ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ದಿನದಲ್ಲಿ ನದಿಗೆ ಕಟ್ಟ

ಫಲ್ಗುಣಿ ಒಡಲಿಗೆ ಒಡ್ಡು ಕಟ್ಟಿದರು
Last Updated 29 ಜನವರಿ 2018, 19:30 IST
ಅಕ್ಷರ ಗಾತ್ರ

ಬೇಸಿಗೆಗೆ ಮುನ್ನವೇ ನದಿಗಳು ಬರಿದಾಗುತ್ತಿರುವ ಬಗ್ಗೆ ಬಾಯಿ ಮಾತಿನಲ್ಲಿ ಕಾಳಜಿ ವ್ಯಕ್ತಪಡಿಸುವವರು, ವ್ಯವಸ್ಥೆಯನ್ನು ಟೀಕಿಸುವವರು ಅನೇಕರು ಸಿಗುತ್ತಾರೆ. ಆದರೆ, ಈ ಊರಿನ ಜನ ಹಾಗಲ್ಲ. ಟೀಕಿಸುತ್ತಾ ಕೂರುವುದರಲ್ಲಿ ಅರ್ಥವಿಲ್ಲ ಎಂಬ ಸತ್ಯಾಂಶ ಅರಿತು ನದಿ ಬತ್ತದಂತೆ ಕಾಯ್ದುಕೊಳ್ಳುವ ಹೊಸ ಮಾದರಿಯೊಂದನ್ನು ತೋರಿಸಿಕೊಟ್ಟಿದ್ದಾರೆ. ಸಂಘ–ಸಂಸ್ಥೆಗಳ ಸಹಕಾರದಿಂದ ವಿದ್ಯಾರ್ಥಿಗಳ ಜೊತೆ ಸೇರಿ ಫಲ್ಗುಣಿ ನದಿಗೆ ‘ಕಟ್ಟ’ ಕಟ್ಟಿರುವ ಇವರು ನೀರಿನ ಒರತೆಯನ್ನು ಉಳಿಸಿಕೊಳ್ಳಲು ಪಣ ತೊಟ್ಟಿದ್ದಾರೆ.

ನದಿಯಲ್ಲಿರುವ ಹೊಂಡಗಳ ಬಳಿ ಅಳವಡಿಸಿರುವ ಪಂಪ್‌ಸೆಟ್‌ಗಳು ಫಲ್ಗುಣಿ ನದಿಯ ನೀರಿನ ಸೆಲೆಯನ್ನೆಲ್ಲ ಹೀರುತ್ತಿವೆ. ಈ ಹಿಂದೆ, ಊರಿನ ಜನರೇ ಸೇರಿ ನದಿಗೆ ಅಲ್ಲಲ್ಲಿ ಕಟ್ಟ (ಒಡ್ಡು) ಕಟ್ಟುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಈ ಪರಿಪಾಠ ನಿಂತುಹೋಗಿತ್ತು. ಬಿರು ಬೇಸಿಗೆವರೆಗೆ ನೀರಿನ ಒರತೆಯನ್ನು ಕಾಯ್ದುಕೊಳ್ಳುತ್ತಿದ್ದ ಫಲ್ಗುಣಿ ನದಿ ಈ ಎಲ್ಲ ಕಾರಣಗಳಿಂದಾಗಿ ಅವಧಿಗೆ ಮುನ್ನವೇ ಖಾಲಿಯಾಗುತ್ತಿತ್ತು.

ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಸಮೀಪದ ಹೊಸಂಗಡಿ ಗ್ರಾಮದ ಜನ ಹೊಸ ಪ್ರಯತ್ನ ನಡೆಸಿದ್ದಾರೆ. ಮೂಡುಬಿದಿರೆಯ ಎನ್‌.ಎಸ್‌.ಎಂ. ಪಾಲಿಟೆಕ್ನಿಕ್‌ನ ರಾಷ್ಟ್ರೀಯ ಸೇವಾ ಯೋಜನೆಯ (ಎನ್‌ಎಸ್‌ಎಸ್‌) ವಿದ್ಯಾರ್ಥಿಗಳು, ಸ್ಥಳೀಯರು, ಮೂಡುಬಿದಿರೆ ರೋಟರಿ ಕ್ಲಬ್‌ ಸದಸ್ಯರು ಸೇರಿ ಸುಮಾರು 150 ಜನ ಒಗ್ಗೂಡಿ ಈ ನದಿಗೆ ಕಳೆದ ವಾರ ‘ಕಟ್ಟ’ ಕಟ್ಟಿದ್ದಾರೆ.

ಫಲ್ಗುಣಿ ನದಿಗೆ ಅಡ್ಡಲಾಗಿ ಕಟ್ಟ ಕಟ್ಟುವ ಆಲೋಚನೆ ಮೊದಲು ಹೊಳೆದದ್ದು ಹೊಸಂಗಡಿ ಗ್ರಾಮ ಪಂಚಾಯಿತಿ ಸದಸ್ಯ ಹರಿಪ್ರಸಾದ್‌ ಅವರಿಗೆ. ’ಕರಾವಳಿ ಭಾಗದಲ್ಲಿ ನದಿಗೆ ಬೇಸಿಗೆಯಲ್ಲಿ ಕಟ್ಟ ಕಟ್ಟುವ ಪರಿಪಾಠ ಬಹಳ ಹಿಂದಿನಿಂದಲೂ ಇದೆ. ಇದು ತಾತ್ಕಾಲಿಕ ಕಟ್ಟ. ಮಳೆಗಾಲದಲ್ಲಿ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತದೆ. ಆದರೆ, ಬೇಸಿಗೆ ಮುಗಿಯುವವರೆಗೆ ನದಿಯಂಗಳದಲ್ಲಿ ನೀರು ಹಿಡಿದಿಟ್ಟುಕೊಳ್ಳುವುದಕ್ಕೆ ಇದು ನೆರವಾಗುತ್ತದೆ. ನಮ್ಮ ಗ್ರಾಮದ ತೋರ್ಪೆಯಲ್ಲೂ ಹಿಂದೆ ಇಂತಹ ಕಟ್ಟ ಕಟ್ಟುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಕಟ್ಟ ನಿರ್ಮಿಸುವುದನ್ನು ಜನ ಕೈಬಿಟ್ಟಿದ್ದರು. ಇದರಿಂದಾಗಿ ಗ್ರಾಮದಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿತ್ತು. ವರ್ಷಪೂರ್ತಿ ನೀರು ಹೊಂದಿರುತ್ತಿದ್ದ ಬಾವಿಗಳು ಬೇಗನೆ ಬತ್ತುತ್ತಿದ್ದವು’ ಎನ್ನುತ್ತಾರೆ ಹರಿಪ್ರಸಾದ್‌.

‘ಸ್ವಚ್ಛತಾ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ನೈರ್ಮಲ್ಯ ರತ್ನ ಪ್ರಶಸ್ತಿ ಪಡೆದ ಗ್ರಾಮ ನಮ್ಮದು. ನಾವು ಪ್ಲಾಸ್ಟಿಕ್‌ ತ್ಯಾಜ್ಯದ ವೈಜ್ಞಾನಿಕ ವಿಲೇವಾರಿ ಬಗ್ಗೆ ಜನರ ಸಹಭಾಗಿತ್ವದಲ್ಲಿ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದ್ದೆವು. ಕರಾವಳಿಯಲ್ಲಿ ಪ್ಲಾಸ್ಟಿಕ್‌ ಸೌಧ ಪರಿಕಲ್ಪನೆ ಆರಂಭಿಸಿದವರು ನಾವು. ಹಾಗೆಯೇ ಇಲ್ಲಿ ನದಿಗೆ ಕಟ್ಟ ಕಟ್ಟಿದರೆ ನೀರಿನ ಸಮಸ್ಯೆ ತಕ್ಕಮಟ್ಟಿಗೆ ನೀಗಬಹುದು ಎಂದೆನಿಸಿತು. ನದಿಯಲ್ಲಿ ನೀರಿನ ಒರತೆಯನ್ನು ಕಾಪಾಡಿಕೊಳ್ಳುವುದಕ್ಕೂ ಏನಾದರೂ ಮಾಡಬೇಕೆಂಬ ಹಂಬಲ ಮೂಡಿತು. ಇದನ್ನು ಮೂಡುಬಿದಿರೆ ರೋಟರಿ ಕ್ಲಬ್‌ ಸದಸ್ಯರ ಜೊತೆ ಹೇಳಿಕೊಂಡಿದ್ದೆ’ ಎಂದು ಅವರು ವಿವರಿಸುತ್ತಾರೆ.

ಅಂತರ್ಜಲ ಸಂರಕ್ಷಣೆ ಬಗ್ಗೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದ ರೋಟರಿ ಕ್ಲಬ್‌, ಹರಿಪ್ರಸಾದ್‌ ಅವರ ಆಲೋಚನೆಯನ್ನು ಕಾರ್ಯಗತಗೊಳಿಸುವಲ್ಲಿ ಕೈಜೋಡಿಸಿತು. ಎನ್‌.ಎಸ್‌.ಎಂ ಪಾಲಿಟೆಕ್ನಿಕ್‌ ವಿದ್ಯಾರ್ಥಿಗಳು ಇದಕ್ಕೆ ಅಗತ್ಯವಿರುವ ಮಾನವ ಶ್ರಮ ಒದಗಿಸಲು ಮುಂದೆ ಬಂದರು. ಪರವೂರಿನ ವಿದ್ಯಾರ್ಥಿಗಳು ನದಿಗೆ ಕಟ್ಟ ಕಟ್ಟಲು ಮುಂದಾದಾಗ, ಸಹಜವಾಗಿಯೇ ಸ್ಥಳೀಯರೂ ಈ ಕಾರ್ಯದಲ್ಲಿ ಉತ್ಸಾಹದಿಂದ ತೊಡಗಿಸಿಕೊಂಡರು. ಎಲ್ಲರೂ ಒಗ್ಗೂಡಿ ಕೆಲಸ ಮಾಡಿದ್ದರಿಂದ ಒಂದೇ ದಿನದಲ್ಲಿ ನದಿಗೆ ಕಟ್ಟ ನಿರ್ಮಾಣಗೊಂಡಿತು.

‘ನಮ್ಮ ಕ್ಲಬ್‌ ನಾಲ್ಕು ವರ್ಷಗಳಿಂದ ಅಂತರ್ಜಲ ಸಂರಕ್ಷಣೆ ಬಗ್ಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕೆಲವು ಸಣ್ಣ ಹಳ್ಳಗಳಿಗೆ ನಾವು ಕಟ್ಟ ನಿರ್ಮಿಸಿದ್ದೆವು. ಹರಿಪ್ರಸಾದ್‌ ಅವರು ಫಲ್ಗುಣಿ ನದಿಗೆ ಕಟ್ಟ ಕಟ್ಟುವ ಕುರಿತು ಹೇಳಿದಾಗ ನಮ್ಮಲ್ಲೂ ಹುಮ್ಮಸ್ಸು ಮೂಡಿತು. ಕಟ್ಟ ಕಟ್ಟುವುದಕ್ಕೆ ವಿದ್ಯಾರ್ಥಿಗಳ ಬೆಂಬಲ ಸಿಕ್ಕಾಗ ಯೋಜನೆಯನ್ನು ಕಾರ್ಯಗತಗೊಳಿಸುವುದು ಸುಲಭವಾಯಿತು ಎನ್ನುತ್ತಾರೆ ರೋಟರಿ ಕ್ಲಬ್‌ ಅಧ್ಯಕ್ಷ ಶ್ರೀಕಾಂತ್‌ ಕಾಮತ್‌. ಕಟ್ಟ ಕಟ್ಟಲು ಅಗತ್ಯವಾದ ಮರಳು ನದಿಯಲ್ಲೇ ಇತ್ತು. ಇದನ್ನು ತುಂಬಿಸಲು ಸುಮಾರು 2,000 ಚೀಲಗಳನ್ನು ಒಟ್ಟು ಮಾಡಿದೆವು. ನದಿಗೆ ಮಣ್ಣು ಸಾಗಿಸಬೇಕಾ ಯಿತು. ಶ್ರಮದಾನದ ವೇಳೆ ಊಟೋಪಚಾರ ಒದಗಿಸಬೇಕಾಯಿತು. ಇದಕ್ಕೆಲ್ಲ ಹೆಚ್ಚೆಂದರೆ ₹25 ಸಾವಿರ ವೆಚ್ಚವಾಗಿರಬಹುದು ಎನ್ನುತ್ತಾರೆ.

ವಿದ್ಯಾರ್ಥಿಗಳ ಹುಮ್ಮಸ್ಸು: ನದಿಯೊಂದಕ್ಕೆ ಕಟ್ಟ ನಿರ್ಮಿಸಿದ್ದು ವಿದ್ಯಾರ್ಥಿಗಳಿಗೂ ಹೊಸ ಅನುಭವ ಕಟ್ಟಿಕೊಟ್ಟಿತು. ತರಗತಿಗಳಲ್ಲಿ ಪಾಠ ಪ್ರವಚನಗಳಲ್ಲಿ ಕಳೆದುಹೋಗುವ ಅವರು, ಕಟ್ಟ ಕಟ್ಟುವ ಮೂಲಕ ಪ್ರಾಯೋಗಿಕ ಜ್ಞಾನವನ್ನು ಪಡೆದುಕೊಂಡರು.

‘ನಾವು ಸಾಮಾನ್ಯವಾಗಿ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೆವು. ನದಿಗೆ ಕಟ್ಟ ಕಟ್ಟುವಂತಹ ದೊಡ್ಡ ಕೆಲಸದಲ್ಲಿ ನಾವು ಇದುವರೆಗೆ ತೊಡಗಿಸಿಕೊಂಡಿರಲಿಲ್ಲ. ‍ಪ್ರಾಂಶುಪಾಲರಾದ ಜೆ.ಜೆ.ಪಿಂಟೊ ಅವರ ಪ್ರೋತ್ಸಾಹದಿಂದ ಸವಾಲಿನ ಕೆಲಸ ಸಲೀಸಾಗಿ ಮುಗಿಯಿತು’ ಎನ್ನುತ್ತಾರೆ ಪಾಲಿಟೆಕ್ನಿಕ್‌ನ ಎನ್‌ಎಸ್‌ಎಸ್‌ ಅಧಿಕಾರಿ ರಾಮಪ್ರಸಾದ್‌.

ಅಂದು ಕೆಲಸ ಆರಂಭಿಸುವಾಗ ವಿದ್ಯಾರ್ಥಿಗಳಲ್ಲಿ ಏನೋ ಹೊಸ ಹುರುಪು. ‘ನಾವು ಮಾಡುವ ಕೆಲಸ ಹತ್ತಾರು ಹಳ್ಳಿಗಳ ಅಂತರ್ಜಲ ವೃದ್ಧಿಸಲಿದೆ’ ಎಂಬ ಸಾರ್ಥಕ ಭಾವ ಅವರಲ್ಲಿತ್ತು. ನದಿ ದಂಡೆಯಲ್ಲಿ ಬಿದ್ದಿದ್ದ ಕಲ್ಲುಮಿಶ್ರಿತ ಮರಳನ್ನು ವಿದ್ಯಾರ್ಥಿಗಳು ಪ್ಲಾಸ್ಟಿಕ್‌ ಚೀಲಗಳಲ್ಲಿ ತುಂಬಿದರು. 2000 ಮರಳಿನ ಚೀಲಗಳನ್ನು ಅವರೇ ಅಚ್ಚುಕಟ್ಟಾಗಿ ಜೋಡಿಸಿದರು. ಈ ಕೈಂಕರ್ಯಕ್ಕೆ ಕೈಜೋಡಿಸಿದ ಸ್ಥಳೀಯರು ಕಟ್ಟ ಕಟ್ಟುವುದಕ್ಕೆ ಬೇಕಾದ ತಾಂತ್ರಿಕ ಪರಿಣತಿಯನ್ನು ಹೊಂದಿದ್ದರು. ಚೀಲಗಳನ್ನು ಸಾಲಾಗಿ ಜೋಡಿಸಿದ ಬಳಿಕ ಅದರ ಮೇಲೆ ಮಣ್ಣು ತುಂಬಲಾಯಿತು. ಸಂಜೆ ನಾಲ್ಕು ಗಂಟೆ ಸುಮಾರಿಗೆ ಸುಮಾರು 70 ಮೀಟರ್‌ ಉದ್ದದ ಕಟ್ಟ ಸಿದ್ಧವಾಯಿತು.

‘ಪಠ್ಯಗಳಲ್ಲಿ ನಮಗೆ ಇಂಥ ಅನುಭವ ಸಿಗಲು ಸಾಧ್ಯವಿಲ್ಲ. ಊರಿನ ಜನರ ಜೊತೆ ಬೆರೆತು ಕೆಲಸ ಮಾಡುವಾಗ ಸಮಯ ಹೋಗಿದ್ದೇ ತಿಳಿಯಲಿಲ್ಲ. ಈ ಶ್ರಮದಾಯಕ ಕೆಲಸವೂ ನಮಗೆ ಕಷ್ಟ ಎನಿಸಲಿಲ್ಲ. ಕಟ್ಟ ಪೂರ್ಣಗೊಂಡಾಗ ಖುಷಿಗೆ ಪಾರವೇ ಇರಲಿಲ್ಲ’ ಎನ್ನುತ್ತಾರೆ ಪಾಲಿಟೆಕ್ನಿಕ್‌ನ ಎನ್‌ಎಸ್‌ಎಸ್‌ ವಿಭಾಗದ ವಿದ್ಯಾರ್ಥಿ ಮುಖಂಡ ಪ್ರಮೋದ್‌.

ಸಾಂಘಿಕ ಪ್ರಯತ್ನದ ಫಲವಾಗಿ ತೋರ್ಪೆ ಬಳಿ ಫಲ್ಗುಣಿ ನದಿಯಲ್ಲಿ ನಿರ್ಮಾಣವಾದ ಕಟ್ಟದಲ್ಲಿ ಈಗಾಗಲೇ ನೀರು ಸಂಗ್ರಹಗೊಳ್ಳುತ್ತಿದೆ. ನದಿಯ ಆಳ ಹೆಚ್ಚು ಇರುವಲ್ಲಿ ಹತ್ತು ಅಡಿಗಳಷ್ಟು ನೀರು ನಿಂತಿದೆ.

‘ನಾವು ಕಟ್ಟ ಹಾಕಲು ಆರಂಭಿಸುವಾಗ ಸ್ವಲ್ಪ ತಡವಾಯಿತು. ಡಿಸೆಂಬರ್‌ ಮಧ್ಯದಲ್ಲೇ ಕಟ್ಟ ಪೂರ್ಣಗೊಂಡಿದ್ದರೆ ಇನ್ನೂ ಹೆಚ್ಚು ನೀರು ಇಲ್ಲಿ ಸಂಗ್ರಹವಾಗುತ್ತಿತ್ತು. ಈ ಕಟ್ಟದ ತುಂಬಾ ನೀರು ಸಂಗ್ರಹವಾದರೆ ಸುಮಾರು ನಾಲ್ಕು ಕಿ.ಮೀ ದೂರದವರಗೆ ನೀರಿನ ಒರತೆ ಇರಲಿದೆ. ನದಿಯ ಆಸುಪಾಸಿನಲ್ಲಿ ಸುಮಾರು 3 ಕಿ.ಮೀ ಪ್ರದೇಶದ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ ತನ್ನಿಂದ ತಾನೆ ಹೆಚ್ಚಲಿದೆ. ನಮ್ಮ ಆಸುಪಾಸಿನ ಗ್ರಾಮಗಳ ಜನರಿಗೂ ಇದರಿಂದ ಅನುಕೂಲವಾಗಲಿದೆ’ ಎನ್ನುತ್ತಾರೆ ಹರಿಪ್ರಸಾದ್‌.

‘ನಾವು ನಿರ್ಮಿಸಿದ ಈ ಕಟ್ಟದ ಆಯಸ್ಸು ಒಂದು ವರ್ಷ ಮಾತ್ರ. ಮಳೆಗಾಲದಲ್ಲಿ ಇದು ನೀರಿನಲ್ಲಿ ಕೊಚ್ಚಿಕೊಂಡು ಹೋಗಲಿದೆ. ಆದರೆ, ಹನಿ ಹನಿಗೂಡಿದರೆ ಹಳ್ಳ ಎಂಬುದಕ್ಕೆ ಉತ್ತಮ ಮಾದರಿಯೊಂದನ್ನು ತೋರಿಸಿಕೊಟ್ಟ ಕೃತಾರ್ಥ ಭಾವ ನಮ್ಮದು. ಪ್ರತಿಯೊಂದು ಕೆಲಸಕ್ಕೂ ಸರ್ಕಾರವನ್ನೇ ನೆಚ್ಚಿಕೊಂಡರೆ ಆಗುವುದಿಲ್ಲ. ಅದರ ಬದಲು ಊರಿನವರೇ ಸೇರಿ ಮೊದಲ ಹೆಜ್ಜೆ ಇಡಬೇಕು. ಮನಸ್ಸಿದ್ದರೆ ಮಾರ್ಗ’ ಎಂದು ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT