ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದ್ದಾರಿಯಲ್ಲೇ ವಾಹನಗಳ ನಿಲುಗಡೆ!

Last Updated 22 ಜನವರಿ 2018, 7:06 IST
ಅಕ್ಷರ ಗಾತ್ರ

ರಾಮನಗರ: ಇಲ್ಲಿನ ರೇಷ್ಮೆಗೂಡು ಮಾರುಕಟ್ಟೆ ಮುಂಭಾಗ ಮುಖ್ಯ ರಸ್ತೆಯಲ್ಲಿಯೇ ವಾಹನಗಳನ್ನು ಮನಬಂದಂತೆ ನಿಲ್ಲಿಸಲಾಗುತ್ತಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಿದೆ. ನಗರದ ವ್ಯಾಪ್ತಿಯಲ್ಲಿ ಬೆಂಗಳೂರು–ಮೈಸೂರು ಹೆದ್ದಾರಿಗೆ ಹೊಂದಿಕೊಂಡಂತೆ ಸರ್ವೀಸ್‌ ರಸ್ತೆ ನಿರ್ಮಾಣ ಕಾರ್ಯವು ನಡೆದಿದೆ. ಅದಕ್ಕಾಗಿ ಮಾರುಕಟ್ಟೆ ಮುಂಭಾಗದ ಜಾಗ ಅಗೆದು ಜಲ್ಲಿ ಕಲ್ಲು ಸುರಿಯಲಾಗಿದೆ. ಈ ಮೊದಲು ಈ ಸ್ಥಳವನ್ನು ಮಾರು ಕಟ್ಟೆಯ ವಾಹನ ನಿಲುಗಡೆಗಾಗಿ ಬಳಸಿ ಕೊಳ್ಳಲಾಗುತ್ತಿತ್ತು. ಇದೀಗ ಆ ಜಾಗವು ರಸ್ತೆಗೆ ಮೀಸಲಾಗಿರುವ ಕಾರಣ ವಾಹನ ನಿಲುಗಡೆಗೆ ಸ್ಥಳಾವಕಾಶ ಇಲ್ಲದಂತೆ ಆಗಿದೆ. ಆದಾಗ್ಯೂ ಜನರು ಹದಗೆಟ್ಟ ರಸ್ತೆಯಲ್ಲಿಯೇ ವಾಹನ ನಿಲ್ಲಿಸಿ ಹೋಗುತ್ತಿದ್ದಾರೆ.

ಏಷ್ಯಾದಲ್ಲಿಯೇ ಅತಿ ದೊಡ್ಡ ರೇಷ್ಮೆಗೂಡು ಮಾರುಕಟ್ಟೆ ಎಂಬ ಕೀರ್ತಿ ಇಲ್ಲಿನ ಮಾರುಕಟ್ಟೆಯದ್ದು. ನಿತ್ಯ ಸರಾಸರಿ ₹1.5 ಕೋಟಿಯಿಂದ ₹2 ಕೋಟಿ ಮೌಲ್ಯದ ಗೂಡು ಮಾರಾಟ ಇಲ್ಲಿ ನಡೆಯುತ್ತಿದೆ. ರಾಮ ನಗರ ಜಿಲ್ಲೆಯ ಜೊತೆಗೆ ರಾಜ್ಯದ ಮೂಲೆ ಮೂಲೆಯಿಂದಲೂ ಜನರು ಇಲ್ಲಿಗೆ ಗೂಡು ಹೊತ್ತು ಬರುತ್ತಾರೆ. ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣದಿಂದಲೂ ಇಲ್ಲಿಗೆ ರೈತರು ಬರುತ್ತಾರೆ.

ಮಾರುಕಟ್ಟೆಯಲ್ಲಿ ಸುಮಾರು ಎರಡು ಸಾವಿರದಷ್ಟು ನೋಂದಾಯಿತ ರೀಲರ್‌ಗಳು ಇದ್ದಾರೆ. ಇವರಲ್ಲಿ ನಿತ್ಯ 800ರಿಂದ 1 ಸಾವಿರ ಮಂದಿ ಮಾರುಕಟ್ಟೆಗೆ ಭೇಟಿ ಕೊಡುತ್ತಾರೆ. ಬಹುತೇಕರು ದ್ವಿಚಕ್ರವಾಹನಗಳಲ್ಲಿ ಬಂದು ಹೋಗುತ್ತಾರೆ. ಇವರ ಜತೆಗೆ ಸ್ಥಳೀಯ ರೈತರು, ಕಾರ್ಮಿಕರು, ರೇಷ್ಮೆ ಇಲಾಖೆಯ ಸಿಬ್ಬಂದಿ ಸಹಿತ ನೂರಾರು ಮಂದಿ ಮಾರುಕಟ್ಟೆಗೆ ದ್ವಿಚಕ್ರ ವಾಹನಗಳಲ್ಲಿ ಬರುತ್ತಾರೆ. ಹೀಗೆ ಬಂದು ಹೋಗುವವರ ವಾಹನಗಳ ನಿಲುಗಡೆಗೆ ಸ್ಥಳಾವಕಾಶ ಇಲ್ಲದಂತೆ ಆಗಿದೆ.

ಮಾರುಕಟ್ಟೆಯ ಕಟ್ಟಡವು ಹಳೆಯ ದಾಗಿದ್ದು, ಕಂಪೌಂಡಿನ ಒಳಗೆ ಎಲ್ಲಿಯೂ ಸ್ಥಳಾವಕಾಶ ಇಲ್ಲ. ಇರುವ ಜಾಗವು ರೇಷ್ಮೆಗೂಡು ವಹಿವಾಟಿಗೆ ಸಾಲದಾಗಿದೆ. ಹೀಗಾಗಿ ರಸ್ತೆಯಲ್ಲಿಯೇ ವಾಹನಗಳನ್ನು ನಿಲ್ಲಿಸುವುದು ಅನಿವಾರ್ಯವಾಗಿದೆ ಎಂದು ಮಾರುಕಟ್ಟೆಯ ಸಿಬ್ಬಂದಿ
ಹೇಳುತ್ತಾರೆ.

ಪರ್ಯಾಯ ವ್ಯವಸ್ಥೆ ಮಾಡಿ: ‘ಹೊಸ ಮಾರುಕಟ್ಟೆ ನಿರ್ಮಾಣ ಸದ್ಯಕ್ಕೆ ಆಗದ ಮಾತು. ರೈತರು, ರೀಲರ್‌ಗಳಿಗೆ ತೊಂದರೆ ಆಗದಂತೆ ಮಾರುಕಟ್ಟೆಯ ಅಧಿಕಾರಿಗಳು ಪರ್ಯಾಯ ವ್ಯವಸ್ಥೆ ಮಾಡಬೇಕು’ ಎನ್ನುತ್ತಾರೆ ರಾಮನಗರದ ರೀಲರ್ ಅಲ್ತಾಫ್ ಇಮ್ತಿಯಾಜ್.

‘ಈಗಿರುವ ಮಾರುಕಟ್ಟೆಯ ಪಕ್ಕದಲ್ಲಿಯೇ ಹೊಸ ಮಾರುಕಟ್ಟೆಗೆ ಸರ್ಕಾರ ಉದ್ದೇಶಿಸಿತ್ತು. ಆದರೆ ಅದು ಸಾಧ್ಯವಾಗಿಲ್ಲ. ಲಭ್ಯವಿರುವ ಖಾಲಿ ಜಾಗವನ್ನು ಕನಿಷ್ಠ ವಾಹನ ಗಳ ನಿಲುಗಡೆಗೆ ಅವಕಾಶ ಮಾಡಿ ಕೊಡ ಬೇಕು’ ಎನ್ನುತ್ತಾರೆ ಅವರು.

‘ಬೆಳಿಗ್ಗೆ ಹೊರಗೆ ಬೈಕ್ ನಿಲ್ಲಿಸಿ ಒಳಗೆ ಹೋದರೆ ವಾಪಸ್‌ ಬರುವಷ್ಟರಲ್ಲಿ ಹಿಂದಕ್ಕೆ ನಾಲ್ಕಾರು ವಾಹನ ನಿಂತಿರುತ್ತವೆ. ಎಲ್ಲವನ್ನೂ ಸರಿಸಿ ನಮ್ಮ ಬೈಕ್‌ ಹಿಂದೆ ತೆಗೆಯುವುದೇ ಕಸರತ್ತಾಗುತ್ತದೆ. ಎಲ್ಲರಿಗೂ ಅನುಕೂಲ ಆಗುವಂತೆ ಪಾರ್ಕಿಂಗ್‌ ವ್ಯವಸ್ಥೆ ಜಾರಿಗೆ ತರಬೇಕು’ ಎನ್ನುತ್ತಾರೆ ಜಾಲಮಂಗಲ ಗ್ರಾಮದ ರೈತ ಶಂಕರ್.

ಮಾರುಕಟ್ಟೆ ಸ್ಥಳಾಂತರ ವಿಳಂಬ

ರಾಮನಗರದಲ್ಲಿ ಅತ್ಯಾಧುನಿಕ ರೇಷ್ಮೆಗೂಡು ಮಾರುಕಟ್ಟೆ ಸ್ಥಾಪಿಸಬೇಕೆಂಬ ಬೇಡಿಕೆ ಆರಂಭಗೊಂಡು ದಶಕವೇ ಕಳೆದಿದೆ. ಈಗ ಇರುವ ಸ್ಥಳವು ಕೆಲವೇ ಎಕರೆಯಷ್ಟು ವಿಸ್ತೀರ್ಣದಲ್ಲಿದೆ. ಈಚಿನ ದಿನಗಳಲ್ಲಿ ಗೂಡು ವಹಿವಾಟು ಹೆಚ್ಚಿನ ಪ್ರಮಾಣದಲ್ಲಿ ನಡೆದಿದ್ದು, ರೈತರು ಗೂಡು ಇಡಲು ಸ್ಥಳಾವಕಾಶ ಇಲ್ಲದ ಪರಿಸ್ಥಿತಿ ಇದೆ.

ಹೊಸ ಮಾರುಕಟ್ಟೆ ನಿರ್ಮಾಣಕ್ಕೆಂದು ಜಾನಪದ ಲೋಕದ ಸಮೀಪ ಅರಣ್ಯ ಇಲಾಖೆಗೆ ಸೇರಿದ ಹತ್ತು ಎಕರೆಯನ್ನು ಜಿಲ್ಲಾಡಳಿತ ಗುರುತಿಸಿ ಕೊಟ್ಟಿತ್ತು. ಆದರೆ ಅರಣ್ಯ ಇಲಾಖೆಯ ಆಕ್ಷೇಪದ ಹಿನ್ನೆಲೆಯಲ್ಲಿ ಅದು ಸಾಧ್ಯವಾಗಿಲ್ಲ. ಇನ್ನೂ ನಾಲ್ಕಾರು ಕಡೆಗಳಲ್ಲಿ ಹುಡುಕಿದರೂ ಸ್ಥಳ ನಿಗದಿಯಾಗುತ್ತಿಲ್ಲ.

* * 

ಮಾರುಕಟ್ಟೆ ಮುಂಭಾಗ ವಾಹನ ನಿಲುಗಡೆಗೆ ಸ್ಥಳಾವಕಾಶ ಇಲ್ಲದಂತೆ ಆಗಿದೆ. ಹೆದ್ದಾರಿಯಲ್ಲಿಯೇ ವಾಹನ ನಿಲುಗಡೆಯಿಂದ ಅಪಾಯ ಖಂಡಿತ
ಶಿವಕುಮಾರ್ ಕೂಟಗಲ್‌ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT