ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೃದಯಗಳ ಭಾಷೆ

Last Updated 21 ಜನವರಿ 2018, 19:30 IST
ಅಕ್ಷರ ಗಾತ್ರ

ಭಾರತದ ಜೊತೆಗಿನ ನಿಮ್ಮ ನಂಟನ್ನು ಹೇಳಿ?

ನಾನು 16 ವರ್ಷದವನಿದ್ದಾಗ ಅಮೆರಿಕನ್‌ ಫೀಲ್ಡ್‌ ಸರ್ವೀಸ್‌ (ಎಎಫ್‌ಎಸ್‌ ಎಕ್ಸ್‌ಚೇಂಜ್‌ ಸ್ಟೂಡೆಂಟ್‌) ಮೂಲಕ ಮುಂಬೈನ ಸಿದ್ಧಾರ್ಥ್‌ ಹಾಗೂ ನಿರುಪಮಾ ಮೆಹ್ತಾ ಅವರ ಕುಟುಂಬ ಸೇರಿದೆ. ನೃತ್ಯಗುರುಗಳಾಗಿದ್ದ ಅವರ ಮೂಲಕ ನನಗೆ ಭಾರತದ ಅನೇಕ ಪ್ರಸಿದ್ಧ ನೃತ್ಯಗಾರರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತು. ಇಲ್ಲಿನ ಕಲಾ ಶ್ರೀಮಂತಿಕೆಯ ಪರಿಚಯ ಆಯಿತು. ಬಳಿಕ ಅಮೆರಿಕಕ್ಕೆ ಹೋಗಿ ಬ್ಯಾಲೆ, ಕಂಟೆಂಪರರಿ ನೃತ್ಯಗಳಲ್ಲಿ ತೊಡಗಿಸಿಕೊಂಡೆ. 1992ರಲ್ಲಿ ಬರೋಡದ ಎಂ.ಎಸ್‌ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿದ್ದಾಗ ಖ್ಯಾತ ನೃತ್ಯಗಾರರಾದ ಸಿ.ವಿ ಚಂದ್ರಶೇಖರ ರಾವ್‌, ಮಲ್ಲಿಕಾ ಸಾರಾಭಾಯಿ, ಮೃಣಾಲಿನಿ ಸಾರಾಭಾಯ್‌, ಜವರಿ ಸಹೋದರಿಯರನ್ನು ಭೇಟಿ ಮಾಡಿದೆ. ಅವರಿಗಾಗಿ ನೃತ್ಯ ಸಂಯೋಜಿಸಿದ್ದೆ. ಅವರೂ ಅಮೆರಿಕದಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ. ಇದೊಂಥರ ಸಾಂಸ್ಕೃತಿಕ ವಿನಿಮಯ.

ನೃತ್ಯದಲ್ಲಿ ಆಸಕ್ತಿ ಮೂಡಿದ್ದು ಹೇಗೆ?

ನನ್ನ ಅಮ್ಮ ಪಿಯಾನೋ ವಾದಕಿ, ನೃತ್ಯಗಾರ್ತಿಯೂ ಆಗಿದ್ದರು. ಆದರೆ ಅವರು ಯಾವುದೇ ಪ್ರದರ್ಶನ ನೀಡಿಲ್ಲ. ಅವರ ಅಭಿರುಚಿ, ನೃತ್ಯ, ಸಂಗೀತ ಕುರಿತಾದ ಅವರ ಮಾತುಗಳು ನನ್ನಲ್ಲಿ ಕಲೆಯ ಬಗ್ಗೆ ಆಸಕ್ತಿ ಮೂಡುವಂತೆ ಮಾಡಿತು. ನನ್ನ ಜೀವನದಲ್ಲಿ ಮೊದಲ ಬಾರಿ ಗಂಭೀರವಾಗಿ ಕಲಿತಿದ್ದು ನೃತ್ಯವನ್ನೇ. ನ್ಯೂಯಾರ್ಕ್‌ ನಗರದಲ್ಲಿ ನೃತ್ಯ ಕಲಿಕೆಗೆ ಸ್ಕಾಲರ್‌ ಶಿಫ್‌ ಸಿಕ್ಕಿತು. ಕಾಲೇಜಿನಲ್ಲಿ ಡ್ರಾಪ್‌ ಔಟ್‌ ಆಗಿ ನೃತ್ಯದಲ್ಲಿ ಮುಂದುವರಿದಿದ್ದೇ ನನ್ನ ಜೀವನದ ಟರ್ನಿಂಗ್‌ ಪಾಯಿಂಟ್‌.

ನಿಮ್ಮ ಬ್ಯಾಟರಿ ಡಾನ್ಸ್‌ ಕಂಪೆನಿ ಬಗ್ಗೆ ಹೇಳಿ...

1976ರಲ್ಲಿ ನ್ಯೂಯಾರ್ಕ್‌ನಲ್ಲಿ ಆರಂಭಿಸಿದೆ. ವಿಶ್ವದ ಬೇರೆಬೇರೆ ಕಡೆಗಳ ನೃತ್ಯ ಪ್ರಕಾರಗಳನ್ನು ಗುರುತಿಸಿ, ಅಲ್ಲಿನ ನೃತ್ಯಗಾರರನ್ನು ಒಟ್ಟು ಸೇರಿಸುತ್ತೇವೆ. ನೃತ್ಯ ವೈವಿಧ್ಯತೆ ನಮ್ಮ ಶಕ್ತಿ. ಅಮೆರಿಕದ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳಿಗೆ ನೃತ್ಯದ ಬಗ್ಗೆ ಒಲವು ಮೂಡಿಸುತ್ತೇವೆ. ಈ ತಂಡದಲ್ಲಿ ವಿಶ್ವದ ಅನೇಕ ಕಡೆಗಳ ವೃತ್ತಿಪರ ನೃತ್ಯಗಾರರು ಹಾಗೂ ಕೊರಿಯೋಗ್ರಾಫರ್‌ಗಳಿದ್ದಾರೆ. ಹೊಸ ಹಾಗೂ ವಿಶೇಷ ನೃತ್ಯ ಪ್ರದರ್ಶನದ ಜೊತೆಗೆ ಸಾಮಾಜಿಕ ಜಾಗೃತಿ, ಬದಲಾವಣೆಗೆ ಪ್ರಯತ್ನಿಸುತ್ತೇವೆ. ಯುದ್ಧ ಹಾಗೂ ಸಂಘರ್ಷ ಪೀಡಿತ ರಾಷ್ಟ್ರಗಳಲ್ಲಿ ನೃತ್ಯದಲ್ಲಿ ಆಸಕ್ತಿ ಉಳ್ಳವರನ್ನು ಗುರುತಿಸಿ, ನೃತ್ಯ ತರಬೇತಿ ನೀಡುತ್ತೇವೆ.

‘ಶಕ್ತಿ– ಎ ರಿಟರ್ನ್‌ ಟು ದ ಸೋರ್ಸ್‌’ ನೃತ್ಯ ಪ್ರದರ್ಶನದ ಬಗ್ಗೆ ಹೇಳಿ...

ಈ ನೃತ್ಯವನ್ನು ನಾನೇ ಸಂಯೋಜಿಸಿದ್ದು. ಈ ಪ್ರದರ್ಶನಕ್ಕಾಗಿ ಸುಮಾರು ಎರಡು ವರ್ಷ ಶ್ರಮಿಸಿದ್ದೇನೆ. ಆರು ಜನರ ನೃತ್ಯತಂಡದಲ್ಲಿ ಹಾಸನದ ಉನ್ನತ್‌ ಹಾಸನ್‌ ರತ್ನರಾಜು ಸಹ ಇದ್ದಾರೆ. ಒಟ್ಟು 60 ನಿಮಿಷದ ಕಾರ್ಯಕ್ರಮ. ಶಕ್ತಿ ಅಂದ್ರೆ ಭಾರತದಲ್ಲಿ ದೇವಿಯ ಅವತಾರ ಎಂಬ ನಂಬಿಕೆ ಇದೆ. ಆದರೆ ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ನಿಂತಿಲ್ಲ. ಇವನ್ನೆಲ್ಲ ನೃತ್ಯದಲ್ಲಿ ತಂದಿದ್ದೇವೆ. ಮುಂಬೈ, ಪುಣೆಯಲ್ಲಿ ಪ್ರದರ್ಶನಗೊಂಡಿರುವ ನೃತ್ಯವನ್ನು ಇದೀಗ ಬೆಂಗಳೂರಿನಲ್ಲಿ ಪ್ರದರ್ಶಿಸುತ್ತಿದ್ದೇವೆ. ನಂತರ ಜ.24ಕ್ಕೆ ಕೋಲ್ಕತ್ತ, 31ಕ್ಕೆ ನವದೆಹಲಿಯಲ್ಲಿ ಪ್ರದರ್ಶನ ನಡೆಯಲಿದೆ. ಮುಂದೆ ಢಾಕಾದಲ್ಲಿಯೂ ಪ್ರದರ್ಶನ ನೀಡುತ್ತೇವೆ.

ಭಾರತೀಯ ಶಾಸ್ತ್ರೀಯ ಸಂಗೀತ ನಿಮಗೆ ಹೇಗೆ ಆಪ್ತ?

ಸಂಗೀತ ಹೃದಯಕ್ಕೆ ಹತ್ತಿರ. ಕಲೆ ಮನುಷ್ಯರನ್ನು ಹೃದಯದಿಂದ ಒಟ್ಟು ಮಾಡುತ್ತದೆ. ನನಗೆ ಸಂಗೀತದ ಮಾತುಗಳು ಅರ್ಥವಾಗದೇ ಇರಬಹುದು. ಆದರೆ ಸಂಗೀತ ಹೃದಯವನ್ನು ಮುಟ್ಟುತ್ತದೆ. ಹಿಂದೂಸ್ತಾನಿ ಸಂಗೀತಗಾರರಾದ ಸಾಜನ್‌ ಮಿಶ್ರಾ ಹಾಗೂ ರಾಜನ್‌ ಮಿಶ್ರಾ ಸಂಗೀತ ಈ ನೃತ್ಯ ಸಂಯೋಜನೆಗಿದೆ. ಇದು ಇಲ್ಲಿಯ ಜನರಿಗೆ ಹೆಚ್ಚು ಆಪ್ತವಾಗುವುದು ಖಂಡಿತ.

ಎರಡು ಸಂಸ್ಕೃತಿಗಳ ಸೇತುವೆ ನೀವಾಗಿದ್ದೀರಿ. ಹೇಗೆನ್ನಿಸುತ್ತದೆ?

ನೃತ್ಯದ ಮೂಲಕ ಹೃದಯ ಗೆಲ್ಲಲು ಸಾಧ್ಯ. ಹಾಗೇ ಸಂಸ್ಕೃತಿಗಳನ್ನು ಬೆಸೆಯಲು ಸಾಧ್ಯ. ನೃತ್ಯಕ್ಕೆ ಮಿತಿ ಇಲ್ಲ. ಭಾರತೀಯ, ಅಮೆರಿಕನ್‌ ಎರಡೂ ನೃತ್ಯ ಪ್ರಕಾರ ನನಗಿಷ್ಟ. ಎರಡರ ಪ್ರಭಾವವೂ ನನ್ನ ಮೇಲಿದೆ.
***
ಬ್ಯಾಲೆ– ಭರತನಾಟ್ಯ ಸಂಯೋಗ

ಹಿನ್ನೆಲೆಯಲ್ಲಿ ಕೇಳಿಬರುತ್ತಿದ್ದ ಸಂಗೀತಕ್ಕೆ ಮೈಲಿ ಮೂಳೆಯೇ ಇಲ್ಲವೇನೋ ಎಂಬಂತೆ ಬಳುಕುತ್ತಾ, ವಿದೇಶಿ ನೃತ್ಯಗಾರರು ಬ್ಯಾಲೆ ಪ್ರದರ್ಶನ ನೀಡಿದರೆ, ವೇದಿಕೆ ಮೇಲೆ ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಸ್ವಾಮಿ ಸುಬ್ರಹ್ಮಣ್ಯನನ್ನು ಸ್ತುತಿಸುತ್ತಾ ನಾಟ್ಯದ ಮೂಲಕವೇ ಪ್ರೇಕ್ಷಕರನ್ನು ಭಕ್ತಿಯೆಡೆಗೆ ಕೊಂಡೊಯ್ದರು ಭರತನಾಟ್ಯ ಕಲಾವಿದ.

ಅಮೆರಿಕಾದ ‘ಬ್ಯಾಟರಿ ಡಾನ್ಸ್‌ ಕಂಪೆನಿ’ ಸಮಕಾಲೀನ ಮತ್ತು ಪಾರಂಪರಿಕ ನೃತ್ಯಗಳ ಸಮ್ಮಿಶ್ರಣವನ್ನು ನೃತ್ಯ ರಸಿಕರಿಗೆ ಪರಿಚಯಿಸಿದ್ದು ಹೀಗೆ. ವಸಂತನಗರದ ಗುರುನಾನಕ್ ಭವನದಲ್ಲಿ ಶನಿವಾರ ನಡೆದ ‘ಶಕ್ತಿ– ಎ ರಿಟರ್ನ್‌ ಟು ದ ಸೋರ್ಸ್‌’ ನೃತ್ಯ ಕಾರ್ಯಕ್ರಮ ಪ್ರೇಕ್ಷಕರನ್ನು ಹೊಸ ಲೋಕಕ್ಕೆ ಕರೆದೊಯ್ಯುವಲ್ಲಿ ಯಶಸ್ವಿಯಾಯಿತು.


ಜೋನಾಥನ್‌ ಹಾಲೆಂಡರ್‌

ಜೋನಾಥನ್‌ ಹಾಲೆಂಡರ್‌ ನೃತ್ಯ ಸಂಯೋಜನೆಯಲ್ಲಿ ಐವರು ಕಲಾವಿದರು ಬ್ಯಾಲೆ ಮೂಲಕ ಕಾರ್ಯಕ್ರಮ ಆರಂಭಿಸಿದರು. ನೃತ್ಯ ಕಲಾವಿದರಲ್ಲಿ ಮೂವರು ಅಮೆರಿಕದ ಕಲಾವಿದೆಯರು, ಒಬ್ಬ ಘಾನಾ ಹಾಗೂ ಒಬ್ಬ ಕೆರೇಬಿಯಾದ ನೃತ್ಯಗಾರರು. ಹಿನ್ನೆಲೆಯಲ್ಲಿ ತೇಲಿ ಬರುತ್ತಿದ್ದ ವಾದ್ಯ ಸಂಗೀತದ ಲಯವು ನೃತ್ಯಕ್ಕೆ ಹದವಾಗಿ ಹೊಂದಿಕೊಂಡಿತ್ತು. ಇದಾದ ಬಳಿಕ ನೃತ್ಯ ಪ್ರದರ್ಶನ ನೀಡಿದವರು ಹಾಸನದ ಉನ್ನತ್‌ ರತ್ನರಾಜು. ಭರತನಾಟ್ಯ ಕ್ಷೇತ್ರದಲ್ಲಿ ಈಗಾಗಲೇ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವ ಇವರು ಸುಬ್ರಹ್ಮಣ್ಯದೇವರ ಕುರಿತಾದ ಶಾಸ್ತ್ರೀಯ ಹಾಡಿಗೆ ಅಭಿನಯ ನೀಡಿದರು. ಸುಬ್ರಹ್ಮಣ್ಯನ ವಿವಿಧ ಅವತಾರಗಳ ಪ್ರಸ್ತುತಪಡಿಸಿದ ಕಲಾವಿದ ನಿಧಾನವಾಗಿ ತನ್ನ ಛಾಪನ್ನು ಮೂಡಿಸುತ್ತಾ ಹೋದರು. ಸುಮಾರು 15 ನಿಮಿಷಗಳ ಕಾಲ ಶ್ರಮವಿಲ್ಲದೆ ಸರಾಗವಾಗಿ ನೃತ್ಯ ಪ್ರದರ್ಶಿಸಿದರು.

ಬಳಿಕ ‘ಶಕ್ತಿ– ಎ ರಿಟರ್ನ್‌ ಟು ದ ಸೋರ್ಸ್‌’ ನೃತ್ಯವನ್ನು ಪ್ರಸ್ತುತಪಡಿಸಲಾಯಿತು. ಇದರಲ್ಲಿ ವಿದೇಶಿ ಕಲಾವಿದರು ಹಾಗೂ ಉನ್ನತ್‌ ರತ್ನರಾಜು ಒಟ್ಟಾಗಿ ನೃತ್ಯ ಪ್ರದರ್ಶಿಸಿದರು. ಹೆಣ್ಣಿನ ಶಕ್ತಿ, ಆಕೆಯ ಮೇಲೆ ನಡೆಯುವ ದೌರ್ಜನ್ಯ, ಅಸಹನೆಗಳನ್ನು ರೂಪಕಗಳ ಮೂಲಕ ಪ್ರದರ್ಶಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಉನ್ನತ್‌ ಅವರು ಭರತನಾಟ್ಯವನ್ನು, ವಿದೇಶಿ ಕಲಾವಿದರು ಬ್ಯಾಲೆಯನ್ನು ಜೊತೆಜೊತೆಗೆ ಪ್ರದರ್ಶಿಸುವ ಮೂಲಕ ಸಾಂಸ್ಕೃತಿಕ ವಿನಿಮಯದ ಆಶಯ ಬಿಂಬಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT