ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಃಶಾಂತಿಯೇ ಓದು

Last Updated 24 ಜನವರಿ 2018, 19:30 IST
ಅಕ್ಷರ ಗಾತ್ರ

ನಮ್ಮದು ಓದಿನ ಯುಗ; ಎಷ್ಟು ಓದಿದರೂ, ಅದರ ಹಿಂದೆ ಓಡಿದರೂ ಸಾಲದು ಎನ್ನುವ ಯುಗ. ಓದಿಗೂ ಅನ್ನಕ್ಕೂ ನೇರ ನಂಟಿರುವುದರಿಂದ ಓದದಿದ್ದರೂ, ಓದಿದ್ದೇವೆ ಎಂದು ಪ್ರಮಾಣಪತ್ರದ ಮೂಲಕ ಘೋಷಿಸುವ ಯುಗ. ಹೆಚ್ಚು ಓದಿದವನೇ ಹೆಚ್ಚು ಬುದ್ಧಿವಂತ ಎಂದು ನಂಬುವ ಯುಗ. ಇದೆಲ್ಲ ಸರಿ; ಆದರೆ ನಾವು ಏನನ್ನು ಓದುತ್ತಿದ್ದೇವೆ? ಅಥವಾ ಓದಲು ಹಂಬಲಿಸುತ್ತಿದ್ದೇವೆ?

ಮಹಾಭಾರತದ ಈ ಶ್ಲೋಕ ಮನನೀಯವಾಗಿದೆ:
ಶಮಾರ್ಥಂ ಸರ್ವಶಾಸ್ತ್ರಾಣಿ ವಿಹಿತಾನಿ ಮನೀಷಿಭಿಃ |
ಸ ಏವ ಸರ್ವಶಾಸ್ತ್ರಜ್ಞಃ ಯಸ್ಯ ಶಾಂತಂ ಮನಃ ಸದಾ ||

‘ಎಲ್ಲ ಶಾಸ್ತ್ರಗಳನ್ನೂ ವಿದ್ವಾಂಸರು ರಚಿಸಿರುವುದು ಮನಃಶಾಂತಿ ಲಭಿಸಲಿ ಎಂದು. ಯಾರ ಮನಸ್ಸು ಶಾಂತವಾಗಿದೆಯೋ ಅವನೇ ಸರ್ವಜ್ಞ’.

ಶಾಸ್ತ್ರಗಳ ಉದ್ದೇಶ ಏನು ಎನ್ನುವುದನ್ನು ಇಲ್ಲಿ ಹೇಳಲಾಗಿದೆ. ನಾವು ಓದಬೇಕಾದ್ದು, ಬರೆಯಬೇಕಾದ್ದು ನಮ್ಮ ಜೀವನ ಚೆನ್ನಾಗಿರಲಿ, ಮನಸ್ಸು ಸಮಾಧಾನವಾಗಿರಲಿ ಎಂಬ ಕಾರಣದಿಂದಲೇ. ‘ಶಾಸ್ತ್ರ’ ಎಂದರೆ ಶಿಕ್ಷಣ ಎಂದೂ ತೆಗೆದುಕೊಳ್ಳಬಹುದು; ನಮ್ಮ ಓದು, ಬುದ್ಧಿವಂತಿಕೆ ಎಂದೂ ತೆಗೆದುಕೊಳ್ಳಬಹುದು. ಒಟ್ಟಿನಲ್ಲಿ ನಮ್ಮ ಎಲ್ಲ ಬೌದ್ಧಿಕ ಚಟುವಟಿಕೆಗಳನ್ನೂ ‘ಶಾಸ್ತ್ರ’ದ ವ್ಯಾಪ್ತಿಯಲ್ಲಿ ತರಬಹುದು.

ಇಂದಿನ ನಮ್ಮ ಶಿಕ್ಷಣಪದ್ಧತಿ ಎತ್ತ ಕಡೆಗೆ ಸಾಗಿದೆ – ಎನ್ನುವುದನ್ನು ಅವಲೋಕನ ಮಾಡಿಕೊಳ್ಳಬೇಕಿದೆ. ನಮ್ಮ ಓದನ್ನು ಪ್ರದರ್ಶಿಸುವ ‘ಸರ್ಟಿಫಿಕೇಟ್‌’ಗಳು ನಮಗೆ ಕೈ ತುಂಬ ಸಂಬಳವನ್ನು ನೀಡುತ್ತಿರಬಹುದು; ಆದರೆ ಅವು ಮನಃಶಾಂತಿಯನ್ನೂ ನೀಡುತ್ತಿವೆಯೆ? ‘ಇಲ್ಲ’ ಎಂದು ಉತ್ತರಿಸಲೇಬೇಕಾಗಿದೆ. ನಮ್ಮ ಕಣ್ಣ ಮುಂದಿರುವ ಘಟನೆಗಳು ನಾವು ನೆಮ್ಮದಿಯಾಗಿಲ್ಲ ಎನ್ನುವುದನ್ನು ಕೂಗಿ ಕೂಗಿ ಹೇಳುತ್ತಿವೆ. ನಮ್ಮ ಶಿಕ್ಷಣ ನಮ್ಮನ್ನು ಪದವೀಧರರನ್ನಾಗಿ ತಯಾರು ಮಾಡುತ್ತಿದೆ; ವಿವೇಕಿಗಳನ್ನಾಗಿಸಲು ಸೋಲುತ್ತಿದೆ. ನಮ್ಮ ಓದಿಗೂ ನಮ್ಮ ಜೀವನಕ್ಕೂ ಸಾವಯವ ಸಂಬಂಧವೇ ಇಲ್ಲದಂತಾಗಿದೆ. ‘ಓದಿಗಾಗಿ ಓದು’ ಎಂಬ ಧೋರಣೆಯೇ ನಮ್ಮ ವ್ಯವಸ್ಥೆಯ ಮೂಲಮಂತ್ರವಾದಂತಿದೆ. ಜೀವನದ ಅರ್ಥದ ಹುಡುಕಾಟವನ್ನು ನಡೆಸಲು ಉತ್ತೇಜಿಸುವಂಥ ಶಿಕ್ಷಣವ್ಯವಸ್ಥೆ ಸಮಾಜದ ಏಳಿಗೆಗೂ ವ್ಯಕ್ತಿಯ ಏಳಿಗೆಗೂ ಬೇಕಾಗಿದೆ. ಆದರೆ ಶಿಕ್ಷಣವನ್ನೂ ನಮ್ಮ ಓದನ್ನೂ ನಾವಿಂದು ಮಾರುಕಟ್ಟೆಯ ಸರಕು ಎಂಬಂತೆ ವ್ಯವಹರಿಸುತ್ತಿದ್ದೇವೆ. ಹೀಗಾಗಿ ಅನವಶ್ಯಕವಾದ ಒತ್ತಡಗಳೂ ಚಿಂತೆಗಳೂ ಭಯಗಳೂ ನಮ್ಮನ್ನು ಆವರಿಸಿವೆ. ವ್ಯಾಪಾರ ಎಂದರೆ ಈ ಎಲ್ಲ ತೊಂದರೆಗಳು ಸಹಜವಷ್ಟೆ.

ಮಹಾಭಾರತದ ಕಾಲದಲ್ಲೂ ಓದಿನ ಅಪಮೌಲ್ಯ ನಡೆದಿತ್ತು ಎನಿಸುತ್ತದೆ. ಆದುದರಿಂದಲೇ ಶಾಸ್ತ್ರದ ಉದ್ದೇಶ ಏನು, ನಿಜವಾದ ಶಾಸ್ತ್ರಜ್ಞ ಯಾರು ಎನ್ನುವುದನ್ನು ಹೇಳಲು ಅದು ಹೊರಟಿರುವುದು. ಸಹಜವಾದ ಜೀವನವನ್ನು ನಡೆಸಲು ಕಲಿಸಬೇಕಾದ್ದು ಶಿಕ್ಷಣದ ಉದ್ದೇಶವಾಗಬೇಕು. ಆದರೆ ಕೃತಕವಾದ ಜೀವನವಿಧಾನವನ್ನು ಸೃಷ್ಟಿಸಿ, ಅದೇ ಪರಮಸತ್ಯ ಎಂಬಂತೆ ನಮ್ಮ ಇಂದಿನ ಶಿಕ್ಷಣವ್ಯವಸ್ಥೆಯು ರೂಪುಗೊಳ್ಳುತ್ತಿದೆ ಎನ್ನುವದರಲ್ಲಿ ಎರಡು ಮಾತಿಲ್ಲ. ಹೀಗೆಂದು ಈ ವ್ಯವಸ್ಥೆಯಲ್ಲಿರುವುದೆಲ್ಲವೂ ಸರಿಯಿಲ್ಲ ಎಂದೇನಿಲ್ಲ; ಅಲ್ಪ ಪ್ರಮಾಣದಲ್ಲಿಯಾದರೂ ಅದು ಸರಿಯಾದ ದಿಕ್ಕಿಗೆ ನಡೆಯುತ್ತಿದೆ ಎನ್ನುವುದನ್ನೂ ಒಪ್ಪಬೇಕಾಗುತ್ತದೆ.

ನಮ್ಮ ಜೀವನದಲ್ಲಿ ಎಲ್ಲಕ್ಕಿಂತಲೂ ಮುಖ್ಯವಾದದ್ದು ಜೀವನವೇ ಹೌದು ಎಂಬ ಅರಿವು ನಮಗೆ ದಕ್ಕಬೇಕಿದೆ. ಹೀಗಾದಾಗ ಮಾತ್ರವೇ ಜೀವನಕ್ಕೆ ಪೂರಕವಾದ ಶಿಕ್ಷಣವ್ಯವಸ್ಥೆಯನ್ನು ರೂಪಿಸುಂಥ ಒತ್ತಡ ಸಮಾಜದಲ್ಲಿ ಮೂಡಬಹುದು. ಜೀವನದ ಜಾಗದಲ್ಲಿ ಹಣವನ್ನೋ ಅಧಿಕಾರವನ್ನೋ ಪ್ರತಿಷ್ಠಾಪಿಸಿ, ಅದರ ಆಜ್ಞೆಗೆ ತಕ್ಕ ರೀತಿಯಲ್ಲಿ ನಮ್ಮ ಜೀವನಶೈಲಿಯನ್ನೂ ಯೋಚನಲಹರಿಯನ್ನೂ ರೂಪಿಸಿಕೊಳ್ಳುತ್ತಿದ್ದೇವೆ. ನಮ್ಮ ಊರಿಗೆ ತಲುವಂಥ ದಾರಿ ಬೇಕಿದೆಯೇ ವಿನಾ ದಾರಿಯನ್ನೇ ಊರು ಎಂದು ಸ್ವೀಕರಿಸಿ, ನಾವು ಬೀದಿಪಾಲು ಆಗುತ್ತಿದ್ದೇವೆಯಷ್ಟೆ! ಉಪನಿಷತ್ತಿನಲ್ಲಿ ಒಂದು ಸಂದರ್ಭ ಬರುತ್ತದೆ; ದಿಟವಾದ ಅರಿವು ಯಾವುದು – ಎಂಬ ಪ್ರಶ್ನೆಯನ್ನು ಎತ್ತಿಕೊಂಡು ಅದು ಚರ್ಚಿಸಲು ಹೊರಡುತ್ತದೆ. ಯಾವುದನ್ನು ತಿಳಿಯುವುದರಿಂದ ಎಲ್ಲವನ್ನೂ ತಿಳಿಯುತ್ತದೆಯೇ ಅದೇ ನಿಜವಾದ ವಿದ್ಯೆ, ತಿಳಿವಳಿಕೆ ಎನ್ನುವುದು ಅದರ ನಿಲುವು. ಎಲ್ಲವನ್ನೂ ತಿಳಿಯುವುದು ಎಂದರೆ ನಮ್ಮ ಜೀವನದ ಸಾರ್ಥಕತೆಯನ್ನು ಕಂಡುಕೊಳ್ಳುವುದೇ ಹೌದು. ಅದೇ ದಿಟವಾದ ಶಿಕ್ಷಣ, ಓದು, ಅರಿವು.

⇒–ಹಾರಿತಾನಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT