ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವೃತ್ತಿಯಲ್ಲಿ ತೃಪ್ತಿಯಿಲ್ಲ...’

Last Updated 26 ಜನವರಿ 2018, 19:30 IST
ಅಕ್ಷರ ಗಾತ್ರ

1. ನನ್ನ ವಯಸ್ಸು 25, ಅವಿವಾಹಿತ. ಸ್ನಾತಕೋತ್ತರ ಪದವಿ ಪಡೆದಿದ್ದು, ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ವೃತ್ತಿಯಲ್ಲಿನ ಕಾರ್ಯವೈಖರಿಗೆ ಹೊಂದಿಕೊಳ್ಳಲು ನನಗೆ ಸಾಧ್ಯವಾಗುತ್ತಿಲ್ಲ. ವೈಯಕ್ತಿಕ ಜೀವನದಲ್ಲಿ ತೃಪ್ತಿ ಇಲ್ಲ. ನನಗೆ ಈ ವೃತ್ತಿಯಲ್ಲಿ ಮುಂದುವರೆಯಲು ಇಷ್ಟವಿಲ್ಲ. ಮಾನಸಿಕವಾಗಿ ತುಂಬಾ ನೋವನ್ನು ಅನುಭವಿಸುತ್ತಿದ್ದೇನೆ. ಯಾವುದೇ ಕಾರ್ಯವನ್ನು ದಕ್ಷತೆಯಿಂದ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಋಣಾತ್ಮಕವಾಗಿ ಆಲೋಚನೆಗಳು ನನ್ನನ್ನು ಆವರಿಸಿವೆ.

ಗಂಗಾಧರ, ಊರು ಬೇಡ

ನನಗೆ ಅರ್ಥವಾಗುತ್ತದೆ. ವೃತ್ತಿಜೀವನದಲ್ಲಿ ತೃಪ್ತಿ ಇಲ್ಲದಿದ್ದರೆ ಹತಾಶೆ ನಮ್ಮನ್ನು ಕಾಡುತ್ತದೆ. ಜೊತೆಗೆ, ನೀವು ಏನು ಮಾಡುತ್ತಿದ್ದೀರೋ ಅದರ ಮೇಲೆ ಆಸಕ್ತಿಯೂ ಹೊರಟು ಹೋಗುತ್ತದೆ. ನೀವು ನಿಮ್ಮ ಕೆಲಸದಲ್ಲಿ ಏನ್ನನ್ನು ಇಷ್ಟಪಡುತ್ತಿಲ್ಲ ಎಂಬುದನ್ನು ತಿಳಿದುಕೊಳ್ಳಿ. ಜೊತೆಗೆ ನಿಮ್ಮ ಜೊತೆಗಿರುವ ವ್ಯಕ್ತಿಗಳು ಹಾಗೂ ನಿಮಗೆ ವಹಿಸಿದ ಯಾವ ಕೆಲಸ ಇಷ್ಟವಾಗುತ್ತಿಲ್ಲ ಎಂಬುದನ್ನು ತಿಳಿದುಕೊಳ್ಳಿ. ಜೀವನ ತುಂಬಾ ಸುಲಭವಲ್ಲ. ನಿಮ್ಮ ಸುತ್ತಲಿನಲ್ಲಿರುವ ಎಲ್ಲ ವಿಷಯಗಳನ್ನು ನೀವು ಎದುರಿಸಬೇಕು. ಕಠಿಣಶ್ರಮ ಇಲ್ಲಿ ಮುಖ್ಯವಾಗುತ್ತದೆ. ನೀವು ಸರ್ಕಾರಿ ಕೆಲಸದಲ್ಲಿದ್ದೀರಿ. ಆ ಕಾರಣಕ್ಕೆ ಕೆಲಸ ಬಿಡುವ ನಿರ್ಧಾರಕ್ಕೆ ಬರುವ ಮೊದಲು ಎರಡು ಬಾರಿ ಯೋಚಿಸಿ. ಕೆಲಸವನ್ನು ಆಸಕ್ತಿದಾಯಕವಾಗಿ ಹೇಗೆ ಮಾಡಲು ಸಾಧ್ಯ ಎಂಬುದನ್ನು ತಿಳಿದುಕೊಳ್ಳಿ. ಹಿರಿಯ ಸಹೊದ್ಯೋಗಿಗಳ ಜೊತೆ ಮಾತನಾಡಿ. ಕೆಲಸದಲ್ಲಿ ನಿಮಗಿರುವ ಸಮಸ್ಯೆಗಳ ಕುರಿತು ಅವರ ಬಳಿ ಚರ್ಚಿಸಿ. ಇದು ನಿಮಗೆ ಕೆಲಸದ ಸಂದರ್ಭದಲ್ಲಿ ಹೇಗಿರಬೇಕೆಂಬ ಒಳಾರ್ಥವನ್ನು ತಿಳಿಯುವಂತೆ ಮಾಡಬಹುದು. ಈ ಎಲ್ಲ ಉಪದಾರಿಗಳನ್ನು ಪ್ರಯ್ನತಿಸಿದ ಮೇಲೂ ನಿಮಗೆ ಹತಾಶೆ ಕಾಡಿದರೆ, ಋಣಾತ್ಮಕ ಯೋಚನೆಯ ಮೋಡಗಳು ನಿಮ್ಮನ್ನು ಮುತ್ತಿಕೊಂಡರೆ ಆಗ ಕೆಲಸವನ್ನು ಬದಲಾಯಿಸುವ ಬಗ್ಗೆ ಯೋಚಿಸಿ.

2. ಅತ್ತೆ ಹಾಗೂ ನನ್ನ ನಡುವೆ ಹೊಂದಾಣಿಕೆ ಇಲ್ಲ. ಪ್ರತಿದಿನ ಮನೆಯಲ್ಲಿ ಜಗಳ, ನಾನು ಎಷ್ಟೇ ಕೆಲಸ ಮಾಡಿದರೂ ಅವರಿಗೆ ತೃಪ್ತಿ ಇಲ್ಲ. ನಾನು ಮನೆಯಲ್ಲಿ ಕೆಲಸ ಮಾಡಿ, ಹೊರಗಡೆ ದುಡಿಯಲು ಹೋಗುತ್ತೇನೆ. ಆದರೂ ಅವರು ನನ್ನ ವಿರುದ್ಧ ನನ್ನ ಗಂಡನ ಬಳಿ ಚಾಡಿ ಹೇಳುತ್ತಾರೆ. ಹೀಗಾಗಿ ನಮ್ಮ ಸಂಬಂಧವೂ ಹಾಳಾಗಿದೆ. ನನಗೆ ಅತ್ತೆಯ ಜೊತೆ ಹೊಂದಿಕೊಳ್ಳಲು ಆಗುತ್ತಿಲ್ಲ. ಇದರಿಂದ ಮಾನಸಿಕ ವೇದನೆ ಅನುಭವಿಸುತ್ತಿದ್ದೇನೆ.

ಹೆಸರು, ಊರು ಬೇಡ

ನಿಮ್ಮ ಅತ್ತೆಯೊಂದಿಗೆ ಆರೋಗ್ಯಕರ ಸಂಬಂಧ ಹೊಂದುವುದು ಕಷ್ಟದ ವಿಷಯ. ಅದರಲ್ಲಿ ಯಾವುದೇ ಅನುಮಾನವಿಲ್ಲ. ಅದು ಅವರನ್ನು ಅರ್ಥಮಾಡಿಕೊಳ್ಳುವುದರಿಂದ ಆರಂಭವಾಗುತ್ತದೆ. ನೀವು ಅವರ ಸ್ಥಾನದಲ್ಲಿದ್ದು ಯೋಚಿಸಿ ಮತ್ತು ಅವರೊಂದಿಗೆ ಅನುಭೂತಿಯಿಂದ ವ್ಯವಹರಿಸಿ. ಆದರೆ ಇದಕ್ಕೆಲ್ಲಾ ತುಂಬಾ ತಾಳ್ಮೆ ಬೇಕು, ಈ ರೀತಿ ಮಾಡುವುದರಿಂದ ಅವರೊಂದಿಗಿನ ನಿಮ್ಮ ಸಂಬಂಧ ಸುಧಾರಿಸಬಹುದು.
ಕಡಿಮೆ ಆತ್ಮವಿಶ್ವಾಸ ಹಾಗೂ ಅತಿ ಕಡಿಮೆ ಸ್ವಾಭಿಮಾನ ಹೊಂದಿರುವ ಮಹಿಳೆಯರು ಕೆಟ್ಟ ಹಾಗೂ ಜೋರಿನ ಅತ್ತೆಯಾಗುತ್ತಾರೆ. ಅಂತಹವರು ಭಾವನಾತ್ಮಕವಾಗಿ ಸ್ವತಂತ್ರರಾಗಿರುವುದಿಲ್ಲ. ಅವರು ತಮ್ಮ ಭಾವನಾತ್ಮಕ ಬೇಡಿಕೆಗಳಿಗೆ ಮಗನನ್ನು ಅವಲಂಬಿಸಿರುತ್ತಾರೆ. ಅಂತಹ ಮನಃಸ್ಥಿತಿ ಇದ್ದವರಲ್ಲಿ ಯಾವಾಗ ಅವರ ಮಗನ ಮದುವೆಯಾಗುವುದೋ ಆಗ ಅಭದ್ರತೆ ಮತ್ತು ಭಯ ಅವರನ್ನು ಕಾಡಲು ಶುರುವಿಟ್ಟುಕೊಳ್ಳುತ್ತದೆ. ನೀವು ಈಗ ಅವರ ಜೀವನದಲ್ಲಿ ಸಂಪೂರ್ಣವಾಗಿ ಹೊಸಬಳು ಮತ್ತು ಅವರ ಮಗನ ಜೀವನದಲ್ಲಿ ಪ್ರಾಥಮಿಕ ಸ್ಥಾನವನ್ನು ಅಲಂಕರಿಸಿದವರು. ಅವರು ಈಗ ತಮ್ಮ ಮಗನ ಜೀವನದಲ್ಲಿ ಮುಖ್ಯಪಾತ್ರವನ್ನು ನಿಮಗೆ ವಹಿಸಬೇಕಾಗುತ್ತದೆ. ಆದರೆ ಅದು ಸುಲಭವಲ್ಲ. ಅಲ್ಲಿಂದ ಅವರೊಳಗೆ ಹೊಟ್ಟೆಕಿಚ್ಚಿನ ಬೀಜ ಮೊಳಕೆಯೊಡೆಯಲು ಆರಂಭವಾಗುತ್ತದೆ. ನೀವು ಹಾಗೂ ನಿಮ್ಮ ಗಂಡ ಖುಷಿಯಾಗಿರುವುದನ್ನು ಸುಟ್ಟು ಹಾಕಲು ನೋಡುತ್ತಿರುತ್ತಾರೆ. ನಿಧಾನಕ್ಕೆ ನಿಮ್ಮಲ್ಲಿ ನ್ಯೂನತೆಗಳನ್ನು ಕಂಡುಹಿಡಿಯಲು ಆರಂಭಿಸುತ್ತಾರೆ. ನಿಮ್ಮನ್ನು ಟೀಕಿಸಲು ಆರಂಭಿಸುತ್ತಾರೆ. ನೀವು ನಿಮ್ಮ ಗಂಡನೊಂದಿಗಿನ ಖಾಸಗಿ ಜೀವನಕ್ಕೆ ಗೌರವ ನೀಡುವುದನ್ನು ದ್ವೇಷಿಸುತ್ತಾರೆ. ಅತಿಯಾದ ರಕ್ಷಣಾತ್ಮಕ ಮನೋಭಾವ ಹಾಗೂ ಮಗನ ಬಗ್ಗೆ ಇರುವ ಗೀಳು ಮನೋಭಾವದಿಂದ ಅವರು ಹೀಗಾಡುತ್ತಾರೆ ಮತ್ತು ಎಲ್ಲಾ ವೇಳೆಯಲ್ಲೂ ಬೇಡದ ಸಲಹೆಗಳನ್ನು ನೀಡುತ್ತಿರುತ್ತಾರೆ.

ಟೀಕೆಯ ವಿಷಯವಾಗಿ ಇದನ್ನು ಪರಿಗಣಿಸುವುದಾದರೆ ನೀವು ನಿಮ್ಮ ಅತ್ತೆಯಿಂದ ತುಂಬಾ ನೋವಿನ ಅನುಭವಗಳನ್ನು ಎದುರಿಸಿದ್ದೀರಿ. ಇದು ಹೀಗೆ ಮುಂದುವರೆದರೆ ಇದು ಕೇವಲ ವೈವಾಹಿಕ ಜೀವನ ಮಾತ್ರವಲ್ಲ, ನಿಮ್ಮ ಸ್ವಾಭಿಮಾನಕ್ಕೂ ಧಕ್ಕೆ ಬರುತ್ತದೆ. ಅವರು ನಿಮ್ಮನ್ನು ಯಾವ ಕಾರಣಕ್ಕಾಗಿ ಈ ಮಟ್ಟಿಗೆ ಟೀಕೆ ಮಾಡುತ್ತಿದ್ದಾರೆ ಎಂಬುದನ್ನು ನೇರವಾಗಿ ಅವರ ಬಳಿ ಕೇಳಿ. ಅವರು ನಿಮ್ಮನ್ನು ಟೀಕಿಸಿದಾಗ ನಿಮ್ಮ ಮನಸ್ಸಿಗಾಗುವ ಬೇಸರವನ್ನು ಅವರಿಗೆ ತಿಳಿಯುವಂತೆ ಮಾಡಿ. ಜೊತೆಗೆ ನಿಮ್ಮ ಗಂಡನೊಂದಿಗೂ ಮಾತನಾಡಿ. ನಿಮ್ಮ ಆತ್ಮವಿಶ್ವಾಸದ ಪಾಲನ್ನು ಕಳೆದುಕೊಳ್ಳಲು ನೀವು ತಯಾರಿಲ್ಲ ಎಂಬುದನ್ನು ತಿಳಿವಳಿಕೆ ಬರುವಂತೆ ಮಾಡಿ. ನಿಮ್ಮ ಗಂಡ ಹಾಗೂ ಅತ್ತೆಗೆ ಅವರದೇ ಆದ ಕಾರಣಗಳಿರಬಹುದು, ಆದರೆ ನೀವು ಒಳಗಿನಿಂದ ನೋವು ಅನುಭವಿಸಿಕೊಂಡು ಹೊರಗಿನಿಂದ ಶಾಂತರಾಗಿರಬೇಡಿ. ದೃಢವಾಗಿರಿ ಮತ್ತು ಅವರನ್ನು ಧೈರ್ಯದಿಂದ ಎದುರಿಸಿ.

ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ ಎಂಬುದು ಮುಖ್ಯವಲ್ಲ. ನೀವು ಯಾವಾಗಲೂ ಶಾಂತ ಮನಃಸ್ಥಿತಿಯಿಂದ ಇರಲು ಪ್ರಯತ್ನಿಸಿ. ಶಬ್ದಗಳು ನಿಮಗೆ ನೋವನ್ನುಂಟು ಮಾಡಬಹುದು, ಆದರೆ ಕಹಿ ಎಂದಿಗೂ ನಿಮ್ಮ ಜೊತೆಗೆ ಇರುವುದಿಲ್ಲ. ಹಾಗಾಗಿ ನೀವು ಇದನ್ನು ಕಡೆಗಣಿಸಿ ಮತ್ತು ನಿಮ್ಮ ಕೆಲಸದಲ್ಲಿ ಮುಂದುವರಿಯಿರಿ. ಒಪ್ಪಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಿ. ಜೊತೆಗೆ ಧ್ಯಾನ ಮತ್ತು ಯೋಗ ಮಾಡುವುದನ್ನು ರೂಢಿಸಿಕೊಳ್ಳಿ.

ಕೊನೆಯದಾಗಿ, ನೀವು ನಿಮ್ಮ ಬಗ್ಗೆ ಹೇಗೆ ಯೋಚಿಸುತ್ತೀರಿ ಮತ್ತು ಯಾವ ರೀತಿಯ ಭಾವನೆ ಇರಿಸಿಕೊಂಡಿದ್ದೀರಿ ಎಂಬುದಷ್ಟೆ ಮುಖ್ಯವಾಗುತ್ತದೆ. ನೀವು ಸ್ವಾಭಿಮಾನದ ಕೀಳರಿಮೆಯಿಂದ ಕೊರಗುತ್ತಿದ್ದರೆ ನಾಟಕೀಯ ರೀತಿಯಲ್ಲಿ ಹೊರಗಿನ ಸಂದರ್ಭಗಳು ನಿಮ್ಮ ಮೇಲೆ ಪರಿಣಾಮ ಬೀರಲು ಸಾಧ್ಯ. ನೀವು ನಿಮ್ಮ ಅತ್ತೆಯನ್ನು ನಿಭಾಯಿಸುವ ಮೊದಲು ನಿಮ್ಮನ್ನು ನೀವು ಪ್ರೀತಿಸಲು ಕಲಿಯಿರಿ. ಇದು ನಿಮ್ಮನ್ನು ಹೆಚ್ಚು ಹೆಚ್ಚು ಭದ್ರವಾಗಿ, ಭಾವನಾತ್ಮಕವಾಗಿ ಗಟ್ಟಿಯಾಗಿಸಿ ಹಾಗೂ ಸ್ವತಂತ್ರವಾಗಿರುವಂತೆ ಮಾಡುತ್ತದೆ. ನಿಮ್ಮನ್ನು ನೀವು ಮತ್ತು ಇತರರನ್ನು ಕ್ಷಮಿಸಲು ಕಲಿಯಿರಿ. ಆಗ ನಿಮ್ಮ ಮೇಲೆ ಯಾವುದು ಹೆಚ್ಚು ಪರಿಣಾಮ ಬೀರುವುದಿಲ್ಲ. ನೀವು ಆಶಾವಾದಿಯಾಗಿರಿ ಮತ್ತು ಸಂತೋಷದ ಜೀವನಶೈಲಿ ರೂಢಿಸಿಕೊಳ್ಳಿ. ನಿಮ್ಮಲ್ಲಿ ಅತಿ ಮೌಲ್ಯ, ಗುಣ ಹಾಗೂ ಸಮಗ್ರತೆಯಿದೆ. ನಿಮ್ಮ ಶಾಂತಿ ಹಾಗೂ ಸಂತೋಷವನ್ನು ಯಾರೂ ನಿಮ್ಮಿಂದ ಕಿತ್ತುಕೊಳ್ಳಲು ಸಾಧ್ಯವಿಲ್ಲ.

3. ನನ್ನ ವಯಸ್ಸು 24, ನನಗೆ ಸುಮಾರು ಎಂಟು ವರ್ಷಗಳಿಂದ ಭಯ–ಖಿನ್ನತೆಗಳು ಕಾಡುತ್ತಿವೆ. ಒಂದು ಚಿಕ್ಕ ನಿರ್ಧಾರವು ನನ್ನಿಂದ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ, ಮಾನಸಿಕ ಚಿಕಿತ್ಸೆ ಹೇಗಿರುತ್ತದೆ ಮತ್ತು ಎಷ್ಟು ದುಡ್ಡು ಖರ್ಚು ಆಗಬಹುದು, ಎಷ್ಟು ದಿನದಲ್ಲಿ ಸಹಜ ಸ್ಥಿತಿಗೆ ಬರಬಹುದು ತಿಳಿಸಿ. ನಾನು ಇದನೆಲ್ಲಾ ಯಾರ ಬಳಿಯೂ ಹೇಳಿಕೊಂಡಿಲ್ಲ. ಎಲ್ಲರ ಜೊತೆ ಬೆರೆಯಲು ಭಯ. ಇನ್ನೊಬ್ಬರನ್ನು ಮಾತನಾಡಿಸೋಣ ಎಂದರೂ ಭಯ.

ಪ್ರಕಾಶ್, ಯಾದಗಿರಿ

ನೀವು ಭಯದೊಂದಿಗೆ ಹೋರಾಡಲು ಇರುವ ಏಕೈಕ ದಾರಿ ಎಂದರೆ ಅದನ್ನು ಎದುರಿಸುವುದು. ನೀವು ಭಯ ಹಾಗೂ ಆತಂಕಕ್ಕೆ ಒಳಗಾಗಿದ್ದರೆ ಸ್ಪಷ್ಟವಾಗಿ ಯೋಚಿಸಲು ನಮ್ಮಿಂದ ಸಾಧ್ಯವಾಗುವುದಿಲ್ಲ. ಮೊದಲು ನೀವು ಮಾಡಬೇಕಾಗಿರುವುದು ಸಮಯವನ್ನು ಹೊಂದಿಸಿಕೊಳ್ಳುವುದು. ಆಗ ನೀವು ದೈಹಿಕವಾಗಿ ಶಾಂತಸ್ಥಿತಿಗೆ ಬರಬಹುದು. ಭಯವನ್ನು ಕಡೆಗಣಿಸುವುದರಿಂದ ಭಯಕ್ಕೆ ಭಯ ಹುಟ್ಟಿಸಬಹುದು. ನಿಮ್ಮ ಭಯ ಏನೇ ಇರಬಹುದು, ನೀವು ಅದನ್ನು ಎದುರಿಸಿದರೆ ಆಗ ಅದು ಮಸುಕಾಗಲು ಆರಂಭಿಸುತ್ತದೆ. ಭಯ ಮತ್ತು ಆತಂಕ ಕಡಿಮೆ ಅವಧಿಗೆ ಮುಗಿಯಬಹುದು ಮತ್ತು ಅದು ಕಳೆದುಹೋಗಬಹುದು. ಕೆಲವೊಮ್ಮೆ ಅದು ತುಂಬಾ ಸಮಯದವರೆಗೆ ಉಳಿಯಬಹುದು ಮತ್ತು ಅದು ನಿಮಗೆ ಅಂಟಿಕೊಳ್ಳಬಹುದು. ಕೆಲವು ಸಂದರ್ಭಗಳಲ್ಲಿ ಅವು ನಿಮ್ಮ ಜೀವನವನ್ನು ಹಾಳುಗೆಡವಬಹುದು. ನಿಮ್ಮ ಊಟ, ನಿದ್ದೆ, ಗಮನ, ಪಯಣ, ಜೀವನದ ಸಂತಸ, ಅಥವಾ ಮನೆ ಬಿಡುವುದು ಅಥವಾ ಶಾಲೆ– ಕೆಲಸಕ್ಕೆ ಹೋಗುವುದು – ಇವೆಲ್ಲದರ ಮೇಲೆ ಪರಿಣಾಮ ಬೀರಬಹುದು. ಇದು ನಿಮ್ಮನ್ನು ನೀವು ಮಾಡಬೇಕೆಂದಿರುವ ಕೆಲಸ ಹಾಗೂ ನಿಮ್ಮ ಇಷ್ಟಕಷ್ಟಗಳಲ್ಲಿ ಮುಂದುವರಿಯದಂತೆ ತಡೆಯುತ್ತದೆ. ಅಲ್ಲದೇ ಇದು ನಿಮ್ಮ ಆರೋಗ್ಯದ ಮೇಲೂ ಪ್ರಭಾವ ಬೀರುತ್ತದೆ.

ನಿಮಗೆ ಯಾವ ವಿಷಯ ನೋವು ನೀಡುತ್ತದೆ ಎಂಬುದನ್ನು ತಿಳಿದುಕೊಳ್ಳಿ. ನಿಮ್ಮನ್ನು ಭಯಗೊಳಿಸುವ ಘಟನೆಗಳನ್ನು ಕಡೆಗಣಿಸುತ್ತಾ ಬಂದರೆ ನೀವು ಮಾಡಬೇಕೆಂದುಕೊಂಡಿರುವ ಹಾಗೂ ನೀವು ಮಾಡಲೇ ಬೇಕಾಗಿರುವ ಕೆಲಸಗಳನ್ನು ನಿಮ್ಮಿಂದ ಮಾಡಲು ಸಾಧ್ಯವಾಗದೇ ಇರಬಹುದು. ಆತಂಕದಿಂದ ಹೊರಬೇಕು ಎಂದರೆ ಭಯಕ್ಕೆ ನಿಮ್ಮನ್ನು ತೆರೆದುಕೊಳ್ಳಿ. ನಿಮ್ಮ ಭಯ ಹಾಗೂ ಆತಂಕದ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳಿ. ಒಂದು ಡೈರಿಯನ್ನು ಬರೆಯುವ ಅಭ್ಯಾಸ ರೂಢಿಸಿಕೊಳ್ಳಿ. ಅದರಲ್ಲಿ ನಿಮ್ಮ ಭಯಕ್ಕೆ ಕಾರಣ ಮತ್ತು ಯಾವ ಸಂದರ್ಭದಲ್ಲಿ ಭಯ ಹುಟ್ಟುತ್ತದೆ ಎಂಬುದನ್ನು ಬರೆದಿಟ್ಟುಕೊಳ್ಳಿ. ಭಯವನ್ನು ಎದುರಿಸಲು ನಿಮ್ಮಿಂದ ಸಾಧ್ಯವಾಗುವ ಚಿಕ್ಕ ಚಿಕ್ಕ ಗುರಿಗಳನ್ನು ಸಾಧಿಸಲು ಪ್ರಯ್ನತಿಸಿ.
ಆರೋಗ್ಯಕರ ಡಯೆಟ್‌, ಕಠಿಣ ವ್ಯಾಯಾಮ ಹಾಗೂ ಧ್ಯಾನದಿಂದ ಭಯವನ್ನು ಹೋಗಲಾಡಿಸಲು ಸಾಧ್ಯ.  ಕುಟುಂಬ ಸದಸ್ಯರು ಹಾಗೂ ಸ್ನೇಹಿತರ ಜೊತೆ ಹಂಚಿಕೊಳ್ಳುವುದನ್ನು ಅಭ್ಯಾಸ ಮಾಡಿ.
ಇವೆಲ್ಲ ಮಾಡಿದ ಮೇಲೂ ಬದಲಾವಣೆ ಕಾಣಿಸಿಕೊಳ್ಳದಿದ್ದರೆ ಮನಃಶಾಸ್ತ್ರಜ್ಞರನ್ನು ಕಾಣುವ ಜೊತೆಗೆ ಆಪ್ತಸಮಾಲೋಚಕರನ್ನು ಭೇಟಿ ಮಾಡಿ. ಎಲ್ಲ ದೊಡ್ಡ ಆಸ್ಪತ್ರೆಗಳಲ್ಲಿಯೂ ಇಂತಹ ಡಾಕ್ಟರ್‌ಗಳು ಇರುತ್ತಾರೆ. ನಿಮ್ಮ ಸ್ಥಿತಿಗೆ ಅನುಗುಣವಾಗಿ ಕಡಿಮೆ ಅವಧಿಗೆ ಔಷಧ ನೀಡಬಹುದು.

4. ನಾನು ಕಳೆದ ಐದು ವರ್ಷಗಳಿಂದ ಒಬ್ಬ ಹುಡುಗನನ್ನು ಪ್ರೀತಿಸುತ್ತಿದ್ದೇನೆ. ಆದರೆ ನಮ್ಮ ಮನೆಯವರಿಗೂ ಅವರ ಮನೆಯವರಿಗೂ ಮೊದಲಿನಿಂದಲೂ ದ್ವೇಷ. ಆದ್ದರಿಂದ ಅವರು ನಮ್ಮ ಪ್ರೀತಿಯನ್ನು ಒಪ್ಪುತ್ತಿಲ್ಲ. ನಮ್ಮ ಜಾತಿಗಳು ಕೂಡ ಬೇರೆ. ಮನೆಯಲ್ಲಿ ಯಾರು ನನ್ನನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ಅವನ ಮನೆಯಲ್ಲೂ ಇದೇ ಪರಿಸ್ಥಿತಿ. ಮನೆಯವರನ್ನು ಬಿಟ್ಟು ಓಡಿ ಹೋಗಲು ಮನಸ್ಸಿಲ್ಲ. ಈಗ ಮನೆಯವರು ತೋರಿಸಿದ ಹುಡುಗನನ್ನು ಮದುವೆಯಾಗುವುದೋ, ಪ್ರೀತಿಸಿದ ಹುಡುಗನನ್ನು ಮದುವೆಯಾಗುವುದೋ ತಿಳಿಯುತ್ತಿಲ್ಲ.

ಆಕೃತಿ, ಬೆಳಗಾವಿ

ಒಮ್ಮೆ ನೀವು ಪ್ರೀತಿಯಲ್ಲಿ ಬಿದ್ದರೆ ಯಾವುದು ದೊಡ್ಡ ವಿಷಯ ಎನ್ನಿಸುವುದಿಲ್ಲ ಮತ್ತು ಯಾರೂ ಸಲಹೆಗಳನ್ನು ಕೇಳುವುದಿಲ್ಲ. ಆದರೆ, ಕುಟಂಬ, ಪೋಷಕರು ಹಾಗೂ ಸಮಾಜ ಈ ಬಗ್ಗೆಲ್ಲಾ ಯೋಚಿಸಿದಾಗ ನಿಮ್ಮಲ್ಲಿ ಅನುಮಾನಗಳು ಹುಟ್ಟಿಕೊಳ್ಳುವುದು ಸಹಜ. ಈ ದಾರಿಯಲ್ಲಿ ಯೋಚಿಸುವುದು ತಪ್ಪಲ್ಲ. ಆದರೆ ನಿಮ್ಮ ವಿಷಯದಲ್ಲಿ ನಿಮ್ಮ ಇಚ್ಛೆಗೆ ತಕ್ಕಂತೆ ಯಾವುದು ಇಲ್ಲ. ಅವರ ವಿಚಾರದಲ್ಲೂ ಹಾಗೇ ಇದೆ. ಹಾಗಾಗಿ ಇದನ್ನು ಒಪ್ಪಿಕೊಳ್ಳುವುದು ಉತ್ತಮ. ನಿಮ್ಮ ತಂದೆ–ತಾಯಿಗಳ ಆಶಯ ಹೇಗಿದೆ ಹಾಗೆ ಮುಂದುವರೆಯಿರಿ. ಇಬ್ಬರೂ ಒಬ್ಬರಿಗೊಬ್ಬರು ಶುಭಾಶಯ ಹೇಳಿಕೊಂಡು, ಯಾವುದೇ ಕಹಿನೆನಪುಗಳನ್ನು ಉಳಿಸಿಕೊಳ್ಳದೆ, ಪ್ರಬುದ್ಧವಾಗಿ ದೂರವಾಗುವುದು ಉತ್ತಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT