ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಾಯ ತೆರಿಗೆ ವಿನಾಯ್ತಿ ಸಾಧ್ಯತೆ: ‘ಇವೈ’ ಸಮೀಕ್ಷೆ

Last Updated 21 ಜನವರಿ 2018, 19:30 IST
ಅಕ್ಷರ ಗಾತ್ರ

ನವದೆಹಲಿ: 2018–19ನೇ ಹಣಕಾಸು ವರ್ಷದ ಬಜೆಟ್‌ನಲ್ಲಿ ಆದಾಯ ತೆರಿಗೆ ಹಂತ ಮತ್ತು ದರಗಳನ್ನು ಕೇಂದ್ರ ಸರ್ಕಾರವು ತಗ್ಗಿಸುವ ಸಾಧ್ಯತೆ ಇದೆ ಎಂದು ತೆರಿಗೆ ಸಲಹಾ ಸಂಸ್ಥೆ ಅರ್ನ್ಸ್ಟ್‌ ಆ್ಯಂಡ್‌ ಯಂಗ್‌ (ಇವೈ) ಸಮೀಕ್ಷೆಯಲ್ಲಿ ತಿಳಿಸಲಾಗಿದೆ.

ವೆಚ್ಚ ಮಾಡಲು ಜನರ ಕೈಯಲ್ಲಿ ಹೆಚ್ಚು ಹಣ ಇರುವಂತಾಗಲು ಆದಾಯ ತೆರಿಗೆ ಪಾವತಿಗೆ ಇರುವ ಗರಿಷ್ಠ ಮಿತಿಯನ್ನು ಹೆಚ್ಚಿಸಬಹುದು ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಶೇ 69ರಷ್ಟು ಜನರು ನಿರೀಕ್ಷೆ ಹೊಂದಿದ್ದಾರೆ.

ಕಂಪನಿಗಳ ಮೇಲಿನ ತೆರಿಗೆಯನ್ನು ಶೇ 25ಕ್ಕೆ ಇಳಿಸಬಹುದು. ಆದರೆ, ಸರ್ಚಾರ್ಜ್‌ ಮುಂದುವರೆಯಲಿದೆ ಎನ್ನುವುದು ಶೇ 48 ಜನರ ನಿರೀಕ್ಷೆಯಾಗಿದೆ.

ಆದಾಯ ತೆರಿಗೆಗೆ ಬಹಳ ವರ್ಷಗಳಿಂದ ಅನ್ವಯಿಸಿಕೊಂಡು ಬರಲಾಗುತ್ತಿರುವ ಬಹುಬಗೆಯ ಕಡಿತಗಳ ಬದಲಿಗೆ ಉದ್ಯೋಗಿಗಳ ಮೇಲಿನ ತೆರಿಗೆ ಹೊರೆ ಕಡಿಮೆ ಮಾಡಲು ‘ನಿರ್ದಿಷ್ಟ ಕಡಿತ’ ಜಾರಿಗೆ ತರಬಹುದು ಎಂದು ಶೇ 59ರಷ್ಟು ಜನರು ಹೇಳಿದ್ದಾರೆ.

ಸಮೀಕ್ಷೆಯಲ್ಲಿ 150 ಮುಖ್ಯ ಹಣಕಾಸು ಅಧಿಕಾರಿಗಳು (ಸಿಎಫ್ಒ), ತೆರಿಗೆ ಮುಖ್ಯಸ್ಥರು ಮತ್ತು ಹಣಕಾಸು ವೃತ್ತಿನಿರತರು ಭಾಗಿಯಾಗಿದ್ದಾರೆ.

ಲಾಭಾಂಶದ ಮೇಲಿನ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇರಲಾರದು ಎನ್ನುವುದು ಬಹುತೇಕರ ನಿರೀಕ್ಷೆಯಾಗಿದೆ. ತೆರಿಗೆ ನೀತಿಗಳಲ್ಲಿ ಸ್ಥಿರತೆ ಕಂಡು ಬರಲಿದೆ ಎಂದು ಸಮೀಕ್ಷೆಯಲ್ಲಿ ಭಾಗಿಯಾದವರೆಲ್ಲ ಒಮ್ಮತದ ಅಭಿಪ್ರಾಯ ದಾಖಲಿಸಿದ್ದಾರೆ.

‘ಜಿಎಸ್‌ಟಿ ಜಾರಿಗೆ ಬಂದಿರುವುದರಿಂದ ನೇರ ತೆರಿಗೆ ವ್ಯವಸ್ಥೆಯಲ್ಲಿ ವ್ಯಾಪಕ ಬದಲಾವಣೆಗಳು ಕಂಡು ಬರುವ ಸಾಧ್ಯತೆ ಕಡಿಮೆ ಇದೆ’ ಎಂದು ‘ಇವೈ‘ನ ರಾಷ್ಟ್ರೀಯ ತೆರಿಗೆ ಮುಖ್ಯಸ್ಥ ಸುಧೀರ್‌ ಕಪಾಡಿಯಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT