ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿನ ಮನೆಯಾದ ಕುಣಿಗಲ್‌

Last Updated 24 ಜನವರಿ 2018, 7:17 IST
ಅಕ್ಷರ ಗಾತ್ರ

ಕುಣಿಗಲ್: ತಾಲ್ಲೂಕಿನಲ್ಲಿ ಈ ತಿಂಗಳ ಮೊದಲ 20 ದಿನಗಳಲ್ಲಿ ‍ಪ್ರತ್ಯೇಕ ಅಪಘಾತಗಳಲ್ಲಿ 15 ಮಂದಿ ಸಾವಿಗೀಡಾಗಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ. ತಾಲ್ಲೂಕಿನಲ್ಲಿ ಮೂರು ಪೊಲೀಸ್ ಠಾಣೆಗಳಿವೆ. ಇವುಗಳಲ್ಲಿ  ಕುಣಿಗಲ್ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಅ‍ಪಘಾತಗಳಾಗಿವೆ. ಈ ಠಾಣೆಯ ಅಂಕಿ–ಅಂಶಗಳ ಪ್ರಕಾರ ಒಟ್ಟು 19 ಅಪಘಾತಗಳಾಗಿವೆ. 14 ಮಂದಿ ಮೃತ ಪಟ್ಟಿದ್ದಾರೆ. 8 ಮಂದಿ ಗಾಯಗೊಂಡಿದ್ದಾರೆ.ಅವೈಜ್ಞಾನಿಕ ರಸ್ತೆ ನಿರ್ಮಾಣ, ತಿರುವು ಕುರಿತು ಮಾಹಿತಿ ಇಲ್ಲದೇ ಇರುವುದು, ಸಂಚಾರ ವ್ಯವಸ್ಥೆಯ ಬಗ್ಗೆ ಜನರ ಅಸಡ್ಡೆ ಇವುಗಳೆಲ್ಲವೂ ಅಪಘಾತಕ್ಕೆ ಕಾರಣಗಳಾಗಿವೆ.

‘ಇಷ್ಟೆಲ್ಲ ಅಪಘಾತಗಳು ನಡೆಯುತ್ತಿದ್ದರೂ ಪೊಲೀಸರಾಗಲಿ, ತಾಲ್ಲೂಕು ಆಡಳಿತವಾಗಲಿ, ಹೆದ್ದಾರಿ ಇಲಾಖೆಯಾಗಲಿ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಈವರೆಗೂ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿಲ್ಲ. ಅಪಘಾತ ಕಡಿಮೆ ಮಾಡಲು ಏನೆಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕೆಂಬ ಬಗ್ಗೆ ಚರ್ಚೆಯೂ ಮಾಡಿದಂತೆ  ಕಾಣುತ್ತಿಲ್ಲ. ಜನರ ಸಾವಿಗೂ ಉದಾಸೀನ  ತೋರಲಾಗುತ್ತಿದೆ’ ಎಂದು ಪಟ್ಟಣದ ಜನರು ಆಕ್ರೋಶ ವ್ಯಕ್ತ‍ಪಡಿಸುತ್ತಿದ್ದಾರೆ.

ಹೊಸ ವರ್ಷದ ವರ್ಷದ ಮೊದಲ ದಿನವೇ  ರಾಜ್ಯ ಹೆದ್ದಾರಿ 33ರ ಗವಿಮಠದ ಬಳಿ  ರಸ್ತೆಗೆ ಅಡ್ಡ ಬಂದ ಬಾಲಕನನ್ನು ಪಾರುಮಾಡಲು ಹೋಗಿ ನಿಂತಿದ್ದ ಟ್ಯಾಂಕರ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮವಾಗಿ ಒಂದೇ ಕುಟುಂಬದ 5 ಮಂದಿ ಮೃತಪಟ್ಟರು. ಗವಿ ಮಠದ ಬಳಿ ಪದೇಪದೇ ಅಪಘಾತಗಳು ನಡೆಯುತ್ತಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ.

ರಾಷ್ಟ್ರೀಯ ಹೆದ್ದಾರಿ 75ರ ಬೈಪಾಸ್ ರಸ್ತೆಯ ಹೇರೂರಿನಿಂದ ದೊಂಬರಹಟ್ಟಿ ವರೆಗಿನ ರಸ್ತೆಯಲ್ಲಿ ನಿರಂತರವಾಗಿ ಅಪಘಾತಗಳಾಗಿ 7ಮಂದಿ ಮೃತಪಟ್ಟಿದ್ದಾರೆ.‌ ಅಪಘಾತದಲ್ಲಿ ಮೃತಪಟ್ಟ ಜಿಡ್ಡಗೆರೆ ಸೋಮಶೇಖರ್ ಮತ್ತು ಚಿಕ್ಕಮಳಲವಾಡಿಯ ಶ್ರೀಧರ್  ಸಾವು ಕುಟುಂಬದವರನ್ನು ಬೆಚ್ಚಿಬೀಳಿಸಿದ್ದರೂ ಧೃತಿಗೆಡದೆ ಮಕ್ಕಳ ಅಂಗಾಂಗ ದಾನ ಮಾಡಿ ಮತ್ತೊಬ್ಬರ ಜೀವಕ್ಕೆ ನೆರವಾಗಿ ಗಮನ ಸೆಳೆದಿದ್ದಾರೆ.

ಬೈಕ್ ಅಪಘಾತದಿಂದ ಮೃತ ಪಟ್ಟವರ ಪೈಕಿ ಯುವಕರು ಹೆಲ್ಮೆಟ್ ಧರಿಸದಿರುವುದು ಕಾರಣವಾದರೇ, ಕಾರಿನ ಚಾಲಕರು ಸೀಟ್ ಬೆಲ್ಟ್ ಹಾಕದಿರುವ ಅಂಶಗಳು ಬೆಳಕಿಗೆ ಬಂದಿವೆ.ವರ್ಷದ ಮೊದಲ ದಿನ ನಡೆದ ಕಾರಿನ ಅಪಘಾತದಲ್ಲಿ ಚಾಲಕ ಮತ್ತು ಪಕ್ಕದಲ್ಲಿ ಕುಳಿತ್ತಿದ್ದ ಸಹೋದರ ಸೀಟ್ ಬೆಲ್ಟ್ ಕಟ್ಟಿಕೊಂಡ ಕಾರಣ  ಪಾರಾಗಿದ್ದಾರೆ ಎಂದು ಪಿಎಸೈ ಪುಟ್ಟೇಗೌಡ ಹೇಳಿದರು.

’ಅಪಘಾತಗಳಿಗೆ  ಅತಿವೇಗದ ಚಾಲನೆ ಮತ್ತು ಅಜಾಗರೂಕತೆ ಕಾರಣ’ ಎಂದು  ಸಿಪಿಐ ಬಾಳೇಗೌಡ ಅಭಿಪ್ರಾಯಪಡುತ್ತಾರೆ. ‘ಇಷ್ಟೊಂದು ಪ್ರಮಾಣದಲ್ಲಿ ಅಪಘಾತಗಳು ಹೆಚ್ಚುತ್ತಿವೆ. ಇದಕ್ಕೆ ಏನಾದರೂ ಪರಿಹಾರ ಹುಡುಕಬಹುದಲ್ಲವೇ?’ ಎಂದು ಜನರು ಕೇಳುತ್ತಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 75ರ ಬೈಪಾಸ್ ರಸ್ತೆಯಲ್ಲಿ ವೇಗವಾಗಿ ಸಂಚರಿಸುವ ವಾಹನಗಳು ಏಕಾಏಕಿ  ಬ್ರೇಕ್ ಹಾಕಿದಾಗ ನಿಯಂತ್ರಣ ಕಳೆದುಕೊಂಡು ಮುಗ್ಗರಿಸಿ ಬಿದ್ದಿರುವ ಪ್ರಕರಣಗಳೇ ಹೆಚ್ಚಿವೆ.  ಬಹುತೇಕ ಎಲ್ಲ ಅಪಘಾತಗಳು ಸ್ವಯಂಕೃತವಾಗಿಯೇ (ಸೆಲ್ಪ್ ಆಕ್ಸಿಡೆಂಟ್) ಸಂಭವಿಸಿವೆ. ಎಚ್ಚರಿಕೆಯ ಕ್ರಮಗಳನ್ನು ತೆಗೆದುಕಂಡು ಅಪಘಾತ ಸ್ಥಳಗಳನ್ನು ಗುರುತಿಸಿ ಫಲಕಗಳನ್ನು ಅಳವಡಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ಪೊಲೀಸರು ಹೇಳುತ್ತಾರೆ.

ಟಿ.ಎಚ್‌.ಗುರುಚರಣ್‌ಸಿಂಗ್‌

ಕಣ್ಣೀರು ತಂದವು

’ವರ್ಷದ ಮೊದಲ ದಿನದಿಂದ ಶವ ಪರೀಕ್ಷೆಯ ಸಹಾಯಕನಾಗಿ ಕಾರ್ಯನಿರ್ವಹಿಸಿದ್ದೇನೆ. ಶವ ಪರೀಕ್ಷೆಗೂ ಮುನ್ನ ಪೂಜೆ ಸಲ್ಲಿಸುವುದು ನನ್ನ ವಾಡಿಕೆ. ಒಂದೇ ಕುಟುಂಬದ 5 ಮಂದಿ ಹಾಗೂ ಕಬ್ಬಿನ ಟ್ರ್ಯಾಕ್ಟರ್ ಮೇಲಿಂದ ಬಿದ್ದು ಕೂಲಿಗಾಗಿ ಕನಕಪುರದಿಂದ ಬಂದಿದ್ದ ಸತ್ತ ಯುವತಿಯ ಮೃತ ದೇಹಗಳು ನೋಡಿದಾಗ ಕಣ್ಣೀರು ತರಿಸಿದವು’ ಎಂದು ಸಾರ್ವಜನಿಕ ಆಸ್ಪತ್ರೆಯಲ್ಲಿ 15ವರ್ಷಗಳಿಂದ ಗ್ರೂಪ್ ಡಿ ನೌಕರನಾಗಿ ಕಾರ್ಯನಿರ್ವಹಿಸುತ್ತಿರುವ ಚಂದ್ರಶೇಖರ್‌ ಭಾವುಕರಾದರು.

ನಿಯಮ ಉಲ್ಲಂಘನೆ

’ಪಟ್ಟಣ ಸೇರಿದಂತೆ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ದ್ವಿಚಕ್ರ ಸವಾರರು ಹೆಲ್ಮಟ್‌ ಧರಿಸುವುದನ್ನೇ ಮರೆತ್ತಿದ್ದಾರೆ. ಪೊಲೀಸರು ಈ ಹಿಂದೆ ಕ್ರಮ ತೆಗೆದುಕೊಳ್ಳುತ್ತಿದ್ದರು. ಈಗ ಏನು ಮಾಡುತ್ತಿಲ್ಲ. ಪಟ್ಟಣದಲ್ಲಿ ವಿದ್ಯಾರ್ಥಿಗಳು ಸಹ ಬೈಕ್ ಚಾಲನೆ ಮತ್ತು ಮೂರು ಜನ ಸವಾರಿ ಮಾಡಿ ಸಂಚಾರ ನಿಯಮಗಳ ಉಲ್ಲಂಘನೆ ಮಾಡುತ್ತಿದ್ದರೂ ಕ್ರಮ ತೆಗೆದುಕೊಳ್ಳತ್ತಿಲ್ಲ’ ಎಂದು ಸೇವಾಭಾಗ್ಯ ಫೌಂಡೇಷನ್ ಕಾರ್ಯದರ್ಶಿ ವಿನೋದ್‌ಗೌಡ ದೂರಿದರು.

ನಿರ್ಲಕ್ಷ್ಯ

ರಾಜ್ಯ ಹೆದ್ದಾರಿ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತ ಹೆಚ್ಚಾಗುತ್ತಿದೆ. ವಾಹನ ಚಾಲನೆ ಮಾಡುವವರ ನಿರ್ಲಕ್ಷ್ಯ, ವೇಗದ ಚಾಲನೆ ಕಾರಣವಾಗಿದೆ. ಬೈಪಾಸ್ ರಸ್ತೆಗಳಲ್ಲಿ ಸಂಚಾರ ನಿಯಮಗಳನ್ನು ಉಲಂಘಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಿದೆ. ಶನಿವಾರ ಮತ್ತು ಭಾನುವಾರ ಅತೀ ಹೆಚ್ಚು ವಾಹನ ಸಂಚರಿಸುತ್ತವೆ. ಆದ್ದರಿಂದ ಸ್ಪೀಡ್ ಬ್ರೇಕರ್ ಅಳವಡಿಸುವುದು ಉತ್ತಮ ಎಂದು ಹೆರೂರಿನ ಪ್ರವೀಣ್ ತಿಳಿಸಿದರು.

ಅಸ್ವಾಭಾವಿಕ ಸಾವುಗಳು ಹೆಚ್ಚು

ಈ ತಿಂಗಳು ಅಸ್ವಾಭಾವಿಕ ಸಾವುಗಳ ಸಂಖ್ಯೆಯೂ ಹೆಚ್ಚಿದೆ. ಕೆಲವರ ಸಾವಿಗೆ ಕಾರಣ ತಿಳಿದುಬಂದಿಲ್ಲ. ಉಳಿದಂತೆ ವಿಷ ಸೇವನೆ, ನೀರಿಗೆ ಬಿದ್ದು ಸಾವಿಗೀಡಾಗಿದ್ದಾರೆ. ಈ ರೀತಿಯಲ್ಲಿ 14 ಮಂದಿ ಸಾವಿಗೀಡಾಗಿದ್ದಾರೆ.

ಅಂಕಿ ಅಂಶಗಳು
ವರ್ಷ ಅಪಘಾತ ಪ್ರಕರಣ ಮೃತರ ಸಂಖ್ಯೆ
2015  250  61
2016  313  93
2017  369  96
2018 ಜನವರಿ 20ರ ವರೆಗೆ 15

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT