ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಪೇಟ್‌ ನಿವೇಶನ ಸ್ಥಳದಿಂದ ಸರ್ವಾಧ್ಯಕ್ಷರ ಮೆರವಣಿಗೆ

Last Updated 23 ಜನವರಿ 2018, 9:26 IST
ಅಕ್ಷರ ಗಾತ್ರ

ಬೀದರ್: ಕನ್ನಡ ಸಾಹಿತ್ಯ ಪರಿಷತ್ತಿನ ಬೀದರ್‌ ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಇಲ್ಲಿಯ ಜಿಲ್ಲಾ ರಂಗ ಮಂದಿರದಲ್ಲಿ ಜನವರಿ 23 ರಂದು ನಡೆಯಲಿದೆ. ಚಿಕ್ಕಪೇಟ್‌ನಲ್ಲಿರುವ ಕನ್ನಡ ಭವನ ನಿವೇಶನದಿಂದ ಬೆಳಿಗ್ಗೆ 9 ಗಂಟೆಗೆ ಸರ್ವಾಧ್ಯಕ್ಷ ಹಿರಿಯ ಸಾಹಿತಿ ಹಂಶಕವಿ ಅವರ ಮೆರವಣಿಗೆ ಆರಂಭವಾಗಲಿದೆ.

ಜಿಲ್ಲಾಧಿಕಾರಿ ಎಚ್‌.ಆರ್‌.ಮಹಾದೇವ ಮೆರವಣಿಗೆಗೆ ಚಾಲನೆ ನೀಡುವರು. ಬೆಳಿಗ್ಗೆ 11 ಗಂಟೆಗೆ ಹಿರಿಯ ಸಾಹಿತಿ ಶಿವಶಂಕರ ಜರಗನಹಳ್ಳಿ ಸಮ್ಮೇಳನ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆ ವಹಿಸುವರು.

ಸಮ್ಮೇಳನ ಅಧ್ಯಕ್ಷರ ಜೀವನ ಸಾಧನೆ ಕುರಿತು ಸಾಹಿತಿ ಚಂದ್ರಪ್ಪ ಹೆಬ್ಬಾಳಕರ್ ಉಪನ್ಯಾಸ ನೀಡುವರು. ಹಿರಿಯ ಸಾಹಿತಿ ಎಂ. ಜಿ. ದೇಶಪಾಂಡೆ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸುವರು. ಅನೇಕ ಹಿರಿಯ ಹಾಗೂ ಕಿರಿಯ ಕವಿಗಳು ಕವನ ವಾಚನ ಮಾಡುವರು.

ಮಧ್ಯಾಹ್ನ 2 ಗಂಟೆಗೆ ನಡೆಯಲಿರುವ ಗೋಷ್ಠಿಯ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯಿತಿ ಸಿಇಒ ಆರ್‌.ಸೆಲ್ವಮಣಿ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ. ದೇವರಾಜ ಪಾಲ್ಗೊಳ್ಳುವರು. ಪ್ರೊ.ಆರ್.ಕೆ ಹುಡುಗಿ, ಹೈದರಾಬಾದ್‌ ಕರ್ನಾಟಕ ಹೋರಾಟ ಸಮಿತಿಯ ಉಪಾಧ್ಯಕ್ಷ ಡಾ.ರಜಾಕ್ ಉಸ್ತಾದ್‌, ಮಧುಸೂದನ, ಪ್ರೊ.ಶಿವಕುಮಾರ ಕಟ್ಟೆ ಉಪನ್ಯಾಸ ನೀಡುವರು.

ಸಂಜೆ 6 ಗಂಟೆಗೆ ಬಹಿರಂಗ ಅಧಿವೇಶನ ನಡೆಯಲಿದೆ. ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್. ಮನೋಹರ ಅಧ್ಯಕ್ಷತೆ ವಹಿಸುವರು. ಸಂಜೆ 6.30 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ಮುಖ್ಯಸ್ಥ ಪ್ರೊ.ಎಚ್.ಟಿ. ಪೋತೆ ಸಮಾರೋಪ ಭಾಷಣ ಮಾಡುವರು.

ಸರ್ವಾಧ್ಯಕ್ಷರ ಪರಿಚಯ: ಹಂಶಕವಿ ಎಂದೇ ಮನೆಮಾತಾಗಿರುವ ಹಣಮಂತಪ್ಪ ಶಂಕರೆಪ್ಪ ವಲ್ಲೇಪುರೆ, ಜಿಲ್ಲಾ ಪೊಲೀಸ್‌ ಕಚೇರಿಯ ಗ್ರಂಥಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೆಲಸದ ಒತ್ತಡದ ಮಧ್ಯೆಯೂ 75 ಕೃತಿಗಳನ್ನು ಹೊರತಂದಿದ್ದಾರೆ.

ಔರಾದ್ ತಾಲ್ಲೂಕಿನ ನಾಗೂರ(ಬಿ) ಗ್ರಾಮದವರಾದ ಹಂಶಕವಿ ಪತ್ರಿಕಾ ವರದಿಗಾರರಾಗಿ, ಶಿಕ್ಷಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಇವರ ಸಾಹಿತ್ಯಿಕ ಸೇವೆಗೆ ಹಲವು ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ. ಸಾಕ್ಷರ ರತ್ನ (1994), ಸಾಹಿತ್ಯ ಸೇವಾ ಪ್ರಶಸ್ತಿ (2005), ಸುವರ್ಣ ಕರ್ನಾಟಕ ರಾಜ್ಯ ಪ್ರಶಸ್ತಿ (2007), ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ (2007), ಕಲ್ಯಾಣ ರತ್ನ ಪ್ರಶಸ್ತಿ (2009), ಪೊಲೀಸ್ ಪ್ರತಿಭಾ ಪುರಸ್ಕಾರ (2009), ಹಳಕಟ್ಟಿ ಪ್ರಶಸ್ತಿ (2011), ರಾಷ್ಟ್ರ ಮಟ್ಟದ ವಚನಶ್ರೀ ಪ್ರಶಸ್ತಿ (2012), ಸಮಾಜ ಸೇವಾ ಭಾರ್ಗವ ಪ್ರಶಸ್ತಿ (2014), ದಿವ್ಯ ಜ್ಯೋತಿ ಪ್ರಶಸ್ತಿ (2015), ಅಮರವಾಡಿ ಪ್ರಶಸ್ತಿ (2015), ಭೀಮಾಶಂಕರ ಪ್ರಶಸ್ತಿ (2015), ಮಹಮೂದ್ ಗವಾನ್ ಪ್ರಶಸ್ತಿ(2015) ಲಭಿಸಿವೆ.

ಎಂಟು ಪುಟಗಳ ಆಮಂತ್ರಣ ಪತ್ರಿಕೆ: ಕಸಾಪ ಜಿಲ್ಲಾ ಘಟಕದ ಚುನಾವಣೆಯಲ್ಲಿ ಬೆಂಬಲಿಸಿದ ಎಲ್ಲರನ್ನೂ ಗೌರವಿಸುವ ದಿಸೆಯಲ್ಲಿ ಕಸಾಪ ತಾಲ್ಲೂಕು ಘಟಕವು ಎಂಟು ಪುಟಗಳ ಆಮಂತ್ರಣ ಪತ್ರಿಕೆಯನ್ನು ಪ್ರಕಟಿಸಿದೆ. ಆಮಂತ್ರಣ ಪತ್ರಿಕೆಯ ತುಂಬ ತಪ್ಪುಗಳು ತುಂಬಿಕೊಂಡಿವೆ. ಜಿಲ್ಲಾ ರಂಗ ಮಂದಿರದಲ್ಲಿ 700 ಜನರಿಗೆ ಮಾತ್ರ ಕುಳಿತುಕೊಳ್ಳುವ ವ್ಯವಸ್ಥೆ ಇದ್ದರೂ ಆಮಂತ್ರಣ ಪತ್ರಿಕೆಯಲ್ಲಿ 562 ಅತಿಥಿಗಳ ಹೆಸರುಗಳನ್ನು ಪ್ರಕಟಿಸಲಾಗಿದೆ. ಅತಿಥಿ ಸತ್ಕಾರ ಹೊರತು ಪಡಿಸಿ 156 ಜನರಿಗೆ ವಿಶೇಷ ಸನ್ಮಾನ ಹಾಗೂ ಗೌರವ ಸನ್ಮಾನ ನಡೆಯಲಿದೆ.

‘ಬಸವಕಲ್ಯಾಣ ತಾಲ್ಲೂಕಿನ ಹುಲಸೂರಲ್ಲಿ ಆಯೋಜಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮಠದ ಜಾತ್ರೆಯ ರೂಪದಲ್ಲಿ ನಡೆಯಿತು. ಸಾಹಿತ್ಯ ಅಭಿಮಾನಿಗಳಿಗಿಂತ ಮಠದ ಭಕ್ತರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಕನಿಷ್ಠ ಪಕ್ಷ ತಾಲ್ಲೂಕು ಮಟ್ಟದ ಸಮ್ಮೇಳನವಾದರೂ ಸಾಹಿತ್ಯದ ಮೇಲೆ ಬೆಳಕು ಚೆಲ್ಲಲಿ’ ಎನ್ನುವುದು ಕಸಾಪ ಸದಸ್ಯರ ಆಶಯವಾಗಿದೆ.

* * 

ಸಾಹಿತ್ಯ ಸಮ್ಮೇಳನದ ಮಂಟಪಕ್ಕೆ ಬೀದರ್‌ ಜಿಲ್ಲೆಯಲ್ಲಿ ಪ್ರಥಮ ಕನ್ನಡ ಶಾಲೆ ಆರಂಭಿಸಿದ ನಾರ್ಮಾ ಫೆಂಡ್ರಿಚ್ ಸೋದರಿಯರ ಹೆಸರು ಇಡಲಾಗಿದೆ.
ಸುರೇಶ ಚನಶೆಟ್ಟಿ
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT