ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲೆಕ್ಟ್ರಿಕ್ ವಾಹನಗಳ ಅದ್ಭುತ ಲೋಕ

Last Updated 24 ಜನವರಿ 2018, 19:30 IST
ಅಕ್ಷರ ಗಾತ್ರ

ಸ್ಟೀರಿಂಗ್ ಇಲ್ಲದ ಕಾರು

ಮರ್ಸಿಡಿಸ್‌ ಬೆಂಜ್‌ನ ಸ್ಮಾರ್ಟ್‌ ವಿಷನ್‌ ಇಕ್ಯೂ ಕಾನ್ಸೆಪ್ಟ್‌ ಕಾರಿಗೆ ಸ್ಟೀರಿಂಗ್‌ ಇಲ್ಲ. ಇದರ ಹೆಸರೇ ಹೇಳುವಂತೆ ಇದರಲ್ಲಿ ಎಲ್ಲವೂ ಸ್ಮಾರ್ಟ್ ಸೌಲಭ್ಯಗಳಿವೆ. ನಗರ ಪ್ರದೇಶಗಳಿಗೆ ಹೆಚ್ಚು ಸೂಕ್ತವಾಗುವ ಇದು ಕಾರ್‌ ಶೇರಿಂಗ್‌ಗೆ ಹೇಳಿ ಮಾಡಿಸಿದಂತಿದೆ ಎಂದು ಕಂಪನಿ ಹೇಳಿಕೊಂಡಿದೆ. ಇದರೊಳಗೆ ಹೆಚ್ಚಿನ ಸ್ಥಳಾವಕಾಶ ಇರುವುದರಿಂದ ಪ್ರಯಾಣಿಕರು ಆರಾಮವಾಗಿ ಕುಳಿತುಕೊಳ್ಳಬಹುದು.

ಇಕ್ಯೂ ಕಾನ್ಸೆಪ್ಟ್‌ ಕಾರ್‌ ವಿದ್ಯುತ್‌ ಚಾಲಿತವಾದುದು. ಆದ್ದರಿಂದ ಇದನ್ನು ಪರಿಸರ ಸ್ನೇಹಿ ಎಂದು ಕರೆಯಲಾಗಿದೆ. 2017ರಲ್ಲಿ ಮೊದಲ ಬಾರಿಗೆ ಫ್ರಾಂಕ್‌ಫರ್ಟ್‌ನಲ್ಲಿ ನಡೆದ ಇಂಟರ್‌ನ್ಯಾಷನಲ್‌ ಮೋಟರ್‌ ಷೋನಲ್ಲಿ ಇದು ಕಾಣಿಸಿಕೊಂಡಿತ್ತು. 2022ರ ಹೊತ್ತಿಗೆ ಸಾಕಷ್ಟು ಎಲೆಕ್ಟ್ರಿಕ್‌ ಕಾರುಗಳನ್ನು ಪರಿಚಯಿಸುವುದಾಗಿ ಮರ್ಸಿಡಿಸ್ ಬೆಂಜ್‌ ಹೇಳಿಕೊಂಡಿದೆ.

***

ರೋಬೊ ರೇಸ್‌ ಕಾರು

ಇದು ತನ್ನ ವಿಶಿಷ್ಟ ವಿನ್ಯಾಸದಿಂದಲೇ ಸೆಳೆಯುತ್ತದೆ. ಎನ್‌ವಿಡಿಯಾ ಕಂಪನಿ ಇದನ್ನು ತಯಾರಿಸಿದೆ. ರೇಸ್‌ಗಳಿಗೆ ಇದು ಹೇಳಿ ಮಾಡಿಸಿದಂತಿದೆ ಎನ್ನುತ್ತಾರೆ ರೋಬೊ ರೇಸ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡೆನಿಸ್‌ ಸ್ವೆರ್ಡ್‌ಲೋವ್‌ ಮತ್ತು ವಿನ್ಯಾಸಕ ಡೇನಿಯನ್ ಸಿಮನ್‌.

300ಕಿಲೋ ವ್ಯಾಟ್‌ನ ನಾಲ್ಕು ಎಂಜಿನ್‌, 540ಕಿಲೋ ವ್ಯಾಟ್‌ ಬ್ಯಾಟರಿ ಹೊಂದಿರುವ ಇದು ಗಂಟೆಗೆ 320 ಕಿ.ಮೀ ದೂರ ಸಾಗಬಲ್ಲದು. ಎರಡು ಆಪ್ಟಿಕಲ್‌ ಸೆನ್ಸರ್‌, ಆರು ಕ್ಯಾಮೆರಾ ಇದರಲ್ಲಿವೆ. ವೇಗವಾಗಿ ಸಂಚರಿಸುವ ಕಾರು ಇದಾಗಿರುವ ಕಾರಣ ಟೈರ್‌ಗಳ ವಿನ್ಯಾಸಕ್ಕೆ ಹೊಸ ತಂತ್ರಜ್ಞಾನವನ್ನು ಬಳಸಲಾಗಿದೆ. ಅಲ್ಲದೆ ಇದರ ದೇಹಾಕಾರವೂ ವಿಶಿಷ್ಟವಾಗಿದೆ.

ಇನ್ನು ನೆಕ್ಸಾ ಹೆಸರಿನ ಹೈಡ್ರೋಜನ್‌ ಇಂಧನದ ಕಾರು ಪ್ರದರ್ಶನದಲ್ಲಿತ್ತು. ಇಂಧನ ಮೂಲಗಳು ಇಂದು ಕಡಿಮೆಯಾಗುತ್ತಿರುವಾಗ ಹೊಸ ರೀತಿಯ ಇಂಧನದಿಂದ ಓಡುವ ವಾಹನಗಳ ಕಡೆಗೆ ಹೆಚ್ಚಿನ ಸಂಶೋಧನೆ ನಡೆಯುತ್ತಿವೆ. ಅವುಗಳು ಸೌರಶಕ್ತಿ ಮತ್ತು ಇತರ ನವೀಕರಿಸಬಹುದಾದ ಇಂಧನದಿಂದ ಶಕ್ತಿ ಪಡೆಯುವ ವಾಹನಗಳ ಕಡೆಗೆ. ಹುಂಡೈ ಕಂಪನಿಯ ಹೈಡ್ರೋಜನ್‌ ಕಾರು ಹೊಸ ತಂತ್ರಜ್ಞಾನದ ದೃಷ್ಟಿಯಿಂದ ಮಹತ್ವ ‍ಪಡೆದಿದೆ. ದಕ್ಷಿಣ ಕೊರಿಯಾದ ತಯಾರಕರೊಬ್ಬರು ಈ ಕಾರನ್ನು ಸಿಇಎಸ್‌ನಲ್ಲಿ ಪ್ರದರ್ಶನಕ್ಕಿಟ್ಟಿದ್ದರು. ಸ್ಪೋರ್ಟ್ಸ್‌ ಯುಟಿಲಿಟಿ ವಾಹನವಾಗಿರುವ ಇದರಲ್ಲಿ ವಾಯ್ಸ್‌ ಕಮಾಂಡ್‌ ಮತ್ತು ಕೃತಕ ಬುದ್ಧಿಮತ್ತೆ ತಂತ್ರಜ್ಞಾನಗಳಿವೆ.

***

ಇ–ಪ್ಯಾಲೆಟ್‌ ವೆಹಿಕಲ್‌

ಟೊಯೊಟಾ ಮೋಟಾರ್ ಕಾರ್ಪೊರೇಷನ್‌ನ ಈ ವಾಹನ ಸಂಪೂರ್ಣವಾಗಿ ಸ್ವಯಂಚಾಲಿತವಾದುದು. ಬ್ಯಾಟರಿ ಎಲೆಕ್ಟ್ರಿಕ್‌ ಇದರ ಶಕ್ತಿ. ಬಹು ಆಯಾಮದ ಸಾರಿಗೆ ಉದ್ದೇಶವನ್ನು ಗಮನದಲ್ಲಿ ಇಟ್ಟುಕೊಂಡು ಈ ವಾಹನವನ್ನು ರೂಪಿಸಲಾಗಿದೆ. ಟೊಯೊಟಾ ಈಗಾಗಲೇ ದಿದಿ ಮಾಜ್ದಾ, ಪಿಜ್ಜಾ ಹಟ್‌ ಮತ್ತು ಊಬರ್ ಮುಂತಾದ ಕಂಪನಿಗಳ ಸಹಯೋಗದಲ್ಲಿ ವಾಹನಗಳ ಯೋಜನೆಗಳನ್ನು ರೂಪಿಸುತ್ತಿದೆ.

***

ಮೂರು ಚಕ್ರದ ಆಟೊ ಸೈಕಲ್‌

ಇದರ ಹೆಸರು ಮಾತ್ರ ಆಟೊ. ಆದರೆ ಇದು ಯಾವ ಬೈಕ್‌ಗಿಂತಲೂ ಕಡಿಮೆಯಿಲ್ಲ. ಅಷ್ಟು ಆಕರ್ಷಕವಾಗಿದೆ. ಮೂರು ಚಕ್ರದ ಮೇಲೆ ಚಲಿಸುವ ಇದೂ ವಿದ್ಯುತ್ ಬೆಂಬಲಿತ. ಸಿಇಎಸ್‌ಗೆ ಬಂದವರಲ್ಲಿ ಹಲವರು ಇದರ ಚಾಲಕನ ಆಸನದಲ್ಲಿ ಕುಳಿತು ನೋಡಿದ್ದು ವಿಶೇಷ. 35 ಸಾವಿರ ಅಮೆರಿಕನ್ ಡಾಲರ್ ಬೆಲೆ ಇದಕ್ಕಿದೆ. 30 ಕಿಲೊವ್ಯಾಟ್‌ ಲೀಥಿಯಂ ಬ್ಯಾಟರಿ ಶಕ್ತಿಯ ಇದು 200 ಮೈಲುಗಳನ್ನು ಸಾಗಬಲ್ಲದು. ಓಪನ್ ಏರ್‌ ಹೊಂದಿರುವ ಇದರ ಚಾಲನೆ ಹೊಸ ಅನುಭವವನ್ನು ನೀಡಬಲ್ಲದು.

***

ಉದ್ದದ ಸ್ಕೂಟರ್‌

ಒನ್‌ಮೈಲ್‌ ಹಾಲೊ ಸಿಟಿ– ಮಡಚಬಹುದಾದ ಈ ಸ್ಕೂಟರ್‌ ತನ್ನ ಉದ್ದದ ಕಾರಣಕ್ಕೆ ಜನರ ಕೇಂದ್ರಬಿಂದುವಾಗಿತ್ತು. ಇದೂ ವಿದ್ಯುತ್ ಚಾಲಿತ. ವಿಶ್ವದಲ್ಲೇ ಅತಿ ಕಡಿಮೆ ಸಮಯದಲ್ಲಿ ಚಾರ್ಜ್‌ ಆಗಬಲ್ಲ ಮತ್ತು ಮಡಚಬಹುದಾದ ಸ್ಕೂಟರ್‌ ಹಾಗೂ ಇತರ ವಾಹನಗಳನ್ನು ತಯಾರಿಸಿದ ಕೀರ್ತಿ ಈ ಕಂಪನಿಯದ್ದು.

***

ಸ್ವಯಂಚಾಲಿತ ಎಲೆಕ್ಟ್ರಿಕ್‌ ಬಸ್‌

ಕೇಲಿಸ್‌ ಮತ್ತು ನವ್ಯಾ ಕಂಪನಿಯ ಸ್ವಯಂಚಾಲಿತ ಎಲೆಕ್ಟ್ರಿಕ್‌ ಬಸ್‌ ಸಿಇಎಸ್‌ನಲ್ಲಿತ್ತು. ಇದಕ್ಕೆ ಮುಖ್ಯ ಕಾರಣ ಇದು ಚಾಲಕರಹಿತವಾಗಿದ್ದುದು. ಸಮೂಹ ಸಾರಿಗೆಯಲ್ಲಿ ಬಸ್‌ಗಳು ಪ್ರಮುಖ ಪಾತ್ರ ವಹಿಸುವುದರಿಂದ ಸಾಕಷ್ಟು ಕಂಪನಿಗಳು ಇಂಥ ವಾಹನಗಳನ್ನು ಇಲ್ಲಿ ಪ್ರದರ್ಶನಕ್ಕಿಟ್ಟಿದ್ದವು. ಲಾಸ್‌ ವೆಗಾಸ್‌ನ ಮೇಯರ್‌ ಕರೋಲಿನ್‌ ಜಿ.ಗಾಡ್‌ಮ್ಯಾನ್‌ ಮತ್ತು ಇತರ ಸ್ಥಳೀಯ ಅಧಿಕಾರಿಗಳು ಈ ಬಸ್‌ನಲ್ಲಿ ಮೊದಲ ಬಾರಿಗೆ ಕುಳಿತು ಪ್ರಯಾಣ ಮಾಡಿದರು. ಇದಾದ ನಂತರ ಸಾರ್ವಜನಿಕರಿಗೆ ಇದರಲ್ಲಿ ಪ್ರಯಾಣಿಸುವ ಅವಕಾಶವನ್ನು ಕಂಪನಿ ಒದಗಿಸಿತ್ತು.

ಲಾಸ್‌ ವೆಗಾಸ್‌ನಲ್ಲಿ ಒಂದು ಪರೀಕ್ಷಾ ಕೇಂದ್ರವನ್ನು ಆರಂಭಿಸಲಾಗಿದ್ದು, ಹಲವು ಕಂಪನಿಗಳ ಹೊಸ ಹೊಸ ತಂತ್ರಜ್ಞಾನದ ವಾಹನಗಳನ್ನು ಇಲ್ಲಿ ಪರೀಕ್ಷಿಸಲಾಗುತ್ತದೆ. ಸ್ವಚ್ಛ ಇಂಧನ ಮತ್ತು ಪರಿಸರಸ್ನೇಹಿ ವಾಹನ ಮತ್ತು ಉಪಕರಣಗಳ ಪರೀಕ್ಷೆಗೆ ಇಲ್ಲಿ ಮೊದಲ ಆದ್ಯತೆ.

***

ಸಮತೋಲನ ಸಾಮರ್ಥ್ಯದ ಬೈಕ್‌

ಸಿಇಎಸ್‌ನಲ್ಲಿ ಗಮನಸೆಳೆದ ಬೈಕ್‌ಗಳಲ್ಲಿ ಇದೂ ಒಂದು. ತನ್ನದೇ ಸಮತೋಲನ ಸಾಮರ್ಥ್ಯ ಹೊಂದಿರುವ ಈ ಬೈಕ್‌ ಯಮಾಹ ಉತ್ಪನ್ನಗಳ ವಿಭಾಗದಲ್ಲಿ ಎಲ್ಲರ ಆಕರ್ಷಣೆಯ ಕೇಂದ್ರವಾಗಿತ್ತು. ಎಲೆಕ್ಟ್ರಿಕ್‌ ಶಕ್ತಿಯಿಂದ ಸಾಗುವ ಇದನ್ನು ‘ಮೋಟರಾಯ್ಡ್‌’ ಎಂದು ಕರೆಯಲಾಗುತ್ತದೆ. ಪರೀಕ್ಷಾ ಟ್ರ್ಯಾಕ್‌ನಲ್ಲಿ ಇದು ಗಂಟೆಗೆ 200 ಕಿ.ಮೀ ಸಾಗಿತ್ತು. ಯಮಾಹ ಕಂಪನಿ 20 ಬಗೆಯ ಹೊಸ ಬೈಕ್‌ಗಳನ್ನು ಕಳೆದ ವರ್ಷ ಟೋಕಿಯೊದಲ್ಲಿ ನಡೆದ ವಾಹನ ಪ್ರದರ್ಶನದಲ್ಲಿ ಪ್ರದರ್ಶನಕ್ಕಿಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT