ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಗಲಿ ತಲೆಎತ್ತಿ ನಡೆಯುವ ಪಾಠ

Last Updated 23 ಜನವರಿ 2018, 19:30 IST
ಅಕ್ಷರ ಗಾತ್ರ

‘ಆ ಕಡೆ ಈ ಕಡೆ ನೋಡಬೇಡ. ಹೆಣ್ಣುಮಕ್ಕಳು ಈಗಿನ ಕಾಲದಲ್ಲಿ ಎಲೆಮರೆ ಕಾಯಿಯಂತೆ ಇರಬೇಕು’ ಎಂದು ತನ್ನ ಹತ್ತು ವರ್ಷದ ಮಗಳಿಗೆ ಅಮ್ಮ ತಾಕೀತು ಮಾಡುತ್ತಿದ್ದಳು. ಆದರೆ, ಅಮ್ಮ ಆಡಿದ ಮಾತಿನ ಅರ್ಥ ಗೊತ್ತಾಗದ ಆ ಪುಟ್ಟ ಹುಡುಗಿ ತನ್ನ ಅರಳುಗಣ್ಣುಗಳಿಂದ ಅಮ್ಮನನ್ನು ಒಂದು ಕ್ಷಣ ದಿಟ್ಟಿಸಿದಳು. ಮತ್ತೆ ಸುತ್ತಲಿನ ಜನರನ್ನು ನೋಡತೊಡಗಿದಳು.

ಆಗ ಅವರಮ್ಮ, ‘ಆ ಕಡೆ, ಈ ಕಡೆ ನೋಡೋದು ಎಲ್ಲಾ ಯೂಸಲೆಸ್. ಸುಮ್ಮನೆ ತಲೆ ಬಗ್ಗಿಸಿಕೊಂಡು ಇರು’ ಎಂದು ಗದರಿಯೇಬಿಟ್ಟಳು. ಹುಡುಗಿ ಅಳುಮೋರೆ ಮಾಡಕೊಂಡು ತಲೆಬಗ್ಗಿಸಿಕೊಂಡಳು. ಅವರ ಜೊತೆಗಿದ್ದ ಇನ್ನೊಬ್ಬ ಹೆಣ್ಣುಮಗಳು, ‘ಹೌದು, ಈಗಿನ ಕಾಲದಲ್ಲಿ ಹೆಣ್ಣುಮಕ್ಕಳನ್ನ ಹೇಗೆ ನೋಡ್ಕೊಬೇಕು ಅಂತ ಗೊತ್ತಾಗ್ತಿಲ್ಲ. ಹೆಣ್ಣು ಈಗ ಹೇಗಿದ್ದರೂ ಕಷ್ಟ. ಅದಕ್ಕೇ ನಮ್ಮ ಹೆಣ್ಣುಮಕ್ಕಳನ್ನು ಅತಿ ಹೆಚ್ಚು ಕಾಳಜಿ ಮಾಡಬೇಕು’ ಎಂದು ಆ ಅಮ್ಮನ ಮಾತಿಗೆ ದನಿಗೂಡಿಸಿದರು.

ಅವರು ಆಡಿದ ಮಾತುಗಳನ್ನು ಕೇಳಿ ಹೆಣ್ಣು ಅಂತರಿಕ್ಷಕ್ಕೆ ಹಾರಿ ಬಂದರೂ ನಮ್ಮಲ್ಲಿ ಹೆಣ್ಣಿನ ಬಗ್ಗೆ ಇನ್ನೂ ಮಹಿಳೆಯರಲ್ಲೇ ಧೋರಣೆಗಳು ಬದಲಾಗಿಲ್ಲ ಎನಿಸಿತು. ಇವರು ಇನ್ನೂ ಯಾವ ಕಾಲದಲ್ಲಿದ್ದಾರೆ ಎಂಬ ಪ್ರಶ್ನೆಯೂ ಸುಳಿದು ಹೋಯಿತು.

ಅಮ್ಮನಾದವಳು, ‘ಮಗಳೇ ಜಗತ್ತನ್ನು ನೋಡು. ಕೆಟ್ಟದು ಮತ್ತು ಒಳ್ಳೆಯದರ ವ್ಯತ್ಯಾಸ ತಿಳಿ. ಏನೇ ಬಂದರೂ ಅದನ್ನು ಎದುರಿಸು’ ಎಂದು ಮಗಳಲ್ಲಿ ಧೈರ್ಯ ತುಂಬಬೇಕು. ಎಂಥ ಪರಿಸ್ಥಿತಿಯಲ್ಲೂ ಮಗಳಿಗೆ ಬೆನ್ನೆಲುಬಾಗಿ ನಿಲ್ಲಬೇಕು. ಅಂಥ ಕಾಲ ಇನ್ನೂ ಬಂದಿಲ್ಲವೇ? ‘ತಲೆ ಬಗ್ಗಿಸು’ ಎಂದು ಹೇಳಿಸಿಕೊಂಡ ಮಗಳು ಮುಂದೆ ಜೀವನದಲ್ಲಿ ಯಾವ ರೀತಿಯ ಭವಿಷ್ಯ ರೂಪಿಸಿಕೊಳ್ಳಬಹುದು?

ಸಮಾಜದಲ್ಲಿ ಹಿಂದೆಯೂ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯಗಳು ನಡೆಯುತ್ತಿದ್ದವು, ಇಂದೂ ನಡೆಯುತ್ತಿವೆ ಮತ್ತು ನಡೆಯುತ್ತಲೇ ಇರುತ್ತವೆ. ಆದರೆ, ಹೆಣ್ಣು ಎಲ್ಲವನ್ನೂ ಸಹಿಸುತ್ತಲೇ ಹೋಗಬೇಕೆನ್ನುವ ಉಪದೇಶ ಮಾತ್ರ ಇನ್ನೂ ಬದಲಾಗಿಲ್ಲ. ಮನೆಯಲ್ಲಿ ಅಮ್ಮನೋ ಅಥವಾ ಇನ್ಯಾರಾದರೂ ಮಗಳಿಗೆ ದೌರ್ಜನ್ಯವನ್ನು ಎದುರಿಸುವ ಮತ್ತು ಪ್ರತಿಭಟಿಸುವ ಮನೋಭಾವ ಬೆಳೆಸಿದ್ದರೆ ದೌರ್ಜನ್ಯಗಳು ತಕ್ಕಮಟ್ಟಿಗೆ ಕಡಿಮೆಯಾಗುತ್ತಿದ್ದವು. ಎಷ್ಟೋ ಹೆಣ್ಣುಮಕ್ಕಳು ತಮ್ಮ ಮೇಲೆ ನಡೆದ ದೌರ್ಜನ್ಯ, ಶೋಷಣೆಯನ್ನು ಯಾರಿಗೂ ಹೇಳದೆ ಮನಸ್ಸಿನಲ್ಲಿಯೇ ಕೊರಗುತ್ತಾರೆ, ಕೆಲವರು ಆತ್ಮಹತ್ಯೆಗೆ ಶರಣಾಗುತ್ತಾರೆ. ಮನೆಯಲ್ಲಿಯೇ ಮುಕ್ತ ವಾತಾವರಣ ಇದ್ದಿದ್ದರೆ ಇಂದು ಹೆಣ್ಣು ಇಷ್ಟೊಂದು ಶೋಷಣೆಗೆ ಒಳಗಾಗುತ್ತಿದ್ದಳೇ?

ಮನೆಯಲ್ಲಿ ಗಂಡುಮಗುವಿಗೆ ಆಟ ಆಡಲು ಆಟಿಕೆಯ ಜೆಸಿಬಿ, ಬೈಕ್‍‍, ಕಾರುಗಳನ್ನು ಕೊಟ್ಟರೆ, ಹೆಣ್ಣುಮಗುವಿಗೆ ಗೊಂಬೆ, ಅಡಿಗೆಮನೆಯ ಸೌಟು, ಪಾತ್ರೆಯ ಆಟಿಕೆಗಳನ್ನು ಕೊಡುವುದೇ ಹೆಚ್ಚು. ಹೆಚ್ಚು ಓದಿದ ತಂದೆ ತಾಯಿಯರೂ ಮನೆಯಲ್ಲಿ ಮಕ್ಕಳ ನಡುವೆ ಗಂಡು- ಹೆಣ್ಣು ಎಂಬ ಗೋಡೆಗಳನ್ನು ಚಿಕ್ಕಂದಿನಿಂದಲೇ ಕಟ್ಟುತ್ತಾ ಹೋಗುತ್ತಾರೆ. ಹೆಣ್ಣಿಗೆ ಚಿಕ್ಕವಳಿದ್ದಾಗಿನಿಂದಲೇ ಪದೇಪದೆ 'ನೀನು ಹೆಣ್ಣು' ಎಂದು ನೆನಪಿಸಲಾಗುತ್ತದೆ.

ಹೆಣ್ಣು ಮತ್ತು ಗಂಡು ಮಗು ಇಬ್ಬರಿಗೂ ಸಮಾನವಾದ ವಿದ್ಯೆ, ಸಂಸ್ಕಾರ ನೀಡಬೇಕು. ಆದರೆ, ಮಗಳನ್ನು ಕನ್ನಡ ಮಾಧ್ಯಮದ ಸಾಧಾರಣ ಶಾಲೆಗೆ ಸೇರಿಸಿದರೆ, ಮಗನನ್ನು ಇಂಗ್ಲಿಷ್‍‍ ಮಾಧ್ಯಮದ ದುಬಾರಿ ಶಾಲೆಗೆ ಸೇರಿಸುವ ಅಲಿಖಿತ ನಿಯಮ ಎಷ್ಟೋ ಮನೆಗಳಲ್ಲಿದೆ. ಮಗಳು ಬಿಎ, ಬಿಕಾಂ ಓದಿದರೆ ಸಾಕು, ಮಗ ಎಂಜಿನಿಯರ್, ಡಾಕ್ಟರ್‍‍ ಆಗಬೇಕೆಂದು ಬಯಸುವ ಅಪ್ಪಅಮ್ಮಂದಿರೇನೂ ಕಡಿಮೆ ಇಲ್ಲ.

‘ಹೆಣ್ಣನ್ನು ಪೂಜ್ಯವಾಗಿ ಕಾಣುವಲ್ಲಿ ದೇವತೆಗಳು ವಾಸಿಸುತ್ತಾರೆ’ ಎನ್ನುವ ಮಾತು ಬರಿಯ ಶ್ಲೋಕವಾಗಿ ಅಷ್ಟೇ ಉಳಿದುಬಿಟ್ಟಿದೆ. ಹೆಣ್ಣು- ಗಂಡಿನ ಅಂತರವನ್ನು ಮನೆಯಿಂದಲೇ ಅಳಿಸುತ್ತಾ ಹೋದರೆ ಲಿಂಗ ತಾರತಮ್ಯದಿಂದ ಮುಕ್ತವಾದ ಸಮಾಜವೊಂದು ಮುಂದೆ ನಿರ್ಮಾಣವಾಗಬಹುದು. ಇಂಥ ಸಮಾಜ ರೂಪಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT