ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಂತ್ರಗಳ ಬಂದ ಮೇಲೆ ಸುಗ್ಗಿಯ ಸಂಭ್ರಮ ಕಣ್ಮರೆ

Last Updated 22 ಜನವರಿ 2018, 7:16 IST
ಅಕ್ಷರ ಗಾತ್ರ

ತಾಳಿಕೋಟೆ: ರಾಶಿ ಮಾಡುವ ಯಂತ್ರಗಳು ಬಂದ ಮೇಲೆ ರೈತರ ಸುಗ್ಗಿಯ ಸಂಭ್ರಮ ಕಣ್ಮರೆಯಾಗುತ್ತಿದೆ ಎಂದು ಕರ್ನಾಟಕ ಸರ್ಕಾರದ ನವದೆಹಲಿ ವಿಶೇಷ ಪ್ರತಿನಿಧಿ ಸಿ.ಎಸ್.ನಾಡಗೌಡ(ಅಪ್ಪಾಜಿ) ವಿಷಾಧ ವ್ಯಕ್ತಪಡಿಸಿದರು.

ಪಟ್ಟಣದ ಎಸ್.ಎಸ್.ವಿದ್ಯಾಸಂಸ್ಥೆಯ ಸಂಗಮೇಶ್ವರ ಸಭಾ ಭವನದಲ್ಲಿ ಶನಿವಾರ ಸಂಕ್ರಮಣ ಸಡಗರದ ನಿಮಿತ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ ವಲಯ ಘಟಕಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ `ಸುಗ್ಗಿ-–ಹುಗ್ಗಿ’ ಜಾನಪದ ಕಲಾಮೇಳ ಉದ್ಘಾಟಿಸಿ ಮಾತನಾಡಿದ ಅವರು, ಯಂತ್ರದ ಬರಾಟೆಯಿಂದ ಕಣ ಮಾಡುತ್ತಿಲ್ಲ, ಹಂತಿ ಕಟ್ಟುತ್ತಿಲ್ಲ, ಇನ್ನೆಲ್ಲಿಯ ಹಂತಿ ಹಾಡು, ಸುಗ್ಗಿಯ ಸಂಭ್ರಮ ಎಂದರು.

ಆಧುನಿಕತೆಗೆ ಮುಖ ಮಾಡಿ ನಮ್ಮ ಸಂಸ್ಕೃತಿಗೆ ಬೆನ್ನು ಮಾಡುತ್ತಿರುವ ಯುವಪಡೆಯಿಂದ ಜಗತ್ತಿಗೆ ಮಾದರಿಯಾದ ಭಾರತೀಯ ಸಂಸ್ಕೃತಿಯನ್ನು ಸಾರುವ ಜನಪದ ಕಲೆಗಳು ನಶಿಸುತ್ತಿವೆ. ಜನಪದ ಕಲೆಗೆ, ಕಲಾಕಾರರಿಗೆ ಪ್ರೋತ್ಸಾಹ ನೀಡದಿದ್ದರೆ ಕ್ರಮೇಣ ಇರುವಷ್ಟು ಕೂಡ ನಶಿಸಿ, ಹಿಂದೆ ಹೀಗಿತ್ತು ಎಂದು ಚಿತ್ರಪಟಗಳಲ್ಲಿ ಓದುವ ಕಾಲ ಸನ್ನಿಹಿತವಾದರೂ ಅಶ್ಚರಿ ಪಡಬೇಕಿಲ್ಲ. ನಮ್ಮ ಸಂಸ್ಕೃತಿ ಉಳಿಸಲೆಂದೆ ಸುಗ್ಗಿ ಹುಗ್ಗಿ ಆಯೋಜಿಸಿದೆ ಎಂದು ಹೇಳಿದರು.

ಹಿರಿಯರು ಆಚರಿಸುತ್ತ ಬಂದಿರುವ ಹಬ್ಬ, ಜಾತ್ರೆಗಳು ಒಂದು ಸಮಾಜಕ್ಕೆ ಸೀಮಿತವಾದವುಗಳಲ್ಲ. ಎಲ್ಲ ಜನ ಒಟ್ಟಾಗಿ ಮಾಡಿದರೆ ಮಾತ್ರ ಅದು ಹಬ್ಬವಾಗುತ್ತದೆ. ಅದು ನಮ್ಮ ಐಕ್ಯತೆ, ಒಗ್ಗಟ್ಟನ್ನು ಹೆಚ್ಚಿಸುವಂಥದ್ದು ಅದೇ ನಮ್ಮ ಸಂಸ್ಕೃತಿಯ ತಳಹದಿಯಾಗಿದೆ ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಚನ್ನಮ್ಮ ತಂಗಡಗಿ, ಪುರಸಭೆ ಅಧ್ಯಕ್ಷೆ ಅಕ್ಕಮಹಾದೇವಿ ಕಟ್ಟಿಮನಿ, ಜಿಲ್ಲಾ ಪಂಚಾಯ್ತಿ ಸದಸ್ಯೆ ಜ್ಯೋತಿ ಅಸ್ಕಿ, ತಾಲ್ಲೂಕು ಪಂಚಾಯ್ತಿ ಸದಸ್ಯರಾದ ರಾಜು ಬಿರಾದಾರ, ಸೋಮನಗೌಡ ಬಿರಾದಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಅಶೋಕ ಚಲವಾದಿ, ಸಹಾಯಕ ನಿರ್ದೇಶಕ ಮಹೇಶ ಪೋತದಾರ, ಕಸಾಪ ತಾಲ್ಲೂಕಾ ಘಟಕದ ಅಧ್ಯಕ್ಷ ಎಂ.ಬಿ.ನಾವದಗಿ, ಎಸ್‌.ಪಿ.ಸರಶೆಟ್ಟಿ, ವಿ.ಎ.ಹಜೇರಿ, ಶಾಂತಾಬಾಯಿ ನೂಲೀಕರ, ಶಕೀಲಅಹಮ್ಮದ ಖಾಜಿ, ಎಚ್‌.ಎಸ್‌.ಪಾಟೀಲ, ಪ್ರೊ.ಬಿ.ಆರ್‌.ಪೊಲೀಸ್‌ಪಾಟೀಲ ಉಪಸ್ಥಿತರಿದ್ದರು.

ಶ್ರೀಮಂತ ಅವಟಿ ತಂಡದಿಂದ ನಾಡಗೀತೆ, ರೈತಗೀತೆಗಳು ಜರುಗಿದವು. ಶ್ರೀಕಾಂತ ಪತ್ತಾರ ಸ್ವಾಗತಿಸಿದರು. ಅಶೋಕ ಹಂಚಲಿ ನಿರ್ವಹಿಸಿದರು. ಕಸಾಪ ವಲಯಾಧ್ಯಕ್ಷೆ ಸುಮಂಗಲಾ ಕೋಳೂರ ವಂದಿಸಿದರು.

ಸುಗ್ಗಿ–ಹುಗ್ಗಿ ಸಂಭ್ರಮ

ಇದಕ್ಕೂ ಮೊದಲು ಪಟ್ಟಣದ ಎಸ್.ಕೆ.ಪದವಿ ಕಾಲೇಜಿನಿಂದ ಅಲಂಕೃತ ಎತ್ತಿನ ಬಂಡಿಗಳಲ್ಲಿ ಜಾನಪದ ಕಲಾ ತಂಡಗಳು ಹಾಗೂ ಕಲಾವಿದರ ಮೆರವಣಿಗೆ ನಡೆಯಿತು. ಸಾಂಪ್ರದಾಯಿಕ ಇಲಕಲ್ಲಿನ ಸೀರೆಯಲ್ಲಿ ಕನ್ನಡತಿಯರು, ಬಿಳಿ ನೆಹರು ಶರ್ಟ್‌, ದೋತರ, ತಲೆಗೆ ಹಳದಿ ರುಮಾಲು, ಹಳದಿ ಕೆಂಪು ಬಣ್ಣದ ಶಾಲುಗಳನ್ನು ಹೊತ್ತ ಹಿರಿ–ಕಿರಿಯ ಪುರುಷ ಪಡೆ ಮೆರವಣಿಗೆಯ ಸೊಬಗು ಹೆಚ್ಚಿಸಿದರು. ನಂತರ ನಡೆದ ಜಾನಪದ ಕಲಾ ತಂಡಗಳ ಪ್ರದರ್ಶನ ಮೈನವಿರೇಳಿಸುವಂತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT