ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಗಾಮು ಮುಗಿದರೂ ಇಳಿಯದ ಬೆಲೆ

Last Updated 21 ಜನವರಿ 2018, 9:43 IST
ಅಕ್ಷರ ಗಾತ್ರ

ಗದಗ: ಜಿಲ್ಲೆಯಲ್ಲಿ ಡಿಸೆಂಬರ್‌ ಕೊನೆಯ ವಾರದಲ್ಲೇ ಈರುಳ್ಳಿ ಹಂಗಾಮು ಮುಗಿದಿದೆ. ರಾಜ್ಯದಲ್ಲೇ ಅತಿ ಹೆಚ್ಚು ಈರುಳ್ಳಿ ಬೆಳೆಯುವ ಜಿಲ್ಲೆ ಗದಗ. ಆದರೆ, ಈ ಬಾರಿ ಮಳೆ ಹಾನಿಯಿಂದ ಮಾರುಕಟ್ಟೆಗೆ ಆವಕ ಪ್ರಮಾಣ ಗಣನೀಯವಾಗಿ ಕುಸಿದಿತ್ತು. ಇದರಿಂದ ಕ್ವಿಂಟಲ್‌ಗೆ ಗರಿಷ್ಠ ₹4,500ವರೆಗೆ ಬೆಲೆ ಬಂದರೂ, ಬೆಳೆಗಾರರಿಗೆ ಇದರ ಲಾಭ ಲಭಿಸಿರಲಿಲ್ಲ.

ಅಕ್ಟೋಬರ್‌ ಮೊದಲ ವಾರದಲ್ಲಿ ಆರಂಭವಾಗುತ್ತಿದ್ದ ಈರುಳ್ಳಿ ಹಂಗಾಮು ಈ ಬಾರಿ ಒಂದು ತಿಂಗಳು ತಡವಾಗಿ ಅಂದರೆ ನವೆಂಬರ್‌ ಮೊದಲ ವಾರದಲ್ಲಿ ಪ್ರಾರಂಭವಾಗಿತ್ತು. ಕಳೆದ ವರ್ಷ ಈ ಅವಧಿಯಲ್ಲಿ ಗದಗ ಕೃಷಿ ಉತ್ಪನ್ನ ಮಾರುಕಟ್ಟೆಗೆ 1,27,147 ಕ್ವಿಂಟಲ್ ಈರುಳ್ಳಿ ಆವಕವಾಗಿತ್ತು. ಆದರೆ, ಈ ಬಾರಿ ಡಿಸೆಂಬರ್‌ ಅಂತ್ಯದವರೆಗೆ ಕೇವಲ 56,678 ಕ್ವಿಂಟಲ್‌ನಷ್ಟು ಮಾತ್ರ ಈರುಳ್ಳಿ ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈರುಳ್ಳಿ ಆವಕ ದಾಖಲೆ ಪ್ರಮಾಣದಲ್ಲಿ ಅಂದರೆ 70 ಸಾವಿರ ಕ್ವಿಂಟಲ್‌ನಷ್ಟು ತಗ್ಗಿದೆ. ಇದರ ನೇರ ಪರಿಣಾಮ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದೆ.

ಕಳೆದ ವರ್ಷ ಕೆ.ಜಿಗೆ ₹8ರಿಂದ ₹10ಕ್ಕೆ ಮಾರಾಟವಾಗುತ್ತಿದ್ದ ಈರುಳ್ಳಿ ಈ ಬಾರಿ ₹50ರ ಗಡಿ ದಾಟಿದೆ. ಈರುಳ್ಳಿ ಹಂಗಾಮು ಮುಗಿದರೂ ಬೆಲೆಯಲ್ಲಿ ಇಳಿಕೆಯಾಗಿಲ್ಲ. ಈಗಲೂ ಉತ್ತಮ ಗುಣಮಟ್ಟದ, ದೊಡ್ಡ ಗಾತ್ರದ ಈರುಳ್ಳಿ ಗಡ್ಡೆಗಳು ಕೆ.ಜಿಗೆ ₹45ಕ್ಕೆ, ಸಾಮಾನ್ಯ ದರ್ಜೆ ₹35ಕ್ಕೆ ಮತ್ತು ಚಿಕ್ಕ ಗಾತ್ರದ ಗಡ್ಡೆಗಳು ₹25ಕ್ಕೆ ಮಾರಾಟವಾಗುತ್ತಿದೆ.

‘ಈ ಬಾರಿ ಸ್ಥಳೀಯ ಬೇಡಿಕೆ ಪೂರೈಸುವಷ್ಟೂ ಈರುಳ್ಳಿ ಮಾರುಕಟ್ಟೆಗೆ ಬಂದಿಲ್ಲ. ಗಾತ್ರವೂ ತೀರಾ ಸಣ್ಣದಿದೆ. ಹೀಗಾಗಿ ಈಗಲೂ ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿಗೆ ₹45ಕ್ಕೆ ಮಾರಾಟವಾಗುತ್ತಿದೆ’ ಎಂದು ಎ.ಪಿ.ಎಂ.ಸಿ ಖರೀದಿದಾರರೊಬ್ಬರು ಹೇಳಿದರು.

ಈರುಳ್ಳಿ ಸಗಟು ಧಾರಣೆಯಲ್ಲೂ ಕಳೆದ ವರ್ಷಕ್ಕೆ ಹೋಲಿಸಿದರೆ ಗಣನೀಯ ವ್ಯತ್ಯಾಸವಾಗಿದೆ. ಕಳೆದ ವರ್ಷ ಕ್ವಿಂಟಲ್‌ಗೆ ರೈತರಿಗೆ ಗರಿಷ್ಠ ₹1,200ರವರೆಗೆ ಧಾರಣೆ ಲಭಿಸಿತ್ತು. ಈ ಬಾರಿ ಕನಿಷ್ಠ ಧಾರಣೆಯೇ ₹3 ಸಾವಿರ ಇತ್ತು. ಹೀಗಾಗಿ ನವೆಂಬರ್‌ ಕೊನೆಯ ವಾರ ಮತ್ತು ಡಿಸೆಂಬರ್‌ನಲ್ಲಿ ಗದಗ ಎಪಿಎಂಸಿಗೆ ಈರುಳ್ಳಿ ತಂದ ರೈತರಿಗೆ ಬಂಪರ್‌ ಬೆಲೆ ಲಭಿಸಿತ್ತು. ಆದರೆ, ಕಳೆದ ಹಂಗಾಮಿನಲ್ಲಿ ಪ್ರತಿದಿನ ಗದಗ ಎಪಿಎಂಸಿಗೆ ಪ್ರತಿದಿನ 5ರಿಂದ 6 ಸಾವಿರ ಕ್ವಿಂಟಲ್‌ನಷ್ಟು ಈರುಳ್ಳಿ ಆವಕವಾಗುತ್ತಿತ್ತು. ಆದರೆ, ಈ ಬಾರಿ ಪ್ರತಿದಿನ ಸರಾಸರಿ 800 ಕ್ವಿಂಟಲ್‌ನಷ್ಟು ಈರುಳ್ಳಿ ಆವಕವಾಗಿದೆ.

37,227 ಹೆಕ್ಟೇರ್‌ ಪ್ರದೇಶದಲ್ಲಿ ಈರುಳ್ಳಿ

ಜಿಲ್ಲೆಯ ಐದೂ ತಾಲ್ಲೂಕುಗಳ ಒಟ್ಟು 37,227 ಹೆಕ್ಟೇರ್‌ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗುತ್ತದೆ. ಕಳೆದ ಬಾರಿ ಆವಕ ಹೆಚ್ಚಿ, ಬೆಲೆ ಪಾತಾಳಕ್ಕೆ ಕುಸಿದಿತ್ತು. ಜಿಲ್ಲಾಡಳಿತ ಕ್ವಿಂಟಲ್‌ಗೆ ₹624ರಂತೆ ಬೆಂಬಲ ಬೆಲೆ ಪ್ರಕಟಿಸಿ 3 ಲಕ್ಷ ಕ್ವಿಂಟಲ್‌ ಈರುಳ್ಳಿ ಖರೀದಿಸಿತ್ತು. ಇದನ್ನು ಸಾರ್ವಜನಿಕರಿಗೆ ಕ್ವಿಂಟಲ್‌ಗೆ ₹500ರಂತೆ ಮಾರಾಟ ಮಾಡಿತ್ತು.

ಖರೀದಿಯಾದ ಈರುಳ್ಳಿಯಲ್ಲಿ ಶೇ 70ರಷ್ಟು ಮಾತ್ರ ಮಾರಾಟವಾಗಿತ್ತು. ಉಳಿದದ್ದು ಎ.ಪಿ.ಎಂ.ಸಿ ಆವರಣದಲ್ಲೇ ಚೀಲದಲ್ಲೇ ಮೊಳಕೆಯೊಡೆದು ಕೊಳೆತು ಹೋಗಿತ್ತು. ಇದರಿಂದ ಜಿಲ್ಲಾಡಳಿತಕ್ಕೆ ₹7ರಿಂದ ₹8 ಕೋಟಿಯಷ್ಟು ನಷ್ಟವಾಗಿತ್ತು.

* * 

ಈ ಬಾರಿ ಈರುಳ್ಳಿಗೆ ಉತ್ತಮ ಬೆಲೆ ಬಂದಿತ್ತು. ಹಿಂದಿನ ಎರಡು ವರ್ಷಗಳಿಗೆ ಹೋಲಿಸಿದರೆ ಗದಗ ಎಪಿಎಂಸಿಗೆ ಆವಕ ಗಣನೀಯವಾಗಿ ತಗ್ಗಿದೆವಿಜಯಕುಮಾರ
ಸಹಾಯಕ ನಿರ್ದೇಶಕ, ಕೃಷಿ ಮಾರಾಟ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT