ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒರಟು ವ್ಯಕ್ತಿಯ ಸಂಗೀತ ಶಕ್ತಿ

Last Updated 21 ಜನವರಿ 2018, 19:30 IST
ಅಕ್ಷರ ಗಾತ್ರ

ಗಾನ ಸಮ್ಮೋಹನ ಎಂಬ ಗುಣವಿಶೇಷಣ ಅವರಿಗೆ ಹೊಂದುವುದೇನೋ? ಅಲಿಯಮ್ ದಮಾಲ ಬದಾರಾ ಥಿಯಾಮ್ ಎಂಬ ಉದ್ದದ ಹೆಸರು ಹೇಳಿದರೆ ಅವರು ಯಾರೆಂದು ಬಹುತೇಕರಿಗೆ ಅರ್ಥವಾಗಲಾರದು. ಆದರೆ, ‘ಅಕಾನ್’ ಎಂದರೆ ಕಿವಿ ನಿಮಿರುವವರ ಸಂಖ್ಯೆ ದೊಡ್ಡದು. ಇವತ್ತಿಗೂ ದೇಶದ ಅಸಂಖ್ಯ ನಗರಗಳ ಜಿಮ್‌ಗಳಲ್ಲಿ ಬೆವರಿಳಿಸುವಾಗ ಪಡ್ಡೆಗಳು ಅಕಾನ್ ಹಾಡುಗಳನ್ನು ಕೇಳುತ್ತಾರೆ. ಅದರಲ್ಲಿನ ರ‍್ಯಾಪ್ ಲಾಲಿತ್ಯ ಕಾಡದೇ ಇರದು.

ಪಶ್ಚಿಮ ಆಫ್ರಿಕಾದಲ್ಲಿ ಹುಟ್ಟಿದ ಅಕಾನ್ ಜನ್ಮಜಾತ ಸಂಗೀತ ಪ್ರತಿಭೆ. ಸೇಂಟ್ ಲೂಯಿಸ್‌ನಲ್ಲಿ ಹುಟ್ಟಿ, ಸೆನೆಗಲ್‌ನಲ್ಲಿ ಬೆಳೆದ ಅವರು ಏಳನೇ ವಯಸ್ಸಿನಲ್ಲೇ ಐದು ವಾದ್ಯಗಳನ್ನು ನುಡಿಸಬಲ್ಲವರಾಗಿದ್ದರು. ಡ್ರಮ್ಸ್, ಗಿಟಾರ್, ಜಂಬೆ ಅವರ ನೆಚ್ಚಿನ ವಾದ್ಯಗಳು. ಅವರ ತಂದೆ ಮೊರ್ ಥಿಯಾಮ್ ವಾದ್ಯ ಸಂಯೋಜಕರಾಗಿ ಹೆಸರು ಮಾಡಿದ್ದರು. ಅಮ್ಮ ನೃತ್ಯಗಾರ್ತಿ.

ಅಕಾನ್ ಕುಟುಂಬ ಅಮೆರಿಕದ ನ್ಯೂಜೆರ್ಸಿಯಲ್ಲಿ ನೆಲೆಗೊಂಡಿತು. ಅಲ್ಲಿ ಅವರಿಗೆ ಸಲೀಸಾಗಿ ಸಿಕ್ಕಿದ್ದು ದುರ್ಜನರ ಸಂಗ.

ಹೊಡೆಯುವುದು, ಬಡಿಯುವುದು, ರೇಗಿಸುವುದು, ಕೆಣಕುವುದು ಇವೆಲ್ಲ ದುರ್ವಿದ್ಯೆಗಳನ್ನು ಕಲಿತ ಅಕಾನ್, ಅದರ ಜೊತೆಗೆ ನೃತ್ಯವನ್ನೂ ಕಲಿತರು. ಸಂಗೀತವಂತೂ ಜೊತೆಗೇ ಇತ್ತಲ್ಲ. ಹೊಡೆದಾಡಿ ಸುಸ್ತಾದ ಮೇಲೆ ಅವರ ಬಾಯಿಂದ ಒಂದು ರಾಗ ಉದುರುತ್ತಿತ್ತು. ಒದೆ ತಿಂದವರೆಲ್ಲ ಅದನ್ನು ಕೇಳಿ ಹಗುರಾಗುತ್ತಿದ್ದುದು ವಿರೋಧಾಭಾಸ.

ಹೈಸ್ಕೂಲ್ ಓದುವಾಗ ಅಕಾನ್ ‘ಹಾದಿ ತಪ್ಪಿದ ಹುಡುಗ’ ಎಂದೇ ಕುಖ್ಯಾತ. ಶಾಲೆಯಲ್ಲಿ ಯಾವ ಟೆಸ್ಟ್ ನಡೆದರೂ ಪ್ರಶ್ನೆಪತ್ರಿಕೆ ಲೀಕ್ ಮಾಡುತ್ತಿದ್ದರು. ಗನ್‌ಗಳು, ಬುಲೆಟ್‌ಗಳನ್ನು ಸರಬರಾಜು ಮಾಡಿದಾಗ ಶಾಲೆಯವರ ಕೆಂಗಣ್ಣಿಗೆ ಗುರಿಯಾಗಬೇಕಾಯಿತು. ಮಾದಕದ್ರವ್ಯಗಳನ್ನು ಮಾರಿ ಸಿಕ್ಕಿಬಿದ್ದ ಮೇಲಂತೂ ಅಕಾನ್ ಬದುಕು ದುಸ್ತರವಾದೀತು ಎಂದೇ ಸ್ನೇಹಿತರು ಭಾವಿಸಿದ್ದರು.

ಹಾದಿ ಬಿಟ್ಟ ಮಗನನ್ನು ಅಪ್ಪ-ಅಮ್ಮನೂ ತೊರೆದರು. ಅಕಾನ್ ಹಾಗೂ ಅವರ ಅಣ್ಣ ಚಿಕ್ಕಪ್ರಾಯದಲ್ಲೇ ಸ್ವತಂತ್ರವಾಗಿ ಬದುಕುವ ಅನಿವಾರ್ಯಕ್ಕೆ ಸಿಲುಕಿದರು. ಅಪ್ಪ-ಅಮ್ಮ ಜಾರ್ಜಿಯಾಗೆ ಹೋಗಿಬಿಟ್ಟರು. ದರೋಡೆ ಮಾಡಿ ಸಿಕ್ಕಿಬಿದ್ದ ಅಕಾನ್ ಜೈಲು ಸೇರಿದರು. ಪದೇ ಪದೇ ಅಪರಾಧ ಮಾಡುವ ಚಾಳಿಗೆ ಬಿದ್ದರೇ ವಿನಾ ತಿದ್ದಿಕೊಳ್ಳಲಿಲ್ಲ. 1999ರಿಂದ 2000ದ ಅವಧಿಯಲ್ಲಿ ಅವರು ಜೈಲಿನಲ್ಲಿ ಇದ್ದಿದ್ದೇ ಹೆಚ್ಚು.

ಜೈಲುಶಿಕ್ಷೆ ಮುಗಿದ ಮೇಲೆ ಮನೆಯ ಸ್ಟುಡಿಯೊ ಸೇರುತ್ತಿದ್ದ ಅವರು ಅಲ್ಲಿ ಜೀವನಾನುಭವದ ಹಾಡುಗಳನ್ನು ಬರೆಯುತ್ತಿದ್ದರು. ಅಷ್ಟೇ ಅಲ್ಲ, ಅದಕ್ಕೆ ಸ್ವರ ಸಂಯೋಜನೆ ಮಾಡಿ ಹಾಡುತ್ತಿದ್ದರು. ‘ಲಾಕ್ಡ್ ಅಪ್’ ಎಂಬ ಹಾಡು ಜೈಲುವಾಸದ ಅನುಭವದ ಸಾಲುಗಳನ್ನೇ ಒಳಗೊಂಡಿತ್ತು. ಯೂನಿವರ್ಸಲ್ ಕಂಪೆನಿಯವರಿಗೆ ಅಕಾನ್ ಸಂಯೋಜನೆಯ ಇಂಥ ಧ್ವನಿಮುದ್ರಿತ ಹಾಡುಗಳು ಸಿಕ್ಕವು. ‘ಟ್ರಬಲ್’ ಎಂಬ ಮೊದಲ ಆಲ್ಬಂ ಮಾರುಕಟ್ಟೆಗೆ ಬಂದದ್ದು ಹಾಗೆ; 2004ರಲ್ಲಿ.

ವ್ಯಸನಗಳನ್ನು ಬದಿಗಿಟ್ಟ ಅಕಾನ್, ಸಂಗೀತದ ಗೀಳನ್ನು ಹೆಚ್ಚು ಉಜ್ಜಲು ಅವರ ಹಾಡುಗಳು ಜನಪ್ರಿಯವಾಗಿದ್ದು ಪ್ರೇರಣೆಯಾಯಿತು. ‘ಸ್ಮ್ಯಾಕ್ ದಟ್’, ‘ಮಿಸ್ಟರ್ ಲೋನ್ಲಿ’ ಹಾಡುಗಳು ಜನಪ್ರಿಯತೆಯ ಮಟ್ಟವನ್ನು ಹೆಚ್ಚಿಸಿದವು. 49ನೇ ಗ್ರ್ಯಾಮಿ ಪ್ರಶಸ್ತಿಗೆ ಎರಡು ವಿಭಾಗಗಳಲ್ಲಿ ಅವರ ಹೆಸರು ಪರಿಗಣಿತವಾಯಿತು. ಪ್ರಶಸ್ತಿ ಸಿಗಲಿಲ್ಲವಾದರೂ ಅವರ ಜನಪ್ರಿಯತೆಯ ಗ್ರಾಫ್ ಏರಿತೆನ್ನಿವುದು ವಿಶೇಷ.

2007ರಲ್ಲಿ ಟೊಬ್ಯಾಗೊದಲ್ಲಿ ಹದಿನೆಂಟು ದಾಟದ ಹುಡುಗಿಯ ಜೊತೆ ‘ರೇಸಿ ನೃತ್ಯ’ ಮಾಡಿ ಅಕಾನ್ ಟೀಕೆಗೆ ಗುರಿಯಾದರು. ಆ ಹುಡುಗಿಗೆ ಹದಿನೆಂಟು ತುಂಬಿರಲಿಲ್ಲ ಎಂದು ತನಗೆ ಗೊತ್ತೇ ಇರಲಿಲ್ಲ ಎಂದು ಅವರು ಹೇಳಿದರಾದರೂ, ಅನೇಕರು ಅದನ್ನು ನಂಬಲಿಲ್ಲ. ಅದಕ್ಕೆ ಪ್ರತಿಕ್ರಿಯೆಯ ರೂಪದಲ್ಲಿ ಅವರು ‘ಸಾರಿ… ಬ್ಲೇಮ್ ಇಟ್ ಆನ್ ಮಿ’ ಎಂಬ ಇನ್ನೊಂದು ಹಾಡು ಹಾಡಿದರು.

ಒಮ್ಮೆ ಕಛೇರಿ ಕೊಡುವಾಗ ವೇದಿಕೆಯತ್ತ ಒಬ್ಬ ಯಾವುದೋ ವಸ್ತುವನ್ನು ತೂರಿದ. ಅವನನ್ನು ಹಿಡಿದು ವೇದಿಕೆಗೆ ತರುವಂತೆ ಅಭಿಮಾನಿಗಳಿಗೆ ಅಕಾನ್ ತಾಕೀತು ಮಾಡಿದರು. 15ರ ಹುಡುಗನನ್ನು ಜನ ಎಳೆದುತಂದರು. ಅವನನ್ನು ಭುಜದ ಮೇಲೆ ಹೊತ್ತುಕೊಂಡು ಗಾಯಕ ವೀಕ್ಷಕರತ್ತ ಬಿಸಾಡಿದರು. ಅವರ ಈ ವರ್ತನೆ ಕೂಡ ಟೀಕೆಗೆ ಗುರಿಯಾಗಿತ್ತು.

ಒರಟೊರಟಾಗಿ ವರ್ತಿಸಿದರೂ ಅಕಾನ್ ಉಚ್ಚ ಸ್ಥಾಯಿ ಕಂಠವಷ್ಟೇ ಹಲವು ದೇಶಗಳ ಜನರಿಗೆ ಗೊತ್ತು. ಅದೇ ಸಂಗೀತದ ಗಮ್ಮತ್ತು. ಶಾರುಖ್ ಖಾನ್ ತಮ್ಮ ‘ರಾ.ಒನ್’ ಹಿಂದಿ ಸಿನಿಮಾಗೂ ಅವರನ್ನು ಕರೆದುಕೊಂಡು ಹಾಡಿಸಿದ್ದು ಗೊತ್ತೇ ಇದೆ.ಅಕಾನ್ ಅವರಿಗೀಗ 44ರ ಹರೆಯ. ಬರೆಯುವುದು, ಹಾಡುವುದು, ಜಗಳ ಕಾಯುವುದು- ಯಾವುದನ್ನೂ ಅವರು ಇನ್ನೂ ಬಿಟ್ಟಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT