ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಶಾ, ಸಂತೋಷಿಗೆ ಚಿನ್ನದ ಸಂಭ್ರಮ

ರಾಷ್ಟ್ರೀಯ ವೇಟ್‌ಲಿಫ್ಟಿಂಗ್‌: ಕರ್ನಾಟಕಕ್ಕೆ ಚಿನ್ನ ತಂದುಕೊಟ್ಟ ಮಂಜುನಾಥ
Last Updated 22 ಜನವರಿ 2018, 19:30 IST
ಅಕ್ಷರ ಗಾತ್ರ

ಮಂಗಳೂರು: ಕೆ. ಶ್ರೀಶಾ  ಸೋಮವಾರ ನಡೆದ ರಾಷ್ಟ್ರಮಟ್ಟದ 33ನೇ ಮಹಿಳೆಯರ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನ 58 ಕೆ.ಜಿ. ವಿಭಾಗದಲ್ಲಿ ಚಿನ್ನದ ಪದಕ ಗೆದ್ದರು.

ಕರ್ನಾಟಕ ರಾಜ್ಯ ವೇಟ್‌ಲಿಫ್ಟಿಂಗ್‌ ಸಂಸ್ಥೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ವೇಟ್‌ಲಿಫ್ಟಿಂಗ್‌ ಸಂಸ್ಥೆ ಮತ್ತು ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನ ಆಶ್ರಯದಲ್ಲಿ ನಡೆಯುತ್ತಿರುವ ಸ್ಪರ್ಧೆಯಲ್ಲಿ ರೈಲ್ವೆ ತಂಡದ ಕೆ.ಶ್ರೀಶಾ 195 ಕೆ.ಜಿ ಭಾರ ಎತ್ತಿದರು.

ಅವರು ಸ್ನ್ಯಾಚ್‌ ವಿಭಾಗದಲ್ಲಿ 84 ಕೆ.ಜಿ ಹಾಗೂ ಕ್ಲೀನ್‌ ಮತ್ತು ಜರ್ಕ್‌ ವಿಭಾಗದಲ್ಲಿ 111 ಕೆ.ಜಿ ಭಾರ ಎತ್ತಿ ಚಿನ್ನದ ಪದಕ ಗೆದ್ದರು.

ಇದೇ ವಿಭಾಗದಲ್ಲಿ ಪಂಜಾಬ್‌ನ ಹರ್ಷ ದೀಪ್‌ ಕೌರ್‌ 192 ಕೆ.ಜಿ ಭಾರ ಎತ್ತಿ ಬೆಳ್ಳಿ ಹಾಗೂ ಸ್ನ್ಯಾಚ್‌ ವಿಭಾಗದಲ್ಲಿ 85 ಕೆ.ಜಿ ಭಾರ ಎತ್ತಿ ಒಂದು ಚಿನ್ನಕ್ಕೆ ಮುತ್ತಿಕ್ಕಿದರು. ಹರಿಯಾಣದ ಹರ್ಜಿತ್‌ ಕೌರ್‌ 188 ಕೆ.ಜಿ. ಭಾರ ಎತ್ತಿ ಕಂಚಿನ ಪದಕ ಪಡೆದರು. ಪುರುಷರ ವಿಭಾಗದ 69 ಕೆ.ಜಿ ವಿಭಾಗವು ತೀವ್ರ ಪೈಪೋಟಿಗೆ ವೇದಿಕೆ ಆಗಿತ್ತು.

ಸೇನಾ ಸ್ಪೋರ್ಟ್ಸ್‌ ಕ್ಲಬ್‌ ಬೋರ್ಡ್‌ನ ದೀಪಕ್‌ ತಾಥೇರ್‌ 288 ಕೆ.ಜಿ ಭಾರ ಎತ್ತಿದರು. ಸ್ನ್ಯಾಚ್ ವಿಭಾಗದಲ್ಲಿ 132 ಕೆ.ಜಿ, ಕ್ಲೀನ್‌ ಮತ್ತು ಜರ್ಕ್‌ ವಿಭಾಗದಲ್ಲಿ 156 ಕೆ.ಜಿ ಭಾರ ಎತ್ತಿ ಒಂದು ಚಿನ್ನದ ಪದಕ ಗಳಿಸಿದರು. ಪಶ್ಚಿಮ ಬಂಗಾಳದ ಆಚಿಂತ ಶಿಯುಲಿ 286 ಕೆ.ಜಿ ಭಾರ ಎತ್ತಿ ಬೆಳ್ಳಿ, ಜತೆಗೆ ಸ್ನ್ಯಾಚ್‌ ವಿಭಾಗದಲ್ಲಿ 133 ಕೆ.ಜಿ ಭಾರ ಎತ್ತಿ ಚಿನ್ನ ಮುಡಿಗೇರಿಸಿಕೊಂಡರು.

ರಾಜ್ಯದ ಮಂಜುನಾಥ್‌ಗೆ ಚಿನ್ನ
ಕರ್ನಾಟಕ ತಂಡದ ಮಂಜುನಾಥ 284 ಕೆ.ಜಿ ಭಾರ ಎತ್ತಿ ಕಂಚು ದಾಖಲಿಸುವ ಜತೆಗೆ ಕ್ಲೀನ್‌ ಮತ್ತು ಜರ್ಕ್‌ ವಿಭಾಗದಲ್ಲಿ 160 ಕೆ.ಜಿ ಭಾರ ಎತ್ತಿ ಚಿನ್ನಕ್ಕೆ ಮುತ್ತಿಕ್ಕಿದರು. ಆರಂಭಿಕ ದಿನದಿಂದ ಸೋಲಿನ ನಿರಾಶೆಯಲ್ಲಿ ಇದ್ದ ಕರ್ನಾಟಕ ತಂಡಕ್ಕೆ ಇದು ಸ್ವಲ್ಪ ಮಟ್ಟಿಗೆ ಖುಷಿ ತಂದು ಕೊಟ್ಟಿದೆ.

53 ಕೆ.ಜಿ ಮಹಿಳಾ ವಿಭಾಗದಲ್ಲಿ ರೈಲ್ವೆ ತಂಡದ ಎಂ. ಸಂತೋಷಿ 185 ಕೆ.ಜಿ ಭಾರ ಎತ್ತಿ ಚಿನ್ನ ಗಳಿಸಿದರು. ಇದೇ ವಿಭಾಗದಲ್ಲಿ ರೈಲ್ವೆ ತಂಡದ ಕೆ.ಎಚ್‌. ಸಂಜಿತಾ ಛಾನು 183 ಕೆ.ಜಿ ಭಾರ ಎತ್ತಿ ಬೆಳ್ಳಿ, ಮಣಿಪುರದ ಎಸ್‌. ಬಿಂದಿಯಾರಾಣಿ ದೇವಿ 178 ಕೆ.ಜಿ ಭಾರ ಎತ್ತಿ ಕಂಚು ಗಳಿಸಿದರು.

62 ಕೆ.ಜಿ ಪುರುಷರ ವಿಭಾಗದಲ್ಲಿ ರೈಲ್ವೆ ತಂಡದ ಸುಶಾಂತ ಸಾಹು 259 ಕೆ.ಜಿ ಭಾರ ಎತ್ತಿ ಚಿನ್ನದ ಸಾಧನೆ ಮಾಡಿದರು.  ಕ್ಲೀನ್‌ ಮತ್ತು  ಜರ್ಕ್‌ ವಿಭಾಗದಲ್ಲಿ 144 ಕೆ.ಜಿ ಭಾರ ಎತ್ತಿದ್ದಾರೆ.

ರೈಲ್ವೆ ವಿಭಾಗದ ಎಂ ರಾಜಾ 258 ಕೆ.ಜಿ ಭಾರ ಎತ್ತಿ ಬೆಳ್ಳಿ, ಉತ್ತರಾಖಂಡದ ಗುಲಾಂ ನವೀ 257 ಕೆ.ಜಿ ಭಾರ ಎತ್ತಿ ಕಂಚು ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT