ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

65 ಲಕ್ಷ ಮೀಟರ್‌ ಬಟ್ಟೆ ಖರೀದಿ: ಲಮಾಣಿ

Last Updated 21 ಜನವರಿ 2018, 9:50 IST
ಅಕ್ಷರ ಗಾತ್ರ

ಹಾವೇರಿ: ‘ಮುಂಗಡ ಪಾವತಿಸುವ ಮೂಲಕ ನೇಕಾರರಿಂದ ವಾರ್ಷಿಕ ಒಟ್ಟು 65 ಲಕ್ಷ ಮೀಟರ್‌ ಬಟ್ಟೆ ಖರೀದಿಸಿ, ಶಾಲಾ ಮಕ್ಕಳ ಸಮವಸ್ತ್ರಕ್ಕೆ ನೀಡಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಹೇಳಿದರು.

ಕೈಮಗ್ಗ ಮತ್ತು ಜವಳಿ ಇಲಾಖೆ ಹಾಗೂ ಜಿಲ್ಲಾ ಪಂಚಾಯ್ತಿ ಸಹಯೋಗದಲ್ಲಿ ನಗರದ ಜಿಲ್ಲಾ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಶುಕ್ರವಾರ ನಡೆದ ‘ಜವಳಿ ನೀತಿ (2013–18) ಕುರಿತ ಕಾರ್ಯಾಗಾರ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಈ ಪೈಕಿ ಬೇಡಿಕೆಯ 50ಲಕ್ಷ ಮೀಟರ್‌ ಬಟ್ಟೆಯನ್ನು ನೀಡುವುದಾಗಿ ನೇಕಾರರು ತಿಳಿಸಿದ್ದಾರೆ’ ಎಂದ ಅವರು, ‘ಹೊಸ ಜವಳಿ ನೀತಿಯನ್ನು ರೂಪಿಸಲಾಗುತ್ತಿದ್ದು, ಇದರಿಂದ ನೇಕಾರರಿಗೆ ಅನುಕೂಲವಾಗಲಿದೆ. ರಾಜ್ಯದಲ್ಲಿ ಕೃಷಿ ಬಿಟ್ಟರೆ, ಜವಳಿ ಉದ್ಯಮದಲ್ಲೇ ಅತಿ ಹೆಚ್ಚು ಉದ್ಯೋಗ ಸೃಷ್ಟಿಯಾಗಿದೆ. ಅಲ್ಲದೇ, ಅತಿ ಹೆಚ್ಚಿನ ರಫ್ತನ್ನು ಹೊಂದಿದೆ’ ಎಂದರು.

ವಿದ್ಯುತ್‌ ಮಗ್ಗ ವಲಯದ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಅನುದಾನ ಅವಶ್ಯ, ಈ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಬೇಕು. ಹಳೇ ಕೈಮಗ್ಗಗಳಿಂದ ಆರೋಗ್ಯದ ಸಮಸ್ಯೆ ಹೆಚ್ಚಾಗಿದೆ. ಅದಕ್ಕಾಗಿ ಆಧುನಿಕ ಯಂತ್ರಗಳನ್ನು ಬಳಸಿ ನೂಲು ತೆಗೆಯಲು ಮುಂದಾಗಬೇಕು ಎಂದರು.

‘ರಾಜ್ಯದ 300 ಜವಳಿ ಘಟಕಗಳಿಗೆ ತಲಾ ₹1 ಲಕ್ಷದಂತೆ ಸಹಾಯಧನ ನೀಡಲಾಗುವುದು. ಇದರಿಂದ ಅತ್ಯಂತ ಕಡು ಬಡವರಿಗೆ ನೆರವಾಗಲಿದೆ. ಅಲ್ಲದೇ, ರಾಜೀವ್‌ ಗಾಂಧಿ ವಸತಿ ನಿಗಮದ ಮೂಲಕ ₹ 1.20 ಲಕ್ಷ ಸಹಾಯಧನ ನೀಡಲಾಗುವುದು’ ಎಂದರು.

ಕಿರು ಹೊತ್ತಿಗೆ ಬಿಡುಗಡೆ: ಜವಳಿ ಇಲಾಖೆಯ ‘ಪವರ್‌ ಟೆಕ್ಸ್‌ ಇಂಡಿಯಾ’ ಶೀರ್ಷಿಕೆಯ ವಿದ್ಯುತ್‌ ಮಗ್ಗ ವಲಯ ಅಭಿವೃದ್ಧಿಗಾಗಿ ವ್ಯಾಪಕ ಯೋಜನೆ ಎಂಬ ಕಿರು ಹೊತ್ತಿಗೆಯನ್ನು ಸಚಿವರು ಬಿಡುಗಡೆ ಮಾಡಿದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ನಗರಸಭೆ ಅಧ್ಯಕ್ಷೆ ಪಾರ್ವತೆಮ್ಮ ಹಲಗಣ್ಣನವರ, ಕೈಮಗ್ಗ ಮತ್ತು ಜವಳಿ ಇಲಾಖೆ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕ ಆನಂದ ಕಿತ್ತೂರ, ಕೈಮಗ್ಗ ಮತ್ತು ಜವಳಿ ಇಲಾಖೆ ಉಪ ನಿರ್ದೇಶಕ ವಿರೇಶ ಢವಳೆ ಹಾಗೂ ವಿದ್ಯುತ್‌ಮಗ್ಗ ವಲಯದ ಸಹಾಯದ ನಿರ್ದೇಶಕ ಎಚ್‌.ಬಿ.ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT