ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಕಲಗೂಡಿನಲ್ಲಿ ರೈತರಿಂದ ಪ್ರತಿಭಟನೆ

Last Updated 21 ಜನವರಿ 2018, 9:47 IST
ಅಕ್ಷರ ಗಾತ್ರ

ಅರಕಲಗೂಡು: ಬರಗಾಲದಿಂದ ತತ್ತರಿಸಿರುವ ಅನ್ನದಾತರ ಸಮಸ್ಯೆಗಳನ್ನು ನಿರ್ಲಕ್ಷಿಸಿ ಸರ್ಕಾರ ನಿದ್ರಿಸುತ್ತಿದೆ ಎಂದು ಆರೋಪಿಸಿ ತಾಲ್ಲೂಕು ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಶುಕ್ರವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಪಟ್ಟಣದ ಪ್ರವಾಸಿ ಮಂದಿರದಿಂದ ಮೆರವಣಿಗೆ ಹೊರಟು ಅನಕೃ ವೃತ್ತ, ದೊಡ್ಡಮ್ಮ ವೃತ್ತ, ನಂಜೇಗೌಡ ವೃತ್ತದ ಮೂಲಕ ಸಾಗಿ ತಾಲ್ಲೂಕು ಕಚೇರಿ ಮುಂದೆ ಧರಣಿ ಕುಳಿತು ಸರ್ಕಾರ ರೈತ ವಿರೋಧಿಯಾಗಿ ವರ್ತಿಸುತ್ತಿದೆ ಎಂದು ಘೋಷಣೆ ಕೂಗಿದರು.

ಮಳೆ, ಬೆಳೆ ಇಲ್ಲದೇ ಆರ್ಥಿಕವಾಗಿ ಕಂಗೆಟ್ಟಿರುವ ರೈತರು ಬದುಕು ಸಾಗಿಸು ವುದು ದುಸ್ತರವಾಗಿದೆ. ಬರಗಾಲದ ಬವಣೆ ಎದುರಿಸುತ್ತಿದ್ದರೂ ಸರ್ಕಾರ ಬೆಳೆವಿಮೆ ಜಾರಿಗೊಳಿಸದೇ ಅನ್ನದಾತರ ಹೊಟ್ಟೆ ಮೇಲೆ ಹೊಡೆ ಯುತ್ತಿದೆ. ಕೆಲ ಕಡೆ ಕೆಟ್ಟಿರುವ ವಿದ್ಯುತ್ ಪರಿವರ್ತಕಗಳನ್ನು ಬದಲಾಯಿಸದೇ ಲಂಚಕ್ಕಾಗಿ ರೈತರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

‘ತಾಲ್ಲೂಕಿನ ಎಲ್ಲ 36 ಗ್ರಾಮ ಪಂಚಾಯಿತಿಗಳ ಬಾಪೂಜಿ ಕೇಂದ್ರಗಳ ಮೂಲಕ ಪಹಣಿ ವಿತರಿಸುವ ಕಾರ್ಯ ನಡೆಯುತ್ತಿಲ್ಲ, ಬಗರ್ ಹುಕುಂ ಸಾಗುವಳಿದಾರರಿಗೆ ಸರಿಯಾಗಿ ಹಕ್ಕು ಪತ್ರ ವಿತರಿಸುತ್ತಿಲ್ಲ. ರಾಗಿ, ಜೋಳ, ಭತ್ತಕ್ಕೆ ಬೆಂಬಲ ಬೆಲೆ ನೀಡಿಲ್ಲ, ಖರೀದಿ ಕೇಂದ್ರಗಳನ್ನು ತೆರೆಯದೆ ರೈತರ ಹಿತವನ್ನು ಕಡೆಗಣಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಿಗೆ ರೈತರ ಸಮಸ್ಯೆಗಳನ್ನು ಪರಿಹರಿಸುವ ಮನಸ್ಸಿಲ್ಲದೇ ರಾಜಕೀಯ ದೊಂಬರಾಟದಲ್ಲಿ ತೊಡಗಿದ್ದು ಅನ್ನದಾತರ ಬದುಕಿನಲ್ಲಿ ಚೆಲ್ಲಾಟವಾಡುತ್ತಿದ್ದಾರೆ’ ಎಂದು ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಯೋಗಣ್ಣ ಆರೋಪಿಸಿದರು.

"ಪ್ರತಿಭಟನಾ ಸ್ಥಳಕ್ಕೆ ವಿವಿಧ ಇಲಾಖೆ ಅಧಿಕಾರಿಗಳನ್ನು ಕರೆಸಿ ರೈತರ ಕುಂದುಕೊರತೆಗಳನ್ನು ಚರ್ಚಿಸಲಾಯಿತು. ಶೀಘ್ರವೇ ರೈತರ ಬೇಡಿಕೆಗಳನ್ನು ಈಡೇರಿಸದಿದ್ದರೆ ಆಯಾ ಇಲಾಖೆ ಅಧಿಕಾರಿಗಳನ್ನೇ ಹೊಣೆಗಾರನ್ನಾಗಿಸಿ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು' ಎಂದು ಅವರು ಎಚ್ಚರಿಸಿದರು.

ಗ್ರೇಡ್- 2 ತಹಶೀಲ್ದಾರ್ ಎಚ್‌.ಟಿ. ಪಾರ್ಥಸಾರಥಿ ಅವರಿಗೆ ಮನವಿ ಸಲ್ಲಿಸಲಾಯಿತು. ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೊಟ್ಟೂರು ಶ್ರೀನಿವಾಸ್, ಉಪಾಧ್ಯಕ್ಷ ರುದ್ರೇಶಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಳ್ಳೂರು ಸ್ವಾಮಿಗೌಡ, ಸಂಘದ ಮುಖಂಡರಾದ ಉಮೇಶ್, ಬಂದಿಗನಹಳ್ಳಿ ರವಿ, ಜಗದೀಶ್, ಹೊಂಬೇಗೌಡ, ಕೃಷ್ಣೇಗೌಡ, ಶಿವಣ್ಣ ಮುಂತಾದವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT