ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಧಿಕೃತ ಫ್ಲೆಕ್ಸ್: ಅನುಮತಿಗೆ ಗಡುವು

Last Updated 22 ಜನವರಿ 2018, 7:04 IST
ಅಕ್ಷರ ಗಾತ್ರ

ರಾಯಚೂರು: ನಗರದಾದ್ಯಂತ ಅನುಮತಿಯಿಲ್ಲದೆ ಫ್ಲೆಕ್ಸ್ ಅಳವಡಿಸುತ್ತಿರುವುದಕ್ಕೆ ಕಡಿವಾಣ ಹಾಕಲು ಮುಂದಾಗಿರುವ ನಗರಸಭೆ ಅಧಿಕಾರಿಗಳು, ಅನುಮತಿ ಪಡೆದುಕೊಳ್ಳಲು ಒಂದು ವಾರದ ಗಡುವು ನೀಡಿದ್ದಾರೆ.

ಗಡುವು ಮುಗಿದ ಬಳಿಕ ನಿಯಮಾನುಸಾರ ಕ್ರಮ ಕೈಗೊಳ್ಳುವುದಾಗಿ ಆಯುಕ್ತರು ಈಗಾಗಲೇ ಸೂಚನೆ ನೀಡಿದ್ದಾರೆ. ಅನುಮತಿಯಿಲ್ಲದೆ ಹಾಕಿರುವ ಫ್ಲೆಕ್ಸ್ ಗಳನ್ನೆಲ್ಲ ನಗರಸಭೆ ಸಿಬ್ಬಂದಿ ಮೂಲಕ ತೆರವುಗೊಳಿಸತ್ತದೆ. ಆನಂತರದಲ್ಲಿ ಫ್ಲೆಕ್ಸ್ ಹಾಕಿರುವುದು ಕಂಡುಬಂದರೆ, ಅದರಲ್ಲಿರುವ ವಿವರ ಆಧರಿಸಿ ನೇರ ನೋಟಿಸ್ ಜಾರಿಗೊಳಿಸಲಾಗುತ್ತದೆ. ಅನುಮತಿ ಪಡೆದುಕೊಳ್ಳುವುದಕ್ಕೆ ನೀಡಬೇಕಾದ ಶುಲ್ಕಕ್ಕಿಂತಲೂ ಹೆಚ್ಚಿನ ಮೊತ್ತವನ್ನು ದಂಡದ ರೂಪದಲ್ಲಿ ಪಾವತಿಸಬೇಕಾಗುತ್ತದೆ. ಈ ಎಲ್ಲ ಕ್ರಮಗಳನ್ನು ಕೈಗೊಳ್ಳುವ ಪೂರ್ವದಲ್ಲಿ ಸೂಚನೆಯನ್ನು ಈಗ ಕೊಡಲಾಗಿದೆ.

ನಗರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸುವ ಭಿತ್ತಿಪತ್ರ, ಜಾಹೀರಾತುಗಳು ಹಾಗೂ ಇತರೆ ಫಲಕಗಳನ್ನು ಅಳವಡಿಸಲು ನಗರಸಭೆ ಅನುಮತಿ ಪಡೆದು ನಿಗದಿತ ಶುಲ್ಕ ಕಟ್ಟಬೇಕು. ಜಾಹೀರಾತುಗಳ ಪ್ರಮಾಣ, ಆಕಾರ ಹಾಗೂ ಅವಧಿಯನ್ನು ಪರಿಗಣಿಸಿ ಶುಲ್ಕವನ್ನು ನಿರ್ಧಾರ ಮಾಡಲಾಗುತ್ತದೆ. ಸದ್ಯ ಫಲಕಗಳನ್ನು ಹಾಕುವ ಹೊರ ಜಾಹೀರಾತುಗಳಿಂದ ಮಾತ್ರ ನಗರಸಭೆಗೆ ಶುಲ್ಕ ಬರುತ್ತಿದೆ. ಅದಕ್ಕೂ ನಿಯಮ ಪಾಲನೆ ಆಗುತ್ತಿಲ್ಲ. ಎಷ್ಟು ಫಲಕಗಳಿವೆ ಎಂಬುದನ್ನು ಮಾತ್ರ ತೋರಿಸಿ ಶುಲ್ಕ ಕಟ್ಟುತ್ತಾರೆ. ಆದರೆ, ಚದರಡಿ ಲೆಕ್ಕದಲ್ಲಿ ಶುಲ್ಕ ವಸೂಲಿ ಮಾಡುವುದಕ್ಕೆ ನಗರಸಭೆ ಅಧಿಕಾರ ಹೊಂದಿದೆ.

ಅನುಮತಿಯಿಲ್ಲದೆ ಫ್ಲೆಕ್ಸ್ ಗಳನ್ನು ಹಾಕುವುದನ್ನು ನಿಯಂತ್ರಿಸಲು ಫ್ಲೆಕ್ಸ್ ಮುದ್ರಣ ಮಾಡುವವರ ಮೇಲೆಯೂ ನಗರಸಭೆಯಿಂದ ಕೆಲವು ಸೂಚನೆ ನೀಡಲಾಗುತ್ತಿದೆ. ಸ್ಥಳೀಯ ಆಡಳಿತ ಸಂಸ್ಥೆಯಿಂದ ಅನುಮತಿ ಪಡೆದವರ ಫ್ಲೆಕ್ಸ್ ಗಳನ್ನು ಮಾತ್ರ ಮುದ್ರಿಸಬೇಕು. ಮನಬಂದಂತೆ ಮುದ್ರಿಸಿದರೆ ಅವರ ವಿರುದ್ಧವೂ ಕಾನೂನು ಕ್ರಮ ಜರುಗಿಸುವುದಕ್ಕೆ ಅವಕಾಶವಿದೆ ಎಂಬುದು ನಗರಸಭೆ ಅಧಿಕಾರಿಗಳ ವಿವರಣೆ.

ನಗರದ ಮುಖ್ಯರಸ್ತೆಯಿಂದ ಹಿಡಿದು ಬಡಾವಣೆಗಳ ರಸ್ತೆಗಳಲ್ಲೂ ಫ್ಲೆಕ್ಸ್ ಗಳ ಹಾವಳಿ ಎದ್ದು ಕಾಣುತ್ತದೆ. ಸಂಘ-ಸಂಸ್ಥೆಗಳು, ಸಾರ್ವಜನಿಕ ಉದ್ದೇಶ, ಜಾತ್ರೆ.. ಇತ್ಯಾದಿ ಸಮಾರಂಭಕ್ಕಾಗಿ ಫ್ಲೆಕ್ಸ್ ಹಾಕಲಾಗಿದೆ. ಅತಿಯಾದರಿಂದ ನಗರದ ಸೌಂದರ್ಯ ಹಾಳಾಗುತ್ತಿದೆ. ವಿದ್ಯುತ್ ಕಂಬಗಳು ಫ್ಲೆಕ್ಸ್ ಹಾಕುವುದಕ್ಕೆ ಪ್ರಶಸ್ತ ತಾಣಗಳಾಗಿ ಮಾರ್ಪಟ್ಟಿವೆ. ಪ್ರಮುಖವಾಗಿ, ರಾಜಕೀಯ ಪಕ್ಷಗಳ ಸಭೆಗಳನ್ನು ಆಯೋಜಿಸಿದಾಗ ಫ್ಲೆಕ್ಸ್ ಹಾವಳಿ ವಿಪರೀತವಾಗಿರುತ್ತದೆ.

‘ಬೇಕಾಬಿಟ್ಟಿ ಜಾಹೀರಾತು ಹಾಕುವುದನ್ನು ತಡೆಯುವ ಅಧಿಕಾರ ನಗರಸಭೆಗೆ ಇದೆ. ಆದರೆ ಆಡಳಿತಾಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕಾಯ್ದೆಗಳನ್ನು ಸರಿಯಾಗಿ ಜಾರಿಯಾಗುವಂತೆ ಮಾಡುತ್ತಿಲ್ಲ. ಇದರಿಂದ ನಗರಸಭೆಗೆ ಆದಾಯ ಕೈ ತಪ್ಪಿ ಹೋಗುತ್ತದೆ. ನಗರದ ಅಭಿವೃದ್ಧಿಗೆ ಅನುದಾನವೂ ಇರುವುದಿಲ್ಲ. ರಸ್ತೆಯುದ್ದಕ್ಕೂ ಬೇಕಾಬಿಟ್ಟಿ ಫಲಕಗಳನ್ನು ಹಾಕಿ ಬಿಟ್ಟಿದ್ದಾರೆ. ವರ್ಷದುದ್ದಕ್ಕೂ ಅಲ್ಲಿಯೆ ಇರುತ್ತವೆ. ಇಂಥವುಗಳನ್ನು ನಗರಸಭೆಯಿಂದ ತೆರವು ಮಾಡಿದರೆ ಅನುಕೂಲ. ಫ್ಲೆಕ್ಸ್ ಹಾವಳಿಯಿಂದ ವಾಹನ ಚಾಲಕರಿಗೆ ಸರಿಯಾಗಿ ರಸ್ತೆ ಕಾಣುವುದಿಲ್ಲ’ ಎನ್ನುತ್ತಾರೆ ಬೈಕ್ ಮೆಕ್ಯಾನಿಕ್ ಮಲ್ಲಿಕಾರ್ಜುನ ಸ್ವಾಮಿ.

ವ್ಯಾಪಾರಕ್ಕೆ ತೊಂದರೆ

ಫ್ಲೆಕ್ಸ್ ಹಾಕುವವರು ರಾತ್ರೋರಾತ್ರಿ ವ್ಯಾಪಾರಿ ಮಳಿಗೆ ಗಳ ಎದುರು ಹಾಕಿ ಬಿಡುತ್ತಾರೆ. ಇದ ರಿಂದ ಮಳಿಗೆದಾರರು ವ್ಯಾಪಾರ ಮಾಡುವುದಕ್ಕೆ ತೊಂದರೆ ಆಗುತ್ತದೆ. ಫ್ಲೆಕ್ಸ್ ತೆಗೆದುಹಾಕಿದರೆ, ಅನಗತ್ಯವಾಗಿ ಕಿರಿಕಿರಿ ಆಗುತ್ತದೆ ಎನ್ನುವ ಅಳಲು ವ್ಯಾಪಾರಿಗಳದ್ದು.

ಮುಖಂಡರ ಜನ್ಮದಿನ ಹಾಗೂ ರಾಜಕೀಯ ಪಕ್ಷಗಳ ಸಮಾರಂಭಗಳಿದ್ದಾಗ ತಿನ್‍ಕಂದಿಲ್, ಶೆಟ್ಟಿಬೌಡಿ, ಮಹಾವೀರ ವೃತ್ತ ಸೇರಿದಂತೆ ಪ್ರಮುಖ ಜನಸಂದಣಿ ಪ್ರದೇಶದಲ್ಲಿ ಫ್ಲೆಕ್ಸ್ ರಾರಾಜಿಸುತ್ತವೆ.

* * 

ನಗರದಾದ್ಯಂತ ಅನಧಿಕೃತವಾಗಿ ಫ್ಲೆಕ್ಸ್ ಅಳವಡಿಸಲಾಗಿದ್ದು, ಒಂದು ವಾರದೊಳಗಾಗಿ ನಗರಸಭೆಯಿಂದ ಅನುಮತಿ ಪಡೆದುಕೊಳ್ಳದಿದ್ದರೆ ಮುಂದಿನ ಕ್ರಮ ಜರುಗಿಸಲಾಗುವುದು.
ರಮೇಶ ನಾಯಕ ನಗರಸಭೆ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT