ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1.36 ಲಕ್ಷ ಮಕ್ಕಳಿಗೆ ಪೋಲಿಯೊ ಲಸಿಕೆ ಗುರಿ

Last Updated 23 ಜನವರಿ 2018, 7:25 IST
ಅಕ್ಷರ ಗಾತ್ರ

ಮಂಡ್ಯ: 2018ರ ಮೊದಲ ಹಂತದ ಪಲ್ಸ್‌ ಪೋಲಿಯೊ ಅಭಿಯಾನ ಜ.28ರಂದು ಆರಂಭವಾಗಲಿದ್ದು, ಜಿಲ್ಲೆಯಾದ್ಯಂತ 1.36 ಲಕ್ಷ ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ.

ಮೊದಲನೇ ಹಂತದ ಲಸಿಕಾ ಕಾರ್ಯಕ್ರಮ ಜ.28 ರಿಂದ 31ರ ವರೆಗೆ ನಡೆಯಲಿದೆ. ಈಚೆಗೆ ಪಲ್ಸ್‌ ಪೋಲಿಯೊ ಲಸಿಕಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಎನ್‌.ಮಂಜುಶ್ರೀ ಶೇ 100ರಷ್ಟು ಗುರಿ ಸಾಧನೆ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ. ತಹಶೀಲ್ದಾರ್‌ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು, ತಾಲ್ಲೂಕು ಪಂಚಾಯಿತಿ ಇಒ, ಬಿಇಒ, ಸಿಡಿಪಿಒ ಮತ್ತಿತರ ಅಧಿಕಾರಿಗಳು ಅಭಿಯಾನ ಯಶಸ್ವಿಗೆ ಪೂರ್ವ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ಇಷ್ಟೇ ಅಲ್ಲದೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ನಗರ ಸಭೆ. ಪಟ್ಟಣ ಪಂಚಾಯಿತಿ, ಪುರಸಭೆ, ಗ್ರಾಮ ಪಂಚಾಯಿತಿ, ವಿದ್ಯುತ್ ನಿಗಮ, ಸಾರಿಗೆ ಇಲಾಖೆ, ಮಾಹಿತಿ ಮತ್ತು ಸಂಪರ್ಕ ಇಲಾಖೆ ಹಾಗೂ ಇತರೆ ಸಂಘ ಸಂಸ್ಥೆಗಳ ಸಂಪೂರ್ಣ ಸಹಕಾರದಲ್ಲಿ ಪಲ್ಸ್‌ ಪೋಲಿಯೊ ಅಭಿಯಾನ ನಡೆಯಲಿದೆ. ರೈಲು ನಿಲ್ದಾಣ, ಬಸ್‌ ನಿಲ್ದಾಣ, ಸರ್ಕಾರಿ ಕಚೇರಿ ಸೇರಿ ಜನಸಂದಣಿ ಇರುವ ಪ್ರದೇಶದಲ್ಲಿ ಅಭಿಯಾನದ ಸ್ವಯಂಸೇವಕರು ಬೂತ್‌ ಸ್ಥಾಪನೆ ಮಾಡಿ ಲಸಿಕೆ ಹಾಕಲಿದ್ದಾರೆ.

‘ಈ ವರ್ಷ ಎರಡು ಹಂತಗಳಲ್ಲಿ ಪಲ್ಸ್ ಪೋಲಿಯೊ ಅಭಿಯಾನ ನಡೆಯಲಿದೆ. ಜ.28ರಿಂದ ನಾಲ್ಕು ದಿನಗಳ ಕಾಲ ಮೊದಲ ಹಂತ, ಮಾ.11ರಿಂದ ನಾಲ್ಕು ದಿನಗಳ ಕಾಲ ಎರಡನೇ ಹಂತದ ಅಭಿಯಾನ ನಡೆಯಲಿದೆ. ಜಿಲ್ಲೆಯಾದ್ಯಂತ ಐದು ವರ್ಷದೊಳಗಿನ ಮಕ್ಕಳನ್ನು ಗುರುತಿಸಲಾಗಿದ್ದು ಎಲ್ಲರಿಗೂ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳ ಸಹಕಾರದೊಂದಿಗೆ ಶಾಲೆಗಳಲ್ಲಿ ಲಸಿಕೆ ಹಾಕಲು ಆದ್ಯತೆ ನೀಡಲಾಗಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್‌ ತಿಳಿಸಿದರು.

ಜಿಲ್ಲೆಯಾದ್ಯಂತ ಏಳೂ ತಾಲ್ಲೂಕುಗಳಲ್ಲಿ ಐದು ವರ್ಷ ವಯಸ್ಸಿನ ಒಳಗಿನ 1,35,876 ಮಕ್ಕಳನ್ನು ಗುರುತಿಸಲಾಗಿದೆ. ಮಂಡ್ಯ ತಾಲ್ಲೂಕಿನಲ್ಲಿ ಅತೀ ಹೆಚ್ಚು30,294 ಮಕ್ಕಳನ್ನು ಗುರುತಿಸಲಾಗಿದೆ. ಪಾಂಡವಪುರ ತಾಲ್ಲೂಕಿನಲ್ಲಿ 12,018 ಮಕ್ಕಳನ್ನು ಗುರುತಿಸಲಾಗಿದೆ. ಜಿಲ್ಲೆಯಾದ್ಯಂತ 723 ಪೋಲಿಯೊ ಲಸಿಕಾ ಕೇಂದ್ರ ತೆರೆಯಲು ನಿರ್ಧರಿಸಲಾಗಿದೆ. 2,892 ಸ್ವಯಂಸೇವಕರು ಮಕ್ಕಳಿಗೆ ಲಸಿಕೆ ಹಾಕಲಿದ್ದಾರೆ. 145 ಮೇಲ್ವಿಚಾರಕರನ್ನು ನೇಮಿಸಲಾಗಿದ್ದು ಅವರು ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.

‘ಬೇರೆ ರಾಜ್ಯ, ಬೇರೆ ಜಿಲ್ಲೆಗಳಿಂದ ಬಂದ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಿಸಬೇಕು. ಅದಕ್ಕಾಗಿ ರೈಲು ನಿಲ್ದಾಣದಲ್ಲಿ ಕೇಂದ್ರವೊಂದನ್ನು ಸ್ಥಾಪಿಸಲಾಗುವುದು. ಬೆರಳಿನಲ್ಲಿ ಗುರುತು ಹಾಕುವ ಕಾರಣ ಲಸಿಕೆ ಹಾಕದ ಮಕ್ಕಳನ್ನು ಸುಲಭವಾಗಿ ಪತ್ತೆ ಮಾಡಬಹುದು. ಜಿಲ್ಲೆಯಲ್ಲಿರುವ ಕೃಷಿ ಕೂಲಿ ಕಾರ್ಮಿಕರ ಮಕ್ಕಳನ್ನು ಗುರುತಿಸಲಾಗಿದ್ದು ಅವರಿಗೂ ಲಸಿಕೆ ಹಾಕಲಾಗುವುದು’ ಎಂದು ಆರೋಗ್ಯ ಇಲಾಖೆ ಅಧಿಕಾರಿ ಡಾ.ಕೆ.ಬೆಟ್ಟಸ್ವಾಮಿ ಹೇಳಿದರು.

ತಹಶೀಲ್ದಾರ್‌ ಸಭೆಗೆ ಅಧಿಕಾರಿಗಳ ಗೈರು: ಜಿಲ್ಲೆಯ ಏಳೂ ತಾಲ್ಲೂಕುಗಳಲ್ಲಿ ತಹಶೀಲ್ದಾರ್‌ ಅಧ್ಯಕ್ಷತೆಯಲ್ಲಿ ಪೋಲಿಯೊ ಅಭಿಯಾನದ ಸಿದ್ಧತಾ ಸಭೆ ನಡೆಯುತ್ತಿದೆ. ಸೋಮವಾರ ಮಂಡ್ಯ ತಹಶೀಲ್ದಾರ್‌ ನಾಗೇಶ್‌ ಅಧ್ಯಕ್ಷತೆಯಲ್ಲಿ ಸಭೆ ನಡೆಯತು. ಬೆರಳೆಣಿಕೆಯಷ್ಟು ಮಂದಿ ಅಧಿಕಾರಿಗಳು ಮಾತ್ರ ಸಭೆಯಲ್ಲಿ ಹಾಜರಾಗಿದ್ದರು. ಗೈರಾದ ಅಧಿಕಾರಿಗಳ ವಿರುದ್ಧ ತಹಶೀಲ್ದಾರ್‌ ನಾಗೇಶ್‌ ಅಸಮಾಧಾನ ವ್ಯಕ್ತಪಡಿಸಿದರು. ಮುಂದಿನ ಸಭೆಗೆ ಎಲ್ಲಾ ಅಧಿಕಾರಿಗಳು ತಪ್ಪದೇ ಹಾಜರಾಗಬೇಕು ಎಂದು ಸೂಚಿಸಿದರು.

‘ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಹಕಾರ ನೀಡಿದರೆ ಮಾತ್ರ ಅಭಿಯಾನ ಯಶಸ್ವಿಯಾಗುತ್ತಿದೆ. ಎಲ್ಲರಿಗೂ ಸೂಚನೆ ಕಳುಹಿಸಿದ್ದರೂ ಕೆಲವು ಅಧಿಕಾರಿಗಳು ಸಭೆಗೆ ಬಂದಿಲ್ಲ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ವರದಿ ಮಾಡಲಾಗುವುದು’ ಎಂದು ನಾಗೇಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT