ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುನಿಡೆಂಗಿ ಮಾಯೆ

Last Updated 27 ಜನವರಿ 2018, 19:30 IST
ಅಕ್ಷರ ಗಾತ್ರ

ಮಲ್ಲಿಕಾರ್ಜುನ ಕಲಮರಹಳ್ಳಿ

ಹೋಗವ್ವ ತಾಯೆ ಗುನಿಡೆಂಗಿಮಾಯೆ
ಯಾತಕ್ಕೆ ಬಂದೇಳು ನಮ್ಮೂರ ಮ್ಯಾಲೆ |ಪಲ್ಲವಿ|

1
ಊರೂರು ಸುತ್ತಿ ಸುತ್ತಿ ಕೇರಿ ಕೇರಿಗೆ ಬಂದೆ
ಹೆಣ್ಣೆಂಬ ಮನವಿಲ್ಲ ಗಂಡೆಂಬ ಸೊಲ್ಲಿಲ್ಲ
ಎಳೆ ಬಾಲ ವೃದ್ಧರ ಹೆಡೆಮುರಿ ಬಿಗಿದೆ
ಮನೆ ಮಂದೀನೆಲ್ಲ ಮೂಲೆ ಮಡುಕಟ್ಟಿದೆ ||

2
ಮೈಮನದೊಳಗೆ ಆವುಗೆ ಧಗೆಯು
ಕೀಲು ಮಂಡೀಲಿ ಚೇಳಿನ ಕುಟುಕು
ನರನಾಡಿ ತುಂಬೆಲ್ಲ ನೆಗ್ಗಿಲ ಮುಳ್ಳು
ಲಾವಾರಸದೊಳಗೆ ಹಗಲಿರುಳ ಉಸಿರು ||

3
ಹಾದೀಗೆ ಹಂದರ ಬೀದೀಗೆ ತೋರಣ
ಪಲ್ಲಕ್ಕಿಯೊಳಗೆ ಕೂತವಳೆ ಕೀಲವ್ವ
ಎಡೆಯಿಟ್ಟಿವೋ ನಾವು ಮುಡಿ ಕೊಟ್ಟೆವೋ
ಏಳೂರ ವಾಲಗ ಅಬ್ಬರಿಸಿ ಬೊಬ್ಬಿರಿದವೋ ||

4
ಓ ಲಿಂಗಾ, ಮಾಲಿಂಗಾ, ಶಿವಚಿತ್ತರು ಲಿಂಗಾ
ಮುಂಗಾರಿನೊಳಗೆ ಹೊನ್ನಾರು ಹೂಡಲು
ನಿಂತನಡುವಲ್ಲಿ ಕಸುವಿಲ್ಲವೋ ಹರನೇ
ಸೋತು ಸುಣ್ಣಾಗಿ ಮನಸಿಲ್ಲವೋ ಶಿವನೇ ||

5
ಗಣ ದನಿಯು ಮಲಗಿ ಸಿರಿಪದವು ಸೊರಗಿ
ಮೈಲಾರ ಮಾತು ಮುಗಿಲಾಗೆ ಮರೆಯಾಗಿ
ಮಲೆ ಮಾದನೆಲ್ಲೋ ಮಂಟಯ್ಯನೆಲ್ಲೋ
ಗಾದರಿಪಾಲನೇ ನಿಂತ್ಯಾಕೆ ಗಾವುದೂರಾ ||

6
ಗುನಿಮಾರಿ ಸಂತೇಲಿ ಸಿಕ್ಕಿದ್ದೇ ಸೀರುಂಡೆ
ಮದ್ದೀನ ಮನೆಯಲ್ಲಿ ಕಾಂಚಾಣ ತಾನಾನ
ಉಪ್ಪರಿಗೆ ಮಹಲಲ್ಲಿ ಸೋಯೆಂಬ ಸೋಬಾನ
ನಾಡದೊರೆಯೇ ನಿದ್ದೆಗೆಟ್ಟು ನಡೆದಾಡು
ಗುನಿಡೆಂಗಿ ಮಾರಿಯರ ಮುಗಿಲಾಚೆ ನೂಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT