ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೌಸ್‌ಜಾಯ್‌’ ನೆರವಿನ ಹಸ್ತ

Last Updated 23 ಜನವರಿ 2018, 19:30 IST
ಅಕ್ಷರ ಗಾತ್ರ

ಪ್ಲಂಬಿಂಗ್‌, ವಿದ್ಯುತ್‌ ಉಪಕರಣಗಳ ದುರಸ್ತಿ, ಸ್ವಚ್ಛತೆ ಮತ್ತಿತರ ಸೇವೆಗಳಿಗೆ ನಗರವಾಸಿಗಳು ಪ್ರತಿ ದಿನ ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಲೇ ಇರುತ್ತಾರೆ. ವೃತ್ತಿಯಲ್ಲಿ ಪರಿಣತರಾದ, ವಿಶ್ವಾಸಾರ್ಹ ಕೆಲಸಗಾರರನ್ನು ಹುಡುಕಿಕೊಂಡು ಹೋಗುವುದು ಎಲ್ಲರಿಂದ, ಎಲ್ಲ ಕಾಲಕ್ಕೂ ಸಾಧ್ಯವಾಗುವುದಿಲ್ಲ. ನಗರಕ್ಕೆ ಹೊಸದಾಗಿ ಬಂದವರಿಗಂತೂ ಅದೊಂದು ದೊಡ್ಡ ತಲೆನೋವಿನ ಕೆಲಸ. ಯಾರನ್ನು ನಂಬಬೇಕು, ಯಾರು ವಿಶ್ವಾಸಾರ್ಹರು ಎನ್ನುವ ಅನುಮಾನದಿಂದಲೇ ಅಪರಿಚಿತರಿಂದ ದುರಸ್ತಿ ಕೆಲಸಗಳನ್ನು ಮಾಡಿಸಿಕೊಳ್ಳಬೇಕಾಗುತ್ತದೆ. ಜನರು ಎದುರಿಸುವ ಇಂತಹ ಸಮಸ್ಯೆಗಳಿಗೆಲ್ಲ ಹೌಸ್‌ಜಾಯ್‌ (Housejoy) ಸ್ಟಾರ್ಟ್‌ಅಪ್‌ ಸೂಕ್ತ ಪರಿಹಾರ ಒದಗಿಸಿದೆ.

ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಿಂದ ಎಂಬಿಎ ಪದವಿ ಪಡೆದ ಮತ್ತು ಫ್ಲಿಪ್‌ಕಾರ್ಟ್‌, ಯಾಹೂ, ಫುಜಿತ್ಸು ನೆಟ್‌ವರ್ಕ್‌ ಕಮ್ಯುನಿಕೇಷನ್ಸ್‌ನಲ್ಲಿ  ಕೆಲಸ ಮಾಡಿರುವ ಅನುಭವದ ಸರಣ್‌ ಚಟರ್ಜಿ ಅವರು ಈ ನವೋದ್ಯಮ ಸ್ಥಾಪಿಸಿ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಗೃಹ ಸೇವಾ ಕ್ಷೇತ್ರದ ಹೌಸ್‌ಜಾಯ್‌, ಬೆಂಗಳೂರು ನಗರವಾಸಿಗಳ ಅನೇಕ ಚಿಂತೆಗಳನ್ನು ದೂರ ಮಾಡಲು ಶ್ರಮಿಸುತ್ತಿರುವ ವಿಶಿಷ್ಟ ಸ್ಟಾರ್ಟ್‌ಅಪ್‌ ಆಗಿದೆ. ಮನೆ, ಅಪಾರ್ಟ್‌ಮೆಂಟ್‌ಗಳಲ್ಲಿ ಪ್ರತಿ ದಿನ ಎದುರಿಸುವ ಹಲವು ಬಗೆಯ ದುರಸ್ತಿ ಕೆಲಸಗಳಿಂದ ಹಿಡಿದು ವಧುಗಳ ಅಲಂಕಾರದವರೆಗೆ ವೈವಿಧ್ಯಮಯ ಸೇವೆಗಳನ್ನು ಒದಗಿಸುವ ವಿಶ್ವಾಸಾರ್ಹ ಸಂಸ್ಥೆಯಾಗಿ ಗಮನ ಸೆಳೆಯುತ್ತಿದೆ.

2015ರಲ್ಲಿ ಆರಂಭವಾದ ಹೌಸ್‍ಜಾಯ್‌ನಲ್ಲಿ ನೋಂದಾಯಿತ ನುರಿತ ವೃತ್ತಿಪರರು ವಿಶ್ವಾಸಾರ್ಹ ಮತ್ತು ಗುಣಮಟ್ಟದ ಸೇವೆಯನ್ನು ಸರಿಯಾದ ಸಮಯಕ್ಕೆ ನೀಡುತ್ತ ಬಳಕೆದಾರರ ಮನಗೆಲ್ಲುತ್ತಿದ್ದಾರೆ. ಗುಣಮಟ್ಟದ ಸೇವೆಗಳನ್ನೇ ಹೌಸ್‍ಜಾಯ್ ನೀಡುತ್ತಿದೆ.  ಸೌಂದರ್ಯವರ್ಧನೆ, ಮನೆಯಲ್ಲಿಯೇ ವಧು ಶೃಂಗಾರದ ಸೇವೆಗಳನ್ನೂ ಆರಂಭಿಸಿದೆ. ಲಾಂಡ್ರಿ ಮತ್ತು ಡ್ರೈ ಕ್ಲೀನಿಂಗ್ ಸೇವೆಯನ್ನೂ ನೀಡುತ್ತಿದ್ದು ಮನೆಯಿಂದಲೇ ಬಟ್ಟೆ ಪಡೆದು ಮನೆ ಬಾಗಿಲಿಗೆ ತಲುಪಿಸುತ್ತಿದೆ. ಬೆಂಗಳೂರು, ಚೆನ್ನೈ, ಹೈದರಾಬಾದ್‌, ಮುಂಬೈ ಮತ್ತು ದೆಹಲಿಗೆ ಇದರ ಸೇವಾ ವ್ಯಾಪ್ತಿ ಹಿಗ್ಗಿದೆ.

‘ಗೃಹೋಪಯೋಗಿ ಸಲಕರಣೆಗಳಿಂದ ಹಿಡಿದು, ವೈಯಕ್ತಿಕ ಸೇವೆಗಳನ್ನು ಸಂಘಟಿತ ರೂಪದಲ್ಲಿ ಒದಗಿಸುವ ವಿಶಿಷ್ಟ ನವೋದ್ಯಮ ಇದಾಗಿದೆ. ಸದ್ಯಕ್ಕೆ ಇಂತಹ ಸೇವೆಗಳ ಮಾರುಕಟ್ಟೆ ಸಂಪೂರ್ಣ ಅಸಂಘಟಿತವಾಗಿದೆ. ಈ ಮಾರುಕಟ್ಟೆಯಲ್ಲಿ ವೈವಿಧ್ಯಮಯ ಸೇವೆ ಒದಗಿಸುವವರನ್ನು ಸಂಪರ್ಕಿಸುವುದೇ ಅನೇಕರ ಪಾಲಿಗೆ ದೊಡ್ಡ ತಲೆನೋವಾಗಿರುತ್ತದೆ. ಅವರ ವೃತ್ತಿಪರತೆ, ಕೌಶಲ್ಯ ಮತ್ತು ವಿಶ್ವಾಸಾರ್ಹತೆ ಬಗ್ಗೆಯೂ ಅನುಮಾನಗಳು ಇರುತ್ತವೆ. ಬಳಕೆದಾರರ ಇಂತಹ ಅನುಮಾನಗಳನ್ನೆಲ್ಲ ಪರಿಹರಿಸಿ, ನಂಬಿಗಸ್ತರ ಸೇವೆ ಒದಗಿಸುವುದು ಹೌಸ್‌ಜಾಯ್‌ನ ಮುಖ್ಯ ಧ್ಯೇಯವಾಗಿದೆ. ಇದೊಂದು ಮೊಬೈಲ್‌ ಆ್ಯಪ್‌ ಆಧಾರಿತ ಸೇವೆಯಾಗಿದೆ. ಸಂಸ್ಥೆಯ ಅಂತರ್ಜಾಲ ತಾಣದಲ್ಲಿಯೂ ಲಾಗಿನ್‌ ಆಗಿ ಸೇವೆ ಪಡೆಯಬಹುದು. ಇಲ್ಲಿ ನೋಂದಣಿ ಮಾಡಿಕೊಳ್ಳುವ ವೃತ್ತಿಪರರ ಪೂರ್ವಾಪರವನ್ನೆಲ್ಲ ಮುಂಚಿತವಾಗಿಯೇ ಸಂಗ್ರಹಿಸಲಾಗಿರುತ್ತದೆ. ಹೀಗಾಗಿ ಬಳಕೆದಾರರು ಈ ಬಗ್ಗೆ ಆತಂಕ ಪಡಬೇಕಾಗಿಲ್ಲ’ ಎಂದು ಸಿಇಒ ಸರಣ್‌ ಚಟರ್ಜಿ ಅಭಯ ನೀಡುತ್ತಾರೆ.

‘ವಿಭಿನ್ನ ಸೇವೆ ಒದಗಿಸುವವರು ಈ ಸಂಸ್ಥೆಯಲ್ಲಿ ನೋಂದಣಿ ಮಾಡಿಕೊಂಡು, ಸಂಸ್ಥೆಯ ನಿಯಮಗಳಿಗೆ ಬದ್ಧರಾಗಬೇಕಾಗುತ್ತದೆ. ಒಟ್ಟಾರೆ ವಹಿವಾಟಿನಲ್ಲಿ 20;80 ಅನುಪಾತದಲ್ಲಿ ವರಮಾನ ಹಂಚಿಕೆ ಆಗುತ್ತದೆ. ಶೇ 20ರಷ್ಟು ಮೊತ್ತ ಹೌಸ್‌ಜಾಯ್‌ಗೆ ಮತ್ತು ಶೇ 80ರಷ್ಟು ಮೊತ್ತ ವೃತ್ತಿಪರರಿಗೆ ಹಂಚಿಕೆಯಾಗುತ್ತದೆ. ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ ಮತ್ತು ದೆಹಲಿ– ಹೀಗೆ ಐದು ನಗರಗಳಲ್ಲಿ ಇದರ ಸೇವೆ ಲಭ್ಯ ಇದೆ. 10 ಲಕ್ಷಕ್ಕೂ ಹೆಚ್ಚು ಗ್ರಾಹಕರು ಇದ್ದಾರೆ ಎಂದು ಅವರು ಹೇಳುತ್ತಾರೆ.

‘ಗ್ರಾಹಕರು ತಾವು ಬಯಸುವ ಸೇವೆಗಳ ವಿವರ ದಾಖಲಿಸುತ್ತಿದ್ದಂತೆ ಸ್ವಯಂಚಾಲಿತ ತಂತ್ರಜ್ಞಾನವು ಸಮೀಪದಲ್ಲಿ ಇರುವ ವೃತ್ತಿಪರರನ್ನು ಸಂಪರ್ಕಿಸಿ ಕೆಲಸದ ಹೊಣೆ ಒಪ್ಪಿಸುತ್ತದೆ. ಗ್ರಾಹಕರು ಇಷ್ಟಪಟ್ಟ ಸಮಯಕ್ಕೆ ತೆರಳುವ ವೃತ್ತಿಪರರು ಕೆಲಸದ ವಿವರ ಕಲೆ ಹಾಕಿ, ಮನೆ ಮಾಲೀಕರಿಗೆ ವೆಚ್ಚದ ವಿವರ ನೀಡುತ್ತಾರೆ. ಅದಕ್ಕೆ ಗ್ರಾಹಕರು ಸಮ್ಮತಿಸಿದ ನಂತರವೇ ಮುಂದುವರೆಯಲಾಗುತ್ತದೆ. ಈ ಭೇಟಿ, ಚರ್ಚೆ, ಸಮಸ್ಯೆಯ ಸ್ವರೂಪ, ದುರಸ್ತಿ ಪ್ರಕ್ರಿಯೆಗಳನ್ನು ಮೊಬೈಲ್‌ನಲ್ಲಿ ದಾಖಲಿಸಲಾಗುವುದು. ಉದ್ಭವಿಸಬಹುದಾದ ಸಮಸ್ಯೆಗಳನ್ನು ಪರಿಹರಿಸಲು ಇದು ನೆರವಿಗೆ ಬರಲಿದೆ. ವೃತ್ತಿಪರರು ತಮ್ಮ ಕೆಲಸದಲ್ಲಿ ಅದಕ್ಷತೆ ತೋರಿದ್ದರೆ, ಅಸಮರ್ಪಕವಾಗಿ ಕೆಲಸ ಮಾಡಿದ್ದರೆ ಅದನ್ನು ಸರಿಪಡಿಸುವ ಹೊಣೆಯನ್ನೂ ಹೌಸ್‌ಜಾಯ್‌ ಹೊತ್ತುಕೊಂಡಿರುತ್ತದೆ. ಹೀಗಾಗಿ ಬಳಕೆದಾರರು ನಿಶ್ಚಿಂತೆಯಿಂದ ನಮ್ಮ ಸೇವೆ ಪಡೆಯಬಹುದು’ ಎಂದು ಸರಣ್‌ ಹೇಳುತ್ತಾರೆ.

‘ದೇಶದಲ್ಲಿ ಗೃಹ ಸೇವೆಗಳ ಅಸಂಘಟಿತ ಮಾರುಕಟ್ಟೆಯು ₹ 65 ಸಾವಿರ ಕೋಟಿಗಳಿಂದ ₹ 97,500 ಕೋಟಿಗಳವರೆಗೆ ಇದೆ. ಈ ಕ್ಷೇತ್ರದಲ್ಲಿ ವಹಿವಾಟು ವಿಸ್ತರಣೆಗೆ ವಿಪುಲ ಅವಕಾಶಗಳು ಇವೆ. ಗುಣಮಟ್ಟದ ಸೇವೆ ಒದಗಿಸದಿದ್ದರೆ ವಹಿವಾಟು ಬೆಳೆಸಲು ಸಾಧ್ಯವಾಗಲಾರದು. ಹೀಗಾಗಿ ಮೊದಲು ಈ ಐದು ಮಹಾನಗರಗಳಲ್ಲಿ ನಮ್ಮ ವಹಿವಾಟು ಆಳವಾಗಿ ಬೇರುಬಿಟ್ಟ ನಂತರ ಉಳಿದ ನಗರಗಳಿಗೆ ವಿಸ್ತರಿಸುವ ನಿಟ್ಟಿನಲ್ಲಿ ಆಲೋಚಿಸಲಾಗುವುದು ಎಂಬುದು ಅವರ ಖಚಿತ ನಿಲುವಾಗಿದೆ.


ಸರಣ್‌ ಚಟರ್ಜಿ

‘ಸಂಸ್ಥೆಯಲ್ಲಿ ನೋಂದಾಯಿತ ವೃತ್ತಿಪರರಿಗೆ ಆರೋಗ್ಯ ವಿಮೆ, ₹ 5 ರಿಂದ ₹ 10 ಸಾವಿರವರೆಗಿನ ಅಲ್ಪಾವಧಿ ಸಾಲವನ್ನೂ ಒದಗಿಸಲಾಗುತ್ತಿದೆ. ಕಿರು ಹಣಕಾಸು ಸಂಸ್ಥೆಗಳ ಸಹಯೋಗದಲ್ಲಿ ಈ ಸಾಲ ಸೌಲಭ್ಯ ನೀಡಲಾಗುತ್ತಿದೆ. ಸಂಸ್ಥೆಯಲ್ಲಿ ನೋಂದಾಯಿತ ವೃತ್ತಿಪರರ ತಿಂಗಳ ವರಮಾನವೂ ಹೆಚ್ಚಳಗೊಂಡಿದೆ. ದುರಸ್ತಿ ಮತ್ತಿತರ ಕೆಲಸಕ್ಕೆ ಬರುವವರನ್ನು ಗುರುತಿನ ಚೀಟಿ, ಸಮವಸ್ತ್ರದಿಂದ ಗುರುತಿಸಬಹುದು. ಪೊಲೀಸ್‌ ದಾಖಲೆಗಳೂ ಸೇರಿದಂತೆ ಐದು ಹಂತದ ಪರೀಕ್ಷೆ ನಡೆಸಿ ಅವರನ್ನು ನೇಮಕ ಮಾಡಿಕೊಳ್ಳಲಾಗಿರುತ್ತದೆ. ಎರಡು ವರ್ಷಗಳ ಅವಧಿಯಲ್ಲಿ ಅನಪೇಕ್ಷಿತ ಘಟನೆಗಳು ತುಂಬ ವಿರಳವಾಗಿ ಘಟಿಸಿವೆ. ವಧುಗಳ ಅಲಂಕಾರ ಸೇವೆ ಒದಗಿಸುವ ಬ್ಯೂಟಿಷಿಯನ್‌ರನ್ನು ಸಂಸ್ಥೆಯೇ ನೇಮಕ ಮಾಡಿಕೊಂಡಿರುತ್ತದೆ. ಅವರ ಸುರಕ್ಷತೆಗೂ ಸಾಕಷ್ಟು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ.

ಇಲ್ಲಿ ಕೆಲಸದ ಹಂಚಿಕೆಯು ಸ್ವಯಂಚಾಲಿತ ವಾಗಿರುತ್ತದೆ. ಗ್ರಾಹಕರು ನೀಡುವ ಮೌಲ್ಯಮಾಪನ ಆಧರಿಸಿ ಕೆಲಸಗಳನ್ನು ಹಂಚಿಕೆ ಮಾಡಲಾಗುವುದು. ಗ್ರಾಹಕರು ಆರಂಭದಲ್ಲಿಯೇ ದುರಸ್ತಿಗೆ ಹಿಂದೇಟು ಹಾಕಿದರೆ, ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿದ್ದಕ್ಕೆ ₹ 149 ಪಾವತಿಸಬೇಕಾಗುತ್ತದೆ. ಮಾಹಿತಿಗೆ Housejoy.in ಅಂತರ್ಜಾಲ ತಾಣಕ್ಕೆ ಭೇಟಿ ನೀಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT