ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನ ಆಶಯ ರಕ್ಷಣೆ ಎಲ್ಲರ ಹೊಣೆ

Last Updated 27 ಜನವರಿ 2018, 8:55 IST
ಅಕ್ಷರ ಗಾತ್ರ

ಯಾದಗಿರಿ:‘ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಆಧಾರಸ್ತಂಭವಾಗಿರುವ ಸಂವಿಧಾನದ ಆಶಯವನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಎಂ. ಖರ್ಗೆ ಅಭಿಪ್ರಾಯಪಟ್ಟರು.

ನಗರ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ ಹಮ್ಮಿಕೊಂಡಿದ್ದ 69ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

‘ಸ್ವಾತಂತ್ರ್ಯ ಮತ್ತು ಸಂವಿಧಾನ ದೇಶಕ್ಕೆ ಅಷ್ಟು ಸುಲಭವಾಗಿ ದಕ್ಕಿಲ್ಲ. ಶತಮಾನ ಕಾಲ ನಮ್ಮ ಅನೇಕ ನಾಯಕರುಗಳ ತ್ಯಾಗ, ಮಲಿದಾನ ಹಾಗೂ ಶ್ರಮದಿಂದಾಗಿ ಸಂವಿಧಾನ ರಚನೆಗೊಂಡಿದೆ. 1947ರ ಸ್ವಾತಂತ್ರ್ಯ ಕಾಯ್ದೆ ಅನ್ವಯ ಎರಡು ವರ್ಷ, 11 ತಿಂಗಳು, 17 ದಿನಗಳ ನಿರಂತರ ಶ್ರಮದಿಂದಾಗಿ ಸಂವಿಧಾನ ಪ್ರಾಥಮಿಕ ಕರಡು ಸಿದ್ಧಪಡಿಸಲಾಯಿತು. 114 ದಿನಗಳ ಕಾಲ ಕರಡು ಪ್ರತಿಗಳ ಬಗ್ಗೆ ಚರ್ಚೆ ನಡೆದು ಅಂತಿವಾಗಿ ನವೆಂಬರ್ 26, 1949 ಅಂಗೀಕರಿಸಲಾಯಿತು. 395 ವಿಧಿಗಳು, 8 ಅನುಸೂಚಿಗಳು, 22 ಅಧ್ಯಾಯ ಒಳಗೊಂಡಿರುವ ಸಂವಿಧಾನವನ್ನು ಜ.26, 1950ರಂದು ಜಾರಿಗೆ ತರಲಾಯಿತು. 69 ವರ್ಷಗಳ ಕಾಲ ಪ್ರಜಾಪ್ರಭುತ್ವ ವ್ಯವಸ್ಥೆಯ ಗಟ್ಟಿಬೇರಾಗಿ ಉಳಿದಿದೆ’ ಎಂದು ಹೇಳಿದರು.

‘ಶಾಂತಿ, ಅಹಿಂಸೆ, ಸಮಾನತೆ, ಸಹಬಾಳ್ವೆ, ಸರ್ವಧರ್ಮ ಸಹಿಷ್ಣುತೆ ಸಂವಿಧಾನದ ಮೂಲ ಆಶಯವಾಗಿದೆ. ವಿಭಿನ್ನ ಧರ್ಮ, ಭಾಷೆ, ಸಂಸ್ಕೃತಿ, ಆಚಾರ–ವಿಚಾರಗಳ ವೈವಿಧ್ಯತೆಯ ಮಧ್ಯೆ ದೇಶದ ಏಕತೆ ಮತ್ತು ಸಮಗ್ರತೆಯನ್ನು ಸಂವಿಧಾನ ಕಾಪಾಡುವ ಮೂಲಕ ದೇಶವನ್ನು ಸದೃಢ ರಾಷ್ಟ್ರವಾಗಿಸಿದೆ. ಭಾರತ ಸಂವಿಧಾನದ ಬಗ್ಗೆ ವಿಶ್ವವೇ ಬೆರಗುಗೊಂಡಿದೆ. ಅನೇಕ ದೇಶಗಳು ಭಾರತ ಸಂವಿಧಾನದ ತತ್ವಗಳನ್ನು ಅಳವಡಿಸಿಕೊಂಡಿವೆ. ಇಂಥಾ ಸಂವಿಧಾನವನ್ನು ರಕ್ಷಿಸಬೇಕಾದ ಹೊಣೆ ಹೊತ್ತ ಕೆಲ ರಾಜಕಾರಣಿಗಳು ಅಸಂವಿಧಾನಿಕ ಹೇಳಿಕೆ ನೀಡುರುವುದು ಸಲ್ಲದು’ ಎಂದರು.

‘ಸಾಂವಿಧಾನಿಕ ಮೂಲಮಂತ್ರದ ಮೇಲೆ ಸರ್ಕಾರ ರಾಜ್ಯದ ಪ್ರಗತಿಗೆ ಶ್ರಮಿಸಿದೆ. ಹಿಂದುಳಿದ ಜಿಲ್ಲೆ ಯಾದಗಿರಿ ಕಳೆದ ಐದು ವರ್ಷದಲ್ಲಿ ಸಾಕಷ್ಟು ಅಭಿವೃದ್ಧಿ ಸಾಧಿಸಿದೆ. ಹೈದರಾಬಾದ್‌ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅನುದಾನದಲ್ಲಿ ಒಟ್ಟು 1,454 ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಒಟ್ಟು ₹446 ಕೋಟಿ ವೆಚ್ಚ ಮಾಡಲಾಗಿದೆ. ಅವುಗಳಲ್ಲಿ ಬಹುತೇಕ ಕಾಮಗಾರಿಗಳು ಪೂರ್ಣಗೊಳ್ಳುವ ಹಂತ ತಲುಪಿವೆ. ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಲಾಗಿದೆ. ಕೊಂಗಂಡಿ ಏತ ನೀರಾವರಿ, ಭೀಮಾ ಫ್ಲಾಂಕ್, ಶಹಾಪುರ ಶಾಖಾ ಕಾಲುವೆ ನವೀಕರಣ, ಸನ್ನತಿ ಏತನೀರಾವರಿ, ಮಲ್ಲಾಬಾದ ಏತನೀರಾವರಿ ಯೋಜನೆಗಳಿಂದ ಜಿಲ್ಲೆಯಲ್ಲಿ ಒಟ್ಟು 1.15 ಲಕ್ಷ ಹೆಕ್ಟೇರ್ ರೈತರ ಭೂಮಿಗೆ ನೀರೊದಗಿಸಲಾಗಿದೆ. ಇದರ ಜತೆಗೆ 55 ಕೆರೆಗಳಿಗೆ ನೀರು ತುಂಬುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

ಸರ್ವೋತ್ತಮ ಪ್ರಶಸ್ತಿ: ವಿವಿಧ ಇಲಾಖೆಗಳಲ್ಲಿ ಉತ್ತಮ ಸೇವೆ ಸಲ್ಲಿಸಿದ ಆರ್.ಎಂ.ನಾಟೇಕರ್, ವಿಕ್ರಮಸಿಂಗ್ ಗೌತಮ್, ಚಂದ್ರಶೇಖರ ದೊರೆ, ಸಂತೋಷ, ವಿದ್ಯಾಸಾಗರ ಹಾಗೂ ವಿಶ್ವನಾಥ ರೆಡ್ಡಿ ಅವರಿಗೆ ‘ಸರ್ವೋತ್ತಮ ಸೇವಾ’ ಪ್ರಶಸ್ತಿ ಜತೆಗೆ ₹10 ಸಾವಿರ ನಗದು ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಕುಮಾರ ದೊಡ್ಡಪ್ಪ ನಾಯಕ (ಕ್ರೀಡಾ ಕ್ಷೇತ್ರ), ವಿಶ್ವೇಶ್ವರಯ್ಯ ಮಲ್ಲಿನಾಥ ಮಠ (ಗಣಕಯಂತ್ರ ನಿರ್ವಹಣೆ), ರಿಯಾಜ್ ಪಟೇಲ್ (ಕಲಾಕ್ಷೇತ್ರ), ಸಕಾಲದಲ್ಲಿ ಶೀಘ್ರ ವಿಲೇ ಮಾಡಿರುವ ಐದು ಜನ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ100ರಷ್ಟು ಫಲಿತಾಂಶ ಪಡೆದ ಸರ್ಕಾರಿ ಶಾಲೆಗಳಾದ ಕೊಡೇಕಲ್‌ನ ಮೊರಾರ್ಜಿ ದೇಸಾಯಿ ವಸತಿ ಪ್ರೌಢಶಾಲೆ, ಕೆಂಭಾವಿಯ ಮೊರಾರ್ಜಿ ದೇಸಾಯಿ ವಸತಿ ಪ್ರೌಢಶಾಲೆ, ರಾಜನಕೋಳೂರಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಪ್ರೌಢ ಶಾಲೆ, ವಜ್ಜಲ್ ನ ಆದರ್ಶ ವಿದ್ಯಾಲಯ ಶಾಲೆಗಳಿಗೆ ₹10 ಸಾವಿರ ನಗದು ನೀಡಿ ಗೌರವಿಸಲಾಯಿತು.

ಈ ವೇಳೆ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ಮನಸೂರೆಗೊಂಡವು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಸರಡ್ಡಿ ಮಾಲಿಪಾಟೀಲ, ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ, ಜಿಲ್ಲಾಧಿಕಾರಿ ಜೆ.ಮಂಜುನಾಥ, ಹೆಚ್ಚುವರಿ ಪ್ರಕಾಶ ರಜಪೂತ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಸಹಾಯಕ ಆಯುಕ್ತ ಮಂಜುನಾಥ ಸ್ವಾಮಿ ಇತರರು ಇದ್ದರು.

ಗುಲಾಬಿ ಕಂಪಿನಲ್ಲಿ ನಿದ್ರಿಸಿದ್ದ ಬುದ್ಧ

ಜಿಲ್ಲೆಯಲ್ಲಿ ಮೊದಲ ಬಾರಿಗೆ ಹಮ್ಮಿಕೊಂಡಿದ್ದ ಸಿರಿಧಾನ್ಯ ಮೇಳ– ಫಲಪುಷ್ಪ ಪ್ರದರ್ಶನದಲ್ಲಿ ಜಿಲ್ಲೆಯ ಐತಿಹಾಸಿಕ ಮಲಗಿರುವ ಬುದ್ಧ ಇಲ್ಲಿನ ವಿದ್ಯಾಮಂಗಲ ಮಂದಿರದ ಮಡಿಲಲ್ಲಿ ಗುಲಾಬಿ ಕಂಪಿನಲ್ಲಿ ಬುದ್ಧ ನಿದ್ರಿಸುವ ಮೂಲಕ ನೋಡುಗರ ಮನಸೂರೆಗೊಂಡ.

ಹಳದಿ–ಕೆಂಪು ಗುಲಾಬಿಯಲ್ಲಿ ಕಲಾವಿದರು ಮಲಗಿರುವ ಬುದ್ಧನ ಬೆಟ್ಟವನ್ನೇ ಹೋಲುವಂತಹ ಪ್ರತಿಕೃತಿ ನಿರ್ಮಿಸಿದ್ದರು. ಗುಲಾಬಿಗಳಲ್ಲಿ ರಚನೆಯಾದ ಬೆಟ್ಟದ ಮೇಲೆ ಥೇಟ್ ಬುದ್ಧ ಮಲಗಿರುವನೇನೋ ಎನ್ನುವಂತೆ ಭಾಸವಾಗುವಂತಹ ರಚನೆ ನೋಡುಗರನ್ನು ಸೆಳೆಯುತ್ತಿತ್ತು.

ಅದರ ಪಕ್ಕದಲ್ಲಿ ಸಿರಿ ಧಾನ್ಯ ಮೇಳದಲ್ಲಿ ಸಜ್ಜೆ, ನವಣೆ, ರಾಗಿ, ಉದಲು, ಬರಗು, ಹಾರಕ, ಗ್ರಾಮೀಣ ಭಾಗದಲ್ಲಿ ಉಪಯೊಗ ಮಾಡುವ ಮಜ್ಜಿಗೆ ಕಡೆಗೋಲು, ಒಲೆಗಳು, ಅಡಕಲು ಗಡಿಗೆ, ಬಿತ್ತನೆಯ ಕೂರಿಗೆ, ಸಲಿಕೆ, ಕುರಪಿ, ಹಾರಿ, ಜಲ್ಲಡಗಿ, ಕಬ್ಬಿಣ ಪುಟ್ಟಿ ಗಮನ ಸೆಳೆದವು.

ಆರೆಂಜ್ ರೋಜ್, ವೈಟ್ ರೋಜ್, ಜರ್ಮರ್, ಆರ್ಕಿಡ್, ಕ್ರೈಸಂತಂ ಹೂಗಳು ನೋಡುಗರ ಕೌತುಕ ತಣಿಸಿದವು. ಸಾವಯವ ಮಳಿಗೆಗಳಲ್ಲಿ ರಿಯಾಯ್ತಿ ದರದಲ್ಲಿ ಸಾವಯವ ಸಿರಿ ಧಾನ್ಯಗಳನ್ನು ಜನರು ಖರೀದಿಸಿದರು.

* * 

ಸಂವಿಧಾನ ನಮಗೆ ಅನೇಕ ಹಕ್ಕುಗಳನ್ನು ಕೊಟ್ಟಿದೆ. ಹಕ್ಕುಗಳನ್ನು ಅನುಭವಿಸುವ ನಾವುಗಳು ಸಂವಿಧಾನ ಸೂಚಿಸುವ ಕರ್ತವ್ಯಗಳನ್ನು ಕೂಡ ನಿರ್ವಹಿಸಬೇಕು.
ಪ್ರಿಯಾಂಕ್ ಎಂ. ಖರ್ಗೆ ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT