ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರ ಬಿಡುಗಡೆಗೆ ರಜಪೂತ ಸಮುದಾಯದ ಮಹಿಳೆಯರ ವಿರೋಧ: ದಯಾಮರಣಕ್ಕೆ ಮನವಿಗೆ ನಿರ್ಧಾರ

Last Updated 21 ಜನವರಿ 2018, 19:30 IST
ಅಕ್ಷರ ಗಾತ್ರ

ಜೈಪುರ: ‘ಪದ್ಮಾವತ್‌’ ಚಿತ್ರ ಬಿಡುಗಡೆಗೆ ವಿರೋಧಿಸುತ್ತಿರುವ ರಜಪೂತ ಸಮುದಾಯದ ಮಹಿಳೆಯರ ತಂಡವೊಂದು ದಯಾಮರಣಕ್ಕೆ ಅವಕಾಶ ನೀಡುವಂತೆ ಕೋರಿ ರಾಷ್ಟ್ರಪತಿಗೆ ಪತ್ರ ಬರೆಯಲು ಭಾನುವಾರ ನಿರ್ಧರಿಸಿದೆ.

ರಾಜಸ್ಥಾನದ ಚಿತ್ತೌಡಗಡ ಜಿಲ್ಲೆಯಲ್ಲಿ ರಜಪೂತರ ಸಾಂಪ್ರದಾಯಿಕ ಪೋಷಾಕಿನಲ್ಲಿದ್ದ ಸಾವಿರಾರು ಮಹಿಳೆಯರು ‘ಪದ್ಮಾವತ್‌’ ಬಿಡುಗಡೆ ವಿರುದ್ಧ ಬೃಹತ್‌ ಪ್ರತಿಭಟನಾ ರ‍್ಯಾಲಿ ನಡೆಸಿದರು. ಚಿತ್ತೌಡಗಡ ಕೋಟೆಯಲ್ಲಿರುವ ಪ್ರಸಿದ್ಧ ಪದ್ಮಿನಿ ಮಹಲ್‌ನಿಂದ ಆರಂಭಗೊಂಡ ಮೆರವಣಿಗೆ ಅದೇ ಕೋಟೆಯಲ್ಲಿರುವ ಐತಿಹಾಸಿಕ ಜೌಹರ್‌ ಜ್ಯೋತಿ ಮಂದಿರದಲ್ಲಿ ಕೊನೆಗೊಂಡಿತು.

‘ದಯಾಮರಣಕ್ಕೆ ಅನುಮತಿ ನೀಡುವಂತೆ ರಾಷ್ಟ್ರಪತಿಯವರಿಗೆ ನಾವು ಪತ್ರ ಬರೆಯಲಿದ್ದೇವೆ. ನಾವು ಘನತೆಯಿಂದ ಸಾಯುವುದನ್ನು ಬಯಸುತ್ತೇವೆ. ಯಾರೊಬ್ಬರೂ ನಮ್ಮ ಮಾತು ಕೇಳುತ್ತಿಲ್ಲ. ಈ ಚಿತ್ರ ಬಿಡುಗಡೆಯಾದರೆ ನಮ್ಮ ಭಾವನೆಗಳಿಗೆ ಧಕ್ಕೆಯಾಗಲಿದೆ. ರಾಣಿ ಪದ್ಮಿನಿ ಅವರಂತೆ ನಾವು ಕೂಡ ಪ್ರಾಣ ತ್ಯಾಗ ಮಾಡುತ್ತೇವೆ’ ಎಂದು ಜೌಹರ್‌ ಕ್ಷತ್ರಾಣಿ ಮಂಚ್‌ನ ಕಾರ್ಯದರ್ಶಿ ಸಂಗೀತಾ ಚೌಹಾಣ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾವೆಲ್ಲ ಒಗ್ಗಟ್ಟಾಗಿದ್ದೇವೆ ಮತ್ತು ಇದೇ 25ರಂದು ಚಿತ್ರ ಬಿಡುಗಡೆಯಾದರೆ ಅದರ ವಿರುದ್ಧ ಹೋರಾಡಲು ಸಿದ್ಧ ಎಂಬುದನ್ನು ತೋರಿಸಲು ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ಅವರು ಹೇಳಿದರು. ರಾಜಸ್ಥಾನ ಮತ್ತು ಮಧ್ಯಪ್ರದೇಶದ ಮಹಿಳೆಯರು ಭಾರಿ ಸಂಖ್ಯೆಯಲ್ಲಿ ರ‍್ಯಾಲಿಯಲ್ಲಿ ಭಾಗವಹಿಸಿದ್ದರು.

ಚಿತ್ರ ಬಿಡುಗಡೆಗೆ ನಿರ್ಬಂಧ ಹೇರಿದ್ದ ಮಧ್ಯ ಪ್ರದೇಶ, ಹರಿಯಾಣ, ರಾಜಸ್ಥಾನ ಮತ್ತು ಗುಜರಾತ್‌ ಸರ್ಕಾರದ ಆದೇಶಗಳಿಗೆ ತಡೆಯಾಜ್ಞೆ ನೀಡಿರುವ ಸುಪ್ರೀಂ ಕೋರ್ಟ್‌ ನಿರ್ಧಾರಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕರ್ಣಿ ಸೇನಾ, ಇದೇ 24ರಂದು ಸಾಮೂಹಿಕವಾಗಿ ಆತ್ಮಾಹುತಿ ಮಾಡಿಕೊಳ್ಳುವ ಬೆದರಿಕೆ ಒಡ್ಡಿದೆ.

ಪ್ರಸೂನ್‌ ಜೋಷಿಗೆ ಭದ್ರತೆ: ಕಠಾರಿಯಾ

ಜೈಪುರ ಸಾಹಿತ್ಯ ಉತ್ಸವದಲ್ಲಿ ಭಾಗವಹಿಸಲಿರುವ ಚಿತ್ರ ಸಾಹಿತಿ ಮತ್ತು ಸೆನ್ಸಾರ್‌ ಮಂಡಳಿ (ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ–ಸಿಬಿಎಸ್‌ಸಿ) ಅಧ್ಯಕ್ಷ ಪ್ರಸೂನ್‌ ಜೋಷಿಗೆ ಭದ್ರತೆ ಒದಗಿಸಲಾಗುವುದು ಎಂದು ರಾಜಸ್ಥಾನ ಗೃಹ ಸಚಿವ ಗುಲಾಬ್‌ಚಂದ್‌ ಕಠಾರಿಯಾ ಹೇಳಿದ್ದಾರೆ.

ಪ್ರಸೂನ್‌ ಜೋಷಿ ಅವರು ಜೈಪುರ ಸಾಹಿತ್ಯ ಉತ್ಸವದಲ್ಲಿ ಭಾಗವಹಿಸಲು ಬಿಡುವುದಿಲ್ಲ ಎಂದು ರಾಷ್ಟ್ರೀಯ ರಜಪೂತ ಕರ್ಣಿ ಸೇನಾ ಎರಡು ದಿನಗಳ ಹಿಂದೆ ಬೆದರಿಕೆ ಒಡ್ಡಿತ್ತು.

ಸಾಹಿತ್ಯ ಉತ್ಸವದಲ್ಲಿ ಪ್ರತಿ ವರ್ಷ ಭಾಗವಹಿಸುವ ಜೋಷಿ ಈ ಬಾರಿ ಇದೇ 28ರಂದು ನಡೆಯಲಿರುವ ಚರ್ಚೆಯೊಂದರಲ್ಲಿ ಪಾಲ್ಗೊಳ್ಳಲಿದ್ದಾರೆ.

ಮರುಪರಿಶೀಲನಾ ಅರ್ಜಿ ಹಾಕಲು ನಿರ್ಧಾರ

‘ಪದ್ಮಾವತ್‌’ ಚಿತ್ರ ಬಿಡುಗಡೆಗೆ ಹೇರಿದ್ದ ನಿರ್ಬಂಧಕ್ಕೆ ಸುಪ್ರೀಂ ಕೋರ್ಟ್‌ ನೀಡಿರುವ ತಡೆಯಾಜ್ಞೆ ವಿರುದ್ಧ ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಸಲು ರಾಜಸ್ಥಾನ ಸರ್ಕಾರ ನಿರ್ಧರಿಸಿದೆ.

ಸುಪ್ರೀಂ ಕೋರ್ಟ್‌ ಆದೇಶವನ್ನು ಪರಿಶೀಲಿಸಲು ಸರ್ಕಾರ ರಚಿಸಿದ್ದ ಸಮಿತಿಯು ಈ ತೀರ್ಮಾನ ಕೈಗೊಂಡಿದ್ದು, ಸೋಮವಾರ ಅಥವಾ ಮಂಗಳವಾರ ಸು‍ಪ್ರೀಂ ಕೋರ್ಟ್‌ನಲ್ಲಿ ಮರು ಪರಿಶೀಲನಾ ಅರ್ಜಿ ಸಲ್ಲಿಸಲಿದೆ. ಗೃಹ ಸಚಿವ ಗುಲಾಬ್‌ಚಂದ್‌ ಕಠಾರಿಯಾ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು.

ಪುನರ್‌ಪರಿಶೀಲನಾ ಅರ್ಜಿದಾರರಲ್ಲಿ ಒಬ್ಬರಾಗುವಂತೆ ಕಠಾರಿಯಾ ಕರ್ಣಿ ಸೇನಾಗೆ ಆಹ್ವಾನ ನೀಡಿದ್ದರು. ಆದರೆ, ಇದನ್ನು ಸಂಘಟನೆ ತಿರಸ್ಕರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT