ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಳಿತ ಸ್ಥಗಿತ: ಬಗೆಹರಿಯದ ಬಿಕ್ಕಟ್ಟು

Last Updated 21 ಜನವರಿ 2018, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕದಲ್ಲಿ ಆಡಳಿತ ಯಂತ್ರ ಸ್ಥಗಿತವಾಗಿರುವುದನ್ನು ಅಂತ್ಯಗೊಳಿಸುವ ಪ್ರಯತ್ನಗಳು ವಿಫಲವಾಗಿದ್ದು  ಬಿಕ್ಕಟ್ಟು ಮುಂದುವರಿದಿದೆ.

ವೆಚ್ಚ ಮಸೂದೆಗೆ ಅನುಮೋದನೆ ದೊರೆಯದ ಬಗ್ಗೆ ರಿಪಬ್ಲಿಕನ್‌ ಮತ್ತು ಡೆಮಾಕ್ರಟಿಕ್‌ ಪಕ್ಷದ ನಾಯಕರು ಪರಸ್ಪರ ಆರೋಪ ಮತ್ತು ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ. ಭಿನ್ನಾಭಿಪ್ರಾಯಗಳನ್ನು ತೊಡೆದು ಹಾಕಲು ಜನಪ್ರತಿನಿಧಿಗಳ ಸಭೆ ಮತ್ತು ಸೆನೆಟ್‌ನ ವಿಶೇಷ ಅಧಿವೇಶನ ಕರೆಯಲಾಗಿತ್ತು. ಆದರೆ, ಆಡಳಿತ ಸ್ಥಗಿತದ ಹೊಣೆಯನ್ನು ಪರಸ್ಪರರ ಮೇಲೆಯೇ ಹೊರೆಸುವ ಪ್ರಯತ್ನ ನಡೆಸಿದರು. ಅಕ್ರಮ ವಲಸೆಗಾರರ ವಿಷಯ ಉಭಯ ಪಕ್ಷಗಳ ನಡುವೆ ಕಗ್ಗಂಟಾಗಿ ಉಳಿದಿದೆ.

‘ಅಧ್ಯಕ್ಷ ಟ್ರಂಪ್‌ ಜತೆ ಒಪ್ಪಂದ ಮಾಡಿಕೊಳ್ಳುವುದು ಕಷ್ಟಸಾಧ್ಯ. ಅವರು ಎಂದಿಗೂ ತಮ್ಮ ನಿಲುವಿಗೆ ಬದ್ಧರಾಗಿ ಇರುವುದಿಲ್ಲ. ಹೀಗಾಗಿ, ಸಂಧಾನ ಕಷ್ಟ’ ಎಂದು ಡೆಮಾಕ್ರಟಿಕ್‌ ಪಕ್ಷದ ಸೆನೆಟ್‌ ಮುಖಂಡ ಶುಮರ್‌ ಟೀಕಿಸಿದ್ದಾರೆ.

‘ದೇಶದಲ್ಲಿ ಬಿಕ್ಕಟ್ಟಿನ ಸ್ಥಿತಿ ಸೃಷ್ಟಿಯಾಗಲು ಶುಮರ್‌ ಅವರ ನಿಲುವುಗಳೇ ಕಾರಣ ಎಂದು ರಿಪಬ್ಲಿಕನ್‌ ಪಕ್ಷದ ಸೆನೆಟ್‌ ಸದಸ್ಯ ಮಿಟ್ಚ್‌ ಮ್ಯಾಕೊನ್ನೆಲ್‌ ತಿರುಗೇಟು ನೀಡಿದ್ದಾರೆ.

‘ವಿವಿಧ ಇಲಾಖೆಗಳಿಗೆ ಹಣ ಬಿಡುಗಡೆಗೆ ಅವಕಾಶ ನೀಡುವ ವೆಚ್ಚ ಮಸೂದೆಗೆ ಸೋಮವಾರ ಮಧ್ಯಾಹ್ನ ಅನುಮೋದನೆ ದೊರೆಯುವ ವಿಶ್ವಾಸ
ವಿದೆ’ ಎಂದು ಅವರು ತಿಳಿಸಿದ್ದಾರೆ.

ಶುಕ್ರವಾರ ಮಧ್ಯರಾತ್ರಿಯಿಂದ ಆಡಳಿತ ಸ್ಥಗಿತವಾಗಿದ್ದರೂ ಸದ್ಯಕ್ಕೆ ತೀವ್ರ ತರವಾದ ಪರಿಣಾಮಗಳು ಬೀರಿಲ್ಲ. ಆದರೆ, ಸೋಮವಾರದಿಂದ ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೋಮವಾರದಿಂದ ಸುಮಾರು 8 ಲಕ್ಷ ನೌಕರರು ಮನೆಯಲ್ಲೇ ಇರಬೇಕಾಗುತ್ತದೆ. ಸೇನಾ ಚಟುವಟಿಕೆಗಳು ಯಥಾಸ್ಥಿತಿ ನಡೆಯುತ್ತಿವೆ. ಆದರೆ, ಯಾರಿಗೂ ವೇತನ ದೊರೆಯುವುದಿಲ್ಲ. ಸದ್ಯಕ್ಕೆ ಸಾರ್ವಜನಿಕರಿಗೆ ತುರ್ತು ಸೇವೆಗಳು ಮಾತ್ರ ದೊರೆಯುತ್ತಿವೆ.

ಪ್ರತಿಭಟನೆ: ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಧೋರಣೆಯನ್ನು ಖಂಡಿಸಿ ಅಮೆರಿಕದ ಹಲವು ನಗರಗಳಲ್ಲಿ ಸಾವಿರಾರು ಮಂದಿ ಬೀದಿಗಳಿದು ಪ್ರತಿಭಟನೆ ನಡೆಸಿದರು.

ಅಮೆರಿಕ ವೀಸಾ ಸೇವೆ ಅಭಾದಿತ
ನವದೆಹಲಿ: ಅಮೆರಿಕ ಆಡಳಿತ ಸ್ಥಗಿತಗೊಂಡಿದ್ದರೂ ಭಾರತದಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಕಾನ್ಸುಲೇಟ್‌ ಎಂದಿನಂತೆ ಕಾರ್ಯನಿರ್ವಹಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ವೀಸಾಗೆ ಅರ್ಜಿ ಸಲ್ಲಿಕೆ, ಸಂದರ್ಶನ ಸೇರಿದಂತೆ ವೀಸಾ ಸಂಬಂಧಿತ ಸೇವೆಗಳು ಪೂರ್ವ ನಿಗದಿಯಂತೆ ನಡೆಯುತ್ತವೆ ಎಂದು ದೆಹಲಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಪ್ರಕಟಣೆಯಲ್ಲಿ ತಿಳಿಸಿದೆ.

ನವದೆಹಲಿಯಲ್ಲಿ ಕನ್ಸಲರ್‌ ಸೇವೆ ಲಭ್ಯ
ನವದೆಹಲಿ: ಇಲ್ಲಿನ ಅಮೆರಿಕ ರಾಯಭಾರ ಕಚೇರಿಯ ಕನ್ಸಲರ್‌ ಸೇವೆಗಳು ಎಂದಿನಂತೆ ಮುಂದುವರಿಯಲಿವೆ ಎಂದು ಪ್ರಕಟಣೆ ತಿಳಿಸಿದೆ.

‘ಈಗಾಗಲೇ ನಿಗದಿಪಡಿಸಿದ್ದ ವೀಸಾ ಸಂದರ್ಶನವಿದ್ದರೆ ಅಥವಾ ಅಮೆರಿಕದ ನಾಗರಿಕ ಸೇವೆಗೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ಅಥವಾ ಇತರ ಸಮಸ್ಯೆಗೆ ಪರಿಹಾರ ಪಡೆಯಲು ನಿಗದಿತ ಸಮಯಕ್ಕೆ ರಾಯಭಾರ ಕಚೇರಿಗೆ ಬನ್ನಿ’ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT