ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಯ: ಬಾಂಬೆ ಹೈಕೋರ್ಟ್‌ ಅರ್ಜಿ ‘ಸುಪ್ರೀಂ’ಗೆ

Last Updated 22 ಜನವರಿ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಸಿಬಿಐ ನ್ಯಾಯಾಧೀಶ ಬಿ.ಎಚ್‌. ಲೋಯಾ ಶಂಕಾಸ್ಪದ ಸಾವಿನ ತನಿಖೆಯನ್ನು ಸುಪ್ರಿಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ದೀಪಕ್‌ ಮಿಶ್ರಾ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಹೊಸ ನ್ಯಾಯಪೀಠ ಸೋಮವಾರ ಕೈಗೆತ್ತಿಕೊಂಡಿದೆ.

ಲೋಯ ಸಾವಿಗೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್‌ ಮತ್ತು ನಾಗಪುರ ಸಂಚಾರಿ ಪೀಠದಲ್ಲಿರುವ ಎರಡು ಪ್ರತ್ಯೇಕ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ತನಗೆ ವರ್ಗಾಯಿಸುವಂತೆ ಸೂಚಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಪೂರಕ ದಾಖಲೆಗಳಿದ್ದರೆ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಹೇಳಿರುವ ಪೀಠ, ಫೆಬ್ರುವರಿ 2ರಂದು ಅರ್ಜಿಗಳ ವಿಚಾರಣೆ ಆರಂಭಿಸುವುದಾಗಿ ಹೇಳಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸದಾಗಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ದಾಖಲಿಸಿಕೊಳ್ಳದಂತೆ ಸುಪ್ರೀಂ ಕೋರ್ಟ್‌ ದೇಶದ ಎಲ್ಲ ಹೈಕೋರ್ಟ್‌ಗಳಿಗೆ ಸೂಚನೆ ನೀಡಿದೆ.

ಇದೊಂದು ಗಂಭೀರ ಪ್ರಕರಣ: ಲೋಯ ಸಾವಿನ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ಈ ಎರಡು ಅರ್ಜಿಗಳಲ್ಲಿ ಎತ್ತಿರುವ ಪ್ರಶ್ನೆಗಳು ಅತ್ಯಂತ ಗಂಭೀರವಾಗಿದ್ದುಪ್ರತಿಯೊಂದು ದಾಖಲೆಗಳನ್ನು ಪರಿಶೀಲಿಸುವುದಾಗಿ ನ್ಯಾಯಮೂರ್ತಿಗಳು ಹೇಳಿದ್ದಾರೆ.

ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಸಿಡಿಮಿಡಿ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರನ್ನು ರಕ್ಷಿಸಲು ಪ್ರಹಸನ ನಡೆಯುತ್ತಿದೆ ಎಂದು ಅರ್ಜಿದಾರರ ಪರವಾಗಿ ವಾದ ಮಂಡಿಸುತ್ತಿರುವ ಹಿರಿಯ ವಕೀಲ ದುಷ್ಯಂತ್‌ ದವೆ ನೇರವಾಗಿ ಆರೋಪ ಮಾಡಿದರು. ಇದು ಮುಖ್ಯ ಸಿಜೆಐ ಮಿಶ್ರಾ ಸಿಡಿಮಿಡಿಗೆ ಕಾರಣವಾಯಿತು.

ಪ್ರಕರಣಕ್ಕೆ ಸಂಬಂಧ ಸುಪ್ರೀಂ ತೀರ್ಪಿನ ಕುರಿತು ಹಿರಿಯ ವಕೀಲೆ ಇಂದಿರಾ ಜೈಸಿಂಗ್‌ ಹೇಳಿದ ಮಾತು ಕೂಡ ಮಿಶ್ರಾ ಅವರನ್ನು ಕೆರಳಿಸಿತು. ನಂತರ ಇಂದಿರಾ ಜೈಸಿಂಗ್‌ ತಮ್ಮ ಹೇಳಿಕೆ ಹಿಂದಕ್ಕೆ ಪಡೆದು, ಕ್ಷಮೆ ಯಾಚಿಸಿದರು.

ಬಾಂಬೆ ವಕೀಲರ ಸಂಘ ಜ.8ರಂದು ಬಾಂಬೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಆ ಅರ್ಜಿಯ ಪರ ದವೆ ವಾದ ಮಂಡಿಸುತ್ತಿದ್ದಾರೆ.

ಮಹಾರಾಷ್ಟ್ರ ಸರ್ಕಾರದ ಪರ ಮತ್ತೊಬ್ಬ ಹಿರಿಯ ವಕೀಲ ಹರೀಶ್‌ ಸಾಳ್ವೆ ವಾದ ಮಂಡಿಸುತ್ತಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಮಹಾರಾಷ್ಟ್ರ ಸರ್ಕಾರ ಈಗಾಗಲೇ ನ್ಯಾಯಾಲಯಕ್ಕೆ ಸಲ್ಲಿಸಿರುವುದಾಗಿ ಹೇಳುತ್ತಿದೆ. ಆದರೆ, ಈ ದಾಖಲೆಗಳು ಅಪೂರ್ಣವಾಗಿವೆ ಎಂದು ದುಷ್ಯಂತ್‌ ದವೆ ನ್ಯಾಯಾಲಯದ ಗಮನ ಸೆಳೆದರು.

ಸೋಹ್ರಾಬುದ್ದೀನ್‌ ನಕಲಿ ಎನ್‌ಕೌಂಟರ್‌ ಪ್ರಕರಣದಲ್ಲಿ ಆರೋಪಿಯಾಗಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಪರ ಹರೀಶ್‌ ಸಾಳ್ವೆ ವಾದ ಮಂಡಿಸಿದ್ದರು. ಈಗ ಮಹಾರಾಷ್ಟ್ರ ಸರ್ಕಾರದ ಪರ ಅವರು ವಾದ ಮಂಡಿಸುತ್ತಿರುವುದು ಎಷ್ಟು ಸರಿ ಎಂದು ದವೆ ಆಕ್ಷೇಪ ಎತ್ತಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT