ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಂಪಿಎಂ, ವಿಐಎಸ್ಎಲ್ ಉಳಿಸಲು ಬದ್ಧ’

Last Updated 23 ಜನವರಿ 2018, 6:54 IST
ಅಕ್ಷರ ಗಾತ್ರ

ಭದ್ರಾವತಿ: ‘ಜೆಡಿಎಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ಇಲ್ಲಿನ ಎಂಪಿಎಂ ಹಾಗೂ ವಿಐಎಸ್ಎಲ್ ಕಾರ್ಖಾನೆಗಳ ಉಳಿವಿಗೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದರು. ಸೋಮವಾರ  ರೋಟರಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ರಾಜ್ಯ ಸರ್ಕಾರ ₹ 1.30 ಕೋಟಿ ಲಕ್ಷದಷ್ಟು ಸಾಲ ಮಾಡಿದ್ದರೂ ಸರ್ಕಾರಿ ಸ್ವಾಮ್ಯದ ಎಂಪಿಎಂ ಕಾರ್ಖಾನೆಗೆ ಒಂದಿಷ್ಟು ಬಂಡವಾಳ ಹೂಡದೆ ಅದನ್ನು ಖಾಸಗೀಕರಣ ಮಾಡಲು ಹೊರಟಿರುವುದು ದುರದೃಷ್ಟಕರ ಬೆಳವಣಿಗೆ ಎಂದರು.

ರಾಜ್ಯದ ಜನ  ಶಾಸಕ ಎಂ.ಜೆ. ಅಪ್ಪಾಜಿ ಅವರನ್ನೂ ಸೇರಿದಂತೆ ಈ ಬಾರಿ ಜೆಡಿಎಸ್ ಪಕ್ಷವನ್ನು ಬೆಂಬಲಿಸುವ ಮೂಲಕ ರಾಜ್ಯದ ಭವಿಷ್ಯದ ಬದಲಾವಣೆಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಒಂದೆಡೆ ರೈತರು, ಮತ್ತೊಂದೆಡೆ ಕಾರ್ಮಿಕರು ಬೀದಿ ಪಾಲಾಗುತ್ತಿದ್ದು, ಇನ್ನೊಂದೆಡೆ ಎರಡು ರಾಷ್ಟ್ರೀಯ ಪಕ್ಷಗಳು ಮೌನವಹಿಸಿ ತಮ್ಮ ಯಾತ್ರೆ
ಗಳನ್ನು ನಡೆಸುವ ಮೂಲಕ ಜನರಿಗೆ ಮೋಸ ಮಾಡುತ್ತಿವೆ ಎಂದರು.

ಹುಸಿ ಭರವಸೆ: ಕರ್ನಾಟಕ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿ ಮಾಡುತ್ತೇನೆ ಎಂದು ಹೇಳುವ ಬಿ.ಎಸ್. ಯಡಿಯೂರಪ್ಪ ಅವರು ಹಿಂದೆ ಐದು ವರ್ಷಗಳಲ್ಲಿ ಅಧಿಕಾರಿ ಸಿಕ್ಕಾಗ ಏನು ಮಾಡಿದರು ಎಂಬುದನ್ನು ಬಹಿರಂಗ ಮಾಡಬೇಕು. ರಾಜ್ಯದಾದ್ಯಂತ ಪರಿವರ್ತನಾ ಯಾತ್ರೆ ಹೊರಟಿರುವ ಯಡಿಯೂರಪ್ಪ ರಾಜ್ಯದ ಎರಡು ಪ್ರತಿಷ್ಠಿತವಾದ ಇಲ್ಲಿನ ಕಾರ್ಖಾನೆಗಳನ್ನು ಉಳಿಸಿಕೊಳ್ಳಲು ಪ್ರಯತ್ನ ಮಾಡದ ಕಾರಣ ಇಂದು ಈ ದುಸ್ಥಿತಿ ಸೃಷ್ಟಿಯಾಗಿದೆ ಎಂದರು.

ಆಮಿಷದ ಯಾತ್ರೆ: ಬಿಜೆಪಿ, ಕಾಂಗ್ರೆಸ್ ಮುಖಂಡರು ನಡೆಸಿರುವ ಯಾತ್ರೆಗಳಿಗೆ ಜನರನ್ನು ಕರೆತರಲು ಆಮಿಷ ಒಡ್ಡಲಾಗಿದೆ ಎಂದು ನೇರವಾಗಿ ಆರೋಪಿಸಿದ ಕುಮಾರಸ್ವಾಮಿ ಬೆಳ್ಳಿ ಚೊಂಬು, ಹಣ ನೀಡಿ ಜನರನ್ನು ಕರೆತರುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು.

ಬೇರೆ ಪಕ್ಷದ ಶಾಸಕರು ಇರುವೆಡೆ ಹಣ ಬಿಡುಗಡೆ ಮಾಡದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರೋಧ ಪಕ್ಷಗಳು ರಾಜ್ಯದಲ್ಲಿ ಇವೆ ಎಂಬುದನ್ನು ಮರೆತು ಜನರಿಗೆ ವಂಚಿಸುತ್ತಿದ್ದಾರೆ ಎಂದು ಟೀಕಿಸಿದರು.

ಈ ಕ್ಷೇತ್ರದಲ್ಲಿನ ಅಭಿವೃದ್ಧಿಗೆ ಶಾಸಕ ಅಪ್ಪಾಜಿ ಸಾಕಷ್ಟು ಶ್ರಮಿಸಿ ಹಣ ಬಿಡುಗಡೆ ಮಾಡಿಸಿಕೊಂಡು ಬಂದಿದ್ದರು, ಅವುಗಳಿಗೆ ಚಾಲನೆ ನೀಡುವ ಮನಸ್ಸನ್ನು ರಾಜ್ಯ ಸರ್ಕಾರ ಮಾಡದೆ ಇರುವುದು ಖಂಡನೀಯ ಎಂದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಎಂ.ಜೆ. ಅಪ್ಪಾಜಿ, ಮಧುಬಂಗಾರಪ್ಪ, ಶಾರದ ಪೂರ‍್ಯಾನಾಯ್ಕ, ಜೆಡಿಎಸ್ ಜಿಲ್ಲಾಧ್ಯಕ್ಷ ನಿರಂಜನ್, ಶ್ರೀಕಾಂತ್, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯರಾದ ಎಸ್. ಕುಮಾರ್, ಜೆ.ಪಿ. ಯೋಗೀಶ್, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಯಶೋದಮ್ಮ, ನಗರಸಭಾ ಅಧ್ಯಕ್ಷೆ ಹಾಲಮ್ಮ, ಕುಮರಿ ಚಂದ್ರಣ್ಣ, ಸುಧಾಮಣಿ, ವಿಶಾಲಾಕ್ಷಿ, ಮಹಾದೇವಿ, ಎಂ.ರಾಜು, ಸುಕನ್ಯಾ ಉಪಸ್ಥಿತರಿದ್ದರು. ಇದಕ್ಕೂ ಮೊದಲು ಭದ್ರಾವತಿ ಜೆಡಿಎಸ್ ಕಾರ್ಯಕರ್ತರು ಎಚ್.ಡಿ. ಕುಮಾರಸ್ವಾಮಿ ಅವರನ್ನು ಬೈಕ್ ರ‍್ಯಾಲಿ ಮೂಲಕ ಅದ್ದೂರಿಯಾಗಿ ಸ್ವಾಗತಿಸಿದರು.

‘ಜೈಲಿಗೆ ಕಳುಹಿಸುವ ಮಾತು ಸರಿಯಲ್ಲ’

 ‘ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಹೊಸದಾಗಿ ನಿರ್ಮಿಸಿರುವ ಶಿವಮೊಗ್ಗ ಜೈಲಿಗೆ ಮೊದಲ ಕೈದಿಯಾಗಿ ಸಿದ್ದರಾಮಯ್ಯ ಅವರನ್ನು ಕಳುಹಿಸುತ್ತೇವೆ’ ಎಂದು ಹೇಳುವುದು ಸರಿಯಲ್ಲ’ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ರಾಜ್ಯದ ಸಮಸ್ಯೆ ಕುರಿತು ಮಾತನಾಡಬೇಕಾದ ಸಚಿವರು ಜೈಲಿಗೆ ಹಾಕಿಸುವ ಹೇಳಿಕೆ ನೀಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ಜವಾಬ್ದಾರಿ ಸ್ಥಾನದಲ್ಲಿ ಇರುವ ಸಚಿವರು ಇಂತಹ ಹೇಳಿಕೆ ನೀಡುವ ಮೊದಲು ಗಂಭೀರವಾಗಿ ಯೋಚಿಸಬೇಕು ಎಂದು ಹೇಳಿದ ಅವರು ‘ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಯಾವಾಗಲೂ ಅವರಪ್ಪನಾಣೆ ಗೆಲ್ಲುವುದಿಲ್ಲ ಎಂದು ಬೇರೊಬ್ಬರ ಅಪ್ಪನ ಬಗ್ಗೆ ಮಾತನಾಡುತ್ತಾರೆ ಅವರ ಅಪ್ಪನ ಮೇಲೆ ಅಣೆ ಹಾಕುವುದಿಲ್ಲ’ ಇದು ಸಹ ಬೇಜವಾಬ್ದಾರಿತನ ಹೇಳಿಕೆಗಳು ಎಂದು ಟೀಕಿಸಿದರು.

ಸಮ್ಮಿಶ್ರ ಸರ್ಕಾರ ಇಲ್ಲ: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ನಿರ್ಮಾಣವಾಗುವ ಸಾಧ್ಯತೆ ನಮ್ಮ ಮುಂದೆ ಕಾಣುತ್ತಿಲ್ಲ, ಜೆಡಿಎಸ್ ಸ್ಪಷ್ಟ ಬಹುಮತ ಪಡೆಯುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ವಿಐಎಸ್ಎಲ್ ಹಾಗೂ ಎಂಪಿಎಂ ಕಾರ್ಖಾನೆ ವಿಚಾರದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಬಹಳಷ್ಟು ಕೆಲಸ ಮಾಡಿದ್ದಾರೆ. ಈಗಲೂ ನಮ್ಮ ಶಾಸಕ ಎಂ.ಜೆ. ಅಪ್ಪಾಜಿ ಸಾಕಷ್ಟು ಬಾರಿ ಈ ವಿಚಾರಕ್ಕೆ ಸ್ಪಂದಿಸಿ ಕೆಲಸ ಮಾಡಿದ್ದಾರೆ. ಆದರೆ ಅಧಿಕಾರದಲ್ಲಿ ಇಲ್ಲದ ವ್ಯಕ್ತಿಯನ್ನು ಇಟ್ಟುಕೊಂಡು ರಾಜ್ಯಸರ್ಕಾರ ಗಣಿ ವಿಚಾರದಲ್ಲಿ ರಾಜಕಾರಣ ನಡೆಸಿದ್ದು ಖಂಡನೀಯ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT