ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರಭದ್ರಸ್ವಾಮಿ ಅದ್ದೂರಿ ಮಹಾರಥೋತ್ಸವ

Last Updated 24 ಜನವರಿ 2018, 7:08 IST
ಅಕ್ಷರ ಗಾತ್ರ

ಕನಕಪುರ: ತಾಲ್ಲೂಕಿನ ಧಾರ್ಮಿಕ ಪ್ರಸಿದ್ಧ ಹಾಗೂ ಚೋಳರ ಕಾಲದಲ್ಲಿ ನಿರ್ಮಾಣಗೊಂಡಿರುವಂತ ಶಿವನಹಳ್ಳಿ ವೀರಭದ್ರಸ್ವಾಮಿಯ ಜಾತ್ರಾ ಮಹೋತ್ಸವ ಹಾಗೂ ಮಹಾ ರಥೋತ್ಸವವು ಮಂಗಳವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ತಾಲ್ಲೂಕಿನಲ್ಲಿಯೇ ವರ್ಷಾರಂಭದಲ್ಲಿ ಜರುಗುವ 3ನೇ ಜಾತ್ರೆ ಇದು. ತಾಲ್ಲೂಕು ಸೇರಿದಂತೆ ಜಿಲ್ಲೆಯ ವಿವಿಧ ಭಾಗ, ಮೈಸೂರು, ಬೆಂಗಳೂರು, ಪಕ್ಕದ ತಮಿಳುನಾಡಿನ ಜನತೆಗೆ ವೀರಭದ್ರಸ್ವಾಮಿ ಮನೆ ದೇವರಾಗಿದ್ದು, ಹೆಚ್ಚಿನ ಭಕ್ತರನ್ನು ಹೊಂದಿರುವುದರಿಂದ ಜಾತ್ರಾ ಮಹೋತ್ಸವಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ.

ಜಾತ್ರಾ ಮಹೋತ್ಸವವು ಏಳು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯುತ್ತದೆ. ಸೋಮವಾರದಿಂದ ಬುಧವಾರದವರೆಗೆ ಮೂರು ದಿನಗಳ ಕಾಲ ವಿಶೇಷ ಕಾರ್ಯಕ್ರಮಗಳು ಜರುಗುತ್ತವೆ.

ಸೋಮವಾರ ರಾತ್ರಿ ದೇವರ ಎಳವಾರ, ಮಂಗಳವಾರ ಬೆಳಿಗ್ಗೆ 6 ಗಂಟೆಗೆ ಅಗ್ನಿ ಕೊಂಡೋತ್ಸವ ನಡೆಯಿತು. ಕೊಂಡದ ನಂತರ ಮಡಿತೇರು, ಮದ್ಯಾಹ್ನ 1 ಗಂಟೆಯಿಂದ 3 ಗಂಟೆಯವರೆಗೆ ಮಹಾತೇರು ನಡೆಯಿತು.

ದೇವರ ಹೊತ್ತ ಮಹಾತೇರನ್ನು ನೂರಾರು ಸಂಖ್ಯೆಯಲ್ಲಿ ಭಕ್ತರು ಗುಡಿಯ ಸುತ್ತ ಒಂದು ಸುತ್ತು ಎಳೆದು ಮೆರವಣಿಗೆ ಮಾಡಿದರು. ಈ ಸಂದರ್ಭದಲ್ಲಿ ಹರಕೆ ಹೊತ್ತ ಭಕ್ತರು ತೇರಿನ ಹಗ್ಗವನ್ನು ಎಳೆಯುವುದರ ಜೊತೆಗೆ ಹಣ್ಣು ಜವನವನ್ನು ತೇರಿಗೆ ಎಸೆದು ಭಕ್ತಿ ಸಮರ್ಪಣೆ ಮಾಡಿದರು.

ಅಂಗಡಿಗಳು ಜೋರಾಗಿದ್ದು, ಹೆಚ್ಚಿನ ಭಕ್ತರು ತಮಗೆ ಬೇಕಾದ ಸಾಮಗ್ರಿಗಳನ್ನು ಕೊಂಡು ಜಾತ್ರೆಯ ಆನಂದ ಅನುಭವಿಸಿದರು. ಮಕ್ಕಳು ಆಟವಾಡಲು ಹಾಕಿದ್ದ ಕುದುರೆ ಆಟ ಹೆಚ್ಚಿನ ಮಕ್ಕಳು ಆಡಿ ಖುಷಿಪಟ್ಟರು. ನಗರಕ್ಕೆ ಹೊಂದುಕೊಂಡಂತೆ ಜಾತ್ರೆ ನಡೆಯುವುದರಿಂದ ನಗರದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಭಕ್ತಿ ಸಮರ್ಪಣೆ ಮಾಡಿದರು.

ರಥಕ್ಕೆ ಚಾಲನೆ: ದೇವಾಲಯವು ಮುಜರಾಯಿ ಇಲಾಖೆಗೆ ಸೇರಿರುವುದರಿಂದ ತಹಶೀಲ್ದಾರ್‌ ಆನಂದಯ್ಯ ಅವರು ಮೊದಲ ಪೂಜೆ ನೆರವೇರಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ದೇಗುಲಮಠದ ಮುಮ್ಮಡಿ ನಿರ್ವಾಣಸ್ವಾಮಿ ಜಾತ್ರಾ ಮಹೋತ್ಸವದ ನೇತೃತ್ವ ವಹಿಸಿದ್ದರು.

ವಿಧಾನ ಪರಿಷತ್‌ ಸದಸ್ಯ ಎಸ್‌.ರವಿ, ನಗರಸಭೆ ಅಧ್ಯಕ್ಷ ಕೆ.ಎನ್‌.ದಿಲೀಪ್‌, ಉಪಾಧ್ಯಕ್ಷ ಕೆ.ಜಗನ್ನಾಥ್‌, ಶಿವನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವೀರಪ್ಪ, ನಗರಸಭೆ ಸದಸ್ಯ ಆರ್‌.ಕೃಷ್ಣಮೂರ್ತಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ಸಿ.ಬಿ.ಧನಲಕ್ಷ್ಮೀ ಚಂದ್ರನಾಯ್ಕ್‌, ಕಾಂಗ್ರೆಸ್‌ ಮುಖಂಡ ಎಂ.ಪುರುಷೋತ್ತಮ್‌, ಶಿವನಹಳ್ಳಿ ಗ್ರಾಮದ ಮುಖಂಡರು ಪಾಲ್ಗೊಂಡಿದ್ದರು.

ಸ್ಥಗಿತಗೊಂಡ ದನಗಳ ಪರಿಷೆ

ಶಿವನಹಳ್ಳಿ ಜಾತ್ರೆಯಲ್ಲಿ ಅತ್ಯಂತ ಆಕರ್ಷಕವಾದದ್ದು, ಮತ್ತು ಹೆಚ್ಚಿನ ಪ್ರಸಿದ್ಧಿ ಪಡೆದಿದ್ದು, ದನಗಳ ಪರಿಷೆ. ಮಳವಳ್ಳಿ, ಮೈಸೂರು, ಮಂಡ್ಯ, ತಳಿಗಳಿಂದ ಬಂದು ಈ ಪರಿಷೆಯಲ್ಲಿ ದನಗಳನ್ನು ಕೊಳ್ಳುವುದು ಮಾರಾಟು ಮಾಡುವುದು ನಡೆಯುತ್ತಿತ್ತು. ಈ ಬಾರಿಯೂ ದನಗಳು ಬಾರದ ಕಾರಣ ಪರಿಷೆಯು ಸ್ಥಗಿತಗೊಂಡಿದೆ.

ಭದ್ರತೆ: ನಗರ ಮತ್ತು ಗ್ರಾಮಾಂತರ ಠಾಣೆ ಪೊಲೀಸರು ಹೆಚ್ಚಿನ ಭದ್ರತೆ ಒದಗಿಸಿ ಜಾತ್ರಾ ಮಹೋತ್ಸವದಲ್ಲಿ ಯಾವುದೇ ಅಹಿಕರ ಘಟನೆಗಳು ನಡೆಯದಂತೆ ಕ್ರಮ ಕೈಗೊಂಡಿದ್ದರು.

* * 

ಹಬ್ಬ ಆಚರಣೆಗಳು ನಮ್ಮ ಧಾರ್ಮಿಕ ಮತ್ತು ಸಾಂಪ್ರಾದಾಯಿಕ ಸಂಸ್ಕೃತಿಯನ್ನು ಬಿಂಬಿಸುತ್ತವೆ. ಜಾತ್ರೆಯಲ್ಲಿ ಹೋಗಿ ದೇವರ ದರ್ಶನ ಪಡೆದರೆ ಇಷ್ಟಾರ್ಥಗಳು ಈಡೇರುತ್ತವೆ.
ಸಿ.ಬಿ.ಧನಲಕ್ಷ್ಮೀ ಚಂದ್ರನಾಯ್ಕ್‌,
ಚೌಕಸಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT