ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಒತ್ತಡ ಹೆಚ್ಚಾದಾಗಲೆಲ್ಲ ಅತ್ಯುತ್ತಮ ಶಕ್ತಿ ಹೊರಬಂದಿದೆ’

Last Updated 30 ಜನವರಿ 2018, 19:30 IST
ಅಕ್ಷರ ಗಾತ್ರ

ಒತ್ತಡವನ್ನು 'ಏನಪ್ಪ ಇದು' ಎಂದು ತಿಳಿದರೆ ಭಾರವೆನಿಸುತ್ತದೆ. 'ಇದು ಸುಲಭ' ಎಂದು ನಗುಮುಖದಿಂದ ಸ್ವೀಕರಿಸಿದರೆ ಒಳ್ಳೆಯದಾಗುತ್ತದೆ. ನನ್ನ ಜೀವನದಲ್ಲೂ ಸಾಕಷ್ಟು ಒತ್ತಡ ಇದೆ. ಒತ್ತಡ ಹೆಚ್ಚಾದಾಗಲೆಲ್ಲ ನನ್ನಿಂದ ಅತ್ಯುತ್ತಮ ಶಕ್ತಿ ಹೊರಬಂದಿದೆ.

ಪೊಲೀಸರು ಒತ್ತಡವನ್ನು ಎದುರಿಸುವುದು ಅನಿವಾರ್ಯ. ಅಂಥ ಒತ್ತಡದಿಂದಲೇ ನಾವು ಬುದ್ಧಿಯನ್ನು ಚುರುಕುಗೊಳಿಸಿಕೊಳ್ಳಬೇಕು. ‘ಆಡು ಮುಟ್ಟದ ಸೊಪ್ಪಿಲ್ಲ, ಪೊಲೀಸ್ ಇಲಾಖೆಗೆ ಸಂಬಂಧಿಸದ ವಿಷಯವಿಲ್ಲ’ ಎಂಬ ಮಾತಿದೆ. ವಿದ್ಯುತ್ ಕೈ ಕೊಟ್ಟರೆ, ಕತ್ತಲಾದರೆ, ರಸ್ತೆ ಅಪಘಾತವಾದರೆ, ಜನರು ಸೇರಿದರೆ, ಪಾಸ್‍ಪೋರ್ಟ್ ಅರ್ಜಿ ವಿಚಾರಣೆ, ಅಪರಾಧವಾದರೆ – ಎಲ್ಲದಕ್ಕೂ ನಾವು ಸ್ಪಂದಿಸಲೇ ಬೇಕು. ಜನರು ಪೊಲೀಸರ ಮೇಲೆ ಸಾಕಷ್ಟು ನಿರೀಕ್ಷೆಗಳಲ್ಲಿ ಇಟ್ಟುಕೊಂಡಿರುತ್ತಾರೆ.

ನಮ್ಮ ಇಲಾಖೆಯಲ್ಲಿ ನಿತ್ಯವೂ ಎದುರಿಸಲೇ ಬೇಕಾದದ್ದು ಒತ್ತಡ. ಅದನ್ನು ನಕಾರಾತ್ಮಕವಾಗಿ ತೆಗೆದುಕೊಳ್ಳದೆ, ನಮ್ಮ ಅನುಕೂಲಕ್ಕಾಗಿ ಬಳಸಿಕೊಳ್ಳುವುದೇ ಒಳ್ಳೆಯದು.

ನಮ್ಮ ಆಲೋಚನೆ ಸಕಾರಾತ್ಮಕವಾಗಿದ್ದರೆ, ನಾವು ಇಡುವ ಹೆಜ್ಜೆ ಸದೃಢವಾಗಿದ್ದರೆ ಒತ್ತಡ ಹಾಗೂ ಸವಾಲುಗಳು ಸದಾವಕಾಶಗಳಾಗುತ್ತವೆ. ಯಾವುದಕ್ಕೂ ನಾವು ಅಲುಗಾಡಬಾರದು. ಯಾರೋ ಏನು ಹೇಳುತ್ತಾರೆ ಎಂದು ಅಂದುಕೊಳ್ಳಬಾರದು. ಟೀಕೆ, ಟಿಪ್ಪಣಿ, ವಿಮರ್ಶೆ, ವಿಡಂಬನೆ, ಕಾಲೆಳೆತ – ಇವುಗಳಿಗೆ ಎದೆಗುಂದಬಾರದು. ಅವಾಗಲೇ ಎಲ್ಲ ಸಮಸ್ಯೆ–ಸವಾಲುಗಳು ಯಶಸ್ಸಿನ ಮೆಟ್ಟಿಲುಗಳಾಗಿ ಮಾರ್ಪಡುತ್ತವೆ.

ನಾನು ಒತ್ತಡವನ್ನು ಸದಾಕಾಲವೂ ಒಳ್ಳೆಯ ಆಲೋಚನೆಯಿಂದ ಸ್ವೀಕರಿಸುತ್ತೇನೆ. ಏಕೆಂದರೆ, ನಾನು ಇಲಾಖೆಯನ್ನು ಹೆಚ್ಚು ಪ್ರೀತಿಸುತ್ತೇನೆ. ಜನರು ಎಂದರೆ ಹುಚ್ಚು. ವಿದ್ಯಾರ್ಥಿಗಳು ಎಂದರೆ ಹುಚ್ಚು. ಅವರ ಜೊತೆ ಬೆರೆತು ಮಾತನಾಡುತ್ತ ಕಳೆದುಹೋಗುತ್ತೇನೆ. ಸಮಸ್ಯೆಗಳು ಬಂದರೆ ಖುಷಿ ಪಡುತ್ತೇನೆ. ಅವುಗಳನ್ನು ಬಗೆಹರಿಸುವ ಭಾಗ್ಯ ನನ್ನದಾಯಿತಲ್ಲ ಎಂದು ತಿಳಿಯುತ್ತೇನೆ.

ಬಂದೋಬಸ್ತ್‌ನಲ್ಲಿ ಏನಾದರೂ ಲೋಪವಾದರೆ, ಕ್ರೈಂನಲ್ಲಿ ಏನಾದರೂ ಆದರೆ, ಹಿರಿಯ ಅಧಿಕಾರಿಗಳಿಂದ ಫೋನ್ ಬರುತ್ತದೆ. ಯಾರ‍್ಯಾರಿಂದಲೋ ಫೋನ್ ಬರುತ್ತೆ. ಆವಾಗ ನಾನು, ‘ಏನು ಮಾಡಿಲ್ವಲ್ಲ’. ‘ತಪ್ಪು ಮಾಡಿಲ್ವಲ್ಲ’ ಎಂದು ಗಟ್ಟಿಯಾಗಿರುತ್ತೇನೆ. ಅಪರಾಧಿಯಾಗಿ ತಪ್ಪು ಮಾಡಿದಾಗ ಒತ್ತಡ ನಕಾರಾತ್ಮಕವಾಗಿರುತ್ತದೆ. ತಪ್ಪುಗಳನ್ನು ಸರಿ ಮಾಡಲು, ಅಪರಾಧಿಗಳನ್ನು ಪತ್ತೆ ಹಚ್ಚಲು ಶಾಂತಿ-ಸುವ್ಯವಸ್ಥೆ ಕಾಪಾಡಲು ನಮಗೆ ಇಷ್ಟೊಂದು ಅಧಿಕಾರ ಕೊಟ್ಟಾಗ ಒತ್ತಡ ಎಂಬುದು ಸವಾಲಾಗುವ ಬದಲು ಸದಾವಕಾಶವಾಗಿ ಮಾರ್ಪಾಡು ಆಗಬೇಕು. ಅದು ನಮ್ಮ ಆಲೋಚನೆಯ ಮೇಲೆ ನಿಲ್ಲುತ್ತದೆ.

ವಿಶೇಷ ದಿನಗಳಂದು ನಂಜನಗೂಡಿಗೆ ಲಕ್ಷಾಂತರ ಜನರು ಬರುತ್ತಾರೆ. ಅವರಿಗೆ ವ್ಯವಸ್ಥೆ ಮಾಡಿಕೊಡಬೇಕಲ್ಲಪ್ಪ – ಎಂದು ತಿಳಿದರೆ ಒತ್ತಡ ಹೆಚ್ಚಾಗುತ್ತದೆ. ಅವರ ಸೇವೆ ಮಾಡುವ ಅವಕಾಶ ನಮ್ಮದಾಯಿತಲ್ಲ ಎಂದು ಕೆಲಸ ಮಾಡಿದರೆ ಒತ್ತಡವೇ ಇರಲ್ಲ. ಯಾರದ್ದೋ ತಾಯಿಯ ಮಾಂಗಲ್ಯ ಕಳೆದು ಹೋಗಿರುತ್ತದೆ. ಅದನ್ನು ಹುಡುಕಿಕೊಟ್ಟಾಗ, ಆ ತಾಯಿಯ ಕಣ್ಣಲ್ಲಿ ಬರುವ ಆನಂದಬಾಷ್ಪ ನಮಗೆ ಆಶೀರ್ವಾದ. ಒತ್ತಡ ಎಂದುಕೊಂಡು ಕುಳಿತರೆ ಅಂಥ ಆಶೀರ್ವಾದ ಸಿಗುವುದಿಲ್ಲ.

ಪ್ರತಿ ಒತ್ತಡವೂ ಒಳ್ಳೆಯ ಕೆಲಸ ಮಾಡುವ ಅವಕಾಶವಿದ್ದಂತೆ. ತರಬೇತಿಯಲ್ಲಿ ಕಾನ್‍ಸ್ಟೆಬಲ್‍ನಿಂದ ಐಪಿಎಸ್ ಅಧಿಕಾರಿಯವರೆಗೆ ಅದನ್ನೇ ಹೇಳಿಕೊಡುತ್ತಾರೆ. ಸಮಸ್ಯೆಯನ್ನು ಸಕಾರಾತ್ಮಕವಾಗಿ ಆಲೋಚಿಸಿ, ಜನರಿಗೆ ಒಳ್ಳೆಯದನ್ನು ಮಾಡುವ ಆಲೋಚನೆ ಮಾಡಬೇಕೆಂದು ಹೇಳುತ್ತಾರೆ.

ನಾನು ಶಿವಮೊಗ್ಗ, ಹಾಸನ, ಮೈಸೂರಿನಲ್ಲಿ ಎಸ್ಪಿಯಾಗಿ ಮೊದಲ ಬಾರಿ ಅಧಿಕಾರ ಸ್ವೀಕರಿಸಿದ್ದಾಗ, ಸಾಕಷ್ಟು ಒತ್ತಡಗಳು ಬಂದಿದ್ದವು. ಆಗ ನನ್ನ ತಂಡವನ್ನು ಕರೆದು ಅವರೊಂದಿಗೆ ಚರ್ಚೆ ನಡೆಸಿದ್ದೆ. ಒತ್ತಡದಿಂದ ಹೊರಬರುವ ಪರಿಹಾರೋಪಾಯಗಳ ಬಗ್ಗೆ ಚರ್ಚಿಸಿದ್ದೆ. ಹಿರಿಯ ಅಧಿಕಾರಿಗಳ ಜೊತೆ ಮಾತನಾಡಿದ್ದೆ. ಒತ್ತಡ ಏನು ಎಂಬುದನ್ನು ವ್ಯಾಖ್ಯಾನಿಸಿದ್ದೆ. ಅದಕ್ಕೆ ಪರಿಹಾರ ಕಂಡುಕೊಂಡೆ. ಆಗ ಒತ್ತಡ ತಾನಾಗಿಯೇ ದೂರವಾಯಿತು.

ಪೊಲೀಸ್ ವೃತ್ತಿಯ ಜೊತೆಗೆ ಕುಟಂಬದ ನಿರ್ವಹಣೆ ತುಂಬಾ ಕಷ್ಟ. ಬಾಯಲ್ಲಿ ಹೇಳುವುದು ಸುಲಭ. ಆದರೆ, ಅದನ್ನು ಎದುರಿಸುವುದು ಸುಲಭವಲ್ಲ. ಯಾವ ವ್ಯಕ್ತಿ ವೃತ್ತಿ ಹಾಗೂ ಕುಟುಂಬದ ಒತ್ತಡ ಎದುರಿಸುತ್ತಾನೋ, ಅದಕ್ಕೆ ಕೈಗೊಳ್ಳುವ ಪರಿಹಾರವೂ ಆ ವ್ಯಕ್ತಿಯ ಮೇಲೆ ಅವಲಂಬಿತವಾಗಿರುತ್ತದೆ. ’ಏನಪ್ಪ ಇದು ಇಷ್ಟೊಂದು ಕೆಲಸ’ ಎಂದರೆ ಆ ವ್ಯಕ್ತಿ ಸೋಲುತ್ತಾನೆ. ಅದೇ, ’ಇಷ್ಟೊಂದು ಜನರಿಗೆ ಸಹಾಯ ಮಾಡುವ ಅವಕಾಶ ನನಗೆ ಸಿಕ್ಕಿತಲ್ಲ’ ಎಂದು ಒತ್ತಡವನ್ನೇ ಅವಕಾಶ ಎಂದು ತಿಳಿದುಕೊಂಡವ ಗೆಲ್ಲುತ್ತಾನೆ.

ವೃತ್ತಿ ಹಾಗೂ ಕುಟುಂಬ. ಎರಡನ್ನೂ ನಿರ್ವಹಣೆ ಮಾಡಿ ಎಂದು ಕೆಲವರು ಹೇಳುತ್ತಾರೆ. ಆದರೆ, ಅದು ತುಂಬಾ ಕಷ್ಟ. ಏಕೆಂದರೆ, ರಾತ್ರಿ ಗಸ್ತು ಮಾಡಬೇಕಾದರೆ ನಿದ್ದೆಗೆಡಲೇಬೇಕು. ಹೆಚ್ಚುವರಿ ಕೆಲಸ ಮಾಡಲೇಬೇಕು. ರಜಾದಿನಗಳನ್ನು ಬಲಿ ಕೊಡಲೇಬೇಕು. ಹಳ್ಳಿಗೆ ಹೋಗಲೇಬೇಕು, ಗ್ರಾಮವಾಸ್ತವ್ಯ ಮಾಡಲೇಬೇಕು. ಕೆಳಹಂತದ ಸಿಬ್ಬಂದಿ ಜೊತೆ ಮಾತನಾಡಿ ಆತ್ಮಸ್ಥೈರ್ಯವನ್ನು ತುಂಬಬೇಕು. ಜನರಲ್ಲಿ ಅರಿವು ಮೂಡಿಸಬೇಕು. ಸಂಚಾರ ನಿರ್ವಹಣೆ ಹಾಗೂ ಅಪರಾಧ ತಡೆಗಟ್ಟಬೇಕು. ಇದರ ಮಧ್ಯೆ ಕುಟಂಬದತ್ತ ಗಮನ ಕೊಡುವುದು ಕಷ್ಟ.

ನಾನು ಆ ಕಷ್ಟ ಎಂಥದ್ದು ಎಂಬುದನ್ನು ಅನುಭವಿಸಿದ್ದೇನೆ. ಸಾಮಾನ್ಯ ದಿನಗಳಲ್ಲಿ ನಾನು ಮನೆಯಲ್ಲಿದ್ದಾಗ ಕುಟುಂಬದೊಂದಿಗೆ ಕಾಲ ಕಳೆಯುತ್ತೇನೆ. ಪತ್ನಿ, ನನ್ನ ಇಬ್ಬರು ಮಕ್ಕಳು, ತಾಯಿ ಹಾಗೂ ಸುತ್ತಮುತ್ತಲಿನ ವಾತಾವರಣದ ಜೊತೆ ಇರುತ್ತೇನೆ. ಎಲ್ಲರಿಗೂ ನ್ಯಾಯ ಒದಗಿಸುತ್ತೇನೆ. ಮನೆಗೆ ಹೋದಮೇಲೆ ಏನೇ ಆದರೂ ತಲೆಕೆಡಿಸಿಕೊಳ್ಳಲ್ಲ.

ನಿತ್ಯವೂ ಬೆಳಿಗ್ಗೆ 10 ನಿಮಿಷ ಧ್ಯಾನ ಮಾಡುತ್ತೇನೆ. ನಿನ್ನೆ ಏನು ಮಾಡಿದೆ, ಇವತ್ತು ಏನು ಮಾಡಬೇಕು – ಎಂಬುದನ್ನು ಯೋಚಿಸುತ್ತೇನೆ. ನಂತರ, ಒಂದು ಗಂಟೆ ಟೆನಿಸ್ ಆಡುತ್ತೇನೆ. ನಂತರ ಮಗಳ ಜೊತೆ ಹೆಚ್ಚು ಹೊತ್ತು ಇರುತ್ತೇನೆ. ಆಕೆಗೆ ಸ್ನಾನ ಮಾಡಿಸಿ, ರೆಡಿ ಮಾಡಿ ಶಾಲೆಗೆ ಬಿಡುತ್ತೇನೆ. 9.45ಕ್ಕೆ ಮನೆ ಬಿಟ್ಟು 10 ಗಂಟೆಗೆ ಕಚೇರಿಯಲ್ಲಿರುತ್ತೇನೆ.

ವಾರದಲ್ಲಿ ಒಂದು ಅಥವಾ ಎರಡು ದಿನ ಸ್ವಿಮ್ಮಿಂಗ್ ಮಾಡುತ್ತೇನೆ. ಬಹಳ ದುಗುಡ, ಮನಸ್ಸು ಅಲ್ಲೋಲ-ಕಲ್ಲೋಲ ಆದಾಗ ಚಾಮುಂಡಿ ಬೆಟ್ಟಕ್ಕೆ ಹೋಗಿ ಚಾಮುಂಡೇಶ್ವರಿ ದರ್ಶನ ಪಡೆದು ಬರುತ್ತೇನೆ. ಅಲ್ಲಿಯೇ ಕುಳಿತು ಮನಸ್ಸು ಹಗುರ ಮಾಡಿಕೊಳ್ಳುತ್ತೇನೆ. ವೃತ್ತಿಯ ಆರಂಭದಲ್ಲಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದೆ. ಅದೇ ವೇಳೆ ಮಗಳು ಹುಟ್ಟಿದ್ದಳು. ಕೆಲಸದ ಒತ್ತಡದಿಂದ ಐದು ದಿನ ಆಕೆಯ ಮುಖ ನೋಡಲು ಆಗಿರಲಿಲ್ಲ. ಆ ಒತ್ತಡದ ದಿನ ನನಗಿನ್ನೂ ನೆನಪಿದೆ.

ಒತ್ತಡ ನಿವಾರಣೆಗೆ ದೈಹಿಕ ಹಾಗೂ ಮಾನಸಿಕ ಆರೋಗ್ಯ ಮುಖ್ಯ ಎಂಬುದು ನನ್ನ ಅಭಿಪ್ರಾಯ. ನಮ್ಮ ಇಲಾಖೆ ಸಿಬ್ಬಂದಿಗೆ ಅದು ಅತಿ ಮುಖ್ಯ. ಬೆಳಿಗ್ಗೆಯಿಂದ ರಾತ್ರಿಯವರೆಗೂ ಕೆಲಸ ಮಾಡುವ ಶಕ್ತಿ ನಮಗಿರಬೇಕು. ಬೆನ್ನು ನೋಯಬಾರದು, ಕಾಲು ಸದೃಢವಾಗಿರಬೇಕು. ತಲೆನೋವು ಬರಬಾರದು. ಹೀಗಾಗಿ ಪ್ರತಿಯೊಬ್ಬರು ದೈಹಿಕವಾಗಿ ಸದೃಢರಾಗಿರಬೇಕು. ವ್ಯಾಯಾಮ ಮಾಡಬೇಕು. ಉತ್ತಮ ಆಹಾರವನ್ನು ಸೇವಿಸಬೇಕು. ಮಧ್ಯಪಾನ ಹಾಗೂ ಧೂಮಪಾನ ಮಾಡಬಾರದು. ಕೆಟ್ಟ ಚಟಗಳು ಇರಬಾರದು. ಏನೇ ಬಂದರೂ ಭಾರ ಎಂದು ತಿಳಿಯಬಾರದು.

ಪೊಲೀಸ್ ಕೆಲಸ ಸೌಭಾಗ್ಯದ ಕೆಲಸ. ‘ಅಶೋಕ ಚಕ್ರವನ್ನು ತಲೆ, ಎದೆ ಮೇಲೆ ಇಟ್ಟುಕೊಳ್ಳುವ ಅವಕಾಶ ಇರುವುದು ಸೈನ್ಯ ಮತ್ತು ಪೊಲೀಸರಿಗೆ ಮಾತ್ರ. ಎಷ್ಟೋ ಜನರಿಗೆ ಇದು ಸಿಗಲ್ಲ. ಐಪಿಎಸ್ ಅಂದರೆ ದೊಡ್ಡ ಜವಾಬ್ದಾರಿ. ಇದು ಸಾಮಾನ್ಯರಿಗಲ್ಲ’ ಎಂದು ಮಗಳಿಗೆ ಹೇಳುತ್ತಿರುತ್ತೇನೆ.

ಯಾವುದೂ ಶಾಶ್ವತವಲ್ಲ. ಎಲ್ಲವೂ ಕಳೆದುಹೋಗುತ್ತದೆ. ಒತ್ತಡ ಬರುವ ಆ ಒಂದು ಘಳಿಗೆ ಕಳೆದರೆ, ಮುಂದೆ ಒಳ್ಳೆಯ ದಿನ ಬರುತ್ತದೆ. ಅದುವೇ ಬಾಳನ್ನು ಉಜ್ವಲವಾಗಿಸುತ್ತದೆ. ಹೀಗಾಗಿ ಯಾವುದೇ ಕ್ಷೇತ್ರವಾದರೂ ಒತ್ತಡವನ್ನು ಸದಾವಕಾಶ ಎಂದು ತಿಳಿದು ಎದುರಿಸಿ. ನಿಮ್ಮ ನಿಮ್ಮ ಕ್ಷೇತ್ರದಲ್ಲಿ ನೀವು ಯಶಸ್ಸು ಸಾಧಿಸುವುದು ಖಚಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT