ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಆಯೋಗದ ಶಿಫಾರಸಿಗೆ ರಾಷ್ಟ್ರಪತಿ ಕೋವಿಂದ್‌ ಅಂಕಿತ: ಎಎಪಿಯ 20 ಶಾಸಕರು ಅನರ್ಹ

Last Updated 21 ಜನವರಿ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಲಾಭದಾಯಕ ಹುದ್ದೆ ನಿಯಮ ಉಲ್ಲಂಘಿಸಿದ್ದ ಆರೋಪ ಎದುರಿಸುತ್ತಿದ್ದ ದೆಹಲಿ ಸಚಿವ ಕೈಲಾಶ್‌ ಗೆಹ್ಲೋಟ್‌ ಸೇರಿದಂತೆ ಆಮ್‌ ಆದ್ಮಿ ಪಕ್ಷದ (ಎಎಪಿ) 20 ಶಾಸಕರನ್ನು ಅನರ್ಹಗೊಳಿಸಲು ಚುನಾವಣಾ ಆಯೋಗ ಮಾಡಿರುವ ಶಿಫಾರಸಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಭಾನುವಾರ ಅಂಕಿತ ಹಾಕಿದ್ದಾರೆ.

ಇದರೊಂದಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ನೇತೃತ್ವದ ಎಎಪಿಗೆ ಭಾರಿ ಹಿನ್ನಡೆಯಾದಂತಾಗಿದೆ. ರಾಷ್ಟ್ರಪತಿ ತರಾತುರಿಯಲ್ಲಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಆರೋಪಿಸಿರುವ ಎಎಪಿ, ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಹೇಳಿದೆ.

20 ಶಾಸಕರು ಅನರ್ಹಗೊಂಡರೂ ದೆಹಲಿ ಎಎಪಿ ಸರ್ಕಾರದ ಮೇಲೆ ತಕ್ಷಣಕ್ಕೆ ಯಾವುದೇ ಪರಿಣಾಮವಾಗುವುದಿಲ್ಲ. ಕೇಜ್ರಿವಾಲ್‌ ವಿರುದ್ಧ ಬಂಡಾಯ ಎದ್ದಿರುವ ಕಪಿಲ್‌ ಮಿಶ್ರಾ ಅವರನ್ನು ಬಿಟ್ಟು 45 ಶಾಸಕರನ್ನು ಹೊಂದಿರುವ ಎಎಪಿಗೆ ವಿಧಾನಸಭೆಯಲ್ಲಿ ಈಗಲೂ ಸ್ಪಷ್ಟ ಬಹುಮತ ಇದೆ.

ಆದರೆ, ರಾಷ್ಟ್ರಪತಿ ನಿರ್ಧಾರ ಪಕ್ಷದೊಳಗೆ ಕಲಹ ಸೃಷ್ಟಿಸುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಕೇಜ್ರಿವಾಲ್‌ ಬಗ್ಗೆ ಅಸಮಾಧಾನಗೊಂಡಿರುವ ಇತರ ಶಾಸಕರು ಏನು ಮಾಡುತ್ತಾರೆ ಎಂಬುದನ್ನು ನೋಡಬೇಕಾಗಿದೆ.

ಒಂದು ವೇಳೆ ನ್ಯಾಯಾಲಯದ ತೀರ್ಪು ಎಎಪಿ ವಿರೋಧವಾಗಿ ಬಂದರೆ ದೆಹಲಿಯಲ್ಲಿ ‘ಮಿನಿ–ಚುನಾವಣೆ’ ಎದುರಿಸಲು ವಿರೋಧ ಪಕ್ಷಗಳು ಸಜ್ಜಾಗುತ್ತಿವೆ.  ಸಂಸದೀಯ ಕಾರ್ಯದರ್ಶಿಗಳಾಗಿ ನೇಮಕಗೊಂಡಿರುವ 21 ಶಾಸಕರು ಲಾಭದಾಯಕ ಹುದ್ದೆ ಹೊಂದಿದ್ದಾರೆ ಎಂಬ ಆರೋಪದ ಆಧಾರದಲ್ಲಿ ಚುನಾವಣಾ ಆಯೋಗ ಅವರನ್ನು ಅನರ್ಹಗೊಳಿಸಲು ರಾಷ್ಟ್ರಪತಿಗೆ ಶಿಫಾರಸು ಮಾಡಿತ್ತು. 21 ಶಾಸಕರ ಪೈಕಿ ಒಬ್ಬರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಗೆಜೆಟ್‌ ಅಧಿಸೂಚನೆ: ರಾಷ್ಟ್ರಪತಿ ನಿರ್ಧಾರದ ನಂತರ ಕೇಂದ್ರ ಸರ್ಕಾರ ಈ ಸಂಬಂಧ 121 ಪುಟಗಳ ಗೆಜೆಟ್‌ ಅಧಿಸೂಚನೆ ಹೊರಡಿಸಿದೆ.

‘ಈ ಶಾಸಕರನ್ನು ಸಂಸದೀಯ ಕಾರ್ಯದರ್ಶಿಗಳಾಗಿ ನೇಮಿಸುವ ಮೂಲಕ ಎಎಪಿ ಸರ್ಕಾರ ಅತ್ಯಂತ ಮಹತ್ವದ ಸಾಂವಿಧಾನಿಕ ನಿಯಮಗಳನ್ನು ಉಲ್ಲಂಘಿಸಲು ಯತ್ನಿಸಿದೆ. ಈ ಹುದ್ದೆಗಳನ್ನು ಯಾವುದೇ ಕಾನೂನು ಅಥವಾ ಸರ್ಕಾರದ ಆದೇಶ ಅಡಿಯಲ್ಲಿ ಸೃಷ್ಟಿಸಲಾಗಿಲ್ಲ’ ಎಂದು ಅಧಿಸೂಚನೆ ಹೇಳಿದೆ.

‘ಹುದ್ದೆ ಹೊಂದಿರುವವರು ನಿರ್ವಹಿಸಬೇಕಾದ ಪಾತ್ರ ಮತ್ತು ಅವರ ಜವಾಬ್ದಾರಿಗಳನ್ನು ಯಾವುದೇ ರೂಪದಲ್ಲಿ ವಿವರಿಸಿರಲಿಲ್ಲ. ಅಧಿಕಾರಕ್ಕಾಗಿ ಬೇಡಿಕೆ ಇಟ್ಟ ಶಾಸಕರನ್ನು ತೃಪ್ತಿ ಪಡಿಸುವ ಉದ್ದೇಶದಿಂದ ನಿಯಮಗಳ ವಿರುದ್ಧವಾಗಿ ಮತ್ತು ಸಾಂವಿಧಾನಿಕ ಕಟ್ಟಳೆಗಳನ್ನು ಉಲ್ಲಂಘಿಸಿ ನೇಮಕ ಮಾಡಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ’ ಎಂದು ಅದು ಹೇಳಿದೆ.

* ದೇವರು ಒಂದು ಉದ್ದೇಶ ಇಟ್ಟುಕೊಂಡೇ 67 ಸ್ಥಾನಗಳನ್ನು ನೀಡಿದ್ದಾನೆ. ಪ್ರತಿಯೊಂದು ಹಂತದಲ್ಲೂ ಅವನು ಎಎಪಿ ಜೊತೆ ಇದ್ದಾನೆ. ಇಲ್ಲದಿದ್ದರೆ ನಮ್ಮ ಸ್ಥಿತಿ ಏನು? ಏನೇ ಆಗಲಿ ಪ್ರಾಮಾಣಿಕತೆಯ ಹಾದಿಯನ್ನು ಬಿಡಬಾರದು

–ಅರವಿಂದ ಕೇಜ್ರಿವಾಲ್‌, ಎಎಪಿ ಸಂಚಾಲಕ

* ಡಿಸೆಂಬರ್‌ ಕೊನೆಯಲ್ಲಿ ನಡೆದಿದ್ದ ರಾಜ್ಯಸಭಾ ಚುನಾವಣೆಯ ನಂತರವೇ 20 ಶಾಸಕರು ಅನರ್ಹಗೊಳ್ಳುವಂತೆ ನೋಡಿಕೊಳ್ಳಲು ಎಎಪಿಯು ಬಿಜೆಪಿಯೊಂದಿಗೆ ಸೇರಿ ಒಳ ಸಂಚು ರೂಪಿಸಿದೆ

–ಅಜಯ್‌ ಮಾಕೆನ್‌, ದೆಹಲಿ ಕಾಂಗ್ರೆಸ್‌ ಮುಖ್ಯಸ್ಥ

ಅಕ್ರಮ, ತರ್ಕರಹಿತ ಆದೇಶ: ಎಎಪಿ

20 ಶಾಸಕರನ್ನು ಅನರ್ಹಗೊಳಿಸುವ ‘ಅಕ್ರಮ ಮತ್ತು ತರ್ಕ ರಹಿತ’ ಆದೇಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಎಎಪಿ ಹೇಳಿದೆ.

ಪಕ್ಷಪಾತಿಯಾಗಿ ವರ್ತಿಸಿರುವ ಚುನಾವಣಾ ಆಯೋಗವು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕೈಗೊಂಬೆಯಂತೆ ವರ್ತಿಸಿದೆ ಎಂದು ಅದು ವಾಗ್ದಾಳಿ ನಡೆಸಿದೆ.

‘ಚುನಾವಣಾ ಆಯೋಗದ ಪಕ್ಷಪಾತದ ಅಭಿಪ್ರಾಯ ಮತ್ತು 20 ಶಾಸಕರನ್ನು ಅನರ್ಹಗೊಳಿಸುವ ಸಂಬಂಧ ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆ ನೋಡಿದಾಗ ಸಾಂವಿಧಾನಿಕ ಸಂಸ್ಥೆಗಳು ಕೇಂದ್ರ ಸರ್ಕಾರ ಕೈಗೊಂಬೆಯಂತೆ ವರ್ತಿಸುತ್ತಿವೆ ಎಂಬುದು ಸ್ಪಷ್ಟ’ ಎಂದು ಎಎಪಿ ಮುಖ್ಯ ವಕ್ತಾರ, ದೆಹಲಿ ಶಾಸಕ ಸೌರಭ್‌ ಭಾರದ್ವಾಜ್‌ ಹೇಳಿದ್ದಾರೆ.

‘ಮುಖ್ಯ ಚುನಾವಣಾ ಆಯುಕ್ತ ಮತ್ತು ಚುನಾವಣಾ ಆಯುಕ್ತರು ಸ್ವತಂತ್ರ ಮತ್ತು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು ಎಂದು ನಿರೀಕ್ಷಿಸುತ್ತೇವೆ. ತಮ್ಮ ರಾಜಕೀಯ ನಾಯಕರನ್ನು ಸಂತೃಪ್ತಿಗೊಳಿಸಲು ನೀಡಿರುವ ತರ್ಕಬದ್ಧವಲ್ಲದ ಮತ್ತು ತರಾತುರಿಯ ಅಭಿಪ್ರಾಯಗಳು ಕಾನೂನಿನ ಮುಂದೆ ನಿಲ್ಲುವುದಿಲ್ಲ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‌‘ಚುನಾವಣಾ ಆಯೋಗವು ಅವಿಚ್ಛಿನ್ನವಾದ ಸಾಂವಿಧಾನಿಕ ಸಂಸ್ಥೆಯೇ ಹೊರತು, ರಾಜಕೀಯ ಪ್ರಭಾವದಿಂದ ನೇಮಕಗೊಂಡ ನಿವೃತ್ತ ಸದಸ್ಯರ ಕ್ಲಬ್‌ ಅಲ್ಲ’ ಎಂದು ಅವರು ಖಾರವಾಗಿ ಹೇಳಿದ್ದಾರೆ.

‘ಮೋದಿ ಸರ್ಕಾರದ ಇಂತಹ ಬೆದರಿಕೆ ತಂತ್ರಕ್ಕೆ ಎಎಪಿ ಬಗ್ಗುವುದಿಲ್ಲ. ನ್ಯಾಯಾಂಗದ ಮೇಲೆ ನಮಗೆ ಸಂಪೂರ್ಣ ವಿಶ್ವಾಸವಿದೆ. ಪಕ್ಷದ ಕಾನೂನು ಹೋರಾಟವು 20 ಶಾಸಕರಿಗೆ ಮಾತ್ರ ಸಂಬಂಧಿಸಿದ ವಿಷಯವಲ್ಲ. ಇದು ಪ್ರಜಾಪ್ರಭುತ್ವ ರಕ್ಷಿಸಲು ಮತ್ತು ಸಾಂವಿಧಾನಿಕ ಸಂಸ್ಥೆಗಳಿಗೆ ಆಗುತ್ತಿರುವ ಹಾನಿ ತಡೆಯಲು ನಡೆಸುವ ಹೋರಾಟ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT