ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೂರು ಕೊಡಲು ಬಂದವರನ್ನೇ ಜೈಲಿಗಟ್ಟುವ ಸರ್ಕಾರ’

Last Updated 23 ಜನವರಿ 2018, 6:41 IST
ಅಕ್ಷರ ಗಾತ್ರ

ಎಚ್.ಡಿ.ಕೋಟೆ: ‘ದೂರು ಕೊಡಲು ಬಂದವರನ್ನು ಜೈಲಿಗಟ್ಟುವ ಕಾನೂನುಬಾಹಿರ ಕೃತ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಾಡುತ್ತಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಿಸಿದರು.

ಪಟ್ಟಣದ ಅಂಬೇಡ್ಕರ್ ಭವನದ ಮುಂಭಾಗದಲ್ಲಿ ಸೋಮವಾರ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯ ವೇದಿಕೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

‘ರಾಜ್ಯದಲ್ಲಿ ಜನಸಾಮಾನ್ಯರು ನೆಮ್ಮದಿಯಿಂದ ಜೀವನಮಾಡಲಾಗುತ್ತಿಲ್ಲ, ಅವರ ಸ್ವಕ್ಷೇತ್ರದಲ್ಲಿಯೇ ಅಮಾನವೀಯ ಘಟನೆಗಳು ನಡೆಯುತ್ತಿವೆ. ಪೊಲೀಸರ ನಿಯಂತ್ರಣವನ್ನು ನಿವೃತ್ತ ಪೊಲೀಸ್‌ ಅಧಿಕಾರಿ ಕೆಂಪಯ್ಯ ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸಿದ್ದರಾಮಯ್ಯ ಅವರ ವಿರುದ್ಧ 67 ದೂರುಗಳಿವೆ, ಎಲ್ಲ ಪ್ರಕರಣಗಳಲ್ಲಿಯೂ ಅವರು ಜೈಲು ಸೇರಬೇಕಾದವರು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸಹ ಹಲವು ಪ್ರಕರಣಗಲ್ಲಿ ಜಾಮೀನಿನ ಮೇಲೆ ಹೊರಗಿದ್ದಾರೆ, ನನ್ನನ್ನು ಪಿತೂರಿ ನಡೆಸಿ ಜೈಲಿಗೆ ಕಳುಹಿಸಿದವರು ನನ್ನನ್ನು ಜೈಲಿಗೆ ಹೋದವನು ಎಂದು ದುರಹಂಕಾರದಿಂದ ಮಾತನಾಡುತ್ತಿದ್ದಾರೆ ಎಂದರು.

‘ಜಾತಿ ಜಾತಿಗಳ ನಡುವೆ, ಧರ್ಮ ಧರ್ಮಗಳ ನಡುವೆ ವಿಷಬೀಜ ಬಿತ್ತಿ ಜನರನ್ನು ದಿಕ್ಕಾಪಾಲು ಮಾಡಿ, ಕೊಲೆ ಸುಲಿಗೆಯಂತಹ ಕೃತ್ಯಗಳಲ್ಲಿ ಭಾಗಿಯಾಗಿರುವ ಸಿದ್ದರಾಮಯ್ಯ ಅಭಿವೃದ್ಧಿ ಕೆಲಸಗಳಲ್ಲಿ ಕಮಿಷನ್ ಏಜೆಂಟ್‌ನಂತೆ ವರ್ತಿಸುತ್ತಿದ್ದಾರೆ.

₹100 ಕೋಟಿ ವೆಚ್ಚವಾಗುವ ಕಾಮಗಾರಿಗಳಿಗೆ ₹125 ಕೋಟಿ ಹಣವನ್ನು ಬಿಡುಗಡೆ ಮಾಡಿ ಅದರಲ್ಲಿ ಕಮಿಷನ್ ಹೊಡೆಯುತ್ತಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ಅಗೌರವ ತರುವಂತಹ, ಆ ಸ್ಥಾನದ ಗಾಂಭೀರ್ಯವನ್ನು ಕಳೆದಿದ್ದಾರೆ’ ಎಂದರು.

404 ಕ್ಷೇತ್ರಗಳಿರುವ ಉತ್ತರ ಪ್ರದೇಶದಲ್ಲಿ ಬಿಜೆಪಿ 312 ಕ್ಷೇತ್ರಗಳಲ್ಲಿ ಜಯಗಳಿಸಿ ಯೋಗಿ ಆದಿತ್ಯನಾಥ ಮುಖ್ಯಮಂತ್ರಿಯಾಗಿದ್ದಾರೆ. ದೇಶದ 19 ರಾಜ್ಯಗಳಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ. ದೇಶದ ಪ್ರಧಾನ ಮಂತ್ರಿ ಹಿಂದುಳಿದ ವರ್ಗದವರು, ರಾಷ್ಟ್ರಪತಿಗಳು ಕೋವಿ ಜನಾಂಗಕ್ಕೆ ಸೇರಿದವರು, ಉಪ ರಾಷ್ಟ್ರಪತಿ ಹಿಂದುಳಿದ ವರ್ಗದವರು ಆಡಳಿತ ನಡೆಸುತ್ತಿದ್ದಾರೆ ಎಂದರು.

ಕಾಂಗ್ರೆಸ್ ಪಕ್ಷದವರು ಅಂಬೇಡ್ಕರ್ ಶವಸಂಸ್ಕಾರಕ್ಕೆ ರಾಜ್ ಘಾಟ್‌ನಲ್ಲಿ ಅವಕಾಶ ನೀಡಲಿಲ್ಲ. ಅವರ ಅಂತ್ಯ ಸಂಸ್ಕಾರವನ್ನು ಮುಂಬೈನ ಸಮುದ್ರ ತೀರದಲ್ಲಿ ಮಾಡಲಾಯಿತು, ಲಂಡನ್‌ನಲ್ಲಿ ಅವರು ವ್ಯಾಸಂಗ ಮಾಡಿದ ಮನೆ, ಮಹಾರಾಷ್ಟ್ರದ ವಾಸದ ಮನೆ, ಮೃತ ಸ್ಥಳ ಸೇರಿದಂತೆ ಅವರು ಇದ್ದ ಸ್ಥಳಗಳನ್ನು ಪ್ರವಾಸಿ ಕೇಂದ್ರಗಳನ್ನಾಗಿ ಮಾಡಿ ಅವರ ವಿಚಾರಧಾರೆಗಳನ್ನು ವಿಶ್ವದಾದ್ಯಂತ ಶಾಶ್ವತವಾಗಿ ಉಳಿಯುವಂತೆ ಮಾಡುತ್ತಿರುವವರು ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿಗಳು ಎಂದರು.

ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಶಿವಣ್ಣ, ಮುಖಂಡರಾದ ಸುರೇಶ್ ಕುಮಾರ್, ತೇಜಸ್ವಿನಿ ರಮೇಶ್, ಕಾಗಲವಾಡಿ ಎಂ.ಶಿವಣ್ಣ, ಬಿ.ಜೆ.ಪುಟ್ಟಸ್ವಾಮಿ, ಸಿದ್ದರಾಜು, ಸ್ಲಂ ಮೋರ್ಚಾ ಅಧ್ಯಕ್ಷ ರಘುಕೌಟಿಲ್ಯ, ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಕೆ.ಗಿರೀಶ್, ಎಂ.ಜಿ.ರಾಮಕೃಷ್ಣಪ್ಪ, ಯು.ಎಸ್.ಶೇಖರ್,ಹೇಮಂತ್ ಕುಮಾರು, ಕೃಷ್ಣಸ್ವಾಮಿ, ಸಿದ್ದನಾಯಕ, ವಿಜಯ್ ಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯ ವೆಂಕಟಸ್ವಾಮಿ, ಪರೀಕ್ಷಿತರಾಜೇ ಅರಸ್, ಅಪ್ಪಣ್ಣ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷೆ ಮಂಜುಳಾ ಚಂದ್ರೇಗೌಡ, ಪುರಸಭೆ ಸದಸ್ಯ ವಿವೇಕ, ಯೋಗೀಶ್, ಶಿವರಾಜಪ್ಪ ಇದ್ದರು.

ಟಿಕೆಟ್‌ ಆಕಾಂಕ್ಷಿಯ ಹಣ ಕಳವು

ಬಿಜೆಪಿ ಟಿಕೆಟ್ ಅಕಾಂಕ್ಷಿಯಾದ ಕೃಷ್ಣಸ್ವಾಮಿಯ ಪ್ಯಾಂಟ್ ಜೇಬನ್ನು ಬೇಬುಕಳ್ಳರು ಕತ್ತರಿಸಿದ ಘಟನೆ ನಡೆಯಿತು. ಹಣ ಎಷ್ಟು ಕಳುವಾಯಿತು ಎಂಬುದರ ಬಗ್ಗೆ ಮಾಹಿತಿ ಸಿಗಲಿಲ್ಲ.

ಕಪ್ಪು ಬಾವುಟ ಪ್ರದರ್ಶನ

ಎಚ್.ಡಿ.ಕೋಟೆ : ಪಟ್ಟಣಕ್ಕೆ ಬಿಜೆಪಿ ಪರಿವರ್ತನಾ ಯಾತ್ರೆಗೆ ಬಂದ ಯಡಿಯೂರಪ್ಪ ಅವರಿಗೆ ತಾಲ್ಲೂಕು ದಲಿತ ಸಂಘರ್ಷ ಸಮಿತಿ ಸದಸ್ಯರು ಕಪ್ಪು ಬಾವುಟ ಪ್ರದರ್ಶನ ಮಾಡಿ ಪ್ರತಿಭಟನೆ ನಡೆಸಲು ಮುಂದಾದರು.

ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ತಮ್ಮ ಭಾಷಣದಲ್ಲಿ ದಲಿತರ ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮತ್ತು ಸಂವಿಧಾನವನ್ನು ಬದಲಾಯಿಸಲೇ ನಾವು ಬಂದಿರುವುದು ಎಂದು ಸಂವಿಧಾನ ವಿರೋಧಿ ಹೇಳಿಕೆಯನ್ನು ನೀಡುತ್ತಿದ್ದಾರೆ ಎಂಬುದನ್ನು ಪ್ರಸ್ತಾಪಿಸಿ ಬಾವುಟ ಪ್ರದರ್ಶನ ಮಾಡಿದರು. ಸ್ಥಳದಲ್ಲಿದ್ದ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ಕಾರ್ಯಕ್ರಮದ ನಂತರ ಬಿಡುಗಡೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT