಳೆದ ಒಂದು ವರ್ಷದಿಂದ ರಾಜೀನಾಮೆಗೆ ಒತ್ತಾಯಿಸುತ್ತಲೇ ಬಂದಿದ್ದರು.

ಈ ನಡುವೆ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಸೇರಿದಂತೆ ಅನೇಕ ವರಿಷ್ಠರು ನಡೆಸಿ ‘ಸಂಧಾನ’ಗಳೆಲ್ಲ ವಿಫಲಗೊಂಡ ಬಳಿಕ ಮಧ್ಯ ಪ್ರವೇಶಿಸಿದ ಪಕ್ಷದ ಹೈಕಮಾಂಡ್ ಕೇಶವರೆಡ್ಡಿ ಅವರಿಗೆ ರಾಜೀನಾಮೆ ನೀಡುವಂತೆ ಸೂಚನೆ ನೀಡಿತ್ತು ಎಂದು ತಿಳಿದು ಬಂದಿದೆ.

ಒಂದೆಡೆ ಹೈಕಮಾಂಡ್‌ ಆದೇಶ, ಇನ್ನೊಂದೆಡೆ ಎಡೆಬಿಡದೆ ರಾಜೀನಾಮೆಗೆ ಪಟ್ಟು ಹಿಡಿದ ಸದಸ್ಯರ ಒತ್ತಡದಿಂದಾಗಿ ಕೇಶವರೆಡ್ಡಿ ಅವರು ರಾಜೀನಾಮೆ ನೀಡಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು. ಆದರೆ ಇತ್ತೀಚೆಗೆ ಎರಡು ಬಾರಿ ರಾಜೀನಾಮೆ ನೀಡುವ ವಿಚಾರದಲ್ಲಿ ಅವರು ತೋರಿದ ನಡೆ ‘ಕೈ’ ಪಾಳೆಯದ ಮುಖಂಡರು ಮತ್ತು ಬಂಡಾಯ ಸದಸ್ಯರನ್ನು ಮತ್ತಷ್ಟು ಕೆರಳಿಸಿದೆ.

‘ಅಧಿಕಾರಕ್ಕೆ ಅಂಟಿ ಕುಳಿತಿರುವ ಕೇಶವರೆಡ್ಡಿ ಅವರಿಗೆ ಅಧ್ಯಕ್ಷರ ಹುದ್ದೆ ತ್ಯಜಿಸುವ ಮನಸ್ಸಿಲ್ಲ. ಅದಕ್ಕಾಗಿಯೇ ಅವರು ಈ ರೀತಿ ‘ಹಾವು ಸಾಯಬೇಕು, ಕೋಲು ಮುರಿಯಬಾರದು’ ಎನ್ನುವ ಗಾದೆಯಂತೆ ರಾಜೀನಾಮೆ ವಿಚಾರದಲ್ಲಿ ನಮ್ಮನ್ನು ದಾರಿ ತಪ್ಪಿಸುವ ತಂತ್ರ ಅನುಸರಿಸುತ್ತಿದ್ದಾರೆ. ಹೈಕಮಾಂಡ್‌ ಆದೇಶದ ನಂತರವೂ ಅವರು ಈ ರೀತಿ ವರ್ತಿಸುತ್ತಿರುವುದು ಹಿರಿಯರಾದ ಅವರಿಗೆ ಶೋಭೆಯಲ್ಲ’ ಎಂದು ಬಂಡಾಯ ಸದಸ್ಯರಲ್ಲಿ ಹೆಸರು ಹೇಳಲು ಇಚ್ಛಿಸದ ಹಿರಿಯ ಸದಸ್ಯರೊಬ್ಬರು ಹೇಳಿದರು. ಈ ಕುರಿತು ವಿಚಾರಿಸಲು ಕೇಶವರೆಡ್ಡಿ ಅವರನ್ನು ಸಂಪರ್ಕಿಸಿದರೆ ಕರೆ ಸ್ವೀಕರಿಸಲಿಲ್ಲ.

ಸೋಮವಾರ ಸಾಮೂಹಿಕ ರಾಜೀನಾಮೆ?

ರಾಜೀನಾಮೆ ನೀಡುವಲ್ಲಿ ಕೇಶವರೆಡ್ಡಿ ಅವರು ತೋರಿದ ನಡೆಗೆ ಬಂಡಾಯ ಸದಸ್ಯರೆಲ್ಲ ತೀವ್ರ ಆಕ್ರೋಶಗೊಂಡಿದ್ದಾರೆ. ಈ ಕುರಿತು ಅವರು ಪಕ್ಷದ ಹೈಕಮಾಂಡ್‌ಗೆ ಕೊನೆಯದಾಗಿ ಎಚ್ಚರಿಕೆ ನೀಡುವ ಮೂಲಕ ಸೋಮವಾರ (ಜ.22) ಸಾಮೂಹಿಕ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಸೋಮವಾರ ತೀರ್ಮಾನ ತಿಳಿಸುವೆ

‘ಕೇಶವರೆಡ್ಡಿ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ನಾನು ದೆಹಲಿಯ ಪ್ರವಾಸದಲ್ಲಿದ್ದೆ. ಹೀಗಾಗಿ ಅವರು ನನ್ನ ಕೆಳ ಹಂತದ ಅಧಿಕಾರಿಗೆ ರಾಜೀನಾಮೆ ಪತ್ರ ಸಲ್ಲಿರಬಹುದು. ಆದರೆ ಆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಒಂದೊಮ್ಮೆ ರಾಜೀನಾಮೆ ಸಲ್ಲಿಸಿದ್ದರೆ ಅದನ್ನು ಸೋಮವಾರ ಪರಿಶೀಲಿಸಿ ನನ್ನ ತೀರ್ಮಾನ ತಿಳಿಸುತ್ತೇನೆ’ ಎಂದು ಆರ್‌ಡಿಪಿಆರ್ ಇಲಾಖೆ ಪ್ರಧಾನ ಕಾರ್ಯದರ್ಶಿ ನಾಗಾಂಬಿಕಾದೇವಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT