ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್ 25–30 ಸ್ಥಾನಕ್ಕೆ ಸೀಮಿತ: ಜಮೀರ್ ಅಹಮದ್ ಖಾನ್

Last Updated 24 ಜನವರಿ 2018, 7:33 IST
ಅಕ್ಷರ ಗಾತ್ರ

ನಾಗಮಂಗಲ: ‘ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದು ಅವಶ್ಯ’ ಎಂದು ಜೆಡಿಎಸ್‌ನಿಂದ ಅಮನತ್ತಾಗಿರುವ ಬಂಡಾಯ ಶಾಸಕ ಜಮೀರ್ ಅಹಮದ್ ಖಾನ್ ಹೇಳಿದರು.

ತಾಲ್ಲೂಕಿನ ಬೆಳ್ಳೂರು, ಕದಬಹಳ್ಳಿ, ವಳಗೆರೆಪುರ, ಉಮರ್ ನಗರ ಮತ್ತು ಪಟ್ಟಣದ ಹಲವು ಮುಸ್ಲಿಂ ಮನೆಗಳಿಗೆ ಭೇಟಿ ನೀಡಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶಾಸಕ ಎನ್. ಚಲುವರಾಯಸ್ವಾಮಿ ಪರವಾಗಿ ಬೆಂಬಲ ಯಾಚಿಸಿ ನಂತರ ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದರು.

‘ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ. ಅದನ್ನು ಮಾಧ್ಯಮಗಳ ಸಮೀಕ್ಷೆಯು ದೃಢಪಡಿಸಿದೆ. ಇಲ್ಲಿ ಜೆಡಿಎಸ್ ಲೆಕ್ಕಕ್ಕಿಲ್ಲ, ಅದು 25–30 ಸ್ಥಾನಕ್ಕೆ ಸೀಮಿತಗೊಳ್ಳುತ್ತದೆ’ ಎಂದು ಹೇಳಿದರು.

‘ಶಾಸಕ ಎನ್. ಚಲುವರಾಯಸ್ವಾಮಿ ತಾಲ್ಲೂಕಿಗೆ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಅವರು 2008ರಲ್ಲಿ ಸೋತ ಸಂದರ್ಭದಲ್ಲಿ ಇಲ್ಲಿ ಎಷ್ಟು ಅಭಿವೃದ್ಧಿಯಾಗಿತ್ತು ಎಂಬುದು ತಾಲ್ಲೂಕಿನ ಜನರಿಗೆ ಗೊತ್ತಿದೆ’ ಎಂದು ಮಾಜಿ ಶಾಸಕ ಸುರೇಶ್ ಗೌಡ ಅವರ ಹೆಸರೆತ್ತದೆ ಟೀಕಿಸಿದರು.

ಶಾಸಕ ಎನ್. ಚಲುವರಾಯಸ್ವಾಮಿ ಮಾತನಾಡಿ, ‘ವಿರೋಧಿಗಳು ಮಾಡುತ್ತಿರುವ ತಂತ್ರಕ್ಕೆ ಪತ್ರಿತಂತ್ರವನ್ನು ಹೆಣೆಯುವ ಸಲುವಾಗಿ ಜಮೀರ್ ಅಹಮದ್ ತಾಲ್ಲೂಕಿಗೆ ಭೇಟಿ ನೀಡಿದ್ದಾರೆ. ಈ ಕ್ಷೇತ್ರದ ಚುನಾವಣೆ ರಾಜ್ಯಕ್ಕೆ ವಿಶೇಷವಾದದ್ದು. ನಾವು 7 ಜನ ಬಂಡಾಯ ಶಾಸಕರಿಗೆ ಇದು ಅತ್ಯಂತ ಪ್ರಮುಖವಾದ ಚುನಾವಣೆ’ ಎಂದರು. ಪಟ್ಟಣ ಪಂಚಾಯಿತಿ ನೂರ್ ಅಹಮದ್, ಸ್ಟಾರ್ ಪೌಲ್ಟ್ರಿ ಫಾರಂನ ಮುರ್ತುಝಾ, ಮಹಮದ್ ಸೆಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT