ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗಿನಲ್ಲಿ ಸರಣಿ ರಾಜಕೀಯ ಸಮಾವೇಶ

Last Updated 24 ಜನವರಿ 2018, 9:59 IST
ಅಕ್ಷರ ಗಾತ್ರ

ಮಡಿಕೇರಿ: ನಿಸರ್ಗದ ತವರೂರು ಕೊಡಗಿನಲ್ಲೂ ರಾಜಕೀಯ ಚಟುವಟಿಕೆಗಳು ಬಿರುಸಾಗಿ ನಡೆಯುತ್ತಿವೆ. ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಪೈಪೋಟಿಗೆ ಬಿದ್ದವರಂತೆ ಸಮಾವೇಶ, ಸಭೆಗಳನ್ನು ನಡೆಸುವ ಮೂಲಕ ಚುನಾವಣೆ ದಿನಾಂಕ ಘೋಷಣೆಗೂ ಮೊದಲೇ ಮತದಾರರ ಸೆಳೆಯುವ ಪ್ರಯತ್ನಕ್ಕೆ ಕೈಹಾಕಿವೆ. ಟಿಕೆಟ್‌ ಆಕಾಂಕ್ಷಿಗಳೂ ಈಗ ಜಿಲ್ಲೆಯಾದ್ಯಂತ ಸಂಚಾರ ಆರಂಭಿಸಿದ್ದು, ತಮ್ಮ ಮತಬುಟ್ಟಿ ಗಟ್ಟಿ ಮಾಡಿಕೊಳ್ಳುವ ತಂತ್ರಕ್ಕೆ ಮೊರೆ ಹೋಗಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್‌ ಜಿಲ್ಲಾಮಟ್ಟದ ಕಾರ್ಯಕರ್ತರ ಸಮಾವೇಶ ನಡೆಸುವ ಮೂಲಕ ಚುನಾವಣೆ ರಣಕಹಳೆ ಮೊಳಗಿಸಿತ್ತು. ಇನ್ನು ಬಿಜೆಪಿಯೂ ಹಿಂದೆ ಬಿದ್ದಂತೆ ಕಾಣುತ್ತಿಲ್ಲ. ರಾಜ್ಯ ಘಟಕದ ಅದ್ಯಕ್ಷ ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯದಾದ್ಯಂತ ಸಂಚರಿಸಿರುವ ‘ಪರಿವರ್ತನಾ ರ್‍ಯಾಲಿ’ಯು ಬುಧವಾರ ಜಿಲ್ಲೆಗೆ ಬರಲಿದೆ. ಮಡಿಕೇರಿಯ ಗಾಂಧಿ ಮೈದಾನದಲ್ಲಿ ಸಮಾವೇಶ ನಡೆಯಲಿದ್ದು, ಅದಕ್ಕಾಗಿ ಬೃಹತ್‌ ವೇದಿಕೆ ಸಿದ್ಧವಾಗಿದೆ.

ಈ ಸಮಾವೇಶಕ್ಕೂ ಮೊದಲೇ ಸೋಮವಾರಪೇಟೆಯಲ್ಲಿ ಹಾಲಿ ಶಾಸಕ, ಮಡಿಕೇರಿ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿ ಎಂ.ಪಿ. ಅಪ್ಪಚ್ಚು ರಂಜನ್‌ ನೇತೃತ್ವದಲ್ಲಿ ಬೃಹತ್‌ ಸಭೆಯೊಂದು ನಡೆಯುವ ಮೂಲಕ ಚುನಾವಣೆಗೆ ಸಜ್ಜಾಗಿದ್ದೇವೆ ಎನ್ನುವ ಸಂದೇಶ ರವಾನಿಸಲಾಗಿತ್ತು. ಅದೇ ದಿವಸ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ತೊರೆದ 700 ಮಂದಿ ಕಾರ್ಯಕರ್ತರು ಕಮಲ ಹಿಡಿದಿದ್ದರು.

ಭಿನ್ನಮತ ಶಮನಕ್ಕೆ ಯತ್ನ!: ಇವುಗಳ ನಡುವೆ ಬಿಜೆಪಿಯಲ್ಲಿ ಭಿನ್ನಮತೀಯ ಚಟುವಟಿಕೆಗಳೂ ಬಿರುಸಾಗಿದ್ದು, ಸಮಾವೇಶದ ನೆಪ ದಲ್ಲಿ ಅತೃಪ್ತರನ್ನು ತಣ್ಣಗಾಗಿಸುವ ಪ್ರಯತ್ನಗಳು ನಡೆಯುತ್ತಿವೆ. ರ್‍ಯಾಲಿಗೆ ಬಿ.ಎಸ್. ಯಡಿಯೂರಪ್ಪ, ವಿಧಾನ ಷರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ, ಸಂಸದೆ ಶೋಭಾ ಕರಂದ್ಲಾಜೆ, ಪಕ್ಷದ ಜಿಲ್ಲಾ ಉಸ್ತುವಾರಿಯೂ ಆಗಿರುವ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಸಂಸದ ಪ್ರತಾಪ್‌ ಸಿಂಹ, ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಬಿ.ಜೆ. ಪುಟ್ಟಸ್ವಾಮಿ ಪಾಲ್ಗೊಳ್ಳಲಿದ್ದಾರೆ. ಪಕ್ಷದ ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್‌ ಜಾವಡೇಕರ್‌ ಅವರೂ ಆಗಮಿಸುವ ಸಾಧ್ಯತೆಯಿದ್ದು, ಭಿನ್ನಮತೀಯ ಚಟುವಟಿಕೆ ನಡೆಸುವ ಮುಖಂಡರಿಗೆ ಎಚ್ಚರಿಕೆ ನೀಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಹಿಂದೆ ಬೀಳದ ಜೆಡಿಎಸ್‌: ಈಗಾಗಲೇ ಹೋಬಳಿ ಹಾಗೂ ಗ್ರಾಮಮಟ್ಟದಲ್ಲಿ ಸರಣಿ ಸಭೆ ನಡೆಸುತ್ತಿರುವ ಜೆಡಿಎಸ್‌ ಸಹ ವಿಧಾನಸಭೆ ಚುನಾವಣೆಗೆ ಸಜ್ಜಾಗಿದೆ. ಇದೇ 29ರಂದು ಮಡಿಕೇರಿಯಲ್ಲಿ ಯುವ ಘಟಕದ ವತಿಯಿಂದ ಬೃಹತ್‌ ಸಮಾವೇಶ ಆಯೋಜಿಸಲು ಜೆಡಿಎಸ್ ನಿರ್ಧರಿಸಿದೆ. ಶಾಸಕ ಮಧು ಬಂಗಾರಪ್ಪ ಪಾಲ್ಗೊಳ್ಳಲಿದ್ದಾರೆ. ಅದರೊಂದಿಗೆ ರಾಜ್ಯ ನಾಯಕರೂ ಬರಲಿದ್ದಾರೆ.

‘ಫೆಬ್ರುವರಿಯಲ್ಲಿ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ, ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಸೇರಿದಂತೆ ಹಲವು ನಾಯಕರು ಬಂದು ಪ್ರಚಾರ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಮಡಿಕೇರಿ ಕ್ಷೇತ್ರ ದಲ್ಲಿ ಪಕ್ಷದ ಬಗ್ಗೆ ಉತ್ತಮ ಒಲವು ವ್ಯಕ್ತವಾಗುತ್ತಿದೆ. ಅದನ್ನು ಮತ್ತಷ್ಟು ಸಂಘಟನೆ ಮಾಡುವತ್ತ ಗ್ರಾಮೀಣ ಭಾಗದಲ್ಲಿ ಸಭೆ ನಡೆಸುತ್ತಿದ್ದೇವೆ’ ಎಂದು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಸಂಕೇತ್‌ ಪೂವಯ್ಯ ತಿಳಿಸಿದ್ದಾರೆ.

ಇನ್ನು ಕಾಂಗ್ರೆಸ್‌ ಸಹ ಸಭೆ – ಸಮಾರಂಭ ನಡೆಸಲು ಹಿಂದೆ ಬಿದ್ದಿಲ್ಲ. ಇದುವರೆಗೂ ಜಿಲ್ಲೆಯಲ್ಲಿ ಹಲವು ಬಾರಿ ರಾಜಕೀಯ ಸಭೆ ನಡೆಸಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಮಾವೇಶವು ಯಶಸ್ವಿಯಾಗಿದೆ. ರಾಜ್ಯ ಘಟಕದ ಅಧ್ಯಕ್ಷ ಡಾ.ಜಿ. ಪರಮೇಶ್ವರ ಅವರೂ ಜಿಲ್ಲೆಯಲ್ಲಿ ಒಂದು ಸುತ್ತಿನ ಪ್ರವಾಸ ಮಾಡಲಿದ್ದಾರೆ. ಅಂತಿಮ ತೀರ್ಮಾನವಾಗಿಲ್ಲ ಎಂದು ಹೇಳುತ್ತಾರೆ ಕಾಂಗ್ರೆಸ್‌ ಜಿಲ್ಲಾ ಮುಖಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT