ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಮಾಧಾನ ಹುಟ್ಟುಹಾಕಿದ ಮುಖ್ಯಮಂತ್ರಿ ಮಾತು

Last Updated 22 ಜನವರಿ 2018, 9:33 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಬಾಗೇಪಲ್ಲಿಯಲ್ಲಿ ಭಾನುವಾರ ಶಾಸಕ ಎಸ್‌.ಎನ್‌.ಸುಬ್ಬಾರೆಡ್ಡಿ ಚಾರಿಟಬಲ್ ಟ್ರಸ್ಟ್‌ ವತಿಯಿಂದ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ‘ಸುಬ್ಬಾರೆಡ್ಡಿ ಅವರು 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ’ ಎಂದು ಘೋಷಣೆ ಮಾಡಿದರು. ಇದಕ್ಕೆ ಕಾಂಗ್ರೆಸ್‌ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ಎನ್‌.ಸಂಪಂಗಿ ಮತ್ತವರ ಬೆಂಬಲಿಗರಿಂದ ಅಸಮಾಧಾನ ವ್ಯಕ್ತವಾಗಿದೆ.

ಸಿದ್ದರಾಮಯ್ಯ ಅವರು ಹೀಗೆ ಘೋಷಣೆ ಮಾಡಿದ ತಕ್ಷಣವೇ ವೇದಿಕೆ ಮೇಲೆ ಕುಳಿತಿದ್ದ ಸಂಸದರಾದ ವೀರಪ್ಪ ಮೊಯಿಲಿ ಮತ್ತು ಕೆ.ಎಚ್.ಮುನಿಯಪ್ಪ ಅವರತ್ತ ತಿರುಗಿ, ‘ನಾನು ಮೊಯಿಲಿ ಮತ್ತು ಮುನಿಯಪ್ಪ ಅವರ ಅನುಮತಿ ಪಡೆದೇ ಈ ಮಾತು ಹೇಳುತ್ತಿದ್ದೇನೆ’ ಎಂದು ಹೇಳುತ್ತಿದ್ದಂತೆ ಉಭಯ ಸಂಸದರು ತಮ್ಮ ಕೈ ಎತ್ತುವ ಮೂಲಕ ಇದಕ್ಕೆ ತಮ್ಮ ಸಹಮತ ಇದೆ ಎಂದು ‘ಒಪ್ಪಿಗೆ’ ಸೂಚಿಸಿದರು.

ಡಿಸೆಂಬರ್ 29 ರಂದು ಬಾಗೇಪಲ್ಲಿ ನಡೆದ ಸರ್ಕಾರದ ಸಾಧನಾ ಸಮಾವೇಶದ ವೇದಿಕೆಯಲ್ಲಿ ಕೂಡ ಸಿದ್ದರಾಮಯ್ಯ ಅವರು, ‘ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ. ಸುಬ್ಬಾರೆಡ್ಡಿ ಮತ್ತೊಮ್ಮೆ ಶಾಸಕರಾಗುವುದು ಅಷ್ಟೇ ಸತ್ಯ. ಅವರಿಗೆ ನೀವೆಲ್ಲ ಆರ್ಶೀವಾದ ಮಾಡಬೇಕು’ ಎಂದು ಹೇಳಿದ್ದರು.

ಒಂದೇ ತಿಂಗಳ ಅಂತರದಲ್ಲಿ ಎರಡು ಬಹಿರಂಗ ವೇದಿಕೆಗಳ ಮೇಲೆ ಮುಖ್ಯಮಂತ್ರಿ ಅವರು ಹೇಳಿದ ಈ ಮಾತಿಗೆ ಸುಬ್ಬಾರೆಡ್ಡಿ ಬೆಂಬಲಿಗರು ಭಾರಿ ಕರತಾಡನದ ಮೂಲಕ ಹರ್ಷ ವ್ಯಕ್ತಪಡಿಸಿದರು. ಆದರೆ ಸಿದ್ದರಾಮಯ್ಯ ಅವರ ಈ ಮಾತುಗಳು ಇನ್ನೊಂದೆಡೆ ಸಂಪಂಗಿ ಅವರನ್ನು ಕೆರಳುವಂತೆ ಮಾಡಿವೆ.

‘ಈ ಹಿಂದೆ ಎಲ್ಲಿ ಕೂಡ ಕಾಂಗ್ರೆಸ್‌ ವೇದಿಕೆಗಳಲ್ಲಿ ಮುಂಬರುವ ಚುನಾವಣೆಯ ಅಭ್ಯರ್ಥಿಗಳ ಘೋಷಣೆ ಮಾಡುತ್ತಿರಲಿಲ್ಲ. ಸಿದ್ದರಾಮಯ್ಯ ಅವರ ಈ ಹೊಸ ಪದ್ಧತಿಯಿಂದಾಗಿ ಬಹಳಷ್ಟು ಜನರು ಒಳಗೊಳಗೆ ನೋವು ತಿನ್ನುತ್ತಿದ್ದಾರೆ. ಅನೇಕ ಕಾಂಗ್ರೆಸ್‌ ನಾಯಕರು ತಮ್ಮೊಳಗಿನ ಆಸೆ ಹೊರಹಾಕದೆ ಅದುಮಿಟ್ಟುಕೊಂಡಿದ್ದಾರೆ. ಎಐಸಿಸಿ ಮತ್ತು ಹೈಕಮಾಂಡ್‌ ಅಭ್ಯರ್ಥಿಗಳ ತೀರ್ಮಾನ ಮಾಡುವಾಗ ಅವೆಲ್ಲ ಹೊರಗಡೆ ಬರುತ್ತವೆ’ ಎಂದು ಸಂಪಂಗಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಿದ್ದರಾಮಯ್ಯ ಅವರು ಒಬ್ಬರೇ ನಿರ್ಧಾರ ಮಾಡಿ ಟಿಕೆಟ್‌ ಕೊಟ್ಟು ಬಿಡುತ್ತೇನೆ ಎಂದು ಬಿಟ್ಟರೆ ಸಾಕೆ? ಹಾಗಾದರೆ ಹೈಕಮಾಂಡ್ ಆಗಿರುವ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರು ಅಭ್ಯರ್ಥಿಗಳ ಆಯ್ಕೆ ಬಗ್ಗೆ ಯೋಚನೆಯೇ ಮಾಡುವುದಿಲ್ಲವೆ? ಮುಖ್ಯಮಂತ್ರಿ ಅವರು ಆ ರೀತಿ ಹೇಳುವುದಕ್ಕೆ ಹಣವೋ, ಇನ್ನೊಂದೊ ಪ್ರಭಾವ ಬೀರಿದೆಯೋ ಯಾರಿಗೆ ಗೊತ್ತು? ಮುಖ್ಯಮಂತ್ರಿ ಅವರು ಪದೇ ಪದೇ ಯಾಕೆ ಈ ರೀತಿ ಹೇಳುತ್ತಾರೋ ನನಗೆ ಅರ್ಥವಾಗುತ್ತಿಲ್ಲ’ ಎಂದು ಅಸಮಾಧಾನ ಹೊರಹಾಕಿದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು, ನಂತರ ಕಾಂಗ್ರೆಸ್‌ ಸೇರಿದ ಶಾಸಕ ಸುಬ್ಬಾರೆಡ್ಡಿ ಮತ್ತು ಎನ್‌.ಸಂಪಂಗಿ ಅವರ ನಡುವೆ ಈ ಬಾರಿ ಕಾಂಗ್ರೆಸ್‌ ಟಿಕೆಟ್‌ಗಾಗಿ ತೆರೆಮರೆಯಲ್ಲಿ ಭಾರಿ ಪೈಪೋಟಿ ನಡೆದಿದೆ.

ಈ ಕುರಿತು ಸುಬ್ಬಾರೆಡ್ಡಿ ಅವರ ಪ್ರತಿಕ್ರಿಯೆ ಪಡೆಯಲು ಸಂಪರ್ಕಿಸಿದರೆ ಅವರ ಮೊಬೈಲ್‌ ಸ್ವಿಚ್ಡ್‌ಆಫ್‌ ಆಗಿತ್ತು. ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ ಅವರನ್ನು ಸಂಪರ್ಕಿಸಿದರೆ ಕರೆ ಸ್ವೀಕರಿಸಲಿಲ್ಲ.

ಕಾಂಗ್ರೆಸ್‌ನಲ್ಲಿ ಯಡವಟ್ಟು ದೊಡ್ಡ ವಿಚಾರವಲ್ಲ

‘ಕಾಂಗ್ರೆಸ್‌ನಲ್ಲಿ ಯಡವಟ್ಟು ಆಗುವುದು ದೊಡ್ಡ ವಿಚಾರವೇನಲ್ಲ. ಕಾಂಗ್ರೆಸ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್‌ ಸೇರಿ ಘಟನಾನುಘಟಿ ನಾಯಕರಿದ್ದಾರೆ. ಆದರೆ ಸಿದ್ದರಾಮಯ್ಯ ಅವರ ಅದೃಷ್ಟ ಚೆನ್ನಾಗಿತ್ತು ಮುಖ್ಯಮಂತ್ರಿಯಾದರು. ಖರ್ಗೆ ಅವರಂತಹ ಮುಖ್ಯಮಂತ್ರಿಯಾಗುವ ನಾಯಕರು ಬಹಳಷ್ಟು ಇದ್ದಾರೆ. ಅವರನ್ನೇ ನೆಚ್ಚಿಕೊಂಡವರೂ ತುಂಬಾ ಜನರಿದ್ದಾರೆ’ ಎಂದು ಸಂಪಂಗಿ ಹೇಳಿದರು.

* * 

ಸಿದ್ದರಾಮಯ್ಯ ಅವರ ಘೋಷಣೆ ಸುಳ್ಳಾಗುತ್ತದೆ. ನಾನು ಕಣದಲ್ಲಿ ಇರುವುದಂತೂ ನೂರಕ್ಕೆ ನೂರು ಸತ್ಯ. ಹೈಕಮಾಂಡ್ ಟಿಕೆಟ್‌ ನೀಡುತ್ತದೆ ಎನ್ನುವ ಭರವಸೆ ಇದೆ.
ಎನ್‌.ಸಂಪಂಗಿ, ಕಾಂಗ್ರೆಸ್ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT