ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ

Last Updated 23 ಜನವರಿ 2018, 19:30 IST
ಅಕ್ಷರ ಗಾತ್ರ

ಹೆಸರು–ಊರು ಬೇಡ

ವೃತ್ತಿಯಲ್ಲಿ ಶಿಕ್ಷಕಿ. ವಯಸ್ಸು 56, ಇಬ್ಬರು ಹೆಣ್ಣು ಮಕ್ಕಳು. ಯಜಮಾನರ ವರಮಾನ ಕಡಿಮೆ ಇರುವುದರಿಂದ ಕುಟುಂಬದ ಜವಾಬ್ದಾರಿ ನನ್ನ ಮೇಲಿದೆ. ನನ್ನ ಸಂಬಳ ₹ 39,272. ಕಡಿತ GPF ₹ 20,000, PT ₹ 200. LIC ₹ 1421, GIS ₹ 120, ಒಟ್ಟು ಕಡಿತ ₹ 21,741 ಆಗಿದ್ದು, ಉಳಿಕೆ ಹಣ ₹ 17,531 ಕೈಗೆ ಸಿಗುತ್ತದೆ. ಉಳಿತಾಯ: Can Comp, ₹ 1000, PLI ₹ 728 ಅಂಚೆ ಕಚೇರಿ ಆರ್.ಡಿ. ₹ 1,000, ಕೆನರಾ ಬ್ಯಾಂಕ್ ಆರ್.ಡಿ. ₹ 1000, KGIDಯಿಂದ ₹ 3 ಲಕ್ಷ ಬಂದಿದ್ದು, ಒಂದು ವರ್ಷದ FD ಮಾಡಿದ್ದೇನೆ. ನನಗೆ ನನ್ನ ತಾಯಿಯಿಂದ ಬಳುವಳಿಯಾಗಿ 35X70 ಅಳತೆ ನಿವೇಶನದಲ್ಲಿ ಹಳೆ ಮನೆ ಇದೆ. ಕೆನರಾ ಬ್ಯಾಂಕಿನಲ್ಲಿ ₹ 1.70 ಲಕ್ಷ  ಇದೆ. SBIನಲ್ಲಿ ₹ 75,000 ಇದೆ. ನನ್ನ ಪ್ರಶ್ನೆ: HDFC ಯಿಂದ ಗೃಹಸಾಲ ಪಡೆಯಬಹುದೇ ಅಥವಾ ಇದ್ದ ಮನೆ ರಿಪೇರಿ ಮಾಡಬೇಕೇ ತಿಳಿಸಿ. ನಿವೇಶನ ಮಾರಾಟ ಮಾಡಿ ಮಕ್ಕಳ ವಿದ್ಯಾಭ್ಯಾಸ ಹಾಗೂ ಮದುವೆ ಮಾಡಲೇ?

ಉತ್ತರ: ನೀವು ಗರಿಷ್ಠ ಹಣ ಜಿಪಿಎಫ್‌ನಲ್ಲಿ ತೊಡಗಿಸಿರುವುದು ನನಗೆ ಖುಷಿ ತಂದಿದೆ. ಉಳಿತಾಯ ಹಾಗೂ ತೆರಿಗೆ ಉಳಿಸುವ ದೃಷ್ಟಿಯಿಂದ ಇದೊಂದು ಉತ್ತಮ ಯೋಜನೆ. ಎಲ್ಲಕ್ಕೂ ಮುಖ್ಯವಾಗಿ ಸಂಬಳದಲ್ಲಿ ಕಡಿತವಾಗುವುದರಿಂದ ಇದೊಂದು ಕಡ್ಡಾಯ ಉಳಿತಾಯವಾಗುತ್ತದೆ. ಇದನ್ನು ನಿಲ್ಲಿಸಬೇಡಿ.

ನಿಮ್ಮ ಆದಾಯ ಖರ್ಚು ಪರಿಗಣಿಸುವಾಗ, ಇನ್ನೂ ಹೆಚ್ಚಿನ ಉಳಿತಾಯ ನೀವು ಮಾಡಲು ಸಾಧ್ಯವಿಲ್ಲ. ನಿಮ್ಮ ಆದಾಯ ವಯಸ್ಸು ಪರಿಗಣಿಸುವಾಗ ನಿಮಗೆ ಹೆಚ್ಚಿನ ಗೃಹಸಾಲ ದೊರೆಯಲಾರದು. ಸದ್ಯಕ್ಕೆ ರಿಪೇರಿ ಮಾಡಿಕೊಳ್ಳಿ. ನಿವೇಶನ ಮನೆ ಎಂದಿಗೂ ಮಾರಾಟ ಮಾಡಬೇಡಿ. ಮಕ್ಕಳ ವಿದ್ಯಾಭ್ಯಾಸ ಹಾಗೂ ಮದುವೆ ಸಮಯದಲ್ಲಿ ಸಂದರ್ಭಕ್ಕೆ ತಕ್ಕಂತೆ ನಡೆದುಕೊಳ್ಳಿ. ಜೀವನದಲ್ಲಿ ಗಾಬರಿಯಾಗಬೇಡಿ. ಮಕ್ಕಳು ಸರಿಯಾಗಿ ಅಂಕ ಪಡೆದಲ್ಲಿ ಓದಲು  ಶಿಕ್ಷಣ ಸಾಲ ದೊರೆಯುತ್ತದೆ. ನಿಮಗೂ ನಿಮ್ಮ ಕುಟುಂಬಕ್ಕೂ ಉಜ್ವಲಭವಿಷ್ಯ ಹಾರೈಸುತ್ತೇನೆ.

ಹೆಸರು, ಊರು ಬೇಡ

ನಾನು ವೃತ್ತಿಯಲ್ಲಿ ಕೃಷಿಕ ಹಾಗೂ ಸಣ್ಣ ವ್ಯಾ‍ಪಾರಿ. ವಯಸ್ಸು 40. ನಾನು ಆದಾಯ ತೆರಿಗೆ ಸಲ್ಲಿಸುತ್ತಿಲ್ಲ, ರಿಟರ್ನ್ ತುಂಬಲಿಲ್ಲ. ಕೃಷಿ ಜಮೀನು 14 ಗುಂಟೆ ₹ 13 ಲಕ್ಷಕ್ಕೆ ಕೊಳ್ಳಲು ಕಾನೂನು ತೊಡಕಿದೆಯೇ?

ಉತ್ತರ: ಕೃಷಿಯಿಂದ ಬರುವ ಆದಾಯ ಸೆಕ್ಷನ್ 10 (1) ಆಧಾರದ ಮೇಲೆ ಸಂಪೂರ್ಣ ವಿನಾಯ್ತಿ ಪಡೆದಿದೆ. ಸಣ್ಣ ವ್ಯಾಪಾರದ ನಿವ್ವಳ ಲಾಭ ವಾರ್ಷಿಕ ₹ 2.50 ಲಕ್ಷದೊಳಗೆ ತೆರಿಗೆ ಬರುವುದಿಲ್ಲ. ನಿಮ್ಮ ವಯಸ್ಸು ಪರಿಗಣಿಸುವಾಗ, ಇಷ್ಟರ ತನಕ ₹ 13 ಲಕ್ಷ ನೀವು ಉಳಿತಾಯ ಮಾಡಿರುವುದು ವಿಶೇಷವೇನೂ ಅಲ್ಲ. ಜಮೀನು ಕೊಳ್ಳಲು ಇದುವರೆಗೆ ಪಡೆದಿರುವ ಕೃಷಿ ಹಾಗೂ ಸಣ್ಣ ವ್ಯಾಪಾರದಿಂದ ಬಂದ ಹಣವೆಂದು ತಿಳಿಸಬಹುದು. ಆದರೂ, ನಿಮ್ಮ ಮನೆಗೆ ಸಮೀಪದ ತೆರಿಗೆ ಸಲಹೆಗಾರರನ್ನು ವಿಚಾರಿಸಿ.

ವಿ.ಕೆ. ಬಿರಾದಾರ, ವಿಜಯಪುರ

ನನ್ನ ವಯಸ್ಸು 30. ಸರ್ಕಾರಿ ಫ್ರೌಢಶಾಲಾ ಶಿಕ್ಷಕ. ವೇತನ ₹ 28,150, ಕಡಿತ ಎಲ್ಐಸಿ ₹ 560, ಆರ್.ಡಿ. ₹  2000, ಗೃಹಸಾಲದ ಕಂತು ₹ 14,467, ಗೃಹಸಾಲದ ಅವಧಿ 20 ವರ್ಷಗಳು. ಈ ಸಾಲ ಅವಧಿಗೆ ಮುಂಚಿತವಾಗಿ ತುಂಬಬೇಕೇ ಅಥವಾ ಬೇಡವೇ? ನನ್ನ ಮನೆ ಖರ್ಚು ₹10,000. ಉಳಿತಾಯಕ್ಕೆ ಬೇರೆ ದಾರಿ ಯಾವುದು?

ಉತ್ತರ: ನೀವು ಪಡೆಯುವ ಸಂಬಳದಲ್ಲಿ ಕಡಿತ ಹಾಗೂ ಖರ್ಚು ನೋಡುವಾಗ ಉಳಿತಾಯಕ್ಕೆ ಎಲ್ಲಿಯೂ ಅವಕಾಶವಿಲ್ಲ. ಗೃಹಸಾಲ ಅವಧಿಗೆ ಮುನ್ನ ತೀರಿಸಬೇಡಿ. ನಿಮ್ಮ ಸಂಬಳ ಹೆಚ್ಚಾದಾಗ, ಗೃಹಸಾಲದ ಕಂತು ಬಡ್ಡಿಯಿಂದಾಗಿ ಮುಂದೆ ತೆರಬೇಕಾದ ಆದಾಯ ತೆರಿಗೆ ಉಳಿಸಲು ಅನುಕೂಲವಾಗುತ್ತದೆ. ವಾರ್ಷಿಕ ಇನ್‌ಕ್ರಿಮೆಂಟ್ ಹಾಗೂ ಅರ್ಧ ವಾರ್ಷಿಕ DA ಇವುಗಳಿಂದ ಬರುವ ವರಮಾನದಲ್ಲಿ ಕನಿಷ್ಠ ಶೇ 50 ರಷ್ಟು ದೀರ್ಘಾವಧಿ RD ಮಾಡಿರಿ. ಈ ಪ್ರಕ್ರಿಯೆ ನಿರಂತರವಾಗಿರಲಿ. ಇದರಿಂದ ನೀವು ಜೀವನದ ಸಂಜೆಯಲ್ಲಿ ದೊಡ್ಡ ಮೊತ್ತ ಪಡೆಯುವಿರಿ ಹಾಗೂ ಬೇಡವಾದ ಖರ್ಚಿಗೆ ಕಡಿವಾಣವಾಗುತ್ತದೆ.

ಹೆಸರು ಬೇಡ, ಚಿತ್ರದುರ್ಗ

ನನ್ನ ವಯಸ್ಸು 70. ಚಿತ್ರದುರ್ಗ ಜಿಲ್ಲೆಯಲ್ಲಿ ಪಿತ್ರಾರ್ಜಿತ ನಾಲ್ಕೂವರೆ ಎಕರೆ ಜಮೀನು ಇದೆ. ಇದನ್ನು ಮಾರಾಟ ಮಾಡಿ ಬರುವ ಹಣಕ್ಕೆ ತೆರಿಗೆ ಇದೆಯೇ ತಿಳಿಸಿರಿ. ಈ ಹಣದಿಂದ ಬೆಂಗಳೂರಿನಲ್ಲಿ ನಿವೇಶನ, ಮನೆ ಮಾಡಬೇಕೆಂದಿದ್ದೇನೆ. ಜಮೀನು ಮಾರಾಟ ಮಾಡಿ ಬರುವ ಹಣ ಯಾವ ರೀತಿಯಲ್ಲಿ ಪಡೆಯಬೇಕು?

ಉತ್ತರ: ಕ್ಯಾಪಿಟಲ್ ಗೇನ್ ಸೆಕ್ಷನ್ 48 ಆಧಾರದ ಮೇಲೆ ಗ್ರಾಮಾಂತರ ಪ್ರದೇಶದ ಕೃಷಿ ಜಮೀನು ಮಾರಾಟ ಮಾಡಿ ಬರುವ ಮೊತ್ತಕ್ಕೆ ಆದಾಯ ತೆರಿಗೆ ಇರುವುದಿಲ್ಲ. ಇದೇ ವೇಳೆ ಅಂತಹ ಜಮೀನು ಪಟ್ಟಣದಿಂದ 8 ಕಿ.ಮೀ. ಒಳಗಿರುವಲ್ಲಿ ಸೆಕ್ಷನ್  2(14) (iii) (a) ಆಧಾರದ ಮೇಲೆ ಕ್ಯಾಪಿಟಲ್ ಗೇನ್ ಟ್ಯಾಕ್ಸ್‌ಗೆ ಒಳಪಡುತ್ತದೆ.

ನಿಮ್ಮ ಜಮೀನು ಚಿತ್ರದುರ್ಗದಿಂದ 8 ಕಿ.ಮೀ. ಒಳಗಿರುವಲ್ಲಿ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಕೊಡಬೇಕಾಗುತ್ತದೆ. ನಿಮ್ಮ ಪ್ರಶ್ನೆಯಲ್ಲಿ ಹೀಗೆ ಬರುವ ಹಣದಿಂದ ಬೆಂಗಳೂರಿನಲ್ಲಿ ನಿವೇಶನ, ಮನೆ ಮಾಡಲು ಇಚ್ಛಿಸಿದ್ದೀರಿ.

ಸೆಕ್ಷನ್ 54–54ಎಫ್ ಆಧಾರದ ಮೇಲೆ ಹೀಗೆ ಬಂದ ಹಣದಿಂದ 3 ವರ್ಷಗಳಲ್ಲಿ ಬೇರೆ ಕಡೆ ನಿವೇಶನ ಮನೆ ಮಾಡುವಲ್ಲಿ ತೆರಿಗೆ ಬರುವುದಿಲ್ಲ. ಬರೇ ನಿವೇಶನ ಕೊಳ್ಳುವಂತಿಲ್ಲ. ಮಾರಾಟ ಮಾಡಿ ಬಂದ ಹಣ ಕ್ಯಾಪಿಟಲ್ ಗೇನ್ 1988 ಎ/ಸಿ ನಲ್ಲಿ, ಬ್ಯಾಂಕ್‌ನಲ್ಲಿ ಠೇವಣಿ ಇರಿಸಬೇಕು. ನಿವೇಶನ ಹಾಗೂ ಕಟ್ಟುವ ಮನೆ ಇವುಗಳ ಬೆಲೆ, ಜಮೀನು ಮಾರಾಟ ಮಾಡಿ ಬರುವ ಹಣಕ್ಕಿಂತ ಕಡಿಮೆ ಇರಬಾರದು. ನೀವು ಜಮೀನು ಮಾರಾಟ ಮಾಡಿ ಬರುವ ಹಣ ಡಿಡಿ ಅಥವಾ ಪೇ ಆರ್ಡರ್ ಮುಖಾಂತರವೇ ಸ್ವೀಕರಿಸಿ ಹಾಗೂ ಕ್ಯಾಪಿಟಲ್‌ ಗೇನ್ 1988 ರಂತೆ, ಬ್ಯಾಂಕ್‌ನಲ್ಲಿ ಠೇವಣಿ ಇರಿಸಿ. ಮುಂದೆ ಇದರಿಂದ ನಿವೇಶನ, ಮನೆ ಮಾಡಿಕೊಳ್ಳಿ.

ಹೆಸರು–ಊರು ಬೇಡ

ನಾನು ಗೃಹಿಣಿ. ವಯಸ್ಸು 35. ನನಗೆ 10 ವರ್ಷದ ಮಗಳು, ಎರಡು ವರ್ಷದ ಮಗ ಇದ್ದಾರೆ. ನಾನು ಉಳಿತಾಯ ಮಾಡಿ ಎಸ್‌ಬಿಐ ನಲ್ಲಿ ₹ 1 ಲಕ್ಷ ಅಂಚೆ ಕಚೇರಿ ಎಂಐಎಸ್‌ ನಲ್ಲಿ ₹ 1 ಲಕ್ಷ ಇಟ್ಟಿದ್ದೇನೆ. ನನ್ನ ತಾಯಿ ₹ 3 ಲಕ್ಷ ನನಗೆ ಕೊಟ್ಟಿದ್ದಾರೆ. ಈ ಹಣಕ್ಕೆ ಉತ್ತಮ ಹೂಡಿಕೆ ತಿಳಿಸಿರಿ. ನನಗೆ ತೆರಿಗೆ ಬರುತ್ತಿದೆಯೇ ಹಾಗೂ ಸ್ವಲ್ಪ ಸಾಲ ಮಾಡಿ ನಮ್ಮ ಊರಿಗೆ ಸಮೀಪದಲ್ಲಿ ಒಂದು ನಿವೇಶನ ಕೊಳ್ಳುವ ಮನಸ್ಸಿದೆ. ನನ್ನ ಯಜಮಾನರ ವರಮಾನದಿಂದ ಸಾಲ ತೀರಿಸಬಹುದೆ?

ಉತ್ತರ: ಬಡ್ಡಿ ದೃಷ್ಟಿಯಿಂದ ಅಂಚೆ ಕಚೇರಿ ಠೇವಣಿಯೇ ಮೇಲು. ಇದೇ ವೇಳೆ ₹ 5 ಲಕ್ಷದಿಂದ ಹಾಗೂ ಸ್ವಲ್ಪ ಸಾಲ ಪಡೆದು ನಿವೇಶನ ಕೊಳ್ಳಲು ಸಾಧ್ಯವಾದರೆ ಹಾಗೆಯೇ ಮಾಡಿರಿ. ಎಲ್ಲಾ ಠೇವಣಿಗಳಿಗಿಂತ ನಿವೇಶನದ ಹೂಡಿಕೆ ನಿಜವಾಗಿ ಉತ್ತಮವಾಗಿದೆ. ನಿವೇಶನ ಕೊಳ್ಳುವಾಗ ನಿವೇಶನದ ಕಾಗದ ಪತ್ರ ವಕೀಲರಿಂದ ಪರೀಶಿಲಿಸಿಕೊಳ್ಳಿ. ಇಂತಹ ಕೆಲವೊಂದು ವ್ಯವಹಾರದಲ್ಲಿ ಮೋಸವಾಗುವ ಸಾಧ್ಯತೆ ಇದೆ. ಠೇವಣಿ ಅಥವಾ ಸ್ಥಿರ ಆಸ್ತಿ ಹೂಡಿಕೆ ಇಲ್ಲಿ ವಿವರಿಸಿದ ವಿಚಾರಗಳಿಗೆ ನಿಮಗೆ ತೆರಿಗೆ ಬರುವುದಿಲ್ಲ.

ಎನ್‌. ಗುರುಮೂರ್ತಿ, ಚಳ್ಳಕೆರೆ

ನನ್ನ ಹೆಂಡತಿ ಹೆಸರಿನಲ್ಲಿ ಪಿ.ಎಂ. ಜೀವನ ಜ್ಯೋತಿ ಭೀಮಾ ಯೋಜನೆ ಇನ್ಶುರನ್ಸ್ ಮಾಡಿದ್ದೇನೆ. ಅದರಲ್ಲಿ ಹೆಸರು ಲಕ್ಷ್ಮೀದೇವಿ ಎಂದು ಇದೆ. ಆದಾರ್‌ ಕಾರ್ಡ್‌ನಲ್ಲಿ H. LAXMI ಎಂದಿದೆ. ಈಗಾಗಲೇ ಎರಡು ಕಂತು ತುಂಬಿದ್ದೇನೆ ನನಗೆ ಸರಿಯಾದ ಮಾರ್ಗದರ್ಶನ ಮಾಡಿ?

ಉತ್ತರ: ಆಧಾರ್‌ ಹಾಗೂ ಪ್ಯಾನ್‌ಕಾರ್ಡಿನಲ್ಲಿ ಹೆಸರು ತಪ್ಪಾಗಿ ಬಿದ್ದಿದ್ದರೆ ಅದನ್ನು ಸರಿಪಡಿಸಲು ಅವಕಾಶವಿದೆ. ನಿಮ್ಮ ಹೆಂಡತಿಯ ಸರಿಯಾದ ಹೆಸರು ಏನೆಂಬುದನ್ನು ದಾಖಲು ಮುಖಾಂತರ ಆಧಾರ್‌ ಕಾರ್ಡ್‌ ಕೊಡುವ ಕಚೇರಿಗೆ ಸಲ್ಲಿಸಿ, ಒಂದು ಅರ್ಜಿ ಬರೆದು, ನಿಜ ವಿಚಾರ ತಿಳಿಸಿ, ಅವರು ಹಿಂದಿನ ಕಾರ್ಡ್‌ ವಾಪಸು ಪಡೆದು, ಸರಿಯಾದ ಹೆಸರಿರುವ ಕಾರ್ಡ್‌ ಕೊಡುತ್ತಾರೆ. ಇದು ನಿಮಗೆ ಸ್ವಲ್ಪ ಕಷ್ಟವಾದೀತು. ನಿಮ್ಮ ಊರಿನಲ್ಲಿ ಈ ವಿಚಾರದಲ್ಲಿ ಅರಿವಿರುವ ಅಥವಾ ಪರಿಣತರಿಂದ ವಿಚಾರಿಸಿ ಅವರ ಸಹಾಯ ಪಡೆದು ಅರ್ಜಿ ಸಲ್ಲಿಸಿ. ಹೆಸರು ಸರಿ ಮಾಡದಿರುವಲ್ಲಿ ಮುಂದೆ ಹಣ ಪಡೆಯುವಾಗ ಗೊಂದಲವಾಗುತ್ತದೆ. ಆದಷ್ಟು ಬೇಗ ನಾನು ವಿವರಿಸಿದಂತೆ ಸರಿಪಡಿಸಿಕೊಳ್ಳಿ.

ಎಚ್‌.ಎಸ್‌. ರುದ್ರೇಗೌಡ, ಹಳೇಬೀಡು

ನನ್ನ ಹೆಸರಿನಲ್ಲಿ 2.12 ಎಕ್ರೆ ಖುಷ್ಕಿ ಜಮೀನು ಇದೆ. ಇದು ಪಿತ್ರಾರ್ಜಿತ ಆಸ್ತಿ. ರೆವಿನ್ಯೂ ಜಾಗ. ಊರ ಪಕ್ಕದಲ್ಲಿದೆ. ವಸತಿಗೆ ಯೋಗ್ಯವಾಗಿದೆ. ಇದರಲ್ಲಿ ನಾನು 13 ಗುಂಟೆ ಜಾಗ ಮಾರಾಟ ಮಾಡಿದ್ದು, ಇದರ ಮಾರುಕಟ್ಟೆ ಬೆಲೆ ₹ 87,75,000 ಆಗಿರುತ್ತದೆ.

1. ಪಿತ್ರಾರ್ಜಿತವಾಗಿ ಬಂದಿರುವ ಜಾಗಕ್ಕೂ ಮಾರಾಟ ಮಾಡಿ ಬಂದ ಹಣಕ್ಕೆ ಕ್ಯಾಪಿಟಲ್‌ ಗೇನ್‌ ಟ್ಯಾಕ್ಸ್‌ ಬರುತ್ತಿದೆಯೇ?

2. ಕ್ಯಾಪಿಟಲ್‌ ಗೇನ್‌ ಟ್ಯಾಕ್ಸ್‌ ಬಂದರೆ, ಯಾವ ಆಧಾರದಲ್ಲಿ ಲೆಕ್ಕ ಹಾಕಬೇಕು ಹಾಗೂ ಶೇಕಡ ಎಷ್ಟು ಸರ್ಕಾರಕ್ಕೆ ತೆರಿಗೆ ಕಟ್ಟಬೇಕು?

3. ಕ್ಯಾಪಿಟಲ್‌ ಗೇನ್‌ ಟ್ಯಾಕ್ಸ್‌ನಿಂದ ರಿಯಾಯ್ತಿ ಪಡೆಯಲು ಯಾವುದಾದರೂ ಯೋಜನೆಯ ಅಡಿಯಲ್ಲಿ ಅವಕಾಶವಿದೆಯೇ?

4. ಆಸ್ತಿ ಮಾರಾಟ ಮಾಡಿ ಎಷ್ಟು ಅವಧಿಯೊಳಗೆ ಸರ್ಕಾರಕ್ಕೆ ಟ್ಯಾಕ್ಸ್‌ ಪಾವತಿಸಬೇಕು?

5. ಮಾರಾಟ ಮಾಡಿ ಬಂದ ಹಣವನ್ನು ಮಕ್ಕಳಿಗೆ ಗಿಫ್ಟ್‌ ಡೀಡ್‌ ಮಾಡಿ ನೀಡಿದರೆ ಟ್ಯಾಕ್ಸ್‌ ನೀಡಬೇಕಾಗುತ್ತದೆಯೇ, ದಯಮಾಡಿ ತಿಳಿಸಿರಿ.

ಉತ್ತರ: ಪಿತ್ರಾರ್ಜಿತವಾಗಿ ಬಂದಿರುವ ಆಸ್ತಿ ಗ್ರಾಮೀಣ ಪ್ರದೇಶದ ಕೃಷಿ ಜಮೀನ್‌ನಲ್ಲಿ ಸೆಕ್ಷನ್‌ 48 ಆಧಾರದ ಮೇಲೆ ಕ್ಯಾಪಿಟಲ್‌ ಗೇನ್‌ ಟ್ಯಾಕ್ಸ್‌ನಿಂದ ವಿನಾಯತಿ ಪಡೆದಿದೆ. ಇದೇ ವೇಳೆ ಸೆಕ್ಷನ್‌ 2 (14) (iii) (a) ಪ್ರಕಾರ, ಕೃಷಿ ಜಮೀನು 10 ಸಾವಿರ ಜನಸಂಖ್ಯೆ ಉಳ್ಳ ಪಟ್ಟಣದಿಂದ 8 ಕಿ.ಮೀ. ಒಳಗಿದ್ದಲ್ಲಿ ವಿನಾಯತಿ ಇರುವುದಿಲ್ಲ.

ಕ್ಯಾಪಿಟಲ್‌ ಗೇನ್‌ ಟ್ಯಾಕ್ಸ್‌ ಶೇ 20 ಇರುತ್ತದೆ. ಈ ತೆರಿಗೆ ಉಳಿಸಲು ನ್ಯಾಷನಲ್‌ ಹೈವೇ ಅಥಾರಿಟಿ ಆಫ್‌ ಇಂಡಿಯಾ (NHIA) ಅಥವಾ ರೂರಲ್‌ ಎಲೆಕ್ಟಿಫಿಕೇಷನ್‌ (REC) ಕಾರ್ಪೊರೇಷನ್‌ ಬಾಂಡುಗಳಲ್ಲಿ, ಗರಿಷ್ಠ ₹ 50 ಲಕ್ಷ ಇರಿಸಿ ಅಲ್ಲಿತನಕ ತೆರಿಗೆ ವಿನಾಯತಿ ಪಡೆಯಬಹುದು. ಈ ಬಾಂಡ್‌ನಲ್ಲಿ 3 ವರ್ಷ ಹಣ ತೊಡಗಿಸಬೇಕು. ಇಲ್ಲಿ ಶೇ 5.25 ಬಡ್ಡಿ ದರ ಸಿಗುತ್ತದೆ. ಇದು ಸರ್ಕಾರಿ ಸ್ವಾಮ್ಯದ ಕಂಪನಿಗಳು. ಭಯ ಪಡುವ ಅವಶಶ್ಯವಿಲ್ಲ. ಹೀಗೆ ಮಾರಾಟ ಮಾಡಿ ಬಂದ ಹಣದಿಂದ, ನಿವೇಶನ–ಮನೆ ಕೊಂಡುಕೊಳ್ಳುವುದರಿಂದಲೂ ತೆರಿಗೆ ಉಳಿಸಬಹುದು.

ಮನೆ ನಿವೇಶನ, 3 ವರ್ಷಗಳೊಳಗೆ ಕೊಂಡುಕೊಳ್ಳಬೇಕು. ನೇರವಾಗಿ ಶೇ 20 ಸರ್ಕಾರಕ್ಕೆ ಸಲ್ಲಿಸುವುದಾದಲ್ಲಿ,  ಮಾರಾಟ ಮಾಡಿದ ತಾರೀಖಿನಿಂದ 6 ತಿಂಗಳೊಳಗೆ ತೆರಿಗೆ ಸಂದಾಯ ಮಾಡಬೇಕು. ಜಮೀನು ಆಸ್ತಿ ಮಾರಾಟ ಮಾಡಿ ಬರುವ ಹಣ ಮಕ್ಕಳಿಗೆ ಗಿಫ್ಟ್‌ ಡೀಡ್‌ ಮುಖಾಂತರ ವರ್ಗಾಯಿಸಿದರೆ, ಗಿಫ್ಟ್‌ಗೆ ತೆರಿಗೆ ಇರುವುದಿಲ್ಲ ಆದರೆ, ಕ್ಯಾಪಿಟಲ್‌ ಗೇನ್‌ನಿಂದ ವಿನಾಯತಿ ದೊರೆಯುವುದಿಲ್ಲ. ನೀವು 13 ಗುಂಟೆ ಮಾರಾಟ ಮಾಡಿ ಬಂದ ಹಣ ಯಾವುದೇ ಕಾರಣಕ್ಕೂ ಹೆಚ್ಚಿನ ವರಮಾನ, ಉಡುಗೊರೆ, ಕಮೀಷನ್‌ ಆಸೆಯಿಂದ ಊಹಾ ಪೋಹಗಳ ಹಾಗೂ ಅಭದ್ರವಾದ ಹೂಡಿಕೆಯಲ್ಲಿ ತೊಡಗಿಸಬೇಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT