ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಊರ ನೆಮ್ಮದಿ ಕೆಡಿಸಿದ ತ್ಯಾಜ್ಯ ವಿಲೇವಾರಿ ಘಟಕ

Last Updated 23 ಜನವರಿ 2018, 9:23 IST
ಅಕ್ಷರ ಗಾತ್ರ

ಹುಮನಾಬಾದ್‌: ತಾಲ್ಲೂಕಿನ ಸಿಂಧನಕೇರಾ ಗ್ರಾಮದಲ್ಲಿ ಹುಮನಾಬಾದ್ ಪುರಸಭೆ ನಿರ್ಮಿಸಿರುವ ತ್ಯಾಜ್ಯ ವಿಲೇವಾರಿ ಘಟಕದ ದುರ್ವಾಸನೆ ಗ್ರಾಮಸ್ಥರ ನಿದ್ದೆಗೆಡಿಸಿದೆ.

ಹುಮನಾಬಾದ್‌ನಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಈ ಗ್ರಾಮವನ್ನು ಪ್ರವೇಶಿಸಿದರೆ ಗ್ರಾಮದ 400 ಮೀಟರ್‌ ದೂರದಲ್ಲಿ ಇರುವ ಈ ತ್ಯಾಜ್ಯ ಘಟಕವನ್ನು ಗಲೀಜನ್ನು ನೋಡಿಯೇ ಊರು ಪ್ರವೇಶಿಸಬೇಕು. ಸತ್ತ ಹಂದಿ, ನಾಯಿ ಮತ್ತಿತರ ಪ್ರಾಣಿಗಳ ಕಳೇಳೆಬರವನ್ನು ವೈಜ್ಞಾನಿಕ ವಿಧಾನದಲ್ಲಿ ವಿಲೇವಾರಿ ಕೈಗೊಳ್ಳದ ಕಾರಣ ಗ್ರಾಮಸ್ಥರು ವಿವಿಧ ಕಾಯಿಲೆಗಳಿಂದ ಬಳಲುವಂತಾಗಿದೆ.

ಈ ಘಟಕದ ದುರ್ವಾಸನೆಯಿಂದ ಗ್ರಾಮದ ಜನರಿಗೆ ಚರ್ಮದ ಕಾಯಿಲೆ ಹಾಗೂ ಶ್ವಾಸಕೋಶ ಸಂಬಂಧಿ ರೋಗ, ಗಳು ಕಾಣಿಸಿಕೊಂಡಿದ್ದು ಇದರಿಂದ ತೊಂದರೆ ಅನುಭವಿಸುತ್ತಿದ್ದಾರೆ.

‘ಸೂಕ್ತ ರೀತಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡಬೇಕು. ಗ್ರಾಮಸ್ಥರ ನೆಮ್ಮದಿ ಹಾಳು ಮಾಡಿರುವ ಆ ಘಟಕವನ್ನು ಜನವಸತಿ ರಹಿತ ಪ್ರದೇಶಕ್ಕೆ ಸ್ಥಳಾಂತರ ಮಾಡಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಊರ ಹೊರಗಿನ ಸಮಸ್ಯೆ ತ್ಯಾಜ್ಯ ವಿಲೇವಾರಿ ಘಟಕದ್ದಾದರೆ ಗ್ರಾಮದ ಒಳಗೆ ಪ್ರಮುಖ ರಸ್ತೆಗಳಲ್ಲಿ ಸಂಪೂರ್ಣ ಗಲೀಜು ಆವರಿಸಿದೆ. ಗ್ರಾಮದ ಸರ್ಕಾರಿ ಶಾಲೆಗೆ ತೆರಳುವ ಮಾರ್ಗ ಒಳಗೊಂಡಂತೆ ಬಹುತೇಕ ಓಣಿಗಳಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ತ್ಯಾಜ್ಯ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಗ್ರಾಮಕ್ಕೆ ಮೂಲಸೌಲಭ್ಯ ಕಲ್ಪಿಸಬೇಕು. ವಸತಿ ಯೋಜನೆ ಅಡಿ ಮಂಜೂರಾದ ಮನೆಗಳನ್ನು ಅರ್ಹರಿಗೆ ವಿತರಿಸುವ ಮೂಲಕ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದು ಗ್ರಾಮದ ಶಶಿಕುಮಾರ ವಿ.ಕುಂಬಾರ ಆಗ್ರಹಿಸಿದ್ದಾರೆ.

‘ಗ್ರಾಮದ ಜನರು ರಸ್ತೆ ಒತ್ತುವರಿ ಮಾಡಿದ್ದರಿಂದ ಚರಂಡಿ ನಿರ್ಮಿಸಲು ಸ್ಥಳಾವಕಾಶ ಇಲ್ಲದ್ದರಿಂದ ಹಾಗೆ ಉಳಿದುಕೊಂಡಿವೆ. ಗ್ರಾಮದ ಅಭಿವೃದ್ಧಿ ಕೇವಲ ಚುನಾಯಿತಿ ಪ್ರತಿನಿಧಿ ಮತ್ತು ಅಧಿಕಾರಿಗಳಿಂದ ಮಾತ್ರ ಆಗದು ಅದಕ್ಕೆ ಗ್ರಾಮಸ್ಥರ ಸಹಕಾರ ಕೂಡಾ ಅವಶ್ಯಕ. ಶಾಸಕ ರಾಜಶೇಖರ ಬಿ.ಪಾಟೀಲ ಅವರು ಗ್ರಾಮಾಭಿವೃದ್ದಿಗಾಗಿ ₹50 ಲಕ್ಷಕ್ಕೂ ಅಧಿಕ ಅನುದಾನ ನೀಡಿದ್ದಾರೆ. ಆದ್ಯತೆ ಮೇರೆಗೆ ಸ್ಥಳದ ಲಭ್ಯತೆ ಆಧರಿಸಿ, ಶೀಘ್ರ ಸೌಲಭ್ಯ ಕಲ್ಪಿಸಲಾಗುವುದು’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೀಲಾವತಿ ತಿಳಿಸಿದರು.

* * 

ನಮ್ಮೂರಿನ ನೆಮ್ಮದಿ ಕೆಡಿಸಿದ ಹುಮನಾಬಾದ್‌ ಪುರಸಭೆ ತ್ಯಾಜ್ಯ ವಿಲೆವಾರಿ ಘಟಕ ಸ್ಥಳಾಂತಸಬೇಕು. ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಲೀಲಾವತಿ ಶೀಲವಂತ, ಅಧ್ಯಕ್ಷೆ, ಸಿಂಧನಕೇರಾ ಗ್ರಾಮ ಪಂಚಾಯಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT