ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಜಿತ್ಸು ಪಟು ನಬೀಲಾಗೆ ಎತ್ತರಕ್ಕೇರುವ ಕನಸು

Last Updated 28 ಜನವರಿ 2018, 19:30 IST
ಅಕ್ಷರ ಗಾತ್ರ

‘ಫಿಟ್‌ನೆಸ್‌ ವಿಷಯದಲ್ಲಿ ಇದ್ದ ಆಕರ್ಷಣೆ ನನ್ನನ್ನು ಈ ಮಟ್ಟಕ್ಕೆ ಬೆಳೆಸುತ್ತದೆ ಎಂದು ನಾನೇ ಅಂದುಕೊಂಡಿರಲಿಲ್ಲ. ಜಿಮ್‌ಗೆ ಹೋಗಿ ಬೆವರು ಹರಿಸುವುದು ಇಂದಿನ ದಿನಗಳಲ್ಲಿ ಮಾಮೂಲಿಯಾಗಿದೆ. ಇದರಲ್ಲಿ ನಾನು ಹೊಸ ಪ್ರಯತ್ನ ಮಾಡಬೇಕು ಎಂದು ಯೋಚಿಸಿದೆ. ಇಂಡಿಯನ್ ಕಾಂಬ್ಯಾಟ್‌ ಸ್ಪೋರ್ಟ್ಸ್ ಅಕಾಡೆಮಿ ಬಗ್ಗೆ ಗೂಗಲ್‌ನಲ್ಲಿ ಮಾಹಿತಿ ಸಿಕ್ಕಿತು. ಆ ಸಂಸ್ಥೆಗೆ ಹೋದಾಗ ನನಗೆ ಜಿಜಿತ್ಸು ಬಗ್ಗೆ ತಿಳಿಯಿತು. ನನ್ನ ಜೀವನದ ದಿಕ್ಕು ಬದಲಾಯಿತು’–

28 ವರ್ಷದ ನಬೀಲಾ ಬಿರ್ಜಿಸ್ ಅವರ ಮಾತುಗಳಲ್ಲಿ ರೋಮಾಂಚನ, ಜೀವನೋತ್ಸಾಹ ಮತ್ತು ಆತ್ಮವಿಶ್ವಾಸಗಳು ಮೇಳೈಸಿದ್ದವು.  ಮೆಚ್ಚಿಕೊಂಡ ಕ್ರೀಡೆಗಾಗಿ ನೌಕರಿಗೆ ಗುಡಬೈ ಹೇಳಿದ  ಮೈಸೂರಿನ ನಬೀಲಾ ಬಹು ಎತ್ತರದ ಸಾಧನೆಯ ಕನಸು ಕಾಣುತ್ತಿದ್ದಾರೆ. ಅದನ್ನು ನನಸು ಮಾಡಿಕೊಳ್ಳಲು ಶ್ರಮಿಸುತ್ತಿದ್ದಾರೆ.

ಮುಂಬೈನಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರಮಟ್ಟದ ಬಾಡಿ ಪವರ್ ಸ್ಪರ್ಧೆಯಲ್ಲಿ ಅವರು ಎರಡು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಫೆಬ್ರುವರಿ 1ರಿಂದ
4ರವರೆಗೆ ಕೊಚ್ಚಿಯಲ್ಲಿ ನಡೆಯುವ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದರೆ ಏಷ್ಯನ್ ಕ್ರೀಡಾಕೂಟದಲ್ಲಿ ಸ್ಪರ್ಧಿಸಲು ನೇರ ಅರ್ಹತೆ ಪಡೆದುಕೊಳ್ಳಲಿದ್ದಾರೆ.

‘ಜಿಜಿತ್ಸು ಕ್ರೀಡೆಯನ್ನು ಮೊದಲು ಕೇವಲ ಫಿಟ್‌ನೆಸ್ ಹಾಗೂ ಆತ್ಮರಕ್ಷಣೆಗಾಗಿ ಕಲಿತೆ. ಆದರೆ ಕೋಚ್ ಜಿತೇಶ್‌ ಬಂಜನ್‌ ಅವರು ನನಗೆ ವೃತ್ತಿಪರತೆ ಕಲಿಸಿದರು. ಈ ಕ್ರೀಡೆಯಲ್ಲಿ ನನಗೆ ಇದ್ದ ಆಸಕ್ತಿಯನ್ನು ಬಳಸಿಕೊಂಡು ಆಡಿದರೆ ಪದಕ ಗೆಲ್ಲಬಹುದು ಎಂಬ ವಿಶ್ವಾಸ ತುಂಬಿದರು. ಆರಂಭದಲ್ಲಿ ನನಗೆ ಪೂರ್ಣ ನಂಬಿಕೆ ಇರಲಿಲ್ಲ. ಆದರೆ ಕ್ರಮೇಣ ನನ್ನ ಮೇಲಿನ ವಿಶ್ವಾಸ ಹೆಚ್ಚಿತು’ ಎಂದು ನಬೀಲಾ ಈ ಕ್ರೀಡೆಯಲ್ಲಿ ತಾವು ತೊಡಗಿಸಿಕೊಂಡ ಆರಂಭಿಕ ದಿನಗಳನ್ನು ನೆನೆದರು.

‘ಮಹಿಳೆಯಾಗಿ ಪುರುಷರಿಗೆ ಸಮಾನವಾದ ದೈಹಿಕ ಸಾಮರ್ಥ್ಯ ಹೊಂದುವುದು ಕಷ್ಟ. ಆದರೆ ತಾಂತ್ರಿಕವಾಗಿ ಬಲಾಢ್ಯರನ್ನೂ ಬೀಳುಸುವ ಶಕ್ತಿ ಈ ಕ್ರೀಡೆಯಲ್ಲಿ ಅಡಕವಾಗಿದೆ. ಇದು ನನನ್ನು ಆಕರ್ಷಿಸಿತು. ಕಾಂಬ್ಯಾಟ್‌ ಅಕಾಡೆಮಿಯಲ್ಲಿರುವ ‘ಫೈಟ್‌’ ತಂಡಕ್ಕೆ ಸೇರಿಕೊಂಡ ಮೊದಲ ಮಹಿಳೆ ನಾನು. ಇಲ್ಲಿ ಮೂವರು ಪುರುಷರು ಬ್ಲೂ ಬೆಲ್ಟ್ ಸಂಪಾದಿಸಿದ್ದಾರೆ. ನಾನು ವೈಟ್ ಬೆಲ್ಟ್‌ನೊಂದಿಗೆ ಆಡುತ್ತೇನೆ’

‘ವೈಟ್‌ಗಿಂತ ಮೇಲಿನ ಬೆಲ್ಟ್ ಪಡೆಯಬೇಕಾದರೆ ವಿದೇಶಕ್ಕೆ ಹೋಗಿ ಕಲಿಯಬೇಕು. ಇದು ಭಾರತದ ಕ್ರೀಡೆ ಅಲ್ಲ. ಇಲ್ಲಿ ಬೆಲ್ಟ್ ನೀಡುವವರು ಯಾರೂ ಇಲ್ಲ. ಇದಕ್ಕಾಗಿ ಸಾಕಷ್ಟು ಹಣ ಖರ್ಚಾಗುತ್ತದೆ. ಏಷ್ಯನ್‌ ಕೂಟದಲ್ಲಿ ಪದಕ ಗೆದ್ದರೆ ಮುಂದಿನ ಕನಸುಗಳು ನನಸಾಗುವ ಸಾಧ್ಯತೆ ಇದೆ’ ಎಂದು ತಮ್ಮ ಭವಿಷ್ಯದ ಯೋಜನೆಗಳನ್ನು ಹಂಚಿಕೊಂಡರು.

‘ರಾಷ್ಟ್ರೀಯ ಟೂರ್ನಿಗಳಲ್ಲಿ ದೆಹಲಿ, ಮಹಾರಾಷ್ಟ್ರ, ಕೋಲ್ಕತ್ತ, ಜಮ್ಮು ಮತ್ತು ಕಾಶ್ಮೀರ ಸ್ಪರ್ಧಿಗಳು ಪ್ರಬಲ ಎದುರಾಳಿಗಳು. ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ನಾವು ಯಾವುದೇ ಬೆಲ್ಟ್ ಪಡೆದ ಎದುರಾಳಿಗಳು ಸಿಕ್ಕರೂ ಆಡಬೇಕು. ನಮ್ಮಲ್ಲಿರುವ ಸಾಕಷ್ಟು ಸ್ಪರ್ಧಿಗಳಿಗೆ ಉತ್ತಮ ಬೆಲ್ಟ್ ಪಡೆಯುವ ಅರ್ಹತೆ ಇದೆ. ಆದರೆ ಅದಕ್ಕಾಗಿ ಖರ್ಚು ಮಾಡಲು ಸಾಧ್ಯವಾಗದೇ ಹಿಂದೇಟು ಹಾಕುತ್ತಾರೆ’ ಎನ್ನುತ್ತಾರೆ ನಬೀಲಾ.

ಮೂಲತಃ ಆರ್ಟಿಟೆಕ್ಟ್ ಆಗಿರುವ ನಬೀಲಾ ಉದ್ಯೋಗ ಬಿಟ್ಟು ಪೂರ್ಣ ಪ್ರಮಾಣದಲ್ಲಿ ಜಿಜಿತ್ಸು ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಫಿಟ್‌ನೆಸ್‌ಗಾಗಿ ಕೋಚ್ ಹೇಳಿಕೊಟ್ಟ ಆಹಾರ ಪದ್ಧತಿಯನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಿದ್ದಾರೆ. ಪ್ರೊಟೀನ್‌ ಇರುವ ಪದಾರ್ಥಗಳನ್ನೇ ಹೆಚ್ಚಾಗಿ ಬಳಸಿ ತಾವೇ ಅಡುಗೆ ಮಾಡಿಕೊಳ್ಳುತ್ತಾರೆ. ಭವಿಷ್ಯದಲ್ಲಿ ಇದೇ ಕ್ರೀಡೆಯಲ್ಲಿ ಕೋಚ್ ಆಗುವ ಕನಸು ಅವರಿಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT