ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ರಾಜೀನಾಮೆಗೆ ಸಾಹಿತ್ಯ ಪರಿಷತ್‌ ಸದಸ್ಯರ ಆಗ್ರಹ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಟಾಯ್ಲೆಟ್ ಗುಂಡಿ: ಮುಖ್ಯಮಂತ್ರಿ ಚಂದ್ರು
Last Updated 24 ಜನವರಿ 2018, 10:43 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅವರು ದುಗ್ಗಲಡ್ಕದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ವಿರೋಧಿ ಹೇಳಿಕೆ ನೀಡಿದ್ದು, ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಮೂವರು ಸದಸ್ಯರು ಆಗ್ರಹಿಸಿದ್ದಾರೆ.

ಸುಳ್ಯದಲ್ಲಿ ಬುಧವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಲೇಖಕರು ಹಾಗೂ ಸಾಹಿತ್ಯ ಪರಿಷತ್‌ನ ಸದಸ್ಯರು ಆಗಿರುವ ತೇಜಕುಮಾರ್ ಬಡ್ಡಡ್ಕ, ಎ.ಕೆ.ಹಿಮಕರ ಹಾಗೂ ವಿದ್ಯಾಧರ ಬಡ್ಡಡ್ಕ ಅವರು ಪ್ರದೀಪ್ ಕುಮಾರ್ ಕಲ್ಕೂರ ಅವರ ರಾಜಿನಾಮೆಗೆ ಆಗ್ರಹಿಸಿದರು.

ಜನವರಿ 13ರಂದು ನಡೆದ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಉದ್ಘಾಟನಾ ವೇದಿಕೆಯಲ್ಲಿ ಪ್ರದೀಪ್ ಕುಮಾರ್ ಕಲ್ಕೂರ ಅವರು “ಸರಕಾರಿ ಶಾಲೆಗಳು ಮಕ್ಕಳನ್ನು ಕಳುಹಿಸಲು ಯೋಗ್ಯವಾಗಿಲ್ಲ” ಎಂದು ತಮ್ಮ ಭಾಷಣದಲ್ಲಿ ಹೇಳಿರುವುದು ಅತ್ಯಂತ ಖಂಡನೀಯ ಎಂದು ಮೂವರು ಸದಸ್ಯರು ಹೇಳಿದರು.

ಸಾಹಿತ್ಯ ಸಮ್ಮೇಳನ ನಡೆಸಲು ಸ್ಥಳ ನೀಡಿ ಅವಕಾಶ ನೀಡಿದ್ದ ದುಗಲಡ್ಕ ಸರಕಾರಿ ಶಾಲಾ ಅಂಗಳದಲ್ಲೇ ನಿಂತು ಈ ರೀತಿ ಕನ್ನಡ ಶಾಲೆಗಳನ್ನು ತೆಗಳುವುದಾದರೆ ಅದನ್ನು ಧಿಕ್ಕರಿಸಿ ಖಂಡಿಸುವುದು ನಮ್ಮ ಕರ್ತವ್ಯ.  ಅಲ್ಲದೆ ಅದೇ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಕನ್ನಡದ ಹೋರಾಟಗಾರ ಮುಖ್ಯಮಂತ್ರಿ ಚಂದ್ರು ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅನ್ನು ಟಾಯ್ಲೆಟ್ ಗುಂಡಿ ಎಂದು ಹೋಲಿಕೆ ಮಾಡಿರುವುದು ಸರಿಯಾಗಿಯೇ ಇದೆ, ನಾವು ಅವರನ್ನು ಅಭಿನಂದಿಸುತ್ತೇವೆ ಎಂದರು.

ಸರಕಾರಿ ಶಾಲೆಗಳು ಕನ್ನಡ ಶಾಲೆಗಳಾಗಿಯೇ ಇದ್ದು, ನಾಡಿನ ಪ್ರತಿಭಾವಂತರನ್ನು ಸೃಷ್ಟಿಸಿದ ಸಂಸ್ಥೆಗಳಾಗಿವೆ. ಒಂದು ವೇಳೆ ಯಾವುದಾದರೂ ಸರಕಾರಿ ಶಾಲೆಯಲ್ಲಿ ಕೊರತೆಗಳಿದ್ದಲ್ಲಿ ಅದನ್ನು ಸರಿಪಡಿಸುವುದು ನಮ್ಮೆಲ್ಲರ ಕರ್ತವ್ಯ. ಹೊರತಾಗಿ ನಮ್ಮದೇ ಹೆಮ್ಮೆಯ ಶಾಲೆಗಳನ್ನು ಅವಮಾನಿಸುವುದು, ಅಲ್ಲಿಯ ಮಕ್ಕಳು ಮತ್ತು ಶಿಕ್ಷಕರನ್ನು ನಿಂದಿಸುವುದನ್ನು ಎಲ್ಲರೂ ಸಾರ್ವತ್ರಿಕವಾಗಿ ಖಂಡಿಸಬೇಕು. ಪರಿಷತ್ತಿಗೆ ಅಂಟಿಕೊಂಡು ಸರಕಾರದ ಅನುದಾನಗಳನ್ನೂ ಉಪಯೋಗಿಸುತ್ತಿರುವ ಕಲ್ಕೂರ ಅವರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಸುಳ್ಯ ಕನ್ನಡ ಸಾಹಿತ್ಯ ಪರಿಷತ್  ಈ ಕುರಿತು ಖಂಡನಾ ನಿರ್ಣಯ ತೆಗೆದುಕೊಳ್ಳುವಂತೆ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT