ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಅಣಕಿಸಿದ ಟ್ರಂಪ್‌: ವರದಿ

Last Updated 23 ಜನವರಿ 2018, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಫ್ಗಾನಿಸ್ತಾನದಲ್ಲಿ ನಡೆದ ಸಭೆಯೊಂದರಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಾ ಶೈಲಿಯನ್ನು ಅಣಕ ಮಾಡಿರುವುದಾಗಿ ಪತ್ರಿಕೆಯೊಂದು ವರದಿ ಮಾಡಿದೆ.

ಅಫ್ಗಾನಿಸ್ತಾನದಲ್ಲಿ ಅಮೆರಿಕದ ನೀತಿ ಕುರಿತು ಮಾತನಾಡುವ ವೇಳೆ ಟ್ರಂಪ್‌, ಭಾರತೀಯರ ಉಚ್ಚಾರ ಶೈಲಿ ಹಾಗೂ ಮೋದಿ ಅವರ ಶೈಲಿ ಅನುಕರಿಸಿದ್ದಾರೆ ಎಂದು ‘ವಾಷಿಂಗ್ಟನ್‌ ಪೋಸ್ಟ್‌’ ಹೇಳಿದೆ.

ಪತ್ರಿಕಾ ವರದಿ ಬಗ್ಗೆ ಶ್ವೇತಭವನ ಈವರೆಗೂ ಪ್ರತಿಕ್ರಿಯೆ ನೀಡಿಲ್ಲ. ’ವಾಷಿಂಗ್ಟನ್‌ ಪೋಸ್ಟ್‌’ ಪತ್ರಿಕೆ ಈ ರೀತಿಯಾಗಿ ಸುಳ್ಳು ಸುದ್ದಿಗಳನ್ನು ಆಗಾಗ್ಗೆ ಪ್ರಕಟಿಸುತ್ತಿರುತ್ತದೆ’ ಎಂದು ಟ್ರಂಪ್‌ ಪ್ರತಿಕ್ರಿಯೆ ನೀಡಿದ್ದಾರೆ.

ಕಳೆದ ಜೂನ್‌ನಲ್ಲಿ ಶ್ವೇತಭವನದಲ್ಲಿ ಟ್ರಂಪ್‌ ಅವರೊಂದಿಗೆ ಮಾತನಾಡಿದ್ದ  ಮೋದಿ, ‘ಅತ್ಯಲ್ಪ ಅಪೇಕ್ಷೆಯೊಂದಿಗೆ ದೊಡ್ಡ ಮಟ್ಟದಲ್ಲಿ ಇತರ ರಾಷ್ಟ್ರಕ್ಕೆ ನೆರವು ನೀಡಿರುವ ದೇಶ ಮತ್ತೊಂದಿಲ್ಲ’ ಎಂದು ಅಫ್ಗಾನಿಸ್ತಾನದಲ್ಲಿ ಅಮೆರಿಕದ ಕಾರ್ಯದ ಕುರಿತು ಪ್ರಸ್ತಾಪಿಸಿದ್ದರು.

ಡೊನಾಲ್ಡ್‌ ಟ್ರಂಪ್‌ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಉಭಯ ನಾಯಕರು ಹಲವು ಸಂದರ್ಭಗಳಲ್ಲಿ ಭೇಟಿಯಾಗಿದ್ದು, ದೂರವಾಣಿ ಮೂಲಕವೂ ಸಂಭಾಷಣೆ ನಡೆಸಿದ್ದಾರೆ. 2017ರ ಜೂನ್‌ನಲ್ಲಿ ಮೊದಲ ಭೇಟಿಗೂ ಮುನ್ನ ಮೋದಿ ಅವರನ್ನು ‘ನಿಜವಾದ ಮಿತ್ರ’ ಎಂದು ಬಣ್ಣಿಸಿ ಟ್ರಂಪ್‌ ಟ್ವೀಟ್‌ ಮಾಡಿದ್ದರು.

2016ರ ಆಗಸ್ಟ್‌ನಲ್ಲಿ ‘ದಕ್ಷಿಣ ಏಷ್ಯಾ ನೀತಿ’ ಬಹಿರಂಗ ಪಡಿಸಿದ್ದ ಟ್ರಂಪ್‌, ಅಫ್ಗಾನಿಸ್ತಾನ ಆರ್ಥಿಕ ಅಭಿವೃದ್ಧಿಯಲ್ಲಿ ಭಾರತ ಮಹತ್ವದ ಕೊಡುಗೆ ಅಗತ್ಯತೆ ಕುರಿತು ಪ್ರಸ್ತಾಪಿಸಿದ್ದರು. ಜತೆಗೆ  ವಿಶ್ವಸಂಸ್ಥೆ ನೇತೃತ್ವದ ಅಂತರರಾಷ್ಟ್ರೀಯ ಪಡೆಗಳ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಭಯೋತ್ಪಾದಕರಿಗೆ ಪಾಕಿಸ್ತಾನ ಸುರಕ್ಷಿತ ಜಾಗ ಎಂದು ದೂರಿದ್ದರು. ಈ ನಡುವೆ, ಇಂಥದ್ದೊಂದು ಆರೋಪವೀಗ ಕೇಳಿಬಂದಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡೆಮಾಕ್ರಟಿಕ್ ಪಕ್ಷದ ಭಾರತೀಯ ಅಮೆರಿಕನ್ ಕಾಂಗ್ರೆಸ್ ಮುಖಂಡ ರಾಜಾ ಕೃಷ್ಣಮೂರ್ತಿ, 'ಅಧ್ಯಕ್ಷ ಟ್ರಂಪ್, ಮೋದಿಯವರನ್ನು ಅಣಕಿಸಿದ ಸುದ್ದಿ ಕೇಳಿ ಬೇಸರವಾಯಿತು. ಅಮೆರಿಕನ್ನರನ್ನು ಯಾರೂ ಅವರ ಭಾಷೆಯ ಶೈಲಿಯಿಂದ ಅಳೆಯುವುದಿಲ್ಲ. ಬದಲಾಗಿ ಅವರ ದೇಶದ ಮೌಲ್ಯ ಮತ್ತು ಅವರ ಬದ್ಧತೆಯಿಂದ ಅಳೆಯುತ್ತಾರೆ' ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT