ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಪೋಭೂಮಿಯಲ್ಲಿ ಲಹರಿ ಪಠಣದ ನಿನಾದ

Last Updated 24 ಜನವರಿ 2018, 9:55 IST
ಅಕ್ಷರ ಗಾತ್ರ

ಗಾಯತ್ರಿ ತಪೋಭೂಮಿ(ತಡಸ): ಮನುಷ್ಯ ಲೌಖಿಕ ಬದುಕಿನ ಜೊತೆಗೆ ಭಗವಂತನ ನಾಮಸ್ಮರಣೆ ಮಾಡಿದರೆ ಜನ್ಮ ಸಾರ್ಥಕವಾಗುತ್ತದೆ ಎಂದು ಹೆಬ್ಬಳ್ಳಿಯ ಚೈತನ್ಯಾಶ್ರಮದ ದತ್ತಾವಧೂತ ಮಹಾರಾಜರು ಹೇಳಿದರು. ಇಲ್ಲಿ ನಡೆಯುತ್ತಿರುವ 24ನೇ ಕೋಟಿ ಗಾಯತ್ರಿ ಮಹಾಯಾಗದ ಎರಡನೇ ದಿನವಾದ ಸೋಮವಾರ ಅವರು ಧರ್ಮಸಭೆ ಉದ್ದೇಶಿಸಿ ಮಾತನಾಡಿದರು. 

‘ಔದ್ಯೋಗಿಕ ಮತ್ತು ಶೈಕ್ಷಣಿಕ ಕ್ರಾಂತಿಯಾದರೆ ಜೀವನ ಸಾರ್ಥಕವಾಯಿತು ಎಂದು ಭಾವಿಸಿದ್ದೇವೆ. ಇದರಿಂದ ಶಾಂತಿ ಲಭಿಸುವುದಿಲ್ಲ. ಸಮಾಜದ ಕೆಲವರ ದೂಷಣೆಗೆ ಕಿವಿಗೊಡದೇ ದೇವರ ನಾಮಸ್ಮರಣೆ ಮಾಡಿ ಹೊಸ ಅನುಭವ ಪಡೆದುಕೊಳ್ಳಬೇಕು. ಆಧ್ಯಾತ್ಮಿಕ ಕ್ರಾಂತಿ ಮಾಡಿದ ಶಂಕರಾಚಾರ್ಯರು ತಮ್ಮ ಅಗಾಧ ಜ್ಞಾನದಿಂದ ‌‌‌ಎಲ್ಲರನ್ನೂ ಉದ್ದಾರ ಮಾಡಲು ಯತ್ನಿಸಿದರು’ ಎಂದು ಹೇಳಿದರು. ಟ್ರಸ್ಟ್ ಕಮಿಟಿ ಅಧ್ಯಕ್ಷ ಕೆ.ಎಲ್.ಕುಲಕರ್ಣಿ ಹಾಗೂ ಟ್ರಸ್ಟಿ ರಮೇಶ ರಿತ್ತಿ ಅವರು ದತ್ತಾವಧೂತರ ಪಾದಪೂಜೆ ಮಾಡಿದರು.

ಹುಬ್ಬಳ್ಳಿ ಅದ್ವೈತ ಆಶ್ರಮದ ಪ್ರಣವಾನಂದತೀರ್ಥ ಸ್ವಾಮೀಜಿ ಮಾತನಾಡಿ ‘ಭಕ್ತಿ ಮಾರ್ಗದಲ್ಲಿ ನಡೆದು ಭಗವಂತನ ಜಪಸಾಧನೆಯಲ್ಲಿ ನಿರತರಾಗಬೇಕು. ಗಾಯತ್ರಿ ಉಪಾಸನೆ ಮಾಡಬೇಕು ಎಂದರು.

‘ವಲ್ಲಭ ಚೈತನ್ಯರು ಜ್ಞಾನ ಸಾಮ್ರಾಟರಾಗಿದ್ದರು. ಬಂದಿದ್ದೆಲ್ಲ, ಕೊಟ್ಟಿದ್ದೆಲ್ಲ ನನ್ನದಲ್ಲ, ಗಾಯತ್ರಿ ಮಾತೆ ಕೊಟ್ಟಿರುವುದು ಎನ್ನುತ್ತಿದ್ದರು. ಗಾಯತ್ರಿ ಮತ್ತು ಬ್ರಹ್ಮ ಬೇರೆಯಲ್ಲ. ಹಾಗೇ ಗುರು ಗಾಯತ್ರಿಯರಲ್ಲಿ ಭಿನ್ನತೆ ಇಲ್ಲ’ ಎಂದು ಹೇಳಿದರು.

ಬದರಿನಾಥದ ಧರಣಿದಾಸ, ತಾರಾನಾಥ ಮಹಾರಾಜರು ಉಪಸ್ಥಿತರಿದ್ದರು. ಡಾ.ಪರಿಮಳಾ ಪಂಚಮುಖಿ ನಿರೂಪಿಸಿದರು. ವಲ್ಲಭಚೈತನ್ಯರ ಪ್ರವಚನಗಳನ್ನು ಸಂಗ್ರಹಿಸಿ ನಾರಾಯಣ ಹಳ್ಯಾಳ ಅವರು ಸಿದ್ಧಪಡಿಸಿದ ಆಡಿಯೊ ಸಿಡಿಯನ್ನು ದಿವಾಕರ ಶಂಕರ ದೀಕ್ಷಿತರು ಬಿಡುಗಡೆ ಮಾಡಿದರು.

ಪ್ರವಚನ ನೀಡಿದ ಬೆಂಗಳೂರಿನ ಪಂಡಿತ್‌ ಸುಬ್ರಾಯ ಶರ್ಮಾ, ‘ಮಹಾತ್ಮರು ಸಂಕಲ್ಪ ಮಾಡಿದರೆ ಅದು ಸತ್ಯ ಸಂಕಲ್ಪವಾಗುತ್ತದೆ. ಆ ಕಾರ್ಯಗಳು ಅಡ್ಡಿ, ಆತಂಕವಿಲ್ಲದೇ ನಡೆದುಹೋಗುತ್ತವೆ. ಎಲ್ಲಿ ಗುರುವಿನ ಶಕ್ತಿ ಹಾಗೂ ಅನುಗ್ರಹವಿರುತ್ತದೆಯೋ ಅಲ್ಲಿ ದೇವರು ವಿರಾಜಮಾನನಾಗಿರುತ್ತಾನೆ’ ಎಂದರು.

ಪಠಣದ ನಿನಾದ: ತಪೋಭೂಮಿಯಲ್ಲಿ ಸೋಮವಾರ ಬೆಳಿಗ್ಗೆ ಸೌಂದರ್ಯ ಲಹರಿ ಪಠಣದ ನಿನಾದ ಕೇಳಿಬಂದಿತು. ಭಕ್ತಿ ಮಂಟಪದಲ್ಲಿ ಜರುಗಿದ ಪಠಣದಲ್ಲಿ ಸಾವಿರಾರು ಮಹಿಳೆಯರು ಪಾಲ್ಗೊಂಡು ‘ಶಿವಶಕ್ತಾಯುಕ್ತೋ ಯದಿಭವತಿ...’ ಶ್ಲೋಕಗಳನ್ನು ಪಠಣ ಮಾಡಿದರು.  ವಿಜಯಪುರ, ಕಲಬುರ್ಗಿ, ಹುಬ್ಬಳ್ಳಿ ಧಾರವಾಡ, ಹಾವೇರಿಯಿಂದ ಬಂದಿದ್ದ 140ಕ್ಕೂ ಹೆಚ್ಚು ಮಹಿಳಾ ಮಂಡಳಗಳ ಸದಸ್ಯೆಯರು ಲಹರಿ ವಾಚನ ನಡೆಸಿಕೊಟ್ಟರು.

ತಪೋಭೂಮಿಯಲ್ಲಿ ಕುಂಕುಮಾರ್ಚನೆಗಾಗಿಯೇ ವಿಶೇಷವಾಗಿ ಗಾಯತ್ರಿ ಮಂಟಪ ನಿರ್ಮಿಸಲಾಗಿದ್ದು, ದೇವಿಯ ಕುಂಕುಮಾರ್ಚನೆ  ಸುಮಂಗಲಿಯರಿಂದ ನಡೆಯುತ್ತಿದೆ.

ಸಿಡಿ ಬಿಡುಗಡೆ: ವಲ್ಲಭಚೈತನ್ಯ ಮುನಿಮಹಾರಾಜರ ಬದುಕಿನ ಚಿತ್ರಣ ನೀಡುವ ’ವಲ್ಲಭಾಮೃತ ಧಾರೆ’ ಸಿಡಿಯನ್ನು ಯಾಗ ಸಮಿತಿ ಅಧ್ಯಕ್ಷ ವಿನಾಯಕ ಆಕಳವಾಡಿ ಹಾಗೂ ಟ್ರಸ್ಟ್ ಕಮಿಟಿ ಅಧ್ಯಕ್ಷ ಕೆ.ಎಲ್.ಕುಲಕರ್ಣಿ ಮಾಡಿದರು.

ಯಶವಂತ ಸರದೇಶಪಾಂಡೆ ಸಾಹಿತ್ಯ ರಚಿಸಿದ್ದು, ಪ್ರಸನ್ನ ಭೋಜಶೆಟ್ಟರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಅನುರಾಧಾ ಭಟ್ ಹಾಗೂ ಅಜಯ ವಾರಿಯರ್ ಹಾಡಿದ್ದಾರೆ. ಷಡ್ಜ ಗೋಡ್ಖಿಂಡಿ ಕೊಳಲು, ಧನಂಜಯ ಕುಲಕರ್ಣಿ ತಬಲಾ ಸಾತ್‌ ನೀಡಿದ್ದಾರೆ. ಮಧ್ಯಾಹ್ನ ವಿಜಯಕುಮಾರ ಪಾಟೀಲ ಅವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ಜರುಗಿತು.

ಸುಮಾರು 50 ಕ್ವಿಂಟಲ್ ಅಕ್ಕಿ ಬಳಸಿ ಸಿದ್ಧಗೊಳಿಸಿದ ಅನ್ನ, ಎಂಟು ಕ್ವಿಂಟಾಲ್‌ ಹಯಗ್ರೀವ, 10 ಕ್ವಿಂಟಲ್ ಕೇಸರಿಬಾತ್‌, ಚಿತ್ರಾನ್ನ, ಪಲಾವು ಭೋಜನ ಭಕ್ತಾದಿಗಳ ಖುಷಿಗೆ ಕಾರಣವಾಯಿತು. ಪ್ರಸಾದಕ್ಕಾಗಿ ಮೂರು ಮಹಾಮಂಟಪ ಸಿದ್ಧಗೊಳಿಸಲಾಗಿದೆ.

ಹುಬ್ಬಳ್ಳಿಯಲ್ಲಿ ಕಾರ್ಯಕ್ರಮ: ಮೈಸೂರಿನ ಗಣಪತಿ ಸಚ್ಚಿದಾನಂದ ಗುರೂಜಿ ಆಶ್ರಮದ ದತ್ತವಿಜಯಾನಂದತೀರ್ಥ ಸ್ವಾಮೀಜಿ ಜ. 27ರಂದು ಹುಬ್ಬಳ್ಳಿಯ ಕುಸುಗಲ್ ರಸ್ತೆಯ ಶ್ರೀನಿವಾಸ ಗಾರ್ಡನ್‌ನಲ್ಲಿ ಚಕ್ರಾರ್ಚನೆ ಹಾಗೂ ಹನುಮಾನ್ ಚಾಲೀಸ್ ಪಠಣ ನಡೆಸಿಕೊಡಲಿದ್ದಾರೆ.

ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಆರ್ಯವೈಶ್ಯ ಸಮಾಜದ ಅಧ್ಯಕ್ಷ ವಿನಾಯಕ ಆಕಳವಾಡಿ ಹಾಗೂ ಬಾಬುರಾವ್ ಘಂಟಸಾಲ ಮನವಿ ಮಾಡಿದ್ದಾರೆ.

ತಪೋಭೂಮಿಗೆ ವೀರೇಂದ್ರ ಹೆಗ್ಗಡೆ ಇಂದು

ಮಂತ್ರಾಲಯದ ಸುಬುಧೇಂದ್ರತೀರ್ಥ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಮತ್ತು ಇನ್ನಿತರ ಗಣ್ಯರು ಕೋಟಿ ಗಾಯತ್ರಿಜಪ ಮಹಾಯಜ್ಞ ಕಾರ್ಯಕ್ರಮದಲ್ಲಿ ಜ. 24ರಂದು (ಬುಧವಾರ) ಪಾಲ್ಗೊಳ್ಳಲಿದ್ದಾರೆ.

ಬೆಳಿಗ್ಗೆ 5 ಗಂಟೆಗೆ ರುದ್ರಾಭಿಷೇಕ, ಕಾಕಡಾರತಿ, ನಾರಾಯಣ ಜಪ, ನಾರಾಯಣ ಸ್ಮರಣೆ, ಗಾಯತ್ರಿ ಹೋಮ, ಶತಚಂಡಿ ಪಾರಾಯಣ ಅನ್ನಪೂರ್ಣೇಶ್ವರಿ ಹವನಗಳು, 9ಕ್ಕೆ ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ, ಹವನಗಳ ಪೂರ್ಣಾಹುತಿ ಜರುಗಲಿವೆ.

10 ಗಂಟೆಗೆ ನಡೆಯಲಿರುವ ಸತ್ಸಂಗ ಹಾಗೂ ಆಶೀರ್ವಚನ ಕಾರ್ಯಕ್ರಮಕ್ಕೆ ಸುಬುಧೇಂದ್ರ ತೀರ್ಥರು, ವೀರೇಂದ್ರ ಹೆಗ್ಗಡೆ, ಬೆಂಗಳೂರಿನ ಯತಿರಾಜ ರಾಮಾನುಜಾ ಜೀಯಾರ, ಕಾಸರಗೋಡು ನಿತ್ಯಾನಂದ ಯೋಗಪೀಠದ ಯೋಗಾನಂದ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.

ಮಧ್ಯಾಹ್ನ 2ಕ್ಕೆ ಪಂಡಿತ್‌ ಬಾಲಚಂದ್ರ ನಾಕೋಡ ಅವರಿಂದ ಭಕ್ತಿ ಸಂಗೀತ ಕಾರ್ಯಕ್ರಮ, 3ಕ್ಕೆ ಮೂರುಸಾವಿರಮಠದ ಗುರುಸಿದ್ಧರಾಜ ಯೋಗೀಂದ್ರ ಸ್ವಾಮೀಜಿ, ಗದುಗಿನ ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ, ಮುರುಘಾಮಠದ ಮಲ್ಲಿಕಾರ್ಜುನ ಶ್ರೀಗಳು, ಸಿಂದಗಿ ಭೀಮಾಶಂಕರ ಮಠದ ದತ್ತಪ್ಪಯ್ಯನವರು, ಯರಗಲ್ಲಮಠದ ಸಿದ್ಧರಾಜ ಶಿವಪ್ಪಯ್ಯ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಸತ್ಸಂಗ ಹಾಗೂ ಆಶೀರ್ವಚನ ಜರುಗಲಿದೆ.

ಸಂಜೆ 5ಕ್ಕೆ ಬೆಂಗಳೂರಿನ ಶ್ರೀವಾರಿ ಫೌಂಡೇಷನ್‌ನ ವೆಂಕಟೇಶಕುಮಾರ ನೇತೃತ್ವದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ, ಯಶವಂತ ಸರದೇಶಪಾಂಡೆ ಅವರಿಂದ ನಾಟಕ ರಾಶಿಚಕ್ರ ಪ್ರದರ್ಶನವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT